ತೊರೆದ ಮೇಲೆ

Share Button

 

Anantha Ramesh

ನಾನು ಹೇಳುತ್ತಿರುತ್ತಿದ್ದೆ,

’ಎರಡೇ ರೊಟ್ಟಿ ಸಾಕು’

ಆದರೆ ನೀನು ಹೊಟ್ಟೆ ಬಿರಿಯೆ

ತಿನ್ನಿಸಿರುತ್ತಿದ್ದೆ ನಾಲ್ಕು .

 

ಬಸವಳಿದು ಬಂದ ದಿನಗಳಲ್ಲಿ

ನಿನ್ನ ಮೊದಲ ಮಾತು,

’ಬಾ ಉಳಿದೆಲ್ಲ ಬದಿಗಿಡು

ಈಗಲೇ ಬಿಸಿರೊಟ್ಟಿ ತಿಂದುಬಿಡು’ .

 

ನೀನು ’ನನಗಿಂದು ಹಣ್ಣು ಸೇರುತ್ತಿಲ್ಲ’

ಅನ್ನುವುದಕ್ಕೆ ಕಾರಣವಿರುತ್ತಿತ್ತು

ಒಂದೇ ಸೇಬು ಉಳಿದಾಗೆಲೆಲ್ಲ

ನನಗದು ತಿನ್ನಿಸುವ ಉಪಾಯವಾಗಿತ್ತು !

 

ತಡರಾತ್ರಿಯ ನನ್ನ ಓದಿನ ದಿನಗಳು

ನೀನು ನಿದ್ರೆಗೆಟ್ಟು ತರುತ್ತಿದ್ದುದು

ಚಾ.. ಕಾಫ಼ಿ ಮತ್ತು ತಟ್ಟೆ ತುಂಬಾ

ಘಮಘಮಿಸುವ ಸ್ವಾದಿಷ್ಟ ತಿನಿಸು.

 

ಗೆಳೆಯರೊಂದಿಗೆ ಪ್ರವಾಸಬಿದ್ದಾಗ

ತುಂಬಿದ ಬುತ್ತಿ ಕೊಟ್ಟು ನುಡಿಯುತ್ತಿದ್ದೆ,

’ ಸ್ನೇಹಿತರಿಗಷ್ಟೇ ಹಂಚಿಬಿಡಬೇಡ..

ನೀನೂ ತಿನ್ನುವುದ ಮರೆಯಬೇಡ!’

 

ನಾನು ಹೊರ ಪ್ರಪಂಚದಲ್ಲಿ

ಮುಳುಗಿ ಹೋಗಿರುವ ಸಮಯ

ಮೊಬೈಲು ಗಂಟೆಗೊಮ್ಮೆ ರಿಂಗುಣಿಸಿ

ಕಳಕಳಿಸುತ್ತಿತ್ತು, ’ಎಲ್ಲಿದ್ದೀಯ? ’

 

Mother and Child

ಕೋಣೆಗೆ ಧಾವಿಸಿ ಅಸ್ತವ್ಯಸ್ತ ಬಿದ್ದು

ನಿದ್ರೆಯಲ್ಲಿಮುಳುಗಿ ಎದ್ದ ಎಲ್ಲ ದಿನ

ಬೇಸರವಿಲ್ಲದೆ ನೀನು ಹೊದ್ದಿಸಿದ

ಚಾದರದ ಬೆಚ್ಚನೆಯ ನೆನಪು .

 

ನೀನು ಮಂದಿರಗಳಿಗೆ ಎಡತಾಕಿ

ಮೊರೆಯಿಟ್ಟು ಬಡಿಯುವುದು ಕೆನ್ನೆ

ನಿನಗಾಗಿಯಂತು ಅಲ್ಲ ಆದರದು

ಯಾರ ಗೆಲುವು ಗರಿಮೆಗೆನ್ನುವುದ ಬಲ್ಲೆ .

 

ನಿನ್ನ ಬಾಧಿಸಲೆ ಇಲ್ಲ ನನ್ನ ಹೇವರಿಕೆ

ಅಸಡ್ಡೆ ಕಿರಿಕಿರಿ ಗೊಣಗುಗಳು

ನಾನೆಂದಿಗೂ ಮಡಿಲ ಮಗುವಾಗಿ

ಉಳಿದದ್ದು ಅಚ್ಚರಿಯ ಮೇರು .

 

ನಿನ್ನ ಕಣ್ಣಂಚಿನ ನೀರ ಹನಿ

ತುಳುಕಿ ಬಿಸಿ ಆರುವ ಮುನ್ನ

ಹೊರಟು ಹೋಗಿದ್ದೇನೆ

ಯಾವುದೊ ಅನಾಥ ದಾರಿಗುಂಟ

 

ನಿನಗೆ ಪರ್ಯಾಯವಿದೆಯೆ

ಹುಡುಕ ಹೊರಟಿದ್ದೇನೆ

ನಿನ್ನ ಹೃದಯ ಸರಿತೂಗಬಲ್ಲವರ

ನೀ ಕೊಟ್ಟ ತುತ್ತು ತುಂಬಬಲ್ಲವರ .

 

ಎದೆ ಒಡೆಯುವಂತೆ ಕೂಗಿ ಹೇಳಲೆ

ಅಮ್ಮ, ಆ ಭಗವಂತನೂ ಕೂಡ

ಮಮತೆಯಲಿ ನಿನ್ನೆತ್ತರ ಏರಲಾರ

ನಿನ್ನ ತಾಳ್ಮೆಯ ತೂಕ ತೂಗಲಾರ

 

 – ಅನಂತ ರಮೇಶ್

5 Responses

  1. Seenu Pappunalmata says:

    ಸೂಪರ್

  2. Hema says:

    ಭಾವಪೂರ್ಣ ಕವನ..ಇಷ್ಟವಾಯಿತು. .

  3. Pushpalatha Mudalamane says:

    ಮನೋಜ್ಞ ಕವನ !

  4. Mallikarjuna Nj says:

    ತುಂಬಾ ಸೊಗಸಾಗಿ ಮೂಡಿ ಬಂದಿದೆ ಮನದಾಳದ ಭಾವನೆಗಳು.

  5. ಮೆಚ್ಚಿದ ಮನಸ್ಸುಗಳಿಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: