ಪ್ರೇಮಿಯೂ, ಪ್ರಾರ್ಥನೆಯೂ
ಅವಳು ಆಗಮಿಸುವಾಗಲೆಲ್ಲ
ನನ್ನೊಳಗೆ ಉಸುರುತ್ತವೇಕೆ ಆಸೆ
ಕಂಡಾಗ ಇವಳ ನಡೆಯ ಹುರುಪು
ಹೃದಯದೊಳಗೇಕಿಷ್ಟು ಬಿಸುಪು .
‘
ಸ್ಪುರಿಸಿ ಅವಳಾಗಮನದ ಬೆಳಕು
ಒಳಗಿನಾಸೆ ದರ್ಶನವಾಗಬಹುದೆ!
ಯಾರವಳ ಮೆಚ್ಚು ತಿಳಿಯಬಹುದೆ
ಗಟ್ಟಿ ಗುಟ್ಟು ನಿಚ್ಚಳವಾಗಬಹುದೆ?
.
ಸುಡುವಯಸ್ಸು ಜಾರಿದ ನಡು
ವಯಸ್ಸಿನ ಜಾಣೆ ಈ ಮಂದಸ್ಮಿತೆ
ತುಟಿ ಪದಗಳನರಳಿಸುವ ಪ್ರಸನ್ನೆ
ಪ್ರಚ್ಛನ್ನ ಪ್ರೇಮಸೋಂಕಿನ ವದನೆ !
..
ಪದ ಪದಗಳ ಪೋಣಿಸಿ ಪಲುಕಿ
ಮಾಲೆ ಮಾಡುವ ಚೆಲುವೆ ಚಾಲಾಕಿ
ಅವಳುಸುರುವಾಗಿನ ನುಡಿ ಲಾಲಿತ್ಯ
ರಾಗ ಮಾಲಿಕೆಯ ಸುಸ್ವರ ಸಾಹಿತ್ಯ!
.
ನಿವೇದಿಸಿ ನಿರಾಳನಾಗುವೆನೆಂದ ಕ್ಷಣ
ಅವಳೊಳಗೆ ಹೊಳೆವ ಹುಸಿ ಜಾಣತನ
ಸುರಿಸಿ ಸುಳ್ಳು ಹರಿಸಿ ಹುಚ್ಚಿನ ಹೊಳೆ
ತೋಯಿಸಿ ಮಿಂಚುವ ಸಂಚಿನ ಎಳೆ !
.
ಎನಿತೋ ವರ್ಷ ಕಾಯ್ದಿಟ್ಟ ಸಲ್ಲಾಪ
ಅದುಮಿಟ್ಟ ಆಸೆ ಗೂಡ ಪಂಜರದ ಹಕ್ಕಿ
ಹಾರಿಸುವಳೆಂಬ ಭ್ರಮೆನಿರಸನಿಸಿ
ಹೊದೆಯುತ್ತಿದ್ದಾಳೆ ಗೂಢತೆಯ ಹೆಕ್ಕಿ
.
ಉತ್ಸುಕತೆಯಲ್ಲಿಅವಳ ಕಣ್ಣ ನೋಟ
ಅಷ್ಟೇ ಜಾಗರೂಕತೆಯ ಕಳ್ಳ ಆಟ
ಒಳಗಿನಾಸೆ ಉಳಿಸುವ ಕೆಂದುಟಿಯ
ತುದಿಯ ತುಂಟ ನಗುವಿನ ಪಾಠ!
.
ಸಮಯ ಜಾರುತ್ತ ಸಂಯಮದ ಕಟ್ಟೆ
ಒಡೆಯದಂತಿರಿಸುವ ಕವಾಯಿತು
ಈ ಗಟ್ಟಿಗಿತ್ತಿಯಲ್ಲಿ ಬತ್ತದ ಹೊಸತು
ಮತ್ತೂ ಒಸರುವ ಜೇನು ಮಾತು
.
ಕ್ಷಣ ನಿಮಿಷ ಘಂಟೆಗಳೆ ಸ್ತಬ್ಧಿಸಿರಿ
ದಿನಮಾನಗಳೆ ಉರುಳಿ ಹೋಗದಿರಿ
ವರ್ಷಗಳಿಗೆ ಇನಿತೂ ಎಡೆಗೊಡದಿರಿ
ಪರಿವೆ ಇಲ್ಲದ ಕಾಲವ ಮಲಗಿಸಿರಿ!
.
ವರ್ತಮಾನವೆ ನಿಲ್ಲು ನಿಲ್ಲು
ನಲ್ಲೆ ಮೇಲಿನ ನೆರೆ ದಾಳಿ ಕೊಲ್ಲು
ಇಂತಿದ್ದ ಪಾತರಗಿತ್ತಿ ಅಂತೆಯೆ ಇರಲಿ
ಮುಂದಿಗೂ ಎಂದಿಗೂ ಹಾರುತ್ತಲಿರಲಿ
.
ಹರೆಯದ ಪೊರೆ ಕಳಚುತ್ತಿರುವವಳಿಗೆ
ಕನಸ ಕೊಬ್ಬಿಸುವ ನಲ್ಲ ನಾನಾಗುವರೆಗೆ
ಅವಳ ಮಾತಿನ ಪರಿಗೆ ಸೋತವನಿಗೆ
ಗರಿಬಿಚ್ಚುವವರೆಗು ಕಾದೇನು ಗೆಲ್ಲುವರೆಗೆ
.
ಅಯ್ಯಾ, ದಿನವೆ ಉರುಳಬೇಡ
ವರ್ಷಗಳಿಗೆ ಎಡೆಗೊಡಬೇಡ !
– ಅನಂತ ರಮೇಶ್
ಪ್ರೇಮಿಯ ಆಶಾವಾದ ಎಂದೂ ಬತ್ತದ ಒರತೆಯ ಹಾಗೆ. ಅದನ್ನು ಬಿಂಬಿಸುವ ಸೊಗಸಾದ ಯಾಚನೆ, ಯಾತನೆ ಪ್ರೇಮಾಲಾಪ !
ಕವಿ ಮೆಚ್ಚುಗೆ ಖುಷಿ ಕೊಟ್ಟಿತು!