ಯೋಗ-ಆರೋಗ್ಯ

ಕಂಪ್ಯೂಟರ್ ವಿಷನ್ ಸಿಂಡ್ರೋಮ್

Share Button

Dr.Harshita

ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಎಂಬುದು ಎಲ್ಲ ಕಡೆಯಲ್ಲೂ ಬಳಸಲ್ಪಡುವಂತಹ ಸಾಧನ.ಹಿಂದೆ ಬರೀ ಆಫೀಸ್‌ಗಳಿಗಷ್ಟೇ ಸೀಮಿತವಾಗಿದ್ದ ಕಂಪ್ಯೂಟರ್ ಇಂದು ಎಲ್ಲರ ಮನೆಯನ್ನು ಅಲಂಕರಿಸಿದೆ. ಜೊತೆಗೆ ಲ್ಯಾಪ್ ಟಾಪ್,ನೋಟ್ ಬುಕ್,ಟ್ಯಾಬ್ಲೆಟ್,ಸ್ಮಾರ್ಟ್ ಫೋನ್ ಗಳ ಜನಪ್ರಿಯತೆಯಿಂದಾಗಿ ಡಿಜಿಟಲ್ ಉಪಕರಣಗಳ ಬಳಕೆ ಬರೀ ಡೆಸ್ಕ್ ಟೋಪ್ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ಎಲ್ಲಾ ಉಪಕರಣಗಳ ಬಳಕೆ ಜಾಸ್ತಿಯಾಗುತ್ತಿದ್ದಂತೆಯೇ ಅವುಗಳ ದುಷ್ಪರಿಣಾಮಗಳೂ ಕಾಣಿಸಿಕೊಳ್ಳತೊಡಗಿವೆ.ಅವುಗಳಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಯೇ ಕಂಪ್ಯೂಟರ್ ವಿಷನ್ ಸಿಂಡ್ರೋಮ್.ಇತ್ತೀಚಿನ ಸಂಶೋಧನೆಗಳ ಪ್ರಕಾರ ಭಾರತದಲ್ಲಿ 80 % ಕಂಪ್ಯೂಟರ್‌ ಬಳಕೆದಾರರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಏನಿದು ಕಂಪ್ಯೂಟರ್ ವಿಷನ್ ಸಿಂಡ್ರೋಮ್?

ಕಂಪ್ಯೂಟರ್‌ನ ಅತಿಯಾದ ಬಳಕೆಯಿಂದಾಗಿ ಕಣ್ಣಿಗೆ ಹಾಗೂ ದೃಷ್ಟಿಗೆ ಸಂಬಂಧಿಸಿ ಉಂಟಾಗುವಂತಹ ಸಮಸ್ಯೆಗಳನ್ನು ಒಟ್ಟಾಗಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎನ್ನುತ್ತಾರೆ.

computer-vision-syndrome

ಕಾರಣಗಳು:

  • ದಿನದಲ್ಲಿ 3 ಗಂಟೆಗಿಂತಲೂ ಅಧಿಕ ಅವಧಿ ಕಂಪ್ಯೂಟರ್ ಬಳಸುವವರು.
  • ಕಂಪ್ಯೂಟರ್ ಬಳಸುವ ಸ್ಥಳ ಅದರ ಬಳಕೆಗೆ ಪೂರಕವಾಗಿಲ್ಲದಿರುವುದು(ಕಿಟಿಕಿಯಿಂದ ಅತಿಯಾದ ಬೆಳಕು ಬರುವುದು, ಕಂಪ್ಯೂಟರ್ ಪರದೆಯ ಮೇಲೆಪ್ರತಿಫಲಿಸುವುದು)
  • 40 ವರ್ಷದಿಂದ ಮೇಲ್ಪಟ್ಟವರು ಕಂಪ್ಯೂಟರ್ ಬಳಸುವುದು
  • ಮೊದಲಿನಿಂದಲೇ ದೃಷ್ಟಿ ಸಮಸ್ಯೆ ಉಳ್ಳವರು ಸರಿಯಾದ ಚಿಕಿತ್ಸೆ ಮಾಡದೆ ಕಂಪ್ಯೂಟರ್ ಬಳಸುವುದು
  • ಹವಾ ನಿಯಂತ್ರಣ,ಕಡಿಮೆ ಗುಣಮಟ್ಟದ ಕಂಪ್ಯೂಟರ್ ಬಳಕೆ
  • ಅತಿಯಾಗಿ ವಿಡಿಯೊ ಗೇಮ್ ಆಡುವ ಮಕ್ಕಳು

ಪೇಪರ್ ಪ್ರಿಂಟ್ ಹಾಗೂ ಕಂಪ್ಯೂಟರ್ ಸ್ಕ್ರೀನ್ ಓದುವುದರ ವ್ಯತ್ಯಾಸ:
ಕಂಪ್ಯೂಟರ್ ಪರದೆಯ ಮೇಲೆ ಮೂಡುವ ಅಕ್ಷರಗಳು ಸಣ್ಣ ಚುಕ್ಕೆಗಳಿಂದ ಮಾಡಲ್ಪಟ್ಟಿರುತ್ತದೆ.ಆದರೆ ಪೇಪರ್ ಮೇಲೆ ಬರೆಯುವ ಅಕ್ಷರಗಳು ನಿರಂತರವಾಗಿರುತ್ತವೆ. ಆದುದರಿಂದ ಕಣ್ಣಿಗೆ ಕಂಪ್ಯೂಟರ್ ಪರದೆಯ ಮೇಲೆ ಬರೆದದ್ದನ್ನು ಓದುವಾಗ ಕಣ್ಣನ್ನು ನಿರಂತರವಾಗಿ ಕೇಂದ್ರೀಕರಿಸಬೇಕಾಗುತ್ತದೆ. ಇದರಿಂದಾಗಿ ಕಣ್ಣು ಬೇಗನೆ ಸುಸ್ತಾಗುತ್ತದೆ.ಹಾಗೆಯೇ ಪರದೆಯನ್ನು ನಿರಂತರ ಸ್ಕ್ರೋಲ್ ಮಾಡುವುದರಿಂದಲೂ ಕಣ್ಣಿಗೆ ಸುಸ್ತಾಗುತ್ತದೆ.

ಲಕ್ಷಣಗಳು:
ದೃಷ್ಟಿ ಮಂದವಾಗುವುದು,ಕಣ್ಣು ಉರಿ, ಕಣ್ಣು ನೋವು, ಕಣ್ಣು ಕೆಂಪಾಗುವುದು, ಕಣ್ಣು ತುರಿದುವುದು,ಕಣ್ಣಲ್ಲಿ ನೀರು ಬರುವುದು, ಯಾವುದೇ ವಸ್ತುವಿನ ಮೇಲೂ ದೃಷ್ಟಿಯನ್ನು ಕೇಂದ್ರೀಕರಿಸಲು ಸಾಧ್ಯವಾಗದೇ ಇರುವುದು, ಯಾವುದೇ ವಸ್ತು/ವ್ಯಕ್ತಿ ಎರಡಾಗಿ ಕಾಣುವುದು,ಒಣ ಕಣ್ಣು,ಕುತ್ತಿಗೆ ನೋವು,ತಲೆ ನೋವು, ಸುಸ್ತು.

ಚಿಕಿತ್ಸೆ:

ಚಿಕಿತ್ಸೆಯು ಕಂಪ್ಯೂಟರ್ ವಿಷನ್ ಸಿಂಡ್ರೋಮ್‌ನ ಕಾರಣಗಳು,ತೀವ್ರತೆ ಹಾಗೂ ವ್ಯಕ್ತಿಯನ್ನು ಅನುಸರಿಸಿ ಬೇರೆ ಬೇರೆ ವಿಧದ್ದಾಗಿರುತ್ತದೆ.

  1. ಕಣ್ಣಿನ ವ್ಯಾಯಾಮಗಳು
  2. ಕೃತ್ರಿಮ ಕಣ್ಣೀರು ಬರಿಸುವ ಔಷಧಿಗಳನ್ನು ಬಳಸುವುದು.
  3. ಕನ್ನಡಕವನ್ನು ಬದಲಾಯಿಸುವುದರ ಮೂಲಕ.
  4. ಕಂಪ್ಯೂಟರ್ ಬಳಸುವ ಸ್ಥಳದಲ್ಲಿ ಸರಿಯಾದ ಬದಲಾವಣೆ ತರುವ ಮೂಲಕ.

computer-work-station

ತಡೆಗಟ್ಟುವ ವಿಧಾನಗಳು:

  • ಕಂಪ್ಯೂಟರ್ ಬಳಸುವ ಸ್ಥಳದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಬೆಳಕು ಕಂಪ್ಯೂಟರ್ ಪರದೆಯ ಮೇಲೆ ಪ್ರತಿಫಲಿಸಬಾರದು. ಆದುದರಿಂದ ಕಿಟಿಕಿಗಳಿಗೆ ಪರದೆಯನ್ನು ಅಳವಡಿಸಿಕೊಳ್ಳಬೇಕು.ಲೈಟ್ ಅಥವಾ ಬಲ್ಬ್‌ನ್ನು ಕಂಪ್ಯೂಟರ್ ಬಳಸುವ ಸ್ಥಳದ ಮೇಲ್ಭಾಗದಲ್ಲಿ ಅಳವಡಿಸಬೇಕು.(ಎದುರು ಅಥವಾ ಹಿಂದೆ ಅಲ್ಲ).
  • ದೃಷ್ಟಿ ಸಮಸ್ಯೆ ಉಳ್ಳವರು ನೇತ್ರ ತಜ್ಞರನ್ನು ಭೇಟಿಯಾಗಿ ಸರಿಯಾದ ಕನ್ನಡಕ ಅಥವಾ ಲೆನ್ಸ್ ತೆಗೆದುಕೊಳ್ಳಬೇಕು.
  • ಆದಷ್ಟು ಕಂಪ್ಯೂಟರ್ ಬಳಕೆಗೆಂದೇ ದೊರೆಯುವಂತಹ Antiglare ಕನ್ನಡಕಗಳನ್ನು ಬಳಸುವುದು ಸೂಕ್ತ.
  • ಆಗಾಗ ಕಣ್ಣನ್ನು ಮಿಟುಕಿಸುತ್ತಿರಬೇಕು.ಉದಾಹರಣೆಗೆ ಪ್ರತಿಸಲ Enter ಕ್ಲಿಕ್ ಮಾಡುವಾಗ. ಇದರಿಂದ ಕಣ್ಣಿನ ಹೊರಪದರ ಒದ್ದೆಯಾಗಿ ಒಣಗುವುದನ್ನು ತಡೆಯುತ್ತದೆ.
  • ಮಾನಿಟರನ್ನು ಸರಿಯಾದ ಎತ್ತರದಲ್ಲಿಡಬೇಕು.ಸ್ಕ್ರೀನ್‌ನ ಮಧ್ಯಭಾಗ ಕಣ್ಣಿನ ದೃಷ್ಟಿಯ ಸಮರೇಖೆಯಿಂದ 6 ಇಂಚು ಕೆಳಗಿರಬೇಕು.
    20-20-20 ರ ನಿಯಮ-ಪ್ರತಿ ಇಪ್ಪತ್ತು ನಿಮಿಷಗಳಿಗೊಮ್ಮೆ 20 ಸೆಕೆಂಡ್ ವರೆಗೆ 20  ಅಡಿ ದೂರ ನೋಡಬೇಕು.
  • ದೀರ್ಘಾವಧಿ ಕಂಪ್ಯೂಟರ್‌ ಬಳಸುವಾಗ ಮಧ್ಯದಲ್ಲಿ ಚಿಕ್ಕ ವಿರಾಮ ತೆಗೆದುಕೊಳ್ಳಬೇಕು.

ಕಂಪ್ಯೂಟರ್ ಮತ್ತಿತರ ಇಲೆಕ್ಟ್ರಾನಿಕ್ ಸಾಧನಗಳ ಬಳಕೆ ಈಗಿನ ಜೀವನಕ್ಕೆ ಅನಿವಾರ್ಯವಾಗಿದೆ. ಹಾಗಾಗಿ ಇವುಗಳನ್ನು ಸಾಧ್ಯವಾದಷ್ಟು ಮಿತವಾಗಿ ಮತ್ತು ಸರಿಯಾದ ಕ್ರಮದಲ್ಲಿ ಬಳಸಿ ನಮ್ಮ ಅರೋಗ್ಯದ ಮೇಲಾಗುವ ವ್ಯತಿರಿಕ್ತ ಪರಿಣಾಮಗಳನ್ನು ಕಡಿಮೆಗೊಳಿಸಬಹುದು.

 – ಡಾ. ಹರ್ಷಿತಾ ಎಂ.ಎಸ್

10 Comments on “ಕಂಪ್ಯೂಟರ್ ವಿಷನ್ ಸಿಂಡ್ರೋಮ್

  1. ಡಾಕ್ಟರ್ ಹರ್ಷಿತಾ ಇವರ ಲೇಖನ ಉತ್ತಮ ಮಾಹಿತಿ. ಇವರಿಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *