ಲಕ್ಷ್ಮಣ ಝೂಲಾ, ರಾಮಝೂಲಾ
ಮಳೆಅಂಗಿ ಹಾಕಿಕೊಳ್ಳುತ್ತ ಮಳೆಯಲ್ಲೆ ನಡೆದೆವು. ಲಕ್ಷ್ಮಣಝೂಲಾ ಸೇತುವೆಯಲ್ಲಿ ದಾಟಿ ಮುಂದೆ ಹೋದೆವು. ಗೀತಭವನದಲ್ಲಿ ಕಾಲಾಕಂಬಳಿವಾಲಾ ಮಂದಿರ ನೋಡಿದೆವು. ಕಾಲಾಕಂಬಳಿವಾಲಾ ಅವರು ಕಪ್ಪುಕಂಬಳಿಯನ್ನು ದಾನ ಮಾಡುತ್ತಿದ್ದರಂತೆ. ಲಕ್ಷ್ಮೀನಾರಾಯಣ ದೇವಾಲಯವಿದೆ ಅಲ್ಲಿ. ಮುಂದೆ ರಾಮಝೂಲಾ ಸೇತುವೆ ದಾಟಿ ಮುಂದೆ ಸಾಗಿದಾಗ ಧಾರಾಕಾರ ಮಳೆ. ಸುಮಾರು ಎರಡುಕಿಮೀ. ದೂರ ಮಳೆಯಲ್ಲಿ ನಡೆದೆವು. ಮಳೆಯಲ್ಲಿ ನಡೆಯುವುದೇ ಸೊಗಸು. ಬಾಲ್ಯಕಾಲದ ಮಜಾ ಅನುಭವಿಸಿದೆವು. ಮುಂದೆ ಶತ್ರುಘ್ನನ ದೇವಾಲಯ ನೋಡಿದೆವು. ಆಗಲೇ ರಾತ್ರಿಯಾಗಿತ್ತು. ಎರಡು ಆಟೊದಲ್ಲಿ ವಾಪಾಸು ಹರಿದ್ವಾರವನ್ನು ರಾತ್ರಿ 8.45 ಕ್ಕೆ ತಲಪಿದೆವು. ಋಷಿಕೇಶದಲ್ಲಿ ನೋಡುವಂಥ ಸ್ಥಳ ಇನ್ನೂ ಇದೆ. ಸಮಯಾವಕಾಶವಾಗಲಿಲ್ಲ. ಛೋಟಾವಾಲಾ ಹೊಟೇಲಿನಲ್ಲಿ ಒಬ್ಬ ಮನುಷ್ಯ ಗೊಂಬೆಯಂತೆ ಎದುರು ಕುಳಿತದ್ದು ಕಂಡಿತು. ಪಾಪ ಎಷ್ಟು ಕಷ್ಟದ ಕೆಲಸವದು.
ಹಿಮಾಲಯದ ಸನ್ನಿಧಿಯಲ್ಲಿ- ಚಾರ್ ಧಾಮ ಪ್ರವಾಸ -ಭಾಗ 3
ಮಧ್ಯಾಹ್ನ ಮಾಡಿದ ಅನ್ನ ಸಾರು ಇತ್ತು. ಅದನ್ನು ಊಟ ಮಾಡಿ ಮಲಗಿದೆವು.
ಯೋಗ ಸಾಧನೆ
ಯೋಗಾಭ್ಯಾಸ ಮಾಡುವವರು ಎಷ್ಟು ಮಂದಿ ಇದ್ದೀರಿ ಎಂದು ವಿಠಲರಾಜು ಅವರು ಹಿಂದಿನ ದಿನವೇ ಕೇಳಿ, ನಾಳೆ ಬೆಳಗ್ಗೆ 5 ಗಂಟೆಗೆ ಯೋಗಾಭ್ಯಾಸ ಮಾಡೋಣ ಎಂದು ಹೇಳಿದ್ದರು. ಅವರ ಮಾರ್ಗದರ್ಶನದಲ್ಲಿ ಬೆಳಗ್ಗೆ (13-9-2016) 5 ರಿಂದ ಆರು ಗಂಟೆವರೆಗೆ ನಾವು ಕೆಲವಾರು ಮಂದಿ ಇಕ್ಕಟ್ಟಿನ ಸ್ಥಳದಲ್ಲಿ ಕೈಕಾಲು ಆಡಿಸಿದೆವು.
ಚಾರ್ ಧಾಮ ಯಾತ್ರೆ ಶುರು ಕರೋ
ಬಿಸಿಬಿಸಿ ರುಚಿಯಾದ ಉಪ್ಪಿಟ್ಟು ತಿಂದು (ಶಶಿಕಲಾ, ಸರಸ್ವತೀ ಉಪ್ಪಿಟ್ಟು ತಯಾರಿಸಿದ್ದರು. (ಸುನಂದ, ಶೋಭಾ ಈರುಳ್ಳಿ, ತರಕಾರಿ ಸಣ್ಣಗೆ ಹೆಚ್ಚಿಕೊಟ್ಟಿದ್ದರು) ತಯಾರಾದೆವು. 30 ಆಸನಗಳಿರುವ ಬಸ್ಸನ್ನು ಹತ್ತು ದಿನದ ಪ್ರಯಾಣಕ್ಕೆ ನಿಗದಿಗೊಳಿಸಿದ್ದರು. ರೂ.52500/-. ನಾವು ಹದಿನೇಳು ಮಂದಿಗೆ ಇಷ್ಟು ದೊಡ್ಡ ಬಸ್ಸು ಏಕೆ? ಎಂಬ ಪ್ರಶ್ನೆ ನಿಮ್ಮ ಮನದಲ್ಲೇಳಬಹುದು! ನಮ್ಮ ಲಗೇಜು ಇಡಲು ಅನುಕೂಲವಾಗಲೆಂದು ದೊಡ್ಡ ಬಸ್ ಮಾಡಿದ್ದರು. ನಾವೆಲ್ಲ ನಮ್ಮ ಲಗೇಜುಗಳೊಂದಿಗೆ ಬಸ್ ಹತ್ತಿದೆವು. ಬಸ್ ಋಷಿಕೇಶ ದಾರಿಯಲ್ಲಿ ಮುಂದೆ ಸಾಗಿತು.
ಮಸ್ಸೂರಿ ಯೂಥ್ ಹಾಸ್ಟೆಲ್
ದಾರಿಯಲ್ಲಿ ಹೋಗುತ್ತ ಮಸ್ಸೂರಿಯಲ್ಲಿ ಯೂಥ್ ಹಾಸ್ಟೆಲಿಗೆ ಭೇಟಿ ಕೊಡೋಣ ಎಂದು ಗೋಪಕ್ಕ ಮೊದಲೇ ಹೇಳಿದ್ದರು. ಅಲ್ಲಿ ಚಹಾ ಕುಡಿಯೋಣ ಎಂದೂ ಹೇಳಿದ್ದರು. ಅದಕ್ಕೂ ಮೊದಲು ಒಂದು ಚಹಾ ದುಖಾನೆಯಲ್ಲಿ ನಿಲ್ಲಿಸಿ ನಾವು ಕೆಲವರು ಕಾಫಿ ಚಹಾ ಬ್ರೆಡ್ ಪಕೋಡ ಸವಿದು ಪ್ರಯಾಣದ ಮಜ ಅನುಭವಿಸಿದೆವು. ಯೂಥ್ ಹಾಸ್ಟೆಲ್ ಕಟ್ಟಡ ಭವ್ಯವಾಗಿ ಇದೆ. ಹಿನ್ನೆಲೆಯಲ್ಲಿ ಮಸ್ಸೂರಿಬೆಟ್ಟ ಅದ್ಭುತವಾಗಿ ಕಾಣುತ್ತದೆ. ಅಲ್ಲಿ ಚಹಾ ಕೊಡುವುದು ಬಿಟ್ಟು, ಪಾಯಿಖಾನೆಗೆ ಹೋಗಲೂ ದುಡ್ಡು ವಸೂಲಿ ಮಾಡಿದರು. ಹಾಗಾಗಿ ಗೋಪಕ್ಕನಿಗೆ ತುಸು ಬೇಸರವೆನಿಸಿತು. ಮುಂದಿನ ಬಾರಿ ಬಂದಾಗ ಇವರಿಗೆಲ್ಲ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಹೇಳಿಕೊಂಡರು!
ಮಸ್ಸೂರಿ ಲೈಬ್ರೆರಿ
1843 ರಲ್ಲಿ ಸ್ಥಾಪಿಸಲಾದ ಲೈಬ್ರೆರಿಯನ್ನು ಹೊರಗಿನಿಂದಲೇ ನೋಡಿದೆವು. ಅಲ್ಲಿ ಪಕ್ಕದಲ್ಲೇ ಮಸ್ಸೂರಿ ವ್ಯೂ ಪಾಯಿಂಟ್ ಮುಖಮಂಟಪದಲ್ಲಿ ಗಾಂಧೀಜಿ ಪ್ರತಿಮೆ ಇದೆ. ಅಲ್ಲಿ ಭಾವಚಿತ್ರ ತೆಗೆಸಿಕೊಂಡು ಮುಂದುವರಿದೆವು.
ಕೆಮ್ಟೀಫಾಲ್ಸ್
ಮಸ್ಸೂರಿಯಿಂದ ಹೊರಟು ಮುಂದೆ ಬರುವಾಗ ಪರ್ವತಗಳೆಡೆಯಿಂದ ಒಂದು ಜಲಪಾತ ಹರಿಯುವುದು ಕಾಣುತ್ತಿತ್ತು. ಅದೇ ಪ್ರಸಿದ್ಧ ಕೆಮ್ಟೀಫಾಲ್ಸ್. ಅದರ ಹೆಸರು ನೆನಪಿಟ್ಟುಕೊಳ್ಳಲು ಕೆಂಪು ಟೀ ಎಂದು ಬಾಯಿಪಾಟ ಮಾಡಿದೆ!
ಹೊಟ್ಟೆ ಹಸಿದಿತ್ತ, ಪೊಂಗಲ್ ಕಾಯುತ್ತಿತ್ತ!
ಅದಾಗಲೇ ಗಂಟೆ ಮಧ್ಯಾಹ್ನ 2.30 ಆಗಿತ್ತು. ಎಲ್ಲರ ಉದರ ಚುರ್ ಎನ್ನಲು ಸುರುವಾಗಿತ್ತು. ಮುಂದೆ ನೈನ್‌ಭಾಗ್ ಎಂಬಲ್ಲಿ ಬಸ್ ನಿಲ್ಲಿಸಿದೆವು. ಪೊಂಗಲ್, ಮೊಸರನ್ನ ಮಾಡಿ ಪಾತ್ರೆಯಲ್ಲಿ ತಂದಿದ್ದೆವು. ಅದನ್ನು ಹಂಚಿ ಊಟ ಮಾಡಿದೆವು.
ಲಾಖಾಮಂಟಪ
ಊಟವಾಗಿ 3.10 ಕ್ಕೆ ಹೊರಟು ಲಾಖಾಮಂಟಪ ಎಂಬ ಊರಿಗೆ ಬಂದೆವು. ಇಲ್ಲಿ 2007 ರಲ್ಲಿ ಉತ್ಖನನ ಮಾಡಿದಾಗ ಹತ್ತಾರು ಶಿವಲಿಂಗಗಳು ದೊರೆತಿವೆಯಂತೆ. ಅದನ್ನು ಜೋಡಿಸಿ ಇಟ್ಟಿದ್ದಾರೆ. ಪುರಾತನ ದೇವಾಲಯವೂ ಇದೆ. ಅಲ್ಲಿ ವಿವಿಧ ದೇವರ ಹತ್ತಾರು ವಿಗ್ರಹಗಳು ಇವೆ. ಹೊರಗೆ ಒಂದು ದೊಡ್ಡ ಶಿವಲಿಂಗವಿದೆ. ಬನ್ನಿ ಅದಕ್ಕೆ ಅಭಿಷೇಕ ಮಾಡಿ ನಿಮ್ಮ ಪ್ರತಿಬಿಂಬ ಅದರಲ್ಲಿ ಕಾಣುತ್ತದೆ ನೋಡಿ ಎಂದು ಸ್ಥಳೀಯನೊಬ್ಬ ನಮಗೆ ಬಲವಂತ ಮಾಡಿದ. ನೋಡಿಯೇ ಬೀಡೋಣವೆಂದು ಎಲ್ಲರೂ ಅಭಿಷೇಕ ಮಾಡಿದೆವು. ಲಿಂಗದಲ್ಲಿ ನಮ್ಮ ನಮ್ಮ ಪ್ರತಿಬಿಂಬ ನೋಡಿ ಕೃತಾರ್ಥರಾದೆವು!
ಅಲ್ಲಿದ್ದ ಒಬ್ಬ ಬಾಲಕಿಗೆ ನಾಲಿಗೆ ತೋರಿಸು ಎಂದ ಒಬ್ಬ ಅಜ್ಜ. ಕಾಳಿ ಅವತಾರ ಅವಳದು ನೋಡಿ ಎಂದ. ಅವಳು ನಾಲಿಗೆ ಹೊರಚಾಚಿ ತೋರಿಸಿದಳು. ನಾಲಿಗೆಯಲ್ಲಿ ಇಷ್ಟಗಲದ ಮಚ್ಚೆ ಇತ್ತು.
ಪ್ರಾಚೀನ ಪಾಂಡವ ಗುಹೆ
ಅಲ್ಲಿಂದ ಹೊರಟು ಮುಂದೆ ಬರುವಾಗ ಪ್ರಾಚೀನ ಪಾಂಡವ ಗುಹೆ ನೋಡಿದೆವು. ಒಳಗೆ ಶಿವಲಿಂಗವಿದೆ. ಪಾಂಡವರು ಹೋಗದ ಸ್ಥಳವಿಲ್ಲ ಎನ್ನುವುದು ಖಾತ್ರಿಯಾಯಿತು!
ಬಾರ್ಕೋಟ್
ಬಸ್ಸು ತೆರಳುವ ಮಾರ್ಗ ಬಲು ಕಿರಿದಾಗಿದೆ. ಕೆಲವೆಡೆ ಎರಡು ವಾಹನಗಳು ಒಟ್ಟಿಗೆ ಚಲಿಸಲು ಸಾಧ್ಯವಿಲ್ಲ. ವಾಹನ ಸಂಚಾರ ಬಲು ವಿರಳ. ಹೀಗೆ ಪ್ರವಾಸಿಗಳಿಂದ ತುಂಬಿದ ಬಸ್, ಕಾರು ಒಂದೊಂದು ಹೋಗುವುದು ಬರುವುದು ಕಾಣುತ್ತದಷ್ಟೆ. ಸರ್ವಿಸ್ ಬಸ್ ಬಹಳ ಕಡಿಮೆ. ಎಲ್ಲೋ ಒಂದೊಂದು ಕಂಡಿತಷ್ಟೆ. ದಾರಿಯುದ್ದಕ್ಕೂ ಅಲಕನಂದಾ ನದಿ ಹರಿಯುವುದು ಕಾಣುತ್ತೇವೆ. ಕೆಳಗೆ ನದಿ, ಪಕ್ಕದಲ್ಲಿ ಪರ್ವತ ಸಾಲು ಕಣ್ಣಿಗೆ ರುದ್ರರಮಣೀಯವಾಗಿ ಕಾಣುತ್ತದೆ. ಜನವಸತಿ ಇರುವಲ್ಲಿ ಭತ್ತ ಬೆಳೆದದ್ದು ಕಾಣುತ್ತದೆ. ಇಳಿಜಾರಿನಲ್ಲಿ ಎಷ್ಟು ಚೆನ್ನಾಗಿ ಭತ್ತದ ಕೃಷಿ ಮಾಡಿದ್ದಾರೆ. ನೋಡುವಾಗ ಖುಷಿ ಆಗುತ್ತದೆ. ಚಾಲನಾವೇಗ ಹೆಚ್ಚುಕಡಿಮೆ 30 ರಿಂದ 40 ಕಿಮೀ ಮಾತ್ರ. ಇಂಥ ರಸ್ತೆಯಲ್ಲಿ ರಾತ್ರಿ ಚಾಲನೆ ಅಪಾಯಕಾರಿ. ಹಾಗಾಗಿ ಮಂಗಾರಾಮ ಸಂಜೆ ೭ ಗಂಟೆಗೇ ಬಾರ್ಕೋಟ್ ಎಂಬ ಊರಿನಲ್ಲಿ ವಸತಿಗೃಹವಿರುವ ಕಡೆ ಬಸ್ ನಿಲ್ಲಿಸಿದರು. ನಿಗದಿಯಾದಂತೆ ನಾವು ಆ ದಿನ ಅಲ್ಲಿಂದ 44 ಕಿಮೀ ದೂರವಿರುವ ಜಾನಕಿಛಟ್ಟಿ ಸೇರಬೇಕಿತ್ತು. ಹರಿದ್ವಾರದಿಂದ ಜಾನಕಿಛಟ್ಟಿ ಸುಮಾರು 240 ಕಿಮೀ.
ವಸತಿಗೃಹದಲ್ಲಿ ಒಂದು ಕೋಣೆಯಲ್ಲಿ ೪-೫ ಮಂದಿ ಮಲಗುವಂಥ ವ್ಯವಸ್ಥೆ ಇತ್ತು. ನಮ್ಮ ಲಗೇಜು ಇಳಿಸಿಕೊಂಡು ಸ್ನಾನಾದಿ ಮುಗಿಸಿದೆವು.
ಹಾವಿನಮರಿ ಪ್ರಹಸನ
ಕೋಣೆ ಎದುರುಗಡೆ ಒಂದು ಮೂಲೆಯಲ್ಲಿ ಹಾವಿನ ಮರಿ ಇರುವುದು ಕಾಣಿಸಿತು. ಮಂದ ಬೆಳಕು. ಸರಿಯಾಗಿ ಕಾಣುತ್ತಿರಲಿಲ್ಲ. ಅದಕ್ಕೆ ಟಾರ್ಚ್ ಬಿಟ್ಟೆವು. ಅಲ್ಲಾಡಲಿಲ್ಲ. ಮುಟ್ಟಲು ಹೆದರಿಕೆ ಆಯಿತು. ನೈನಾ ವಸತಿಗೃಹದ ಯಜಮಾನಿ ಕೌಸಲ್ಯಳಿಗೆ ಹೇಳಿದೆವು. ಧೀರೆ ಕೌಸಲ್ಯ ಬರೀ ಕೈಯಲ್ಲಿ ಹಾವಿನಮರಿಯನ್ನು ಹಿಡಿದು ತನ್ನ ಮೊಮ್ಮಗಳ ಕೈಗೆ ಕೊಟ್ಟಳು! ಅದನ್ನು ನಾವು ಪೆಚ್ಚುಮುಖದಿಂದ ನೋಡಿದೆವು! ನಿಜವಾದ ಹಾವಿನಮರಿ ಅದು ಎಂದು ನಾವು ಬೇಸ್ತುಬಿದ್ದಿದ್ದೆವು.
ಭೋಜನಕಾಲೇ
ಶಶಿಕಲಾ, ಸರಸ್ವತಿ ಕೈಕಾಲು ಮುಖ ತೊಳೆದು, ಅಡುಗೆ ಮನೆಗೆ ಹೋಗಿ ಇರುವ ಪಾತ್ರೆಯಲ್ಲೇ ಚಕಚಕನೆ ಅಕ್ಕಿ ತೊಳೆದು ಪಾತ್ರೆಗೆ ಸುರುವಿ ಒಲೆಮೇಲೆ ಇಟ್ಟೇಬಿಟ್ಟರು. ಒಳ್ಳೆಮೆಣಸು ಸಾರು ತಯಾರಿಸಿದರು. ಒಂದು ಗಂಟೆಯೊಳಗೆ ಊಟಕ್ಕೆ ಬರುವಂತೆ ಬುಲಾವ್. ಸಾಲಾಗಿ ತಟ್ಟೆ ಹಿಡಿದೆವು. ಶಶಿಕಲಾ ಸರಸ್ವತಿ ಅವರ ಕೈ ಬಲು ದೊಡ್ಡದು. ಅನ್ನ ಹಾಕುತ್ತ, ಮತ್ತೆ ಮತ್ತೆ ಹಾಕಿಸಿಕೊಂಡು ಹೊಟ್ಟೆತುಂಬ ಊಟ ಮಾಡ್ರಪ್ಪ ಎಂದರು. ಅನ್ನ ಸಾರು ಚಪ್ಪರಿಸಿದೆವು.
……….ಮುಂದುವರಿಯುವುದು
ಈ ಪ್ರವಾಸಕಥನದ ಹಿಂದಿನ ಭಾಗಗಳು ಇಲ್ಲಿವೆ : ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 1
ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 2
– ರುಕ್ಮಿಣಿಮಾಲಾ, ಮೈಸೂರು
ಪ್ರವಾಸದ ಅನುಭವದ ರುಚಿಯನ್ನು ಓದುಗರಿಗೆ ಹ೦ಚಿದ ರುಕ್ಮಿಣಿ ಮಾಲಾರಿಗೆ ಧನ್ಯವಾದಗಳು
ಧನ್ಯವಾದ
ಸೊಗಸಾಗಿದೆ ಕಥನ
ಧನ್ಯವಾದ