ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಸರಿಯೇ ?

Spread the love
Share Button

Surendra Pai

ಅಣಬೆಯು ಮಳೆಗಾಲದಲ್ಲಿ ಕಂಡುಬರುವುದು ಸ್ವಾಭಾವಿಕ ಆದರೆ ನಮ್ಮ ರಾಜ್ಯದಲ್ಲಿ ಪ್ರತಿ ವರ್ಷವು ಅಣಬೆಗಿಂತಲೂ ವೇಗವಾಗಿ ಹಲವಾರು ನೂತನ ಖಾಸಗಿ ಶಾಲಾ-ಕಾಲೇಜುಗಳು ತಲೆ ಎತ್ತುತ್ತಿವೆ. ಶಿಕ್ಷಣ ಪ್ರಸಾರ ಮಾಡಬೇಕಾಗಿರುವ ಈ ಸಂಸ್ಥೆಗಳು ತಮ್ಮ ಮೂಲ ಉದ್ಧೇಶವನ್ನೇ ಮರೆತು ಸ್ವಹಿತಾಶಕ್ತಿಯ ಸಲುವಾಗಿ ಶಿಕ್ಷಣವನ್ನು ಬಳಸಿಕೊಳ್ಳುತ್ತಿವೆ ಎಂಬುದು ಅತಿ ದುಃಖದ ಸಂಗತಿ.

ತಮ್ಮ ಪ್ರಭಾವಿ ಶಕ್ತಿಯನ್ನು ಬಳಸಿಕೊಂಡು ಆರಂಭಿಸುವ ಇಂತಹ ಹಲವಾರು ಶಿಕ್ಷಣ ಸಂಸ್ಥೆಗಳು ನಮ್ಮ ಸಮಾಜಕ್ಕೆ ಶಾಪವಾಗಿ ಪರಿಣಮಿಸುತ್ತಿದೆ. ಸರ್ಕಾರವು ಸಹ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳದೆ ಸುಮ್ಮನೇ ಕುಳಿತಿರುವುದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಡುತ್ತದೆ. ಪ್ರಾರಂಭದಲ್ಲಿ ಸರ್ಕಾರದ ಮಾನದಂಡಗಳನ್ನು ಚಾಚು ತಪ್ಪದೇ ಪಾಲಿಸುವುದಾಗಿ ಹೇಳುವ ಇಂತಹ ಸಮಾಜಘಾತುಕ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಕನಸಿನ ಜೊತೆ ಆಟವಾಡುತ್ತಿದೆ ಎಂದರೆ ತಪ್ಪಾಗಲಾರದು. ಸರ್ಕಾರ ಯಾವುದೇ ರೀತಿಯ ವೈಜ್ಞಾನಿಕವಾದ ನಿಯಮವನ್ನು ಪಾಲಿಸದೇ ಇರುವುದರಿಂದ ಇಂತಹ ಸಂಸ್ಥೆಗಳು ನಿರ್ಭಯವಾಗಿ ಸಮಾಜದ ಮುಂದಿನ ಪೀಳಿಗೆಯ ನಾಯಕರನ್ನು ನಿರ್ಮಿಸುವಲ್ಲಿ ಸೋಲುತ್ತಿದ್ದಾರೆ. ಇದು ಕೇವಲ ಸರ್ಕಾರದ ತಪ್ಪಲ್ಲ ಬದಲಾಗಿ ಪಾಲಕರ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಒಂದು ವಿದ್ಯುತ್ ತಂತಿಯ ಮೇಲೆ ಒಂದು ಕಾಗೆ ಬಂದು ಕುಳಿತುಕೊಳ್ಳುವುದೇ ತಡ ಕ್ರಮವಾಗಿ ಬೇರೆ ಎಲ್ಲಾ ಸಮಾನ ಮನಸ್ಸಿನ ಕಾಗೆಗಳು ಒಂದೊಂದಾಗಿ ಕುಳಿತುಕೊಳ್ಳಲು ಪ್ರಾರಂಭಿಸುತ್ತದೆ.. ಇದು ನಮ್ಮೆಲ್ಲರ ಮನಸ್ಥಿತಿ ಆಗಿದೆ. ನಾವು ಎಲ್ಲಿಯವರೆಗೂ ನಮ್ಮ ಈ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ನಾವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಿಲ್ಲ.

ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ಮಾತ್ರಕ್ಕೆ ತಮ್ಮ ಮಕ್ಕಳ ಭವಿಷ್ಯ ಹಸನಾಗುತ್ತದೆ ಎಂದು ನಿರ್ಧರಿಸುವುದು ಎಷ್ಟು ಸರಿ? ಇಂಗ್ಲೀಷ ಶಿಕ್ಷಣ ಒಂದೇ ನಮ್ಮ ಸರ್ವತೋಮುಖ ಬೆಳವಣಿಗೆಗೆ ಇರುವ ಮಾರ್ಗವಾ? ಇದು ಶುದ್ಧ ಮೂರ್ಖತನದ ಪರಮಾವಧಿಯಲ್ಲವೇ? ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಮ್ಮ ಮಕ್ಕಳು ಕಲಿಯುತ್ತಿದ್ದಾರೆ ಎಂದು ಹೇಳಿಕೊಳ್ಳುವುದು ಪಾಲಕರ ಪಾಲಿಗೆ ಒಣ ಪ್ರತಿಷ್ಠೆಯ ವಿಷಯವಾಗಿದೆಯೇ ಹೊರತು ಶಿಕ್ಷಣದ ಪ್ರಗತಿಯ ಬಗ್ಗೆ ಚಿಂತನೆ ನಡೆಸುತ್ತಿಲ್ಲ.
Goverment school

ಸರ್ಕಾರಿ ಶಾಲೆಗಳು ಎಂದರೆ ಎನೋ ಒಂಥರ ಅಸಡ್ಡೆ , ಮೂಗು ಮುರಿಯುವ ಪದ್ಧತಿ ಬೆಳೆದು ಬಿಟ್ಟಿದೆ. ಅಯ್ಯೋ ಆ ಸರ್ಕಾರಿ ಶಾಲೆ ನಾ !! ಎಂಬ ಭಾವನೆ ಹಲವರದ್ದು. ಎಲ್ಲರಿಗೂ ಸರ್ಕಾರಿ ಉದ್ಯೋಗ ಬೇಕು, ಸರ್ಕಾರಿ ಸವಲತ್ತುಗಳು, ಅನುದಾನಗಳು ಬೇಕು. ಆದರೆ ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯ ಶಿಕ್ಷಣ ಮಾತ್ರ ಬೇಡ ಅನ್ನೋ ಮನೋಭಾವನೆ ಬಹುತೇಕ ಎಲ್ಲರ ಮನಸ್ಸಿನಲ್ಲೂ ಮನೆ ಮಾಡಿದೆ. ಈ ರೀತಿ ಯೋಚನೆ ಮಾಡುವುದರ ಪರಿಣಾಮವಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದು ತಲುಪಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ಒತ್ತಡವು ಇಲ್ಲ, ಸರ್ಕಾರವು ಸರ್ಕಾರಿ ಶಾಲೆಗಳ ಬಗ್ಗೆ ಕೇವಲ ದಾಖಲೆಯ ಸಲುವಾಗಿ ಹಲವಾರು ಕಾರ್ಯಕ್ರಮವನ್ನು ಪ್ರಕಟಿಸಿ ಸುಮ್ಮನಿರುತ್ತದೆ, ಕೇವಲ ಬೆರಳೆಣಿಕೆಯಷ್ಟು ಕಡೆಯಲ್ಲಿ ಅಂತಹ ಯೋಜನೆ ಅನುಷ್ಠಾನಕ್ಕೆ ಬರುತ್ತದೆ ವಿನಃ ಪೂರ್ಣ ಪ್ರಮಾಣದ ಅನುಷ್ಠಾನ ಆಗುವುದಿಲ್ಲ.

ಒಮ್ಮೆ ಪಾಲಕರಾದವರು ತಮ್ಮ ಬಾಲ್ಯದ ಕಡೆಗೆ ಕಣ್ಣಾಯಿಸಬೇಕು. ತಮ್ಮ ಬಾಲ್ಯದ ಸುಮಧುರ ಕ್ಷಣಗಳು ತುಂಬಿ ತುಳುಕುತ್ತಿರುವುದು ಇದೇ ಸರ್ಕಾರಿ ಶಾಲೆಯಲ್ಲಿ ಎಂಬ ಸತ್ಯ ಅರಿವಾದರೆ ಆಶ್ಚರ್ಯವಿಲ್ಲ. ಆ ಬಾಲ್ಯದ ತುಂಟತನ, ಮೋಜು-ಮಸ್ತಿ, ಆ ಪಂಚೆ-ಧೋತಿಗಳನ್ನು ಧರಿಸಿ ಪಾಠ ಮಾಡುವ ನಮ್ಮ ಶಿಕ್ಷಕರು, ಆ ಮಳೆಗಾಲದ ಸವಿನೆನಪು, ವನಮಹೋತ್ಸವ, ಪ್ರವಾಸ, ಗೆಳೆತನ ವ್ಹಾ ವ್ಹಾ ಒಂದೇ ಎರಡೇ. . . .

ಇವೆಲ್ಲವು ನಮಗೆ ನೀಡಿರುವುದು ನಮ್ಮ ಸರ್ಕಾರಿ ಶಾಲೆಗಳು.. ಇವು ನಮ್ಮ ಅಭಿವೃದ್ಧಿಯ ಜೊತೆ-ಜೊತೆಗೆ ಸಮಾಜದ ಜೊತೆಯಲ್ಲೂ ಸುಮೃದ್ಧವಾದ ಸಂಬಂಧವನ್ನು ಹೊಂದಿದ್ದವು. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ತಾವು ಕೇವಲ ಇಂಜಿನಿಯರ್, ಡಾಕ್ಟರ್ ಮಾತ್ರ ಆಗಬೆಕೆಂಬ ಕನಸನ್ನು ಕಟ್ಟಿಕೊಂಡವರಲ್ಲ, ಬದಲಾಗಿ ಅವರಿಗೆ ಇಷ್ಟವಿರುವ ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ನಮ್ಮ ಮಕ್ಕಳು ಅಷ್ಟು ಪುಣ್ಯವಂತರಲ್ಲ ಎಕೆಂದರೆ ಮಗುವಿಗೆ ನಾಮಕರಣ ಶಾಸ್ರ್ತ ಮಾಡುವ ಪೂರ್ವದಲ್ಲಿ , ಅಯ್ಯೋ ಕ್ಷಮಿಸಿ ಮಗು ಹುಟ್ಟುವ ಪೂರ್ವದಲ್ಲಿ ಅದು ಗರ್ಭದಲ್ಲಿರುವಾಗಲೇ ಆ ಮಗು ಇಂಜಿನಿಯರ್ ಆಗಬೇಕು, ಡಾಕ್ಟರ್ ಆಗಬೇಕೆಂಬ ಒತ್ತಡವನ್ನು ಆ ಮುಗ್ಧ ಮನಸ್ಸಿನ ಮೇಲೆ ಹೇರುತ್ತಾರೆ. ಕೂಸು ಹುಟ್ಟುವ ಮೋದಲೇ ಕುಲಾವಿ ಹೋಲಿಸಿದಂತಾಗುತ್ತದೆ ಇದರ ಪರಿಣಾಮ ತಮ್ಮ ಮಗು ಆಂಗ್ಲಮಾಧ್ಯಮ ಶಾಲೆಯಲ್ಲಿ ಕಲಿಯಬೇಕು ಎಂಬ ಭಾವನೆ ಅನೇಕ ಪಾಲಕರದ್ದು. ಕನ್ನಡಕ್ಕೆ ಅತೀ ಹೆಚ್ಚು 8 ಸಲ ಜ್ಞಾನಪೀಠ ಪ್ರಶಸ್ತಿ ಬಂದಿದೆ ಒಮ್ಮೆ ಯೋಚಿಸಿ ಅವರೆಲ್ಲರು ನಮ್ಮ ಹಾಗೇ ಯೋಚಿಸುತ್ತಿದ್ದರೆ ಒಂದು ಜ್ಞಾನಪೀಠ ನಮ್ಮ ಪಾಲಿಗೆ ಲಭಿಸುತ್ತಿರಲ್ಲವೇನೋ..!

ನಾವು ನಮ್ಮ ಮನೋಧೋರಣೆಯನ್ನು ಬದಲಾಯಿಸಿಕೊಳ್ಳಬೇಕು. ನಾವು ಸರ್ಕಾರಿ ಶಾಲೆಯನ್ನು ನೋಡುವ ದೃಷ್ಠಿಕೋನ ಬದಲಾಯಿಸಿಕೊಳ್ಳಬೇಕು. ಕನಿಷ್ಠ ಒಂದರಿಂದ- ಐದನೇ ತರಗತಿಯವರೆಗೆ ಮಗು ಪ್ರೀತಿಯಿಂದ ತನ್ನ ಮಾತೃಭಾಷೆಯಲ್ಲೇ ಕಲಿಯಲು ಅವಕಾಶ ಕಲ್ಪಿಸಬೇಕು. ಆಗ ಸರ್ಕಾರವು ಸಹ ವಿಶೇಷ ಆಸಕ್ತಿಯನ್ನು ತೋರಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ನೆಲ, ಜಲ, ಭಾಷೆ, ಸಂಸ್ಕ್ರತಿ, ಆಚರಣೆ ಇವೆಲ್ಲವೂ ಮುಂದಿನ ಪೀಳಿಗೆಯ ಜನರಿಗೆ ತಲುಪಬೇಕು, ವರ್ಗಾಯಿಸಬೇಕು ಎಂದಾದರೆ ನಾವು ನೈಜ  ಪರಿಸ್ಥಿತಿಯನ್ನು ಅರಿತು ಸತ್ಯವನ್ನು ಸ್ವೀಕಾರ ಮಾಡಬೇಕು.
ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂ ಸಹ ಸರ್ಕಾರಿ ಶಾಲೆಗೆ ಪೈಪೋಟಿಯನ್ನು ನೀಡಲು ಸಾಧ್ಯವಿಲ್ಲ. ಮಕ್ಕಳು ಫಾರ್ಮಿನಲ್ಲಿರುವ ಕೋಳಿಗಳ ಹಾಗೇ ಬೆಳೆಯುತ್ತಿದ್ದಾರೆ ವಿನಃ 100 % ವಿಕಾಸ ಹೊಂದುತ್ತಿಲ್ಲ. ಇದಕ್ಕೆ ನಾವೆಲ್ಲ ಹೊಣೆಗಾರರು. ಇಂದು ರಾಜ್ಯ, ದೇಶ, ವಿದೇಶದಲ್ಲಿ ಹೆಚ್ಚು ಸಫಲತೆಯನ್ನು ಪಡೆದಿರುವ ಅನೇಕರ ಪೈಕಿ  70 % ಮಂದಿ ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮುಗಿಸಿರುತ್ತಾರೆ.

 

Govt school

ಸುಮ್ಮನೆ ನಾವು ವ್ಯವಸ್ಥೆಯನ್ನು ಜರಿಯುವ ಬದಲು ನಾವು ವ್ಯವಸ್ಥೆಗಾಗಿ ಏನು ಮಾಡಬೇಕು? ಏನು ಮಾಡುತ್ತಿದ್ದೇವೆ? ಏನು ಮಾಡಿದ್ದೇವೆ? ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರು ವಿಮರ್ಶಿಸಬೇಕು. ನಮ್ಮಿಂದ ಆದರ್ಶ ರಾಜ್ಯ ಕಲ್ಪನೆಯನ್ನು ಸಹಕಾರಗೊಳಿಸುಲು ಸಾಧ್ಯ ಎಂಬ ಸತ್ಯವನ್ನು ಅರಿಬೇಕು. ಆಂಗ್ಲ ಮಾಧ್ಯಮದಲ್ಲಿ ಕಲಿತು ಉನ್ನತ ಹುದ್ದೆಯನ್ನು ಪಡೆದು, ವಿದೇಶಗಳಿಗೆ ಹೋಗಿ ಸುಖ ಜೀವನವನ್ನು ಪಡೆಯಬೇಕು ಎಂಬ ಕನಸನ್ನು, ಸ್ವಾರ್ಥವನ್ನು ಬಿಟ್ಟು ನಮ್ಮ, ನೆಲ, ಜಲ, ಭಾಷೆ ಮುಂತಾದವುಗಳ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಬೇಕು.

ಕೊನೆಯದಾಗಿ ‘ಶಿಕ್ಷಣವು ಪ್ರತಿಯೊಬ್ಬರ ಬದುಕನ್ನು ರೂಪಿಸುತ್ತದೆ’ ನಿಜ. ಅದರೊಂದಿಗೆ ನಾವು ಶಿಕ್ಷಣವನ್ನು, ಸರ್ಕಾರಿ ಶಾಲೆಗಳನ್ನು, ಅವುಗಳ ಪ್ರಗತಿಗೆ ಶ್ರಮಿಸಬೇಕು. ಇದು ನಮ್ಮೆಲ್ಲರ ಜವಬ್ದಾರಿ. ನಮ್ಮಿಂದ ಕ್ರಾಂತಿ ಮೊಳಗಲಿ. ಮನದಲ್ಲಿರುವ ‘ಸರ್ಕಾರಿ ಶಾಲೆ’ ಎಂಬ ಅಸಡ್ಡೆ‌ ಅನ್ನು, ಅದನ್ನು ಕೇಳಿ ಮೂಗು ಮುರಿಯುವ ಕಾಯಕವನ್ನು ಬಿಡೋಣ ಎಂಬ ಸಂಕಲ್ಪ ಮಾಡೋಣ..

ಜೀವನ ನೀಡುವ ಪರೀಕ್ಷೆಗೆ ಕೇವಲ ಅಂಕಗಳು ಮುಖ್ಯವಲ್ಲ, ಸಾಮರ್ಥ್ಯ ಮುಖ್ಯ ಎಂಬ ಸತ್ಯವನ್ನು ಅರಿಯಬೇಕು

!! ಜೈ ಕರ್ನಾಟಕ ಮಾತೆ !!

 

 – ಸುರೇಂದ್ರ ಪೈ, ಸಿದ್ಧಾಪುರ

 

 

1 Response

  1. Hema says:

    ಉತ್ತಮ ಚಿಂತನೆ..

Follow

Get every new post on this blog delivered to your Inbox.

Join other followers: