ಸೂಪರ್ ಪಾಕ

ಉಪ್ಪು ಸೊಳೆಯ ವಿವಿಧ ಖಾದ್ಯಗಳು…

Share Button

Vijaya Subrahmanya

 

ಹಲಸಿನಕಾಯಿಗಳು ಧಾರಾಳವಾಗಿ ಲಭ್ಯವಿರುವ ಕರಾವಳಿ ಪ್ರದೇಶದಲ್ಲಿ, ಹಲಸಿನಕಾಯಿಯ ಸೊಳೆಗಳ ಬೀಜ ಬೇರ್ಪಡಿಸಿ ಉಪ್ಪುನೀರಿನಲ್ಲಿ ಶೇಖರಿಸಿಡುವ ಪದ್ಧತಿಯಿದೆ. ಇದಕ್ಕೆ ‘ಉಪ್ಪು ಸೊಳೆ’ ಎಂದು ಹೆಸರು.ಹೀಗೆ ಶೇಖರಿಸಿದ ಸೊಳೆಗಳು ೬-೭ ತಿಂಗಳ ವರೆಗೂ ಕೆಡುವುದಿಲ್ಲ. ಉಪ್ಪುಸೊಳೆಯನ್ನು ತರಕಾರಿಯಂತೆ ಪಲ್ಯ, ಹುಳಿ ಇತ್ಯಾದಿ ಅಡುಗೆಗಳನ್ನೂ ಹಲವಾರು ರುಚಿಕರ ಖಾದ್ಯಗಳನ್ನೂ ತಯಾರಿಸಲು ಬಳಸಬಹುದು.,

1. ಉಂಡಲ ಕಾಳು:

ಬೇಕಾಗುವ ಸಾಮಾನು:-ಒಂದು ಕೆ.ಜಿ ಯಷ್ಟು ಉಪ್ಪುಸೊಳೆ, ಅರ್ಧಗಡಿ ತೆಂಗಿನಕಾಯಿತುರಿ, 1 ಪಾವು ಬೆಳ್ತಿಗೆ‌ ಅಕ್ಕಿ, ಅರ್ಧಲೀ ತೆಂಗಿನೆಣ್ಣೆ, ಒಂದು ಸ್ಪೂನ್ ಜೀರಿಗೆ.

ಮಾಡುವ ವಿಧಾನಃ   ಅಕ್ಕಿ ಅರ್ಧ ಗಂಟೆ ನೆನೆಹಾಕಬೇಕು. ಉಪ್ಪುಸೊಳೆಯನ್ನು ಭರಣಿಯಿಂದ ತೆಗೆದು ತೊಳೆದು ಅದು ಮುಳುಗುವಷ್ಟು ನೀರು ಹಾಕಿ ಇಡುವುದು. ಹತ್ತು ನಿಮಿಷಕ್ಕೊಮ್ಮೆ ನೀರು ಬದಲಿಸುತ್ತಾ ನಾಲ್ಕೈದು ಬಾರಿ ಹೀಗೆ ನೀರು ಬದಲಿಸುತ್ತಾ ಇದ್ದಾಗ ಉಪ್ಪೆಲ್ಲ ಬಿಡುತ್ತದೆ. ಮತ್ತೆ ಅದನ್ನು ಕೈ ಮುಷ್ಠಿಯಲ್ಲಿ ಸ್ವಲ್ಪ ಸ್ವಲ್ಪವೇ ಸೊಳೆಯಲ್ಲಿರುವ ನೀರನ್ನು ಹಿಂಡಿ ತೆಗೆದು ಇಟ್ಟುಕೊಂಡು ನೆನೆಹಾಕಿದ ಅಕ್ಕಿಯನ್ನು ತೊಳೆದು ನೀರು ಬಸಿದು ತೆಂಗಿನತುರಿಯೊಂದಿಗೆ ಗಟ್ಟಿಯಾಗಿ ಜೀರಿಗೆಯನ್ನೂ ಹಾಕಿ ನುಣ್ಣಗೆ ರುಬ್ಬಿಕೊಂಡು ಹಿಂಡಿದ ಸೊಳೆಯನ್ನೂ ನುಣ್ಣಗೆ ರುಬ್ಬಿಸೇರಿಸಿಕೊಂಡು ನೆಲ್ಲಿಕಾಯಿ ಗಾತ್ರದ ಉಂಡೆಕಟ್ಟುವುದು. ಎಣ್ಣೆಕಾಯಿಸಿ ಅದರಲ್ಲಿ ಕರಿಯುವುದು. ಪಾಕ ಆಗುತ್ತಾ ಬಂದಂತೆ ಉರಿ ಸಣ್ಣ ಮಾಡಿ. ಅದಲ್ಲಿ ಬರುವ ನೊರೆ ನಿಂತರೆ ಪಾಕ ಆದಂತೆ. ಎಣ್ಣೆಯಿಂದ ತೆಗೆದು ಆರಿದಮೇಲೆ ಗಾಳಿಸೋಕದಂತೆ ಇಟ್ಟರೆ ಆರು ತಿಂಗಳಿಗೂ ಅಧಿಕ ತಾಜಾತನ ಇರುತ್ತದೆ.

2.ಉಪ್ಪುಸೊಳೆ ಒಡೆಃ
ಬೇಕಾಗುವ ಸಾಮಾನುಃ-ಮೇಲೆ ಹೇಳಿದ ಉಂಡಲಕಾಳಿನಂತೆಯೇ.
ಮಾಡುವ ವಿಧಾನಃ-ಮೇಲೆ ಹೇಳಿದ ಹಿಟ್ಟಿಗೆ ನೀರುಳ್ಳಿ+ಕಾಯಿಮೆಣಸು+ಕರಿಬೇವು ಹೆಚ್ಚಿಹಾಕಿ,  ಒಡೆ ತಟ್ಟಿ,  ಎಣ್ಣೆಯಲ್ಲಿ ಕರಿಯುವುದು.

uppusole khadyagalu

3.ಉಪ್ಪುಸೊಳೆ ರೊಟ್ಟಿ:
ಬೇಕಾಗುವ ಸಾಮಾನುಃ-ಮೇಲೆ ಒಡೆ ಹಿಟ್ಟಿನಂತೆ. ಜೀರಿಗೆ ಹಾಗೂ ಎಣ್ಣೆ ಬೇಡ. ಬಾಳೆಲೆ ಬೇಕು.
ಮಾಡುವ ವಿಧಾನಃ-ಬಾಳೆಲೆಯಲ್ಲಿ ತೆಳ್ಳಗೆ ತಟ್ಟಿ ಕಾವಲಿಯಲ್ಲಿ ಬೇಯಿಸುವುದು. ಬೆಂದಾಗ ಬಾಳೆಲೆ ಎದ್ದು ಬರುವುದು. ಬಾಳೆಲೆ ತೆಗೆದುಬಿಟ್ಟು ಬೆಣ್ಣೆ ಸವರಿ ಕವುಚಿಹಾಕಿ ಬೆಂದಾಗ ಗುಳ್ಳೆ ತರ ಬಂದು ಒಳ್ಳೆಯ ಸುವಾಸನೆಯಿರುವುದು. ಬೆಣ್ಣೆ,ಬೆಲ್ಲದೊಂದಿಗೆ ತಿನ್ನಲು ಬಹಳ ರುಚಿ.

4.ಉಪ್ಪುಸೊಳೆ ಸೋಂಟೆ:

ಬೇಕಾಗುವ ಸಾಮಾನುಃ- ಉಪ್ಪುಸೊಳೆ ಮತ್ತು ಕರಿಯಲು ಎಣ್ಣೆ.
ಮಾಡುವ ವಿಧಾನಃ-ಉಪ್ಪು ಸೊಳೆಯಿಂದ ಉಪ್ಪು ಬಿಡಿಸಿ ತೆಳ್ಳಗೆ ಉದ್ದುದ್ದನೆ ಹೆಚ್ಚಿಕೊಂಡು ಅದರ ನೀರನ್ನು ಉಂಡಲಕಾಳಿಗೆ ಹಿಂಡುವಂತೆ ಹಿಂಡಿ ನೀರು ತೆಗೆದು ಎಣ್ಣೆಯಲ್ಲಿ ಕರಿಯುವುದು.ಇದನ್ನು ಅನ್ನಕ್ಕೆ ನೆಂಜಿಕೊಳ್ಳಲು, ಕಾಫಿ,ಚಹಾದೊಂದಿಗೆ ಕರುಕುರು ತಿಂಡಿಯಾಗಿ ಸೇವಿಸಲು ರುಚಿಯಾಗಿದ್ದು ಗಾಳಿಯಾಡದಂತೆ ಭದ್ರವಾಗಿ ಮುಚ್ಚಿಟ್ಟರೆ ದೀರ್ಘಕಾಲ ತಾಜಾತನ ಇರುತ್ತದೆ.

uppusole
5.ಉಪ್ಪುಸೊಳೆ ಪಲ್ಯಃ

ಬೇಕಾಗುವಸಾಮಾನು : – ಎರಡು ಹಿಡಿ ಉಪ್ಪುಸೊಳೆ,ಒಂದು ದೊಡ್ಡ ನೀರುಳ್ಳಿ,ಎರಡು ಕಣೆ ಬೇವಿನೆಲೆ, ಚಿಟಿಕೆ ಅರಸಿನಪುಡಿ, ಎರಡುಕಾಯಿಮೆಣಸು, ಚೂರು ತೆಂಗಿನಕಾಯಿ ತುರಿ, ಒಗ್ಗರಣೆಗೆ ನಾಲ್ಕು ದೊಡ್ಡ ಚಮಚ ತೆಂಗಿನೆಣ್ಣೆ. ಒಂದುಸ್ಪೂನು ಸಾಸಿವೆ, ಒಂದು ಒಣಮೆಣಸಿನಕಾಯಿ.

ಮಾಡುವ ವಿಧಾನಃ- ಉಪ್ಪುಸೊಳೆಯನ್ನು ತೆಗೆದುತೊಳೆದು ನೀರಿನಲ್ಲಿ ನೆನೆ ಹಾಕುವುದು. ಸೊಳೆಯಲ್ಲಿ ಚೂರು ಉಪ್ಪುಬಾಕಿ ಇರುವಾಗಲೇ ನೀರು ಬಸಿದು ನೀರು ಹಿಂಡಿ ತೆಳ್ಳಗೆ ಉದ್ದನೆ ಹೆಚ್ಚಿಕೊಳ್ಳುವುದು. ನೀರುಳ್ಳಿ,ಕಾಯಿಮೆಣಸು ಹೆಚ್ಚಿಕೊಳ್ಳುವುದು.ಬಾಣಲೆಯಲ್ಲಿ ಎಣ್ಣೆಹಾಕಿ ಒಗ್ಗರಣೆಗಿಟ್ಟು ಸಾಸಿವೆ ಹೊಟ್ಟುವಾಗ ;ಹೆಚ್ಚಿದ ನೀರುಳ್ಳಿ,ಕಾಯಿಮೆಣಸು,ಬೇವಿನೆಲೆ ಹಾಕಿ ಒಂದು ನಿಮಿಷ ಸೌಟಿನಿಂದ ಗೋಟಾಯಿಸಿ, ಹಿಂಡಿದ ಉಪ್ಪುಸೊಳೆಯನ್ನು ಅದಕ್ಕೆ ಸುರಿದು ಚೂರು ನೀರು ಚಿಮುಕಿಸಿ ಸಣ್ಣ ಉರಿಮಾಡಿ ಮುಚ್ಚಿಡುವುದು.ಎರಡು ನಿಮಿಷದಲ್ಲಿ ಮುಚ್ಚಳ ತೆಗೆದು ಸೌಟಿಂದ ಗೋಟಾಯಿಸುತ್ತಾ ಇದ್ದು, ಬೇಕಿದ್ದರೆ ಮತ್ತೆ ಒಂದು ಸ್ಪೂನು ಎಣ್ಣೆಹಾಕಿ ಚೂರು ಹೊತ್ತು ಗೋಟಾಯಿಸಿ ತೆಂಗಿನತುರಿಹಾಕಿ ಒಲೆಯಿಂದ ಇಳಿಸಿದಾಗ ಗಮ-ಗಮ ಪಲ್ಯ ರೆಡಿ.

 

– ವಿಜಯಾಸುಬ್ರಹ್ಮಣ್ಯ, ಕುಂಬಳೆ

 

3 Comments on “ಉಪ್ಪು ಸೊಳೆಯ ವಿವಿಧ ಖಾದ್ಯಗಳು…

  1. ಉಪ್ಪು ಸೊಳೆಯ ವಿವಿಧ ಅಡುಗೆಗೆಳು ನಮಗೂ ಇಷ್ಟ. ಆದರೆ ಪಲ್ಯಕ್ಕೆ ನೀರುಳ್ಳಿಯನ್ನೂ ಸೇರಿಸುವ ವಿಧಾನ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು.

  2. ಹೇಮಾ, ನಮಸ್ತೇ, ನೀರುಳ್ಳಿ ಸೇರಿಸಿ ಪಲ್ಯ ಮಾಡಿ ರುಚಿ ನೋಡಿದಿರೇನು?.

    1. ಹೌದು..ಭಾನುವಾರ ನಿಮ್ಮ ವಿಧಾನದಂತೆ ಉಪ್ಪುಸೊಳೆಯ ಪಲ್ಯ ಮಾಡಿದ್ದೆ. ಮನೆಯಲ್ಲಿ ಎಲ್ಲರಿಗೂ ಇಷ್ಟವಾಯಿತು.ಥ್ಯಾಂಕ್ಸ್ 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *