ಆತ್ಮದ ಮಾತುಗಳು
ಈಗ ಹಗಲನ್ನು
ಇರುಳನ್ನೂ ಕಳೆದುಕೊಂಡೆ
ಹೊಂಬಣ್ಣದ ಸಂಜೆಯೊಳಗೆ ತುಂಗೆಯ ಮರಳುರಾಶಿಯಲ್ಲಿ ಮೂಡಿದ
ನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆ ನನ್ನ ಕಾಲುಗಳು
ಹೂತುಹೋದದ್ದು ನನಗೆ ಗೊತ್ತಾಗಲೇ ಇಲ್ಲ
ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯ
ನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿ
ಕಳೆದುಕೊಂಡಿದ್ದೆ ನಿನ್ನನೂ
.
ಕವಿತೆಯ ಪ್ರತಿಸಾಲನ್ನೂ ನೀನು ಆಕ್ರಮಿಸುವಾಗ
ಪ್ರತಿ ಶಬುದವನ್ನೂ ಜತನದಿಂದ ಕಂಠಪಾಠ ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲು
ಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನು ಮುಸುಕಿದ ಕತ್ತಲ ಕಂಡು
ಹಿಂತಿರುಗಿ ನೋಡುವಷ್ಟರಲ್ಲಿ ನೀನಾಗಲೇ ವಿದಾಯ ಹೇಳಿಯಾಗಿತ್ತು
ಯಾಕೆ ಹೋದೆ
ಎಲ್ಲಿ ಹೋದೆ
ಯಾರಿರುವರು ಜೊತೆಗೆ
.
ಕೇಳಬಾರದ ಕೇಳಬಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿ
ಅಲೆಯುತ್ತಿರುತ್ತಿದ್ದೇನೆ ಈಗ
ತುಂಗೆಯಿಂದ ದೂರ
ಬಯಲು ಸೀಮೆಯ ಕುರುಚಲು ಬಯಲುಗಳಲ್ಲಿ
ಆತ್ಮದ ಮಾತಾಡಬೇಡವೆಂದು ಹೇಳಿದ ನಿನ್ನ ಮಾತುಗಳಷ್ಟೇ
ರಿಂಗಣಿಸುತ್ತವೆ ನನ್ನ ಕಿವಿಗಳೊಳಗೆ!
– ಕು.ಸ.ಮಧುಸೂದನನಾಯರ್ , ರಂಗೇನಹಳ್ಳಿ