ಒಂದು ಮಿಡತೆಯ ಸುತ್ತ …
ಈ ಜೀವಿಯ ಬಗ್ಗೆ ಗೊತ್ತೇ ..?
ಇದು ಮಳೆಗಾಲದಲ್ಲಿ ಹೆಚ್ಚಾಗಿ ಕಾಣ ಸಿಗುವುದು . ನಮ್ಮಲ್ಲಿ ಈ ಜೀವಿಗೆ ಹಲವಾರು ಹೆಸರುಗಳಿವೆ .ಮೊಂಟೆ, ಪಜಿ ಮೊಂಟೆ, ಹುಲ್ಲು ಕುದುರೆ, ಶಿಖಾರಿ ಹುಳ (ಮಲೆನಾಡು),ಪಚ್ಚ ಪಯ್ಯು, ಪಚ್ಚ ಕುತಿರ,ಪುಲ್ಚಾಡಿ(ಮಲಯಾಳಂ) …. ಇಂಗ್ಲೀಷ್ ನಲ್ಲಿ Green Grasshopper . google ನಲ್ಲಿ ಹುಡುಕಿದಾಗ ಇನ್ನೊಂದು ಪದವೂ ಸಿಕ್ಕಿತು .. ‘cricket’. ..ಅದೇನೇ ಇರಲಿ .. ಸದ್ಯ ನಾನು ಇದನ್ನು ಎಲ್ಲರಿಗೂ ಓದಲು ಅನುಕೂಲವಾಗುವಂತೆ ಮಿಡತೆ ಎಂದು ಕರೆಯುತ್ತೇನೆ .ಇದರ ಬಗ್ಗೆ ಅನೇಕ ಕಥೆಗಳಿವೆ . ಬರಿಯ ಕಥೆಳೋ ನಂಬಿಕೆಗಳೋ ಅಥವಾ ಮೂಢ ನಂಬಿಕೆಗಳೂ ಎಂದು ತೀರ್ಮಾನಿಸುವುದು ನಿಮಗೇ ಬಿಟ್ಟದ್ದು .. ಆದರೆ ಇದು ಈ ಲೇಖನದ ಚರ್ಚಾ ವಿಷಯವಲ್ಲ ಎಂದು ಮೊದಲೇ ಹೇಳುತ್ತೇನೆ.
ಇದು ಹೆಚ್ಚಾಗಿ ರಾತ್ರಿ ಹೊತ್ತಿನ ಅತಿಥಿ . ಚಿಕ್ಕಂದಿನಲ್ಲಿರುವಾಗ ಇದರ ಬಗ್ಗೆ ಕೇಳಿಸಿಕೊಂಡ ಕಥೆ/ನಂಬಿಕೆ ಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಒಂದುವೇಳೆ ಶುಕ್ರವಾರ ರಾತ್ರಿ ಇದು ಮನೆಗೆ ಬಂದರೆ ಹರಕೆ ಸಂದಾಯವಾಗಲು ಬಾಕಿಯಿದೆ.ಇನ್ನು ಕೆಲವರ ಪ್ರಕಾರ ಸತ್ತುಹೋದವರ ಆತ್ಮಗಳು ತನ್ನವರನ್ನು ಕಾಣಲು ಈ ಜೀವಿಯ ರೂಪ ಪಡೆದು ಬರುವುದು ..ಮಲೆನಾಡಿನವರಿಗೋ ಈ ಮಿಡತೆ ಮನೆಗೆ ಬಂದರೆ ಅಂದು ಶಿಖಾರಿ ಗ್ಯಾರಂಟಿ ..
ಅದೇನೇ ಇರಲಿ,ಒಮ್ಮೆಲೇ ಮನೆಯೊಳಗೆ ಹಾರಿಬಂದಾಗ ಭಯಪಡುವುದು ಸ್ವಾಭಾವಿಕ . ನಂತರ ಎಲ್ಲಾದರೂ ಅದು ವಿಶ್ರಾಂತಿ ಪಡೆದುಕೊಳ್ಳುತ್ತಿತ್ತು .. ಚಿಕ್ಕಂದಿನಲ್ಲಿ ನಾವು ಅದನ್ನು ತುಂಬಾ ಕುತೂಹಲದಿಂದ ನೋಡುತ್ತಿದ್ದೆವು .ಇದನ್ನು ಕೊಲ್ಲಲು ಮಾತ್ರ ನನ್ನ ಅಮ್ಮ ಬಿಡುತ್ತಿರಲಿಲ್ಲ . ಕಿಟುಕಿ ತೆರೆದು ಸ್ವಚ್ಚಂದವಾಗಿ ಹಾರಲು ಬಿಡುತ್ತಿದ್ದರು . ಅಂದು ಆ ಬಾಲ್ಯದಲ್ಲಿ ಈ ಮಿಡತೆ ಮತ್ತು ಇರುವೆ ಗಳ ನಡುವಿನ ಗೆಳೆತನದ ಬಗ್ಗೆ ನನ್ನಮ್ಮ ಒಂದು ಸುಂದರವಾದ ಕಥೆ ಹೇಳಿದ್ದರು ಕೇಳಿ …
ಮಿಡತೆ ಮತ್ತು ದೊಡ್ಡ ಇರುವೆ (ಪಿಪೀಲ) ಗೆಳೆಯರು.. ಅದೊಂದು ಬೇಸಿಗೆ ಕಾಲ
ಇರುವೆಯೋ .. ದಿನವೂ ಧಾನ್ಯಗಳನ್ನು ಸಂಗ್ರಹಿಸಿ ತನ್ನ ಮನೆ ಯಲ್ಲಿ ದಾಸ್ತಾನು ಮಾಡುತ್ತಿತ್ತು. ಆದರೆ ಮಿಡತೆಗೋ … ನಾಳೆಯ ಬಗ್ಗೆ ಚಿಂತೆಯೇ ಇರಲಿಲ್ಲ …ದಿನವೂ ಹುಲ್ಲಿನಿಂದ ಹುಲ್ಲಿಗೆ ಹಾರುತ್ತಾ .. ಕೇಕೆ ಹಾಕುತ್ತಾ ಕಾಲ ಕಳೆಯುತ್ತಿತ್ತು.
ಇರುವೆಯು ಪಡುವ ಶ್ರಮವನ್ನು ನೋಡಿ ಮಿಡತೆ ಹೀಯಾಳಿಸಿತು ..” ಅಲ್ಲ ಇರುವೆ .. ನೀನೇಕೆ ಇಷ್ಟೊಂದು ಕಷ್ಟ ಪಡುವುದು .. ನಾವು ಜಾಲಿಯಾಗಿರಬೇಕು, ನನ್ನನ್ನು ನೋಡು . ಎಷ್ಟು ಖುಷೀಲಿದ್ದೀನಿ, ನಾನು ನಿನ್ನಂತೆ ಬೆವರು ಸುರಿಸಿ ಕಷ್ಟಪಡುವುದು ಎಂದಾದರೂ ನೋಡಿದ್ದೀಯಾ .. ?”
ಈ ಮಾತಿಗೆ ಇರುವೆ .. ” ನೋಡು, ಇವಾಗ ಬೇಸಿಗೆ ಕಾಲ, ತೊಂದರೆಯಿಲ್ಲ ದುಡಿಯಬಹುದು. ಮುಂದೆ ಬರುವುದು ಮಳೆ -ಚಳಿಗಾಲ . ಒಂದುವೇಳೆ ಮಳೆ ಜೋರಾಗಿ ಬಂದರೆ ಹೊರಗೆ ಇಳಿಯಲೂ ಸಾಧ್ಯವಿಲ್ಲ.ನಾಳೆಯ ಬಗ್ಗೆ ನಾವು ಇಂದೇ ಚಿಂತಿಸಬೇಕು, ಮಳೆಬಂದರೆ ನಮಗೆ ಆಹಾರ ಎಲ್ಲಿ ಸಿಗುತ್ತೆ? ಈವಾಗಲೇ ದಾಸ್ತಾನು ಮಾಡಿಟ್ಟರೆ ನಾಳೆ ಚಿಂತಿಸಬೇಕಾಗಿಲ್ಲ.. “
ಆ ಮಾತಿಗೆ ಮಿಡತೆ ಜೋರಾಗಿ ನಕ್ಕಿತು .ಹುಟ್ಟಿಸಿದ ದೇವ ಹುಲ್ಲು ಮೇಯಿಸಿಯಾನೇ ..? ದೇವರಿದ್ದಾನೆ .. ದಾರಿ ತೋರಿಸುತ್ತಾನೆ ..
ಇರುವೆ .. ಮುಂದುವರಿಸಿತು .. ದೇವರಿದ್ದಾನೆ ನಿಜ .. ಆದರೆ ಅದೊಂದು ಕಾರಣ ಹೇಳಿ ನಾವು ಸೋಮಾರಿಗಳಾಗಬಾರದು. ತಾನು ಕಷ್ಟಪಟ್ಟರೆ ದೇವರು ಜೊತೆಗಿರುತ್ತಾನೆ. ಮಿಡತೆ ಇದ್ಯಾವುದನ್ನೂ ಕೇಳಿಸಿಕೊಳ್ಳದೆ ತನ್ನಷ್ಟಕ್ಕೆ ಆಟವಾಡುತ್ತಾ ಕಾಲ ಕಳೆಯುತಿತ್ತು ..
ದಿನಗಳುರುಳಿದುವು ..ಮಳೆಗಾಲದ ಆಗಮನ .. ಜಡಿ ಮಳೆ .. ಚಳಿ .. ಹೊರಗೆಲ್ಲೂ ಹೋಗಲಾಗದಂತಹ ಪರಿಸ್ಥಿತಿ ..ಇರುವೆ ತನ್ನ ಮನೆಯಲ್ಲಿ ಕೂಡಿಟ್ಟ ಧಾನ್ಯಗಳನ್ನು ತಿನ್ನುತ್ತಾ ಮಳೆಯನ್ನು ನೋಡಿ ಖುಷಿ ಪಡುತ್ತಿತ್ತು ..ಇಲ್ಲಿ ಮಿಡತೆ ಒಬ್ಬಂಟಿ .. ತಿನ್ನಲು ಏನೂ ಇಲ್ಲ .. ಕೊನೆಗೆ ಗತಿಯಿಲ್ಲದಾಗ ಇರುವೆಯ ಮನೆ ಬಾಗಿಲು ತಟ್ಟಿತು ..
ಇರುವೇ ಇರುವೇ … ಹಸಿವಿನಿಂದ ಸಾಯುವವನಿದ್ದೇನೆ .. ಏನಾದರೂ ತಿನ್ನಲು ಕೊಡು ..ಇರುವೆ ತಕ್ಷಣ ಉತ್ತರ ಕೊಟ್ಟಿತು .. ಹೋಗು ನಿನ್ನ ದೇವರಲ್ಲಿ ಕೇಳು .. ” ಹುಟ್ಟಿಸಿದ ದೇವ ಹುಲ್ಲು ಮೇಯಿಸಿಯಾನೇ .. ?”
ಮಿಡತೆಗೆ ತನ್ನ ತಪ್ಪಿನ ಅರಿವಾಯಿತು …ಮರುಮಾತನಾಡದೆ ತನ್ನ ಮನೆಯತ್ತ ಹಿಂತಿರುಗಿತು ..
ಇದೊಂದು ನೀತಿ ಕಥೆಯೂ ಹೌದು .. ದೇವನಿದ್ದಾನೆ ಎಂದು ಕೈಕಟ್ಟಿ ಕೂತರೆ ದೇವ ಬಂದು ನಮ್ಮ ಹೊಟ್ಟೆಗೆ ಆಹಾರ ಕೊಡುವುದಿಲ್ಲ .. ನಮ್ಮ ಪರಿಶ್ರಮವೂ ಮುಖ್ಯ.ಬಾಲ್ಯದಲ್ಲಿ ಕೇಳಿಸಿಕೊಂಡ ಆ ಕಥೆ ಇನ್ನೂ ಮನದಲ್ಲಿದೆ .ಒಂದು ಒಳ್ಳೆಯ ನೀತಿಪಾಠ . ಆದ್ದರಿಂದಲೇ ನಿಮ್ಮೊಂದಿಗೆ ಹಚ್ಚಿಕೊಳ್ಳಲು ಮನಸ್ಸಾಯಿತು
– ಕೆ.ಎ. ಎಂ. ಅನ್ಸಾರಿ ಮೂಡಂಬೈಲ್
ಒಳ್ಳೆಯ ನಿರೂಪಣೆ…ಖುಶಿಯಾಯಿತು…