‘ಭಟು ಕೇವ್ಸ್’, ಶಿಲೆಯಲ್ಲವೀ ಗುಹೆಯು..

Share Button

 

 ಮಲೇಶ್ಯಾದ ಕೌಲಾಲಂಪುರ್ ನಿಂದ ಸುಮಾರು 13 ಕಿಲೋ ಮೀಟರ್ ದೂರದಲ್ಲಿದೆ ‘ಭಟು ಕೇವ್ಸ್’ ಎಂದು ಕರೆಯಲ್ಪಡುವ ಅದ್ಭುತ ಪ್ರಾಕೃತಿಕ ವಿಸ್ಮಯ. ಇದು ‘ಲೈಮ್ ಸ್ಟೋನ್’ ನಿಂದ (ಸುಣ್ಣದ  ಕಲ್ಲು) ರಚನೆಯಾದ ಗುಹೆಯಾಗಿದ್ದು,ಸುಮಾರು  400 ಮಿಲಿಯನ್ ವರುಷಗಳ ಹಿಂದೆ ರೂಪುಗೊಂಡಿತೆಂದು ನಂಬಿಕೆ. ನಮ್ಮ ಗೈಡ್ ವಿವರಿಸಿದ ಪ್ರಕಾರ, ತುಂಬಾ ಹಿಂದೆಯೇ ಇದರ ಅಸ್ತಿತ್ವವಿದ್ದರೂ, ಮಲೇಶ್ಯಾದಲ್ಲಿ ಬ್ರಿಟಿಷರ ಅಧಿಕಾರವಾವಧಿಯಲ್ಲಿ (1878) ಈ ಗುಹೆ ವಿಶೇಷ ಪ್ರಾಮುಖ್ಯತೆ ಗಳಿಸಿತು.

ಆ ಕಾಲದಲ್ಲಿ, ಕೆಲವು ಭಾರತೀಯ ಮೂಲದ ತಮಿಳು ವರ್ತಕರು, ಮಲೇಶ್ಯಾದ ಅರ್ಥಿಕ ವ್ಯವಸ್ಥೆಯಲ್ಲಿ  ಪ್ರಮುಖ ಪಾತ್ರ ವಹಿಸಿದ್ದರು. ತಂಬುಸಾಮಿ ಪಿಳ್ಳೈ ಅವರಲ್ಲಿ ಪ್ರಮುಖರಾಗಿದ್ದರು. ಅವರ ಶ್ರಮದ ಫಲವಾಗಿ, ‘ಭಟು ಕೇವ್ಸ್’,ನಲ್ಲಿ  ಕಾರ್ತಿಕೇಯನ  ದೇವಸ್ಥಾನ ಸ್ಥಾಪನೆಯಾಯಿತು. 2006 ರಲ್ಲಿ, ಸುಮಾರು 140 ಅಡಿ ಎತ್ತರದ ಮುರುಗನ್ ದೇವರ ಮೂರ್ತಿಯನ್ನು, ಗುಹೆಯ ಬುಡದಲ್ಲಿ ಸ್ಥಾಪಿಸಿಲಾಗಿದೆ. ಇದು ಪ್ರಪಂಚದಲ್ಲಿ ಅತಿ ದೊಡ್ಡದಾದ ಸುಬ್ರಹ್ಮಣ್ಯ ದೇವರ ಪ್ರತಿಮೆಯಂತೆ.

ಅಂದಿನಿಂದ  ಇಂದಿನ ವರೆಗೂ, ‘ಭಟು ಕೇವ್ಸ್’ ನಲ್ಲಿ, ವರುಷಕ್ಕೆ ಒಂದು ಬಾರಿ ಜನವರಿ ಅಥವಾ ಫೆಬ್ರವರಿ  ತಿಂಗಳಲ್ಲಿ ‘ಥೈಪಸಮ್’ ಎಂದು ಕರೆಯಲ್ಪಡುವ ಉತ್ಸವವನ್ನು ಬಹಳ ವಿಶಿಷ್ಟವಾಗಿ ನಡೆಸಲಾಗುತ್ತದೆ ಹಾಗು ಇದು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ‘ಭಟು ಕೇವ್ಸ್’ ನ ಪಕ್ಕ ನಮ್ಮ ಬಸ್ ನಿಲ್ಲುತ್ತಿದ್ದಂತೆ, ನಮ್ಮನ್ನು ಅಕರ್ಷಿಸಿದ್ದು   ಅಲ್ಲಿ ಸ್ವಚ್ಚಂದವಾಗಿದ್ದ  ಹಿಂಡು-ಹಿಂಡು ಪಾರಿವಾಳಗಳು.

ಗುಹೆಯು ರಸ್ತೆಯ ಮಟ್ಟದಿಂದ ಸುಮಾರು 400 ಅಡಿ ಎತ್ತರದಲ್ಲಿದೆ. 272 ಮೆಟ್ಟಲುಗಳನ್ನು ಏರಿ,  ಗುಹೆಯ ಒಳಗೆ ಪ್ರವೇಶ ಮಾಡಿದರೆ, ಸುಮಾರು 100  ಅಡಿ  ಎತ್ತರದ ವಿಶಾಲವಾದ ಗುಹೆ ಗೋಚರಿಸುತ್ತದೆ. ಗುಹೆಯ ಒಳಗೆ, ಕೆಲವು ದೇವರ ಮೂರ್ತಿಗಳಿವೆ. ತೀರ ಶಾಂತವಾದ ಹಾಗೂ ತಂಪಾದ ಪರಿಸರ. ಗುಹೆಯ ಅಂತ್ಯದಲ್ಲಿ ಮಾಡು ತೆರೆದಿದ್ದು, ಅಕಾಶ ಕಾಣಿಸುತ್ತದೆ ಹಾಗು ಗುಹೆಯ ಒಳಗೆ ಬೆಳಕು ಬೀಳುತ್ತದೆ. ಒಟ್ಟಿನಲ್ಲಿ  ಅದ್ಭುತವಾದ  ದೈವಿಕ ಅನುಭವ.

 

 

 

‘ಥೈಪಸಮ್’ ಹಬ್ಬದ ಸಂದರ್ಭದಲ್ಲಿ ಸಹಸ್ರಾರು ಭಕ್ತರು ನಿಂಬೆಹಣ್ಣು, ತೆಂಗಿನಕಾಯಿ, ಇತ್ಯ್ಯಾದಿಗಳನ್ನು ಕೊಕ್ಕೆಯಿಂದ ತಮ್ಮ ಚರ್ಮಕ್ಕೆ ಚುಚ್ಚಿಕೊಂಡು, ಕಾವಡಿಯನ್ನು ಹೊತ್ತುಕೊಂಡು, ಕಲಶವನ್ನು ಹಿಡಿದುಕೊಂಡು……ಇತ್ಯಾದಿ ಹರಕೆಗಳನ್ನು ಸಲ್ಲಿಸುತ್ತಾ, ಮೆಟ್ಟಲುಗಳನ್ನು ಏರಿ ದೇವರ ದರುಶನ ಪಡೆಯುತ್ತಾರಂತೆ. ಅವರ ಭಕ್ತಿ, ಶಕ್ತಿ, ಛಲ, ಸಹನೆಗೆ ಏನು ಹೇಳಬೇಕು?

ಅವರ ಭಕ್ತಿ, ಶಕ್ತಿ, ಛಲ, ಸಹನೆಗೆ  ಏನು ಹೇಳಬೇಕು?  ಶ್ರೀ ಮುರುಗ ಹರೋಹರ! ಶ್ರೀ ಮುರುಗ ಹರೋಹರ!

 

-ಹೇಮಮಾಲಾ.ಬಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: