ಉಪ್ಪಿಟ್ಟಿನ ರೊಟ್ಟಿ ಅವತಾರ – ಉಪ್ಪಿಟ್ರೊಟ್ಟಿ !
ಅತೀ ಸುಲಭವಾಗಿ, ಬೇಗನೆ ತಯಾರಿಸಬಹುದಾದ, ಒಂದೆರಡು ಸಾಮಗ್ರಿಗಳಿಲ್ಲದಿದ್ದರೂ ರುಚಿಗೆಡದ, ನಿತ್ಯದ ಉಪಾಹಾರಕ್ಕೂ ಸರಿ, ಸಮಾರಂಭದ ದೊಡ್ಡ ಪ್ರಮಾಣದಲ್ಲಿ ತಯಾರಿಕೆಗೂ ಸೈ ಎನಿಸುವ ……..ಹೀಗೆ ಹಲವಾರು ವೈಶಿಷ್ಟ್ಯಗಳಿದ್ದರೂ ಅತ್ಯಂತ ಹೆಚ್ಚು ಅವಹೇಳನೆಗೆ ಗುರಿಯಾಗುವ ಸರಳ ತಿನಿಸು ‘ಉಪ್ಪಿಟ್ಟು’. ಇನ್ನು ಬೆಳಗ್ಗೆ ಮಾಡಿದ ಉಪ್ಪಿಟ್ಟು ಮಿಕ್ಕಿದರೆ, ಅದನ್ನು ಪುನ: ತಿನ್ನಲು ಯಾರಿಗೂ ಉತ್ಸಾಹವಿರುವುದಿಲ್ಲ.
ಇಂಥ ಸಂದರ್ಭದಲ್ಲಿ, ಮಿಕ್ಕುಳಿದ ಉಪ್ಪಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು, ಗೋಧಿಹಿಟ್ಟು ಅಥವಾ ರಾಗಿಹಿಟ್ಟನ್ನು ಹಾಕಿ, ಬೇಕಿದ್ದರೆ ಸ್ವಲ್ಪವೇ ನೀರು ಬೆರೆಸಿ ರೊಟ್ಟಿ ಹಿಟ್ಟು ತಯಾರಿಸಿ. ಒಂದೆರಡು ಈರುಳ್ಳಿ/ಕ್ಯಾರೆಟ್ ಗಳನ್ನು ಹೆಚ್ಚಿ ಸೇರಿಸಿದರೂ ಒಳ್ಳೆಯದು. ಉಪ್ಪಿಟ್ಟಿನಲ್ಲಿ ಈಗಾಗಲೇ ಈರುಳ್ಳಿ, ಕರಿಬೇವಿನ ಸೊಪ್ಪು, ಕ್ಯಾರೆಟ್, ಕಾಯಿತುರಿ ಇತ್ಯಾದಿ ಇರುವುದರಿಂದ ಹೆಚ್ಚುವರಿಯಾಗಿ ಏನೂ ಸೇರಿಸದಿದ್ದರೂ ಪರವಾಗಿಲ್ಲ. ಅವಶ್ಯಕತೆ ಇದ್ದರೆ ಉಪ್ಪು ಸೇರಿಸಿ, ಎಲ್ಲವನ್ನೂ ಒಟ್ಟು ಕಲೆಸಿ. ಈ ಹಿಟ್ಟಿನಿಂದ ದೊಡ್ಡ ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಬಾಳೆಯ ಎಲೆ ಅಥವಾ ಅಲ್ಯುಮಿನಿಯ ಫಾಯಿಲ್ ಮೇಲೆ ರೊಟ್ಟಿ ತಟ್ಟಿ, ಕಾವಲಿಯಲ್ಲಿ ಹಾಕಿ, ಒಂದು ಚಮಚ ಎಣ್ಣೆ/ತುಪ್ಪ ಹಾಕಿ, ಎರಡೂ ಬದಿಯನ್ನೂ ಮುಗುಚಿ ಬೇಯಿಸಿ. ಉಪ್ಪಿಟ್ಟು ‘ರೊಟ್ಟಿ ಅವತಾರ’ ತಾಳಿ ತಿನ್ನಲು ಸಿದ್ಧವಾಗುತ್ತದೆ.
2 ಕಪ್ ನಷ್ಟು ಉಪ್ಪಿಟ್ಟಿಗೆ ಅರ್ಧ ಕಪ್ ರಾಗಿಹಿಟ್ಟು ಬೆರೆಸಿ ತಯಾರಿಸಿದ ‘ಉಪ್ಪಿಟ್ರೊಟ್ಟಿ’ ಯ ಚಿತ್ರವಿದು. ಇದಕ್ಕೆ ನೆಂಚಿಕೊಳ್ಳಲು, ಏನಾದರೂ ಚಟ್ನಿ, ಸಾಂಬಾರು, ಸಾಗು, ಮೊಸರು, ಉಪ್ಪಿನಕಾಯಿ, ಚಟ್ನಿಪುಡಿ ಹೀಗೆ ಯಾವುದಾದರೂ ಇದ್ದರೂ ಸರಿ, ಏನೂ ನೆಂಚಿಕೊಳ್ಳದಿದ್ದರೂ ಹಾಗೆಯೇ ತಿನ್ನಲೂ ರುಚಿಯಾಗಿಯೇ ಇರುತ್ತದೆ, ಎಷ್ಟಾದರೂ ಅದರ ಮೂಲಸಾಮಗ್ರಿ ಸಂಪೂರ್ಣ ತಿನಿಸಾದ ಸಾರ್ವಕಾಲಿಕ ‘ಉಪ್ಪಿಟ್ಟು’ ತಾನೇ? ಸಿಹಿಪ್ರಿಯರು ಕಾಯಿ-ಬೆಲ್ಲ, ಜೇನು, ಗುಲ್ಕಂದ್ ನೆಂಚಿಕೊಳ್ಳಬಹುದು.
– ಹೇಮಮಾಲಾ.ಬಿ
ಉಪ್ಪಿಟ್ಟು ರೊಟ್ಟಿ..ನಮ್ಮ ಸಜ್ಜಿಗೆ ರೊಟ್ಟಿಯ ಇನ್ನೊಂದು ಅವತಾರ..!!..ಚೆನ್ನಾಗಿದೆ..