ಪ್ರಯಾಗ..ಗಂಗಾರತಿ …ವೇಣಿದಾನ
ಗಂಗಾ, ಯಮುನಾ ಮತ್ತು ಸರಸ್ವತಿ ನದಿಯು ಗುಪ್ತಗಾಮಿನಿಯಾಗಿ ಸಂಗಮಿಸುವ ‘ಪ್ರಯಾಗ’ವು ಹಿಂದೂಗಳಿಗೆ ಪವಿತ್ರ ಕ್ಷೇತ್ರ. ಉತ್ತರಪ್ರದೇಶದ ಅಲಹಾಬಾದ್ ನಲ್ಲಿದೆ. ಇಲ್ಲಿ ಹನ್ನೆರಡು ವರುಷಕೊಮ್ಮೆ ಪೂರ್ಣಕುಂಭಮೇಳವು ಜರಗುತ್ತದೆ.
ಪ್ರಯಾಗದಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡಲು, ದಡದಿಂದ ದೋಣಿ ಮೂಲಕ ಸ್ವಲ್ಪ ದೂರ ಹೋಗಬೇಕು.ದೋಣಿ ಪ್ರಯಾಣದುದ್ದಕ್ಕೂ ಸಹಸ್ರಾರು ಬಿಳಿ ಬಣ್ಣದ ಪಾರಿವಾಳವನ್ನು ಹೋಲುವ ಪಕ್ಷಿಗಳು ನಮ್ಮನ್ನು ಹಿಂಬಾಲಿಸಿದುವು. ಈ ಪಕ್ಷಿಗಳು ಆಸ್ಟ್ರೇಲಿಯಾದಿಂದ ಅಕ್ಟೋಬರ್ ನಲ್ಲಿ ಬಂದು ಮಾರ್ಚ್ ನಲ್ಲಿ ಹಿಂತಿರುಗುವ ಬರುವ ವಲಸೆ ಪಕ್ಷಿಗಳಂತೆ.ಇವುಗಳಿಗೆ ಕೊಡುವ ತಿಂಡಿಯನ್ನು ಒಬ್ಬಾತ ದೋಣಿಯಲ್ಲಿ ಮಾರುತ್ತಿದ್ದ. ಕುರುಕಲು ತಿಂಡಿಗಳನ್ನು ನದಿಗೆ ಎಸೆದರೆ ಅದನ್ನು ತಿನ್ನಲು ಪಕ್ಷಿಗಳು ಏಕಕಾಲದಲ್ಲಿ ದೋಣಿಯತ್ತ ಬರುತ್ತವೆ.
ನದಿಮಧ್ಯದಲ್ಲಿ ಆಳವಿಲ್ಲದ ಕಡೆ ನದಿಯಲ್ಲಿ ಇಳಿದು ಮುಳುಗುಹಾಕಲು ವ್ಯವಸ್ಥೆ ಇದೆ. ಆಸ್ತಿಕರಿಗೆ ಗಂಗೆಗೆ ಆರತಿ ಮಾಡಲು ಮತ್ತು ಹಾಲಿನ ಅಭಿಷೇಕ ಮಾಡಲು ಅನುಕೂಲತೆಗಳಿವೆ. ಅಮ್ಮ ಮತ್ತು ನಾನು ಇಬ್ಬರೂ ಸೇರಿ ಗಂಗೆಗೆ ಆರತಿ ಮಾಡಿದೆವು. ಪ್ರಯಾಗದಲ್ಲಿ ಆಸ್ತಿಕರಿಗೆ ದೈವಭಕ್ತಿಯ ಅನುಭೂತಿಯ ಜತೆಗೆ ಪ್ರಕೃತಿ ಸೌಂದರ್ಯವನ್ನೂ ಸವಿಯಲು ಉತ್ತಮ ಅವಕಾಶವಿದೆ.
ಆಸಕ್ತ ದಂಪತಿಗಳು ‘ವೇಣಿದಾನ’ವನ್ನೂ ಆಚರಿಸುತ್ತಾರೆ. ಅಲ್ಲಿನ ಅರ್ಚಕರು ಸಂಬಂಧಿತ ಶಾಸ್ತ್ರಗಳ ಪ್ರಕಾರ ದಂಪತಿಗಳಿಂದ ಪೂಜೆ ಮಾಡಿಸುತ್ತಾರೆ. ಇದರಲ್ಲಿ ಪತಿಯು ತನ್ನ ಪತ್ನಿಗೆ ಜಡೆ ಹೆಣೆಯುವ ಶಾಸ್ತ್ರವಿದೆ. ಗಂಗಾ-ಯಮುನಾ-ಸರಸ್ವತಿ ನದಿಗಳಲ್ಲಿ ಸರಸ್ವತಿ ಗುಪ್ತಗಾಮಿನಿಯಾಗಿರುವಂತೆ, ಕೂದಲನ್ನು ಮೂರು ಎಳೆಗಳಾಗಿ ವಿಭಾಗಿಸಿ ಜಡೆ ಹೆಣೆದರೂ, ಎರಡು ಎಳೆಗಳು ಕಾಣಿಸುವುದು ಸಾಂಕೇತಿಕ. ಪತಿಯು ಪತ್ನಿಯ ಜಡೆಯ ತುದಿಯ ಸಣ್ಣ ಭಾಗವನ್ನು ಕತ್ತರಿಸಿ, ಶಾಸ್ತ್ರೋಕ್ತವಾಗಿ ಗಂಗೆಗೆ ಬಿಡುವ ಸಂಪ್ರದಾಯ. ಇದು ಸುಮಂಗಲಿ ಮಹಿಳೆಯು ಜೀವಮಾನದಲ್ಲಿ ಒಂದೇ ಬಾರಿ ಪಾಲ್ಗೊಳ್ಳಬಹುದಾದ ಪೂಜೆಯಂತೆ.
-ಹೇಮಮಾಲಾ.ಬಿ
Madam ee reetiya vaividhya aacharanegale namma shraddhe nambike balapadisiruvudu
Incredible India !!!.. ಅತುಲ್ಯ ಭಾರತ