ಉಪ್ಪಿನ ಹಲಸಿನ ಸೊಳೆ ಪಲ್ಯ…ತಿಂದರೆ ನೀವು ಬಿಡಲ್ಲ…
ಹಲಸು ಗೊತ್ತಿಲ್ಲದವರು ಯಾರು…ಈಗಂತೂ ಅದರದ್ದೇ ಕಾರುಬಾರು.. ನಮ್ಮಲ್ಲಿ, ಏನೂ ಆರೈಕೆ ಇಲ್ಲದೆ ಎಲ್ಲೋ ತೋಟದ ಮಧ್ಯೆಯೊ,ಬದಿಯಲ್ಲಿಯೊ ಅಂತರಿಕ್ಷ ವರೆಗೆ ಬೆಳೆದು ಸಕಾಲಕ್ಕೆ ಫಲ ಕೊಡುವ ಮರ ಇದು. ಡಿಸೆಂಬರಿನಲ್ಲಿ ಚಳಿಗಾಳಿ ಬೀಸಿತೆಂದರೆ ಹಲಸು ಹೂವು ಬಿಡಲು ಸುರು.ಜನವರಿಯಲ್ಲಿ, ಎತ್ತರದ ಮರವನ್ನು ಕತ್ತೆತ್ತಿ ನೋಡಿ ಕುತ್ತಿಗೆ ನೋಯುತ್ತಿದ್ದರೂ ,ಈ ವರ್ಷ ಎಷ್ಟು ಹಲಸು ಸಿಗಬಹುದೆಂದು ಲೆಕ್ಕ ಹಾಕುವುದಿತ್ತು..! ಮರ ತುಂಬಾ ಹಲಸು ಬಿಟ್ಟರೆ, ಈ ಸಲ ಹಪ್ಪಳ ಸರೀ ತಿನ್ನಬಹುದೆಂದು ಆಸೆ..! ಈಗ ಹಲಸಿನ ಮರಗಳಿಗೇ ಬರ…ಮರಗಳ ಸ್ವಂತ ಉಪಯೋಗಕ್ಕೋ ಅಥವಾ ಹಣಕ್ಕಾಗಿಯೋ ಅದನ್ನು ಕಡಿದರೆ ಬೇರೆ ಗಿಡ ನದುವ ಗೋಜಿಗೇ ಹೋಗುವುದಿಲ್ಲ..ಆದರೂ ಮಲೆನಾಡಿನ ಮನೆ ಹಿತ್ತಲಲ್ಲಿ ಈಗಲೂ ಒಂದೆರಡು ಹಲಸಿನ ಮರಗಳು ಕಾಣಸಿಗುತ್ತವೆ.
ಹಲಸು ಒಂದು ಥರ ಕಲ್ಪವೃಕ್ಷ ಇದ್ದ ಹಾಗೆ..! ಮರದಿಂದ ಹಿಡಿದು ಹಲಸಿನಕಾಯಿಯ ಬೆಳವಣಿಗೆಯ ಎಲ್ಲಾ ರೂಪಾಂತರಗಳೂ ನಮ್ಮ ಉಪಯೋಗಕ್ಕೆ.. ಎಳೆಹಲಸು ಪಲ್ಯ,ಉಪ್ಪಿನಕಾಯಿ,ಪೋಡಿ (ಬಜ್ಜಿ),ತರಹೇವಾರಿ ಅಡಿಗೆಗಳಿಗೆ..ಇತ್ಯಾದಿ..ಇತ್ಯಾದಿ…ಇನ್ನೂ ಸ್ವಲ್ಪ ಬೆಳೆದರೆ ಅದರ ಬೀಜ ಬಲಿತಿರುತ್ತದಲ್ಲ.. ನಮ್ಮ ಕೈಗೆ ಕೆಲಸ ಜಾಸ್ತಿ ಆದರೂ ಲೆಕ್ಕಿಸದೆ ಅದರ ವಿವಿಧ ರೀತಿಯ ಪಾಕಗಳು ಸಿಧ್ಧವಾಗುತ್ತವೆ.ಸರಿಯಾಗಿ ಬಲಿತ ಹಲಸು ಸಿಕ್ಕರೆ ಬೇಸಿಗೆ ಬಿಸಿಲಿಗೆ ಹಪ್ಪಳ ತಯಾರಿ ಜೋರು..ಇನ್ನು ಬೇಸಿಗೆ ಕಳೆದು ಮಳೆಗಾಲ ಬಂದರೂ ಮರಗಳಲ್ಲಿ ಹಲಸು ಮುಗಿದಿರುವುದಿಲ್ಲ ನೋಡಿ…ಬಲಿತ ಹಲಸು ಸೊಳೆಗಳನ್ನು ಹಾಳಾಗದಂತೆ ಉಪ್ಪಿನಲ್ಲಿ ಹಾಕಿ ಶೇಖರಿಸಿಡಲಾಗುವುದು.ನಮ್ಮ ಚಿಕ್ಕಂದಿನ ನೆನಪು…ಆಲೀಬಾಬಾ ಮತ್ತು ನಲುವತ್ತು ಕಳ್ಳರ ಕಥೆಯಲ್ಲಿದ್ದಂಥಹ ಭೀಮಾಕಾರದ ಮಣ್ಣಿನ ಹಂಡೆಗಳಲ್ಲಿ ಬುಟ್ಟಿಗಟ್ಟಳೆ ಹಲಸಿನ ಸೊಳೆಯನ್ನು ಉಪ್ಪು ಬೆರೆಸಿ ಇಡುತ್ತಿದ್ದರು.ಹಳ್ಳಿಗಳಲ್ಲಿ ಹಲಸು ಇಲ್ಲದ ಸಮಯದಲ್ಲೂ ಉಪ್ಪಿನಲ್ಲಿ ಕಾಯ್ದಿಟ್ಟ ಈ ಸೊಳೆಯು ತುಂಬಾ ಉಪಯೋಗಕ್ಕೆ ಬರುವಂತಹುದು..
ಮನೆಯಲ್ಲಿ ತರಕಾರಿ ಮುಗಿದಿದೆಯಾ…ತಲೆಬಿಸಿ ಬೇಡ….! ಬೆಳಗಿನ ತಿಂಡಿಗೆ ಸೊಳೆ ರೊಟ್ಟಿ..ಒಟ್ಟಿಗೆ ಚಟ್ನಿ.. ! ಧೋ ಎಂದು ಮಳೆ ಸುರಿಯುವಾಗ ಇದರ ಉಂಡಲಕಾಳು ..ಆಹಾ..ಸ್ವರ್ಗಕ್ಕೆಮೂರೇ ಗೇಣು..!! ವರ್ಷವಿಡೀ ಕೈಗೆ ಸಿಗುವಂತಹ ಇದು ಹಿಂದೆ ಬಡವರ ಮನೆಗಳ ಅಡಿಗೆ ಕೋಣೆಯಲ್ಲಿ ಮುಖ್ಯಆಹಾರವಾಗಿ ಕುಳಿತಿರುತ್ತಿತ್ತು.ಆಗಾಗ ನಮ್ಮಲ್ಲಿ ಗೆ ಬಂದು ತಗೊಂಡು ಹೋಗುತ್ತಿದ್ದುದು ನೆನಪಾಗ್ತಾ ಇದೆ…ಇದರೊಂದಿಗೇ ಹಲಸಿನ ಬೀಜವನ್ನೂಮಣ್ಣಿನಲ್ಲಿ ಬೆರೆಸಿ, ಕಾಯ್ದಿಟ್ಟು ಉಪಯೋಗಿಸುವುದೂ ಇದೆ.ಹಲಸಿನ ಹಣ್ಣಿನಲ್ಲಿ ಮಾಡಬಹುದಾದ ತಿಂಡಿಗಳೋ ಲೆಕ್ಕವಿಲ್ಲದಷ್ಟು.ತಿಂದು ಉಳಿದ ಹಣ್ಣು ಕೆಂಪಗೆ ಹಲ್ವದಂತೆ ಕಾಯಿಸಿದರೆ ವರ್ಷವಿಡೀ ದಿಡೀರ್ ಪಾಯಸಕ್ಕೆ ಬೇರೇನೂ ಹುಡುಕಬೇಕಾಗಿಲ್ಲ..
ಪೀಠಿಕೆಯೇ ಜಾಸ್ತಿ ಆದಂತಿದೆಯಲ್ವಾ..ಇರಲಿ….ಇನ್ನು ನಮ್ಮಪಲ್ಯದ ವಿಷಯಕ್ಕೆ ಬರೋಣ.ಉಪ್ಪಲ್ಲಿ ಹಾಕಿಟ್ಟ ಸೊಳೆಯಲ್ಲಿ ತುಂಬಾ ಉಪ್ಪಿರುವುದರಿಂದ ಅದನ್ನು ಮೊದಲಿಗೆ ಸಾಕಸ್ಟು ನೀರು ಹಾಕಿ ಅರ್ಢ ಗಂಟೆಯಾದರೂ ಇಡಬೇಕು. ಇಲ್ಲದಿದ್ದರೆ ಬಿ,ಪಿ, ಇದ್ದವರಿಗೆ ಕಷ್ಟ ಆದೀತೇನೋ…ನೀರು ಹಿಂಡಿ ತೆಗೆದು ಸಣ್ಣದಾಗಿ ಹಚ್ಚಿ ಇಟ್ಟರೆ ಪಲ್ಯಕ್ಕೆ ತಯಾರಾದಂತೆಯೆ. ಬಾಣಲೆಯಲ್ಲಿ ತೆಂಗಿನೆಣ್ಣೆ ಹಾಕಿ, ಸಾಸಿವೆ ಚಟಪಟಿಸಿ,ಉದ್ದಿನಬೇಳೆ ಸೇರಿಸಿ ಹುರಿದು,ಕೊನೆಗೆ ಸ್ವಲ್ಪ ಜೀರಿಗೆ ಹಾಕಿ.ಜೊತೆಗೆ ಕರಿಬೇವಿನಸೊಪ್ಪು ಹಾಕಲು ಮರೆಯಬಾರದು ನೋಡಿ ಮತ್ತೆ..! ತಯಾರಿರುವ ಹಚ್ಚಿಟ್ಟ ಸೊಳೆಯನ್ನು ಹಾಕಿ ಅದಕ್ಕೆ ಒಂದು ಸೌಟು ಮಜ್ಜಿಗೆ,ಸ್ವಲ್ಪ ಹಳದಿಪುಡಿ ಸೇರಿಸಿ.ಬೇಕಿದ್ದರೆ ಸ್ವಲ್ಪ ಉಪ್ಪು,ಖಾರಕ್ಕೆ ಸ್ವಲ್ಪ ಖಾರ ಪುಡಿ,ಅರ್ಧ ಲೋಟ ನೀರು ಹಾಕಿ ಆಗಾಗ ಸೌಟಲ್ಲಿ ತಿರುವುತ್ತಾ ಬೇಯಿಸಿದರೆ 5-6 ನಿಮಿಷಗಳಲ್ಲಿ ರುಚಿಯಾದ ಪಲ್ಯ ತಯಾರ್…ಬೇಗನೆ ಮಾಡಿ…ತಿಂದು ನೋಡಿ…ಹೇಗಿದೆ ಹೇಳಿ..?? ಚೆನ್ನಾಗಿದೆಯಾ..??
.
– ಶಂಕರಿ ಶರ್ಮಾ, ಪುತ್ತೂರು
ಆಹಾ ಪಲ್ಯತುಂಬಾ ರುಚಿ .ಲೇಖನ ವೂ ಚೆನ್ನಾಗಿತ್ತು