ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 4
ಜಾನಕಿಛಟ್ಟಿ
ಬೆಳಗ್ಗೆ ( 14.09.16) 4.15 ಕ್ಕೆ ಎದ್ದು ತಯಾರಾದೆವು. 5.15 ಕ್ಕೆ ವಸತಿಗೃಹದ ಲೆಕ್ಕ ಚುಕ್ತಾಮಾಡಿ ಬಸ್ ಹತ್ತಿದೆವು. ಬಹುಶಃ ಎರಡು ಸಾವಿರ ರೂ. ಆದದ್ದೆಂದು ಕಾಣುತ್ತದೆ. ಜಾನಕಿಛಟ್ಟಿಗೆ ಹೋಗುವ ದಾರಿಯಲ್ಲಿ ನಸುಕಿನಲ್ಲೇ ಕುದುರೆಗಳು ಸಾಗುವುದು ಕಂಡಿತು. ಯಮುನೋತ್ರಿಗೆ ಭಕ್ತಾದಿಗಳನ್ನು ಕರೆದೊಯ್ಯಲು ಎಷ್ಟು ದೂರದಿಂದ ಪ್ರತಿದಿನ ಬೆಳಗ್ಗೆ ಸಂಜೆ ಹೀಗೆ ನಡೆಸಿಕೊಂಡು ಬರುತ್ತಾರಲ್ಲ, ಅವರೊಂದಿಗೆ ಕುದುರೆವಾಲಾಗಳು ನಡೆಯುತ್ತಾರಲ್ಲ. ಎಂಥ ಶ್ರಮಜೀವಿಗಳು ಎನಿಸಿತು. ಬೆಳಗ್ಗೆ ಏಳುಗಂಟೆಗೆ ನಾವು ಜಾನಕಿಛಟ್ಟಿ ತಲಪಿದೆವು. ಹಿಂದಿನದಿನ ಮಾಡಿಟ್ಟಿದ್ದ ಅನ್ನವನ್ನು ಬೆಳಗ್ಗೆ ನಾಲ್ಕಕ್ಕೇ ಎದ್ದು ಚಿತ್ರಾನ್ನ ಮಾಡಿ ತಂದಿದ್ದರು. ಅವರ ಈ ಬದ್ಧತೆಗೆ ನಮೋನಮಃ. ಅದನ್ನು ಹಂಚಿಕೊಂಡು ಬಸ್ಸಲ್ಲಿ ತಿಂದೆವು.
ಯಮುನೋತ್ರಿಯೆಡೆಗೆ ನಡಿಗೆ
ಯಮುನೋತ್ರಿ ದೇವಾಲಯಕ್ಕೆ ಜಾನಕಿಛಟ್ಟಿಯಿಂದ ೫ಕಿಮೀ. ನಡೆದೇ ಹೋಗಬೇಕು. ನಡೆಯಲಾರದವರಿಗೆ ಕುದುರೆ, ಡೋಲಿ ವ್ಯವಸ್ಥೆ ಇದೆ. ಒಬ್ಬರೇ ಹೊರುವಂಥ ಬುಟ್ಟಿ, ಹಾಗೂ ಮಧ್ಯೆ ಯಾತ್ರಿಕ ಕೂತು ಹಿಂದೆ ಎರಡು, ಮುಂದೆ ಎರಡು ಜನ ಹೀಗೆ ನಾಲ್ಕು ಜನ ಹೊರುವಂಥ ಡೋಲಿಯೂ ಇದೆ. ನಾಲ್ಕು ಜನ ಹೊರುವಂಥದಕ್ಕೆ ರೂ. 3500 ದರ ನಿಗದಿಗೊಳಿಸಿದ್ದಾರೆ. ಕುದುರೆಗೆ ಸಾವಿರ ರೂ. ಡೋಲಿಗೆ 1200 ರೂ. ಹೀಗೆ ತರಾವರಿ ದರ ಇದೆ. ದರ ನಿಗದಿಗೊಳಿಸಲು ಬಲು ಚರ್ಚೆ ನಡೆಸಬೇಕಾಗುತ್ತದೆ. ಸುನಂದ, ಅನ್ನಪೂರ್ಣ ಕುದುರೆ ಏರಿದರು.
ನಾವೆಲ್ಲ ನಡಿಗೆ ಪ್ರಾರಂಭಿಸಿದೆವು. ಬಯೋಮೆಟ್ರಿಕ್ ಕಾರ್ಡ್ ತೋರಿಸಿ ಎಂಟ್ರಿ ಮಾಡಿಸಿದೆವು. ಕುದುರೆವಾಲಾಗಳು ನಮ್ಮ ಹಿಂದೆಮುಂದೆ ಅಷ್ಟು ದೂರ ಕುದುರೆ ಹತ್ತಿ ಎಂದು ಗೋಗರೆಯುತ್ತ ಬಂದರು. ಬೇಡ ಅಂದರೂ ಕೇಳಲೊಲ್ಲರು. ರೂ. ೨೦೦ ಕೊಡಿ ಸಾಕು. ಬನ್ನಿ ಹತ್ತಿ ಎಂಬ ಗೋಗರೆತ ನೋಡಿ ತುಂಬ ಸಂಕಟವಾಯಿತು. ಎಷ್ಟು ದೂರ ಬಂದ ಪಾಪ. ರೂ. ೫೦ ಅವನಿಗೆ ಕೊಡುವುದು. ಹಿಂದೆ ಹೋಗಲಿ ಎಂದು ನಾನೂ ಸವಿತಳೂ ತೀರ್ಮಾನಿಸಿ ದುಡ್ಡು ಕೊಡಲು ಹೋದರೆ ನಿರಾಕರಿಸಿದ. ಕುದುರೆ ಹತ್ತಿದರೆ ಮಾತ್ರ ದುಡ್ಡು ಎಂದ. ಬಲವಂತವಾಗಿ ರೂ. ೫೦ ಅವನ ಜೇಬಿಗೆ ತುರುಕಿದೆವು. ಹಿಂದೆ ಹೋಗಪ್ಪ. ನಮಗೆ ಕುದುರೆ ಬೇಡ ಎಂದು ವಿನಂತಿಸಿಕೊಂಡೆವು. ಮತ್ತೆ ನಮಗೆ ತೊಂದರೆ ಕೊಡದೆ ಎರಡು ಕುದುರೆಯೊಂದಿಗೆ ಹಿಂದಕ್ಕೇ ಹೋದನವ. ಹೊಟ್ಟೆಪಾಡಿಗಾಗಿ ಎಷ್ಟು ಕಷ್ಟಪಡಬೇಕು ಇವರೆಲ್ಲ. ಯಾತ್ರಾರ್ಥಿಗಳು ಬಂದು ಕುದುರೆ ಏರಿದರೆ ಮಾತ್ರ ಇವರ ಹೊಟ್ಟೆ ತುಂಬುತ್ತದೆ.
ನಾವು 7.45 ಕ್ಕೆ ನಡೆಯಲು ಪ್ರಾರಂಭಿಸಿದೆವು. ರೂ. 20 ಕೊಟ್ಟು ದೊಣ್ಣೆ ಪಡೆದೆವು. ಕಾಲುದಾರಿ ಚೆನ್ನಾಗಿ ಮಾಡಿದ್ದಾರೆ. ಕಲ್ಲು, ಸಿಮೆಂಟು ಹಾಕಿ ತಕ್ಕಮಟ್ಟಿಗೆ ಅಗಲವಾಗಿದೆ. ಕುದುರೆ, ಡೋಲಿಯವರು ಎದುರಾದರೆ ಸರಿದು ಜಾಗ ಕೊಡಬೇಕಾಗುತ್ತದೆ. ಸುತ್ತ ನಾಲ್ಕು ಕಡೆ ಪರ್ವತ ಸಾಲು. ಮಧ್ಯೆ ನದಿ ಹರಿಯುತ್ತದೆ. ಮರಗಳಿಂದ ಕೂಡಿದ ಹಸಿರು ಪರ್ವತಗಳನ್ನು ನೋಡುತ್ತ ನಡೆಯುವುದೇ ರೋಮಾಂಚನ ಅನುಭವ. ಎತ್ತ ನೋಡಿದರೂ ಹಸುರು ಕಣ್ಣಿಗೆ ತಂಪು ನೀಡುತ್ತದೆ. ಪರ್ವತಗಳಡೆಯಿಂದ ನೀರಿನ ಝರಿ ಹರಿದು ನದಿ ಸೇರುವ ವಯ್ಯಾರ ಇವೆಲ್ಲಾ ಅದ್ಭುತ ದೃಶ್ಯಗಳು. ನೋಡಿಯೇ ಅನುಭವಿಸಬೇಕು. ದಾರಿಯಲ್ಲಿ ಗುಡ್ಡದಿಂದ ಹರಿದು ಬರುವ ನೀರನ್ನು ಕುಡಿದು ಬಾಯಾರಿಕೆ ನೀಗಿಸಿಕೊಂಡೆವು. ನೀರು ಚೀಲದಲ್ಲಿ ಒಯ್ಯುವ ಅಗತ್ಯವೇ ಇಲ್ಲ. ಅಲ್ಲಲ್ಲಿ ಇಂಥ ನೈಸರ್ಗಿಕ ಸಿಹಿನೀರು ಲಭ್ಯ. ಇಂಥ ನೀರು ಕುಡಿದರೆ ತಿನ್ನಲು ಬೇರೇನು ಬೇಕೆನಿಸುವುದಿಲ್ಲ.
ಡೋಲಿ ಹೊರುವವರನ್ನು ನೋಡಿದಾಗ ಮನಸ್ಸಿಗೆ ಕಷ್ಟವಾಗುತ್ತದೆ. ಅಂಥ ತೂಕದ ವ್ಯಕ್ತಿಗಳನ್ನು ಹೊತ್ತು ಬೆಟ್ಟ ಏರಬೇಕಲ್ಲ. ಡೋಲಿಯಲ್ಲಿ ಕೂತವರು ಆರಾಮವಾಗಿ ಮೊಬೈಲಲ್ಲಿ ಮಾತಾಡುತ್ತಲೋ, ಇಲ್ಲವೆ ನಿದ್ರೆ ಮಾಡುತ್ತಲೊ ಇರುವುದನ್ನು ಕಾಣುವಾಗಲಂತೂ ಬೇಸರವಾಗುತ್ತದೆ. ಹೊಟ್ಟೆಪಾಡಿಗಾಗಿ ಇವರು ಎಷ್ಟು ಶ್ರಮದ ಕೆಲಸ ನಿರ್ವಹಿಸುತ್ತಾರಲ್ಲ. ಇದೂ ಒಂದು ಸೇವೆಯೇ ಸರಿ ಎಂದು ತೀರ್ಮಾನಿಸಬೇಕಾಗುತ್ತದೆ.
ಸಮುದ್ರಮಟ್ಟದಿಂದ 2600 ಮೀ ಎತ್ತರದಲ್ಲಿದೆ ಯಮುನೋತ್ರಿ
ಬಿಸಿನೀರಿನ ಹೊಂಡ
ನಾವು ಕೆಲವಾರು ಮಂದಿ 11.15 ಕ್ಕೆ ದೇವಾಲಯ ತಲಪಿದೆವು. ಅಲ್ಲಿ ಬಿಸಿನೀರಿನ ಹೊಂಡದಲ್ಲಿ ಸ್ನಾನ ಮಾಡಿದೆವು. ಐದೆ ನಿಮಿಷ ಇರಬೇಕು ನೀರಲ್ಲಿ. ಹೆಚ್ಚು ಹೊತ್ತು ಇದ್ದರೆ ತಲೆಸುತ್ತು ಬರುತ್ತದೆ. ಸಲ್ಫರ್ ಇರುವ ನೀರಲ್ಲಿ ಹೆಚ್ಚು ಹೊತ್ತು ಇರಬಾರದು. ಕೆಲವರೆಲ್ಲ ಆಹಾ ಎಂದು ನೀರಲ್ಲೇ ಇದ್ದವರು ಮೇಲೆ ಬಂದು ತಲೆ ಸುತ್ತುತ್ತೆ ಎನ್ನುತ್ತಿದ್ದರು. ಗಂಡಸರಿಗೆ ಹೆಂಗಸರಿಗೆ ಸ್ನಾನಕ್ಕೆ ಪ್ರತ್ಯೇಕ ಬಿಸಿನೀರಿನ ಹೊಂಡಗಳಿವೆ.
ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡಿದೆವು. ದೇವಾಲಾಯದ ಇನ್ನೊಂದು ಪಾರ್ಶ್ವದಲ್ಲಿರುವ ಸೂರ್ಯ ಕುಂಡ ಕೂಡ ಬಿಸಿ ನೀರಿನ ಬುಗ್ಗೆ. ಇಲ್ಲಿ ಅಕ್ಕಿಯನ್ನು ಒಂದು ಮಕಮಲ್ಲಿನ ಬಟ್ಟೆಯಲ್ಲಿ ಹಾಕಿ ಆ ಬಟ್ಟೆಯನ್ನು ಕುದಿಯುತ್ತಿರುವ ಬಿಸಿನೀರಿನ ಬುಗ್ಗೆಯಲ್ಲಿ ಐದು ನಿಮಿಷ ಅದ್ದಿ ಇಟ್ಟರೆ ಅದು ಬೇಯುತ್ತದೆ. ಅದನ್ನು ದೇವಿಗೆ ನೈವೇದ್ಯ ಮಾಡಿ ಪ್ರಾಸಾದವೆಂದು ಪರಿಗಣಿಸಲಾಗುತ್ತದೆ. ನಾವೂ ಕೂಡ ಅಕ್ಕಿಯನ್ನು ಆ ನೀರಲ್ಲಿ ಅದ್ದಿದೆವು. ಅಲ್ಲಿಂದ ಹೊಳೆಗೆ ಹೋಗಿ ನೀರು ಕುಡಿದೆವು. ನೀರು ತಣ್ಣಗೆ ಕೊರೆಯುತ್ತಿತ್ತು. ನೀರು ಅತ್ಯಂತ ಶುಭ್ರವಾಗಿದ್ದು ಶುಚಿಯಾಗಿತ್ತು. ದೇವಾಲಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದೆವು. ದೇವಾಲಯದ ಬಳಿ ಮೇಲಕ್ಕೆ ಕಾಲಂದಿ ಪರ್ವತ ಕಾಣುತ್ತದೆ.
ಮರಳಿ ಜಾನಕಿಛಟ್ಟಿಯೆಡೆಗೆ
ದೇವಾಲಯದಿಂದ ಹೊರಟು ಹೊರಗೆ ಬಂದು ಅಲ್ಲೇ ಹತ್ತಿರವಿದ್ದ ಹೋಟೇಲಲ್ಲಿ ಪರೋಟ ತಿಂದೆವು. ಒಂದು ಪರೋಟ ತಿಂದರೆ ಸಾಕು. ಹೊಟ್ಟೆ ತುಂಬುತ್ತದೆ. ಅಷ್ಟು ದೊಡ್ದದಿರುತ್ತದೆ. ರೂ. 20 ಕ್ಕೆ ಒಂದು ಪರೋಟ. ಶ್ರದ್ಧೆಯಿಂದ ಚೆನ್ಣಾಗಿ ಮಾಡಿಕೊಡುತ್ತಾರೆ. ಚಪಾತಿ, ಪರೋಟ ಎಲ್ಲ ದುಬಾರಿಯಲ್ಲ. ಮರಳಿ ಜಾನಕಿಛಟ್ಟಿಯೆಡೆಗೆ ಹೆಜ್ಜೆ ಹಾಕಿದೆವು. ನಾವು ನಾಲ್ಕೈದು ಮಂದಿ ಮಾತಾಡುತ್ತಲೇ ನಿಧಾನಕ್ಕೆ ನಡೆಯುತ್ತ, ಪ್ರಕೃತಿಯ ಸೌಂದರ್ಯವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತ, ಕ್ಯಾಮರಾದಲ್ಲೂ ಕ್ಲಿಕ್ಕಿಸುತ್ತ ಮುಂದುವರಿದೆವು. 1.10 ಕ್ಕೆ ನಡಿಗೆ ಪ್ರಾರಂಭಿಸಿ 3.10 ಕ್ಕೆ ಜಾನಕಿಛಟ್ಟಿ ತಲಪಿದೆವು. ದೊಣ್ಣೆ ತೆಗೆದುಕೊಂಡ ಅಂಗಡಿಗೇ ವಾಪಾಸು ದೊಣ್ಣೆ ಕೊಟ್ಟರೆ ರೂ. ಹತ್ತು ಮರಳಿ ಕೊಡುತ್ತಾರೆ. ಬಾಕಿದ್ದವರೆಲ್ಲರೂ ಬಂದು ಸೇರುವಾಗ 4.30 ಆಗಿತ್ತು. ಒಂದಿಬ್ಬರು ದಾರಿ ತಪ್ಪಿ ಸ್ವಲ್ಪಕಾಲ ಗೊಂದಲ ಉಂಟಾಯಿತು.
ಬಸ್ಸಲ್ಲಿ ಬರುವಾಗ ಒಂದು ಗಂಟೆ ಅಡುಗೆ ಬಗ್ಗೆಯೇ ಚರ್ಚೆ. ಇವತ್ತು ರಾತ್ರೆ ಅಡುಗೆ ಮಾಡುವುದು ಗಂಡಸರು. ಹೆಂಗಸರು ಅಡುಗೆ ಕೋಣೆಗೇ ಕಾಲಿಡಬಾರದು. ಅಡುಗೆ ಮಾಡುವುದೇನೂ ಕಷ್ಟವಲ್ಲ, ಬೆಂಡೆಕಾಯಿ ದಮ್ರೋಟು, ಆಲೂಗಡ್ಡೆ ಪಾಯಸ ಎಲ್ಲ ಮಾಡೋಣ. ನೋಡುತ್ತ ಇರಿ ಎಂಥ ಅಡುಗೆ ಮಾಡುತ್ತೇವೆ ನಾವು. ಎಂದೆಲ್ಲ ಭಾರೀ ಮಾತುಕತೆಯಾಗುತ್ತಲೇ ಇತ್ತು. ಕೇಳುತ್ತಿದ್ದರೆ ನಿಜಕ್ಕೂ ಇವರು ಅಡುಗೆ ಮಾಡುತ್ತಾರ? ಎಂದು ಅನಿಸುವಂತಿತ್ತು!
ಮರಳಿ ಬಾರ್ಕೋಟ್ (ಬಾಡ್ಕೋಟ್)
ಸಂಜೆ 6.30 ಗಂಟೆಗೆ ಕೌಸಲ್ಯ ಅವರ ನೈನಾ ವಸತಿಗೃಹಕ್ಕೇ ತಲಪಿದೆವು. ನಮ್ಮ ನಮ್ಮ ಕೋಣೆಗೆ ಸೇರಿಕೊಂಡು ಸ್ನಾನಾದಿ ಮುಗಿಸಿದೆವು. ಹಿಂದಿಯಲ್ಲಿ ಡಿ ಅಕ್ಷರ ಬಂದದ್ದು ಆಂಗ್ಲದಲ್ಲಾಗುವಾಗ ರ ಅಕ್ಷರವಾಗುತ್ತದೆ. ಹಿಂದಿಯಲ್ಲಿ ಬಾಡ್ಕೋಟ್ ಎಂದು ಬರೆದಿದ್ದರೆ ಆಂಗ್ಲದಲ್ಲಿ ಬಾರ್ಕೋಟ್ ಎಂದಿರುತ್ತದೆ.
ವಿಠಲಸೋಮಪ್ರಸಾದ ಪಾಕ
ವಿಠಲರಾಜು, ಸೋಮಶೇಖರ್, ರಂಗಪ್ರಸಾದ್ ಮೂರೂ ಜನ ಅಡುಗೆಮನೆಯ ಪಾರುಪತ್ಯ ವಹಿಸಿಕೊಂಡರು. ‘ನಾನಂತೂ ಅಡುಗೆ ಕೋಣೆಗೆ ಬರಲ್ಲ. ನನಗೆ ಏನೂ ಮಾಡಲು ಬರುವುದಿಲ್ಲ’ ಎಂದು ರಂಗನಾಥ್ ಮೊದಲೆ ಹೇಳಿದ್ದರು. ಹಾಗಾಗಿ ಅವರನ್ನು ಅಡುಗೆ ಕೋಣೆಯ ಹೊರಗೆಯೇ ಹೆಂಗಸರು ಯಾರೂ ಒಳಗೆ ಬರದಂತೆ ಕಾವಲು ಕೂರಿಸಿದರು! ಇವರಲ್ಲಿ ಮೌನವಾಗಿ ಕೆಲಸ ಮಾಡುವವರು ರಂಗಪ್ರಸಾದ್. ಮೌನದಿಂದಲೆ ಆಲೂಗಡ್ಡೆ ದೊಡ್ಡಮೆಣಸು, ಟೊಮೆಟೊ ಚಕಚಕ ಹೆಚ್ಚಿದರು. ನೀರುಳ್ಳಿ ಸಿಪ್ಪೆ ತೆಗೆಯಲು ವಿಠಲರಾಜು, ಪೂರ್ಣಿಮ ಸೇರಿದರು. ನೀರುಳ್ಳಿ ಹೆಚ್ಚಲು ಸೋಮಶೇಖರ್ ಚೂರಿ ಹಿಡಿದರು. ಅದನ್ನು ನೋಡಿದ ಅವರ ಪತ್ನಿ ಸರಸ್ವತಿ, ‘ಆಯಿತು ಕತೆ, ಇವತ್ತಿಗೆ ಊಟ ಸಿಗುತ್ತೆ ಎಂಬ ಗ್ಯಾರಂಟಿ ಇಲ್ಲ. ಇವರು ನೀರುಳ್ಳಿ ಹೆಚ್ಚಿ, ಅಡುಗೆ ಮಾಡಿದಾಂಗೆ’ ಎಂದು ಹೇಳಿಕೊಂಡರು. ಆಗ ಅವರ ಸೋದರ ಸೊಸೆ ಸುನಂದ ನೋಡಲಾರದೆ ಕೊಡಿ ಮಾವ ಇಲ್ಲಿ ಚೂರಿ ಎಂದು ನೀರುಳ್ಳಿ ಹೆಚ್ಚಿ ಕೊಟ್ಟರು. ಸೋಮಶೇಖರ್ ಹಾಗೆ ಹೆಚ್ಚು, ಹೀಗೆ ಹೆಚ್ಚು ಎಂದು ಸಲಹೆ ಸೂಚನೆ ಕೊಟ್ಟರು! ಸೋಮಶೇಖರ್ ಅಕ್ಕಿ ತೊಳೆದರು. ಗಂಡಸರ ಅವಸ್ಥೆ ನೋಡಲಾರದೆ ಸರಸ್ವತಿ ಸದ್ದಿಲ್ಲದೆ ಬೇಳೆ ತೊಳೆದು ಬೇಯಲು ಕುಕ್ಕರಿನಲ್ಲಿ ಒಲೆಮೇಲಿಟ್ಟರು. ಅಂತೂ ಇಂತೂ 8.30 ಗೆ ಊಟಕ್ಕೆ ಕರೆ ಬಂತು. ವಿಠಲಸೋಮಪ್ರಸಾದ ಪಾಕ ತಯಾರಾಗಿತ್ತು!
ಬೆಂಡೆಪಲ್ಯ, ಹಿಮಾಲಯದಲ್ಲಿ ಸಿಕ್ಕುವ ವಿಶೇಷ ಸೊಪ್ಪಿನ ಪಲ್ಯ, ಅನ್ನ, ಸಾಂಬಾರು ತಯಾರಿಸಿದ್ದರು. ಇದು ಸಾಂಬಾರು ಪುಡಿಯಾ? ಅರಸಿನ ಪುಡಿ ಎಲ್ಲಿದೆ? ಇದು ಅಚ್ಚಕಾರದ ಪುಡಿಯಾ? ಎಂದು ಕೇಳಲು ಮೂರು ನಾಲ್ಕು ಸಲ ಸೋಮಶೇಖರ್ ಅವರ ಪತ್ನಿ ಬಳಿ ಬಂದಿದ್ದರು! (ಸೋಮಶೇಖರ್ ಅವರಿಗೆ ಮನೆಯಲ್ಲಿ ಒಂದು ಚಹಾ ಮಾಡಲೂ ಬರುವುದಿಲ್ಲವಂತೆ! ಇದು ಅವರ ಪತ್ನಿ ಹೇಳಿದ ಗುಟ್ಟು!) ಸಾಂಬಾರು, ಪಲ್ಯ ಚೆನ್ನಾಗಿತ್ತು. ಸರೋಜ ಅವರು ಅಡುಗೆ ಕೋಣೆಗೆ ಹೋಗಿ ಸಾಂಬಾರು ರುಚಿ ನೋಡಿ, ಹುಳಿ, ಉಪ್ಪು, ಪುಡಿ ಸೇರಿಸಿ ಪಾಕ ಹದ ಮಾಡಿದ್ದರಂತೆ. ಮಾತುಕೊಟ್ಟಂತೆ ಗಂಡಸರು (ಹೆಂಗಸರ ಹಸ್ತಕ್ಷೇಪವೂ ಬೆರೆತು) ಅಡುಗೆ ಮಾಡಿ ಬಡಿಸಿದ್ದರು.
ಸರಸರ ಸರೋಜ
ಸರೋಜ ಅವರು ಬಹಳ ಚುರುಕಿನ ಮಹಿಳೆ. ಎಲ್ಲೆ ಹೋದರೂ ಏನಾದರೂ ಸಾಧಿಸುವ ಧೀರೆ. ಆ ದಿನದ ಪ್ರಯಾಣ ಮುಗಿಸಿ ನಾವು ವಸತಿಗೃಹಕ್ಕೆ ಬಂದ ಕೂಡಲೇ ಸರಸರ ಅಡುಗೆ ಕೋಣೆಗೆ ಹೋಗಿ ನಿಂಬೆಚಹಾ, ಕಾಫಿ, ಹಾಲು ಹಾಕಿದ ಚಹಾ ತಯಾರಿಸಿ ಎಲ್ಲರಿಗೂ ಹಂಚುತ್ತಿದ್ದರು. ಆ ದಿನದ ಅಡುಗೆಗೆ ಏನು ತರಕಾರಿ ಸಾಮಾನು ಬೇಕೋ ಅಂಗಡಿ ಮುಂದೆ ಬಸ್ ನಿಲ್ಲಿಸಿ ಚಕಚಕ ಇಳಿದು ಚೌಕಾಸಿ ವ್ಯಾಪಾರ ಮುಗಿಸಿ ಬಸ್ ಹತ್ತುತ್ತಿದ್ದರು. ಎಲ್ಲಿ ಬಸ್ ಇಳಿದರೂ ಒಂದುಕ್ಷಣ ಮಾಯವಾಗಿ, ಮತ್ತೆ ಪ್ರತ್ಯಕ್ಷವಾದಾಗ ಆ ಊರಿನ ಸ್ಪೆಷಲ್ ತಿಂಡಿಯನ್ನು ಕೊಂಡು ಎಲ್ಲರಿಗೂ ಹಂಚುತ್ತಿದ್ದರು. ಅದಕ್ಕೆ ಅವರಿಗೆ ಸರಸರ ಸರೋಜ ಎಂಬ ಹೆಸರಿಟ್ಟಿದ್ದೆ.
ಪಾತ್ರೆಪಗಡ ಗೋಪಕ್ಕ, ಒತ್ತರೆ ಶೋಭಕ್ಕ
ಅಡುಗೆ ಮಾಡಿದ ಮೇಲೆ ಪಾತ್ರೆಗಳನ್ನು ತೊಳೆಯಲೇಬೇಕಲ್ಲ. ಆ ಕೆಲಸವನ್ನು ಗೋಪಕ್ಕ ಬಹಳ ಖುಷಿಯಿಂದ ಮಾಡುತ್ತಿದ್ದರು. ಅವರಿಗೆ ಪಾತ್ರೆ ತೊಳೆಯುವುದೆಂದರೆ ಬಲು ಇಷ್ಟದ ಕೆಲಸವಂತೆ. ಅಡುಗೆ ಕೋಣೆ, ಒಲೆಯನ್ನು ಚೊಕ್ಕವಾಗಿ ಒರೆಸುವ ಕೆಲಸ ಶೋಭಕ್ಕ ಬಹಳ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡುತ್ತಿದ್ದರು.
………ಮುಂದುವರಿಯುವುದು
ಈ ಪ್ರವಾಸಕಥನದ ಹಿಂದಿನ ಭಾಗಗಳು ಇಲ್ಲಿವೆ: ಹಿಮಾಲಯದ ಸನ್ನಿಧಿಯಲ್ಲಿ- ಚಾರ್ ಧಾಮ ಪ್ರವಾಸ -ಭಾಗ 3
– ರುಕ್ಮಿಣಿಮಾಲಾ, ಮೈಸೂರು
ಸ್ಥಳವಿವರಣೆಗಳನ್ನು ಓದಲು ಖುಷಿಯಾಯಿತು,ಅದರ ಜೊತೆಗೆ ನಿಮ್ಮ ತಂಡದವರು ಪರಸ್ಪರ ಸಹಕರಿಸಿಕೊಂಡು ಪ್ರವಾಸವನ್ನು ಸುಗಮಗೊಳಿಸಿರುವುದನ್ನು ಓದಲು ಹಿತವೆನಿಸಿತು.
ಓದಿ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದ.
ಪ್ರವಾಸದ ವಿವರಣೆ ಓದಿ ಖುಷಿಯಾಯಿತು
ಪ್ರತಿಕ್ರಿಯೆಗೆ ಧನ್ಯವಾದ
ಪ್ರವಾಸ ಕಥನ ತುಂಬಾ ಚೆನ್ನಾಗಿದೆ…
ಧನ್ಯವಾದ