ಓಡುಪ್ಪಳೆ….ರುಚಿ ಸಿಕ್ಕರೆ ನೀ ತಾಳೆ…!!!

Share Button

Shankari Sharma Puttur

ತಿಂಡಿ ತಿನ್ನುವುದು ಹೊಟ್ಟೆ ತುಂಬಿಸಲು…ಹೌದಲ್ಲಾ? ಈಗೆಲ್ಲಾ  ಸುಲಭವಾಗಿ,ತಯಾರ್ ಆಗಿ ಕೈಗೆ ಸಿಗುವ ತಿಂಡಿಗಳದೇ ಕಾರ್ಬಾರು..ಅಲ್ವಾ?.ಹಾಗಾಗಿ ಸ್ವಲ್ಪ ಕಷ್ಟ ಪಟ್ಟು ಮಾಡುವ ಪಾರಂಪರಿಕ ತಿಂಡಿಗಳು ಕಡಿಮೆಯಾಗುತ್ತಾ ಬಂದಿವೆ.ನಮ್ಮ ಹಿರಿಯರು ತಯಾರಿಸುತಿದ್ದ…ನಮ್ಮ ಕೆಲವರ ಮನೆಗಳ ತಿಂಡಿ ಪಟ್ಟಿಯಲ್ಲಿ  ಸಿಗಬಹುದಾದಂತಹ ..ಮುಂದಿನ ತಲೆಮಾರಿಗೆ ಅಕ್ಷರಶಃ ಮಾಯವಾಗಬಹುದಾದಂತಹ ಕೆಲವು ತಿಂಡಿಗಳಲ್ಲಿ ಓಡುಪ್ಪಳೆಯೂ ಒಂದು..!!

ನಮ್ಮ ಹಿರಿಯರು ತಯಾರಿಸುತ್ತಿದ್ದ ತಿಂಡಿಗಳೆಲ್ಲಾ ಹೆಚ್ಚಾಗಿ ಶ್ರಮ ಬೇಡುವಂತಹುವು.ಅಕ್ಕಿ ನೆನೆ ಹಾಕು..ರುಬ್ಬು..ಗಂಟೆಗಟ್ಟಲೆ ಒಲೆ ಮುಂದೆ ಬೇಯಿಸುತ್ತಾ ಕುಳಿತಿರು(ನಿಂತಿರು?) ಇತ್ಯಾದಿ..ಇತ್ಯಾದಿ…ಕೇರಳ ಮತ್ತು ದಕ್ಷಿಣಕನ್ನಡ ಕರಾವಳಿ ಭಾಗಗಳಲ್ಲಿ ಹೆಚ್ಚಾಗಿ ಮಾಡುವಂತಹ ತಿಂಡಿ ಇದು..ಓಡುಪ್ಪಳೆ ಎಂಬ ಹೆಸರು ಹೇಗೆ ಬಂತು ಅಂತೀರಿ..ಈ ತಿಂಡಿ ಮಾಡುವುದೇ ಓಡಿನಲ್ಲಿ..!! ಓಡು ಅಂದರೆ ಮಣ್ಣಿನಿಂದ ಮಾಡಿದ ಬಾಣಲೆಯಂತಹ ತಳ ಅಗಲವಾಗಿರುವ ಪಾತ್ರೆ..ಇನ್ನು ತಿಂಡಿ ತಯಾರಿಯ ಬಗ್ಗೆ ತಿಳಿಯೋಣ..ಅಲ್ಲವೇ..??

ಬೆಳ್ತಿಗೆ ಅಕ್ಕಿಯನ್ನು 2 ಗಂಟೆ ನೆನೆ ಹಾಕಿ ಅದನ್ನು ಉಪ್ಪು,ಸ್ವಲ್ಪ ತೆಂಗಿನ ತುರಿ ಮತ್ತು ಒಂದು ಮುಷ್ಟಿ ಅನ್ನದ ಜೊತೆ ಸಣ್ಣಗೆ ರುಬ್ಬಬೇಕು. ಹಿಟ್ಟು,ನೀರುದೋಸೆ ಹಿಟ್ಟು ಇದೆಯಲ್ಲಾ, ಅದಕ್ಕಿಂತ ಸ್ವಲ್ಪ ದಪ್ಪಗಿರಲಿ.ಮಣ್ಣಿನ ಓಡು ಚೆನ್ನಾಗಿ ಕಾದ ಮೇಲೆ ಒಂದು ಸೌಟು ಹಿಟ್ಟನ್ನು ಅದರಲ್ಲಿ ಹಾಕಿ, ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಚೆನ್ನಾಗಿ ಬೆಂದಾಗ ತುಂಬಾ ತೂತುಗಳಿಂದ  ಜೇನಿನ ಎರೆಯಂತೆ ಕಾಣುತ್ತದೆ. ಇದನ್ನು ಕವುಚಿ ಬೇಯಿಸುವ ಅಗತ್ಯ ಇಲ್ಲ. ಇದನ್ನು ತೆಂಗಿನ ಕಾಯಿ ಸಿಹಿ ಹಾಲಿನಲ್ಲಿ ನೆನೆಸಿ ಸ್ವಲ್ಪ ಹೊತ್ತು ಇಟ್ಟು ತಿನ್ನಬೇಕು. (ತೆಂಗಿನಕಾಯಿ ತುರಿಯನ್ನು ರುಬ್ಬಿ ಹಾಲು ತೆಗೆದು, ಹಾಲಿಗೆ ಸಿಹಿಯಾಗುವಷ್ಟು ಬೆಲ್ಲ ಹಾಕಿದರೆ ಸಿಹಿ ಕಾಯಿ ಹಾಲು ಸಿದ್ಧ.) ಈಗ ನೋಡಿ ಮತ್ತೆ …ಸಿಹಿ ಸಿಹಿಯಾದ…ಸವಿಯಾದ ಓಡುಪ್ಪಳೆ ಸವಿದರೆ..ವಾಹ್…ಸ್ವರ್ಗಕ್ಕೆ ಮೂರೇ ಗೇಣು..!! ಸಾದಾ ತಿಂಡಿಯಂತೆ ಚಟ್ನಿ,ಸಾಂಬಾರ್ ಇತ್ಯಾದಿಗಳ ಜೊತೆಯೂ ಚೆನ್ನಾಗಿ ಜಮಾಯಿಸಬಹುದು..

oduppale-1     oduppale-2

ಈ ಬಗೆಯ ತಿಂಡಿಗಳನ್ನು ತಯಾರಿಸಲು ಸ್ವಲ್ಪ ರಗಳೆ ಎನ್ನಿಸಿದರೂ,ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಿಸುತ್ತದೆ . ಮಣ್ಣಿನ ಪಾತ್ರೆಯಲ್ಲಿ ತಯಾರಿಸುವುದರಿಂದ ಅದರದ್ದೇ ಆದ ರುಚಿ ಮತ್ತು ಪರಿಮಳ ಇರುವುದಲ್ಲಾ….ಯಾವುದೇ ತರದ ಎಣ್ಣೆ ಉಪಯೋಗಿಸದಿರುವುದರಿಂದ ಕ್ಯಾಲೊರಿ ಲೆಕ್ಕ ಹಾಕುವವರಿಗೆ ತೊಂದರೆ ಇಲ್ಲ ಎನ್ನಿಸುತ್ತದೆ…ಹಾಂ..ಹಾಗೆಯೇ ನೀವೂ ಒಮ್ಮೆ ಓಡುಫ್ಫಾಳೆ ತಯಾರಿಯ ಪ್ರಯತ್ನ ಮಾಡಬಾರದೇಕೆ..ಅಂತೀನಿ..??

 

-ಶಂಕರಿ ಶರ್ಮ, ಪುತ್ತೂರು.

 

2 Responses

  1. savithri s bhat says:

    ವಾಹ್ ಓದುಪ್ಪಲೆ ಬಹಳ ರುಚ್ಚಿ ಆರೋಗ್ಯಕರ ತಿನಿಸು .ನಾನೂ ಆಗೊಮ್ಮೆ ಈಗೊಮ್ಮೆ ತಯಾರಿಸುವುದಿದೆ

  2. Shankari Sharma says:

    ಬರಹವನ್ನು ಮೆಚ್ಚಿದ ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು…

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: