ಲಾಖ್ ಮಂಡಲ್ ..ಲಕ್ಷಮಂಡಲ
ಲಾಖ್ ಮಂಡಲ್ ಎಂದು ಕರೆಯಲ್ಪಡುವ ದೇವಸ್ಥಾನಗಳ ಸಮುಚ್ಛಯವು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿದೆ. ಡೆಹ್ರಾಡೂನ್ ನಿಂದ ಮುಸ್ಸೋರಿ ಮಾರ್ಗವಾಗಿ ಯಮುನೋತ್ರಿಗೆ ಹೋಗುವಾಗ ಸುಮಾರು 35 ಕಿ.ಮಿ ದೂರದಲ್ಲಿ ಲಾಖ್ ಮಂಡಲ್ ಹಳ್ಳಿ ಸಿಗುತ್ತದೆ. ಈ ಹಳ್ಳಿಯ ದಾರಿಯುದ್ದಕ್ಕೂ ಯಮುನಾ ನದಿ ಹರಿಯುತ್ತಿರುತ್ತದೆ.
ಹಿಮಾಲಯದ ಮಡಿಲಿನಲ್ಲಿರುವ ಅಪ್ಪಟ ಹಳ್ಳಿ ಲಾಖ್ ಮಂಡಲ್. ಹತ್ತಾರು ಮನೆಗಳು ಮತ್ತು ಕೆಲವು ಪುಟ್ಟ ಅಂಗಡಿಗಳಿದ್ದುವು. ಮರದ ಹಲಗೆಗಳು ಮತ್ತು ಕಲ್ಲುಚಪ್ಪಡಿಗಳಿಂದ ಕಟ್ಟಿದ ಮನೆಗಳು ಚಳಿಯನ್ನು ತಡೆಯಬಲ್ಲ ಗೃಹನಿರ್ಮಾಣದ ಅಗತ್ಯಕ್ಕೆ ಸಾಕ್ಷಿಯಾಗಿದ್ದುವು.
ಮುಖ್ಯರಸ್ತೆಯಿಂದ ಕಾಲುದಾರಿಗೆ ತಿರುಗಿ 5 ನಿಮಿಷ ನಡೆದು ಲಾಖ್ ಮಂಡಲ್ ದೇವಾಲಯವನ್ನು ತಲಪಿದೆವು. ಉತ್ತರಾಖಂಡದಲ್ಲಿ ಸಾಮಾನ್ಯವಾಗಿ ಕಾಣಸಿಗುವ ‘ಗಡವಾಲ್ ‘ ಶೈಲಿಯ ದೇವಸ್ಥಾನವಿದು. ಇಲ್ಲಿ ಶಿವನನ್ನು ಆರಾಧಿಸುತ್ತಾರೆ. ಗುಡಿಯ ಒಳಗೆ ಗ್ರಾನೈಟ್ ಶಿಲೆಯಿಂದ ರಚಿತವಾದ ಮುಖ್ಯ ಶಿವಲಿಂಗವಿದೆ. ಇದಕ್ಕೆ ಮಹಾಭಾರತದ ಹಿನ್ನೆಲೆಯೂ ಇದೆ. ಅಲ್ಲಿನ ಅರ್ಚಕರು ತಿಳಿಸಿದ ಪ್ರಕಾರ, ಇದೇ ಸ್ಥಳದಲ್ಲಿ ದುರ್ಯೋಧನನು ಪಾಂಡವರನ್ನು ಅರಗಿನ ಅರಮನೆಯಲ್ಲಿ ಸಜೀವ ದಹನ ಮಾಡಲು ಪ್ರಯತ್ನಿಸಿದನಂತೆ. ಆವರಣದಲ್ಲಿ ಕಾಣಿಸುವ ದೊಡ್ಡದಾದ ಶಿವಲಿಂಗವನ್ನು ಸ್ವತ: ಯುಧಿಷ್ಠಿರನು ಸ್ಥಾಪಿಸಿದನಂತೆ. ಅದಕ್ಕೆ ಪ್ರದಕ್ಷಿಣೆ ಬಂದು ನಮ್ಮ ಹಣೆಯನ್ನು ಶಿವಲಿಂಗಕ್ಕೆ ಸ್ಪರ್ಶಿಸಿ ನಮಿಸಿದರೆ ಏಳು ಜನ್ಮಗಳ ಪಾಪ ಪರಿಹಾರವಾಗುತ್ತದೆಯಂತೆ. ಹೀಗೆ ಸ್ಥಳಪುರಾಣ ಸ್ವಾರಸ್ಯಕರವಾಗಿತ್ತು. ನಮ್ಮ ತಂಡದ ಎಲ್ಲರೂ ಅವರಿಗೆ ವಂದಿಸಿ, ಧನ್ಯವಾದ ಹೇಳಿ ಹೊರಟೆವು.
ನಮ್ಮ ಜತೆಗೆ ಬಂದ ಅರ್ಚಕರು, ಪಕ್ಕದಲ್ಲಿ ಇನ್ನೊಂದು ನುಣುಪಾದ ಶಿವಲಿಂಗದ ಇದೆಯೆಂದೂ, ಅದರ ಮೇಲೆ ನೀರೆರೆದರೆ ಅದು ಕನ್ನಡಿಯಂತೆ ಪ್ರತಿಫಲಿಸುತ್ತದೆ, ಅನ್ನುತ್ತಾ ನಮ್ಮನ್ನು ಕರೆದೊಯ್ದರು. ಸನಿಹದಲ್ಲಿಯೇ ಇದ್ದ ಆ ಶಿವಲಿಂಗದ ಪಕ್ಕದಲ್ಲಿ ಕೆಲವು ಪುಟ್ಟ ಮಕ್ಕಳು ಚೊಂಬಿನಲ್ಲಿ ನೀರು ತುಂಬಿಸಿ ನಮ್ಮ ಕೈಗೆ ಕೊಡುತ್ತಿದ್ದರು. ಶಿವಲಿಂಗದಲ್ಲಿ ಮೂಡಿದ ನಮ್ಮ ಪ್ರತಿಬಿಂಬವನ್ನೂ ಕ್ಲಿಕ್ಕಿಸಿಯಾಯಿತು. ನಮ್ಮ ಬಳಿ ಇದ್ದ ಸ್ವಲ್ಪ ಚಾಕೊಲೇಟ್ಸ್ ಮತ್ತು ಮೇಲೆ ಸ್ವಲ್ಪ ದುಡ್ಡು ಕೊಟ್ಟಾಗ ಆ ಮಕ್ಕಳು ಖುಷಿಪಟ್ಟರು. ಶಾಲೆಗೆ ಹೋಗುತ್ತೀರಾ ಎಂದು ಕೇಳಿದಾಗ, ‘ಹಾಂ ದೀದಿ, ಆಜ್ ಛುಟ್ಟೀ ಹೈ’ ಎಂದುತ್ತರಿಸಿದರು. ಇದು ನಿಜವೋ ಸುಳ್ಳೋ ಗೊತ್ತಾಗಲಿಲ್ಲ. ಒಟ್ಟಿನಲ್ಲಿ ಪಹಾಡಿ ಜೀವನ ಬಲುಕಷ್ಟ.
ವರ್ಷಗಳ ಹಿಂದೆ ಇಲ್ಲಿ ಉತ್ಖನನ ನಡೆಸಿದ್ದರಂತೆ. ಆಗ ಸಿಕ್ಕಿದ್ದ ವಿಗ್ರಹಗಳನ್ನು ಮತ್ತು ಹಲವಾರು ಚಿಕ್ಕ-ದೊಡ್ಡ ಶಿವಲಿಂಗಗಳನ್ನು ದೇವಸ್ಥಾನದ ಆವರಣದಲ್ಲಿ ಜೋಡಿಸಿಟ್ಟಿದ್ದಾರೆ.
ಅವುಗಳನ್ನು ನೋಡುತ್ತಾ ಇದ್ದಾಗ, ಅರ್ಚಕರು ನನ್ನ ಬಳಿ ” ಅಲ್ಲಿ ನೋಡಿ, ಈ ದೇವಾಲಯದಲ್ಲಿ ಯಾರೇ ಬಂದರೂ ಡಮರುಗ ಬಡಿದು ಸ್ವಾಗತಿಸುವ ಪದ್ಧತಿ, ನೀವು ಬಂದಾಗಲೂ ಸ್ವಾಗತಿಸಿದ್ದಾರೆ ” ಅಂದರು. ಅರ್ಚಕರು ಹೇಳಿದ್ದು ನಿಜವಾಗಿತ್ತು. ಒಂದು ಕಟ್ಟೆಯಲ್ಲಿ ಡಮರುಗ ಬಡಿಯುವವರು ಕುಳಿತಿದ್ದರು. ಯಾರಾದರೂ ಮೆಟ್ಟಿಲು ಹತ್ತಿ ಬರುವುದನ್ನು ಕಂಡಾಗ ಒಂದು ಬಾರಿ ಡಮರುಗವನ್ನು ನುಡಿಸುತ್ತಿದ್ದರು. ಅವರನ್ನೂ ಮಾತನಾಡಿಸಿ, ಒಂದಿಷ್ಟು ಭಕ್ಷೀಸು ಕೊಟ್ಟು, ಲಾಖ್ ಮಂಡಲ್ ನಿಂದ ಹೊರಟೆವು.
– ಹೇಮಮಾಲಾ.ಬಿ
ಅಂದದ ಚಿತ್ರಗಳೊಂದಿಗೆ ಸುಂದರ ಪ್ರವಾಸ ಕಥನ 🙂
ಧನ್ಯವಾದಗಳು .
ಪ್ರವಾಸಕಥನ ಲೇಖನ ಓದುಗರಿಗೂ ಮುದನೀಡುತ್ತಿದೆ
ಲೈಫ್ ಟೈಂಲಿ ಒಮ್ಮೆ ಇಡೀ ವಿಶ್ವ ತಿರುಗಿ ಬಂದ್ರೆ ಅವರೇ ಪುಣ್ಯವಂತರು
ಹೌದು..ನನಗೂ ಅದೇ ಆಸೆ!