ಸಂತೋಷದ ಆಯ್ಕೆ…
ಅದೊಂದು ದಿನ ಸಂಜೆಗತ್ತಲಾಗಿದ್ದಾಗ, ಪಕ್ಕದ ಸೈಟಿನಲ್ಲಿರುವ ತಾತ್ಕಾಲಿಕ ಶೆಡ್ ಮನೆಯ ಯುವತಿ, ನಮ್ಮ ಮನೆಯ ಬಾಗಿಲು ತಟ್ಟಿದಳು. ಆಕೆ ಸುಮಾರು ಇಪ್ಪತ್ತೈದರ ಆಸುಪಾಸಿನ ನಗುಮುಖದ ತರುಣಿ. ಜತೆಗೆ ಅವಳದೇ ವಯಸ್ಸಿನ ಇನ್ನೊಬ್ಬಾಕೆಯೂ ಇದ್ದಳು.
ಆಕೆ ಸಂಕೋಚದಿಂದಲೇ, “..ಆಂಟಿ, ಸ್ವಲ್ಪ ಮಿಕ್ಸಿ ಕೊಡ್ತೀರಾ… ನೆಂಟ್ರು ಬಂದವ್ರೆ… ಕಡ್ಲೆಬೇಳೆ ವಡೆಗೆ ನೆನೆಸಿದ್ದೆ…. ಯಾಕೋ ನಮ್ಮನೆಲಿ ಮಿಕ್ಸಿ ಕೆಟ್ಟೋಯ್ತು….ಕರೆಂಟ್ ಸರಿ ಇಲ್ಲ ಅನ್ಸುತ್ತೆ….ಲೈಟೂ ಹೋಯ್ತು…ಇವರ ಮನೆಗೆ ಹೋಗಿ ಮಿಕ್ಸಿ ಮಾಡ್ಕೊಳ್ತೀವೆ.ಇವ್ಳು ನನ್ನ ವಾರಗಿತ್ತಿ, ಪಕ್ಕದ ಕ್ರಾಸ್ ನಲ್ಲಿ ವಾಚ್ ಮ್ಯಾನ್ ಶೆಡ್ ನಲ್ಲಿದ್ದಾರೆ…“ ಹೀಗೆ ತಾನು ಬಂದ ಉದ್ದೇಶ, ಸಮಸ್ಯೆ, ಪರಿಚಯ ಎಲ್ಲವನ್ನೂ ಒಂದೇ ಉಸಿರಿನಲ್ಲಿ ತಿಳಿಸಿದಳು.
‘ಅದಕ್ಕೆ ಯಾಕೆ ಸಂಕೋಚ, ನೀವು ರುಬ್ಬಬೇಕಾದ ನೆನೆಸಿದ ಬೇಳೆಯನ್ನು ತಂದು ಇಲ್ಲಿಯೇ ರುಬ್ಬಿ’ ಅಂದೆ. ಸರಿ ಎಂದು ಆಕೆ ತನ್ನ ಪಾತ್ರೆಗಳ ಸಮೇತ ಬಂದಳು. ನಮ್ಮ ಮಿಕ್ಸಿಯನ್ನು ಹಾಲ್ ಗೆ ತಂದೆವು. ವಾರಗಿತ್ತಿಯರಿಬ್ಬರು ಸೇರಿ ನಗುತ್ತಾ, ಹರಟುತ್ತಾ, ನೆನೆಸಿದ ಕಡ್ಲೆಬೇಳೆ-ಮಸಾಲೆ ಮಿಶ್ರಣವನ್ನು ಮಿಕ್ಸಿಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ ರುಬ್ಬಿ ವಡೆಯ ಹಿಟ್ಟು ತಯಾರಿಸಿಕೊಂಡರು. ಈ ನಡುವೆ ಅವರನ್ನು ಮಾತಿಗೆಳೆದ ನನಗೆ ಅರ್ಥವಾದುದಿಷ್ಟು:
ಮೈಸೂರಿನಿಂದ 20 ಕಿ.ಮೀ ದೂರದ ಹಳ್ಳಿಯಿಂದ ಪರಸ್ಪರ ಸಂಬಂಧಿಗಳಾದ ನಾಲ್ಕು ಕುಟುಂಬದವರು, ಈ ಬಡಾವಣೆಯ ಬೇರೆ ಬೇರೆ ಕಡೆ ಹೊಸಮನೆ ಕಟ್ಟುವ ನಿವೇಶನಗಳ ‘ವಾಚ್ ಮ್ಯಾನ್’ ಕೆಲಸಕ್ಕೆ ಬಂದಿದ್ದಾರೆ. ವಾರಾಂತ್ಯದ ದಿನ ಎಲ್ಲರೂ ಒಟ್ಟಾಗಿ ಅಡುಗೆ ಮಾಡಿ ಉಣ್ಣುವ ಪ್ಲಾನ್ ಮಾಡಿದ್ದಾರೆ. ಒಟ್ಟು 20 ಜನಕ್ಕೆ ಊಟ ತಯಾರಿಸಬೇಕು. ಎಲ್ಲರೂ ಸೇರಿ ರಾತ್ರಿಯ ಊಟಕ್ಕೆ ರೈಸ್ ಭಾತ್, ಕಡ್ಲೆಬೇಳೆ ವಡೆ, ಅನ್ನ, ತಿಳಿಸಾರು, ಶ್ಯಾವಿಗೆ ಪಾಯಸವುಳ್ಳ ಅಡುಗೆ ತಯಾರಿಸುತ್ತಿದ್ದಾರೆ.
ಇಕ್ಕಟ್ಟಾದ ಶೆಡ್ ಮನೆ, ಅನುಕೂಲತೆಗಳೇನೂ ಇಲ್ಲ, ಆದರೂ ಉತ್ತಮ ಸಮನ್ವಯದ ಜೊತೆಗೆ, ಇದ್ದುದರಲ್ಲಿ ತೃಪ್ತಿಪಟ್ಟು, ಸಂತೋಷ ಕಂಡುಕೊಳ್ಳುವ ಜನರಿವರು ಅನಿಸಿತು. ಸ್ವಲ್ಪ ಸಮಯದ ನಂತರ ಅವರ ಮನೆಯ ಒಳಗೂ, ಹೊರಗೂ ಊಟದ ಸಂಭ್ರಮ ಕಾಣುತಿತ್ತು, ನಗು, ಹರಟೆ ಕೇಳುತ್ತಿತ್ತು.
ಸಮಸ್ಯೆಯನ್ನು ನಿರಾಯಾಸವಾಗಿ ಪರಿಹರಿಸಿಕೊಳ್ಳುವ ಮತ್ತು ಸಂತೋಷವನ್ನು ಆಯ್ಕೆ ಮಾಡುವ ಅವರ ಮನೋಭಾವ ಇಷ್ಟವಾಯಿತು ಸಂತಸ ಲಭಿಸುವುದು ಹೊರಗಿನ ವಿಚಾರಗಳಿಂದ ಅಲ್ಲ, ಸಂತೋಷವಾಗಿರುವುದು ನಮ್ಮ ಕೈಯಲ್ಲಿಯೇ ಇದೆ ಅಂತ ಸಾಬೀತಾಯಿತು.
– ಹೇಮಮಾಲಾ.ಬಿ
ಸತ್ಯ…ಸಂತೋಷವೆಂಬುದು ನಮ್ಮ ಕೈಯಲ್ಲೇ ಇದೆ ಅಲ್ವೇ…
ಅಂದು ದುಡಿದಿದ್ದನ್ನು ಅಂದು ಬಿಸಿಬಿಸಿ ಉಂಡು ಸಂತೋಷದಿಂದ ಇರ್ತಾರೆ.ಕೂಡಿಟ್ರೇನೇ ತೊಂದ್ರೆ ಶುರು.
ಒಳ್ಳೆಯ ಆಲೋಚನೆ ಹಾಗೂ ವಾಸ್ತವತೆಯ ಅನಾವರಣ ನಿಮ್ಮಿಂದ,ಧನ್ಯವಾದಗಳು