ಯಮುನೋತ್ರಿಯತ್ತ ಚಾರಣ….
ಯಮುನಾ ನದಿಯ ಉಗಮ ಸ್ಥಾನವಾದ ಯಮುನೋತ್ರಿಯು ಹಿಮಾಲಯದ ಮಡಿಲಿನಲ್ಲಿರುವ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿದೆ. ಸಮುದ್ರ ಮಟ್ಟದಿಂದ 10797 ಅಡಿ ಎತ್ತರದಲ್ಲಿರುವ ಯಮುನೋತ್ರಿಯನ್ನು ತಲಪಲು ‘ಜಾನಕಿಚಟ್ಟಿ’ ಎಂಬಲ್ಲಿಂದ ಸುಮಾರು 6.5 ಕಿ.ಮೀ ಏರುದಾರಿಯಲ್ಲಿ ಚಾರಣ ಮಾಡಬೇಕು. ನಡೆಯಲು ಕಷ್ಟವಾಗುವವರಿಗೆ ಕುದುರೆ ಸವಾರಿ, ಡೋಲಿ ಮತ್ತು ಕಂಡಿ ಎಂಬ ಬಿದಿರಿನ ಬುಟ್ಟಿಯ ವ್ಯವಸ್ಥೆ ಲಭ್ಯವಿದೆ. ತಮ್ಮ ಸೇವೆ ಉಪಯೋಗಿಸಿಕೊಳ್ಳಿರೆಂದು ಇವರೆಲ್ಲರೂ ಪ್ರವಾಸಿಗರ ಹಿಂದೆಯೇ ಬರುತ್ತಾ ದುಂಬಾಲು ಬೀಳುತ್ತಾರೆ. ಪಾಪ, ಅವರು ಶ್ರಮಜೀವಿಗಳು. ಯಮುನೋತ್ರಿಯ ದೇವಾಲಯವು ವರ್ಷದ ಆರು ತಿಂಗಳುಗಳ ಕಾಲ ತೆರೆದಿರುತ್ತದೆ ಮತ್ತು ಚಳಿಗಾಲದಲ್ಲಿ ಮುಚ್ಚಿರುವುದರಿಂದ ಈ ಅವಧಿಯಲ್ಲಿ ಒಂದಿಷ್ಟು ಹಣ ಗಳಿಸುವ ಪ್ರಯತ್ನ ಇವರದು. ಪ್ರವಾಸಿಗರೇ ಇವರ ಆದಾಯದ ಮೂಲ.
14 ಸೆಪ್ಟೆಂಬರ್ 2016 ರಂದು ಬೆಳಗ್ಗೆ 0730 ಗಂಟೆಗೆ ನಮ್ಮ ತಂಡದ 17 ಜನರು ಜಾನಕಿಚಟ್ಟಿ ತಲಪಿದ್ದೆವು. ಹೊಟ್ಟೆ ತುಂಬಾ ತಿಂದರೆ ಬೆಟ್ಟ ಏರಲಾಗುವುದಿಲ್ಲ. ಹಾಗೆಂದು ತೀರಾ ಹಸಿದಿದರೂ ನಿಶ್ಶಕ್ತಿಯಾಗುತ್ತದೆಯೆಂದು ತಿಳಿದಿದ್ದ ನಮ್ಮ ತಂಡದ ಅನ್ನಪೂರ್ಣೆಯರಾದ ಸರಸ್ವತಿ ಮತ್ತು ಶಶಿಕಲಾ ಅವರು ನಾವು ಉಳಕೊಂಡಿದ್ದ ‘ಬಾರ್ ಕೋಟ್’ನ ಹೋಟೆಲ್ ನಿಂದ ಹೊರಡುವಾಗಲೇ ಸ್ವಲ್ಪ ಪುಳಿಯೋಗರೆಯನ್ನು ಕಲೆಸಿ ತಂದಿದ್ದರು. ಅದನ್ನು ಕೈತುತ್ತಿನಂತೆ ಹಂಚಿಕೊಂಡು ಲಘು ಉಪಾಹಾರ ತಿಂದೆವು. ಬೇಕಿದ್ದವರು ಪಕ್ಕದ ಅಂಗಡಿಯಲ್ಲಿ ಸಿಕ್ಕಿದ ಟೀ ಕುಡಿದೆವು. ನಡೆಯುವಾಗ ಆಧಾರಕ್ಕೆಂದು ಇಪ್ಪತ್ತು ರೂ. ಕೊಟ್ಟು ಬಿದಿರಿನ ಕೋಲನ್ನು ಖರೀದಿಸಿದೆವು. ತಂಡದ ಹೆಚ್ಚಿನವರು ನಡೆದೇ ಹೋಗುವುದೆಂದು ತೀರ್ಮಾನಿಸಿದ್ದರು. ನನಗೆ ಮಂಡಿನೋವಿದ್ದರೂ, ಪ್ರಯತ್ನಿಸುತ್ತೇನೆ, ತೀರಾ ಅಸಾಧ್ಯವಾದರೆ ಮಾತ್ರ ಕುದುರೆ ಹತ್ತುತ್ತೇನೆ ಎಂದು ನಿರ್ಧರಿಸಿದ್ದೆ. ನನ್ನ ಅನುಭವದಂತೆ, ಇಲ್ಲಿನ ತಂಪಿನ ವಾತಾವರಣದಲ್ಲಿ ಚಾರಣ ಮಾಡುವಾಗ ಅಷ್ಟಾಗಿ ಸುಸ್ತಾಗುವುದಿಲ್ಲ. ಕರ್ನಾಟಕದ ಕೆಲವು ಚಾರಣಗಳಲ್ಲಿ ಬಿಸಿಲಿನಿಂದಾಗಿಯೇ ಬಹಳ ಬಳಲಿಕೆಯಾದ ಅನುಭವವಿದೆ. ಒಟ್ಟಿನಲ್ಲಿ ನಿಧಾನವಾಗಿಯಾದರೂ ಯಶಸ್ವಿಯಾಗಿ ಯಮುನೋತ್ರಿಯ ಚಾರಣವನ್ನು ಪೂರೈಸಿದೆ.
ಬೆಳಗ್ಗೆ 0745 ಗಂಟೆಗೆ ನಡೆಯಲಾರಂಭಿಸಿದ ನಾವು ಅಲ್ಲಲ್ಲಿ ಪ್ರಕೃತಿ ವೀಕ್ಷಣೆ ಮಾಡುತ್ತಾ, ತಂದಿದ್ದ ಹಣ್ಣು-ಒಣಹಣ್ಣುಗಳು-ಬಿಸ್ಕತ್ ಇತ್ಯಾದಿಗಳನ್ನು ತಿನ್ನುತ್ತಾ, ದಾರಿಯಲ್ಲಿ ಸಿಕ್ಕಿದ ಒರತೆ ನೀರನ್ನು ಕುಡಿದು ದಾಹ ಹಿಂಗಿಸುತ್ತಾ ನಡೆದೆವು. ಪ್ರಕೃತಿದತ್ತ ಸಿಹಿನೀರಿನ ಮುಂದೆ ಯಾವ ಬಾಟಲಿ ನೀರೂ ಬೇಡವಾಗಿತ್ತು. ದಾರಿಯಲ್ಲಿ ಅಲ್ಲಲ್ಲಿ ಚಹಾ ಮತ್ತು ಪರಾಟಾ ಮಾರಾಟ ಮಾಡುವ ಅಂಗಡಿಗಳಿದ್ದುವು. ಕಿರಿದಾದ ದಾರಿಯಲ್ಲಿ ಓಡಾಡುವ ಕುದುರೆಗಳಿಗೆ ಮತ್ತು ಡೋಲಿಗಳಿಗೆ ಜಾಗ ಕೊಡುತ್ತಾ ನಾವು ಜಾಗರೂಕತೆಯಿಂದ ನಡೆಯಬೇಕಾಗುತ್ತದೆ. ಕೆಲವರು ಬೇಗನೇ ತಲಪಿದರು. ನಾವು ಕೆಲವರು 1130 ಗಂಟೆಗೆ ಯಮುನೋತ್ರಿ ತಲಪಿದೆವು.
ಯಮುನೋತ್ರಿಯಲ್ಲಿ ಯಮುನಾ ಮಾತೆಯ ವಿಗ್ರಹವಿದೆ. ಪೂಜಾ ಸಾಮಾಗ್ರಿಗಳು, ಯಮುನಾ ನೀರನ್ನು ಒಯ್ಯಲು ಬೇಕಾದ ಪ್ಲಾಸ್ಟಿಕ್ ಮತ್ತು ವಿವಿಧ ಲೋಹಗಳ ಕರಂಡಕಗಳು ಖರೀದಿಗೆ ಲಭ್ಯವಿದ್ದುವು.ಅಲ್ಲಿ ಗೌರಿಕುಂಡವೆಂಬ ಬಿಸಿನೀರಿನ ಬುಗ್ಗೆಯಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಸ್ನಾನಕ್ಕೆ ಅನುಕೂಲವನ್ನು ಕಲ್ಪಿಸಿದ್ದಾರೆ. ನಾವು ಗೌರಿಕುಂಡದ ಬಿಸಿನೀರಿನಲ್ಲಿ ಮೈತೋಯಿಸಿಕೊಂಡು, ಯಮುನಾ ಮಾತೆಯ ದರ್ಶನ ಮಾಡಿದೆವು. ‘ಸೂರ್ಯ ಕುಂಡ’ ಎಂಬ ಇನ್ನೊಂದು ಬಿಸಿನೀರಿನ ಬುಗ್ಗೆಯಿದೆ. ಇದರ ನೀರು ಕುದಿಯುವಷ್ಟು ಹಬೆಯಾಡುತ್ತಿರುತ್ತದೆ. ಪುಟ್ಟ ವಸ್ತ್ರದ ಚೀಲದಲ್ಲಿ ಅಕ್ಕಿಯನ್ನಿರಿಸಿ ಕುಂಡದಲ್ಲಿ ಕೆಲವು ನಿಮಿಷಗಳ ಕಾಲ ಇರಿಸಿದರೆ ಅದು ಬೆಂದು ಅನ್ನವಾಗುತ್ತದೆ. ಅದನ್ನು ‘ಪ್ರಸಾದ’ ಎಂದು ಕೊಡುತ್ತಾರೆ.
ಯಮುನೋತ್ರಿಯ ದೇವಾಲಯವನ್ನು 18 ನೆಯ ಶತಮಾನದಲ್ಲಿ ‘ಅಮರ ಸಿಂಗ್ ಥಪಾ’ ಕಟ್ಟಿಸಿದರಂತೆ. ಆಮೇಲೆ ಸಂಭವಿಸಿದ ಪ್ರಾಕೃತಿಕ ವಿದ್ಯಮಾನಗಳಿಂದಾಗಿ ಹಾನಿಗಳೊಗಾಗಿ ಪುನ: ಕಟ್ಟಲಾಗಿದೆ. ಪ್ರಸಿದ್ಧ ಚಾರ್-ಧಾಮ್ ಯಾತ್ರೆಯಲ್ಲಿ ಸಿಗುವ ಮೊದಲ ಧಾಮವಿದು.
ಯಮುನೋತ್ರಿಯಿಂದ ಹೊರಟು, ದಾರಿಯ ಅಂಗಡಿಯೊಂದರಲ್ಲಿ ಚಹಾ, ಪರಾಟ ಸೇವಿಸಿ, ಜಾನಕಿಚಟ್ಟಿಗೆ ನಡೆದೆವು. ತಂಡದ ಎಲ್ಲರೂ ಬಂದು ಸೇರಿದ ಮೇಲೆ, ಸಂಜೆ ನಾಲ್ಕುವರೆ ಗಂಟೆಗೆ ನಮ್ಮ ಮುಂದಿನ ಗಮ್ಯ ಸ್ಥಾನವಾಗಿದ್ದ ಗಂಗೋತ್ರಿಯೆಡೆಗೆ ಹೊರಟೆವು.
– ಹೇಮಮಾಲಾ.ಬಿ
Nice narration and good information!
ಆಹಾ ಎಂತಾ ಅನುಭವ ,ಚೆನ್ನಾಗಿ ಬರೆದಿದ್ದೀರಿ