ಅದೊಂದು ದಿನ, ಬೆಂಗಳೂರಿನಿಂದ ರಾತ್ರಿ1000 ಗಂಟೆಗೆ ಹೊರಡುವ ಬಸ್ಸನ್ನೇರಿ ಕುಳಿತಿದ್ದೆವು. ನಮ್ಮ ಮುಂದಿನ ಸೀಟಿನಲ್ಲಿ ವಿದ್ಯಾವಂತ/ಉದ್ಯೋಗಸ್ಥರಂತೆ ಕಾಣುತ್ತಿದ್ದ ಎಳೆಯ ವಯಸ್ಸಿನ ದಂಪತಿ ಕುಳಿತಿದ್ದರು. ಬಸ್ಸು ಚಲಿಸಲಾರಂಭಿಸಿದಾಗ, ಅವರು ಊಟ ಮಾಡಲು ಸಿದ್ಧರಾದರು. ರಸ್ತೆಯಲ್ಲಿ ಹಲವಾರು ವಾಹನಗಳು ಓಡಾಡುತ್ತಿದ್ದರೂ, ಗಮನಿಸದವರಂತೆ ಕಿಟಿಕಿ ತೆರೆದು ಕೈ ತೊಳೆದರು. ಆಮೇಲೆ ಅಡಿಕೆಹಾಳೆಯ ತಟ್ಟೆಗಳನ್ನೂ ತೊಳೆದು ನೀರನ್ನು ಹೊರಗೆಸೆದರು. ತಾವು ಪ್ಯಾಕ್ ಮಾಡಿ ತಂದಿದ್ದ ಊಟವನ್ನು ತಟ್ಟೆಗೆ ಸುರಿದು ಉಂಡರು. ಪುನ: ಕಿಟಿಕಿಯ ಮೂಲಕ ಕೈತೊಳೆದರು. ಒಂದಾದ ಮೇಲೆ ಒಂದರಂತೆ ತಟ್ಟೆಗಳನ್ನೂ ಹೊರಗೆಸೆದರು. ಕಿಟಿಕಿಯಿಂದ ಹೊರಗೆ ನೋಡುತ್ತಿದ್ದ ನನಗೆ, ರಸ್ತೆಯಲ್ಲಿ ಬರುತ್ತಿದ್ದ ಎಳೆಯ ವಯಸ್ಸಿನ ಬೈಕ್ ಸವಾರರೊಬ್ಬರ ತೀರಾ ಪಕ್ಕಕ್ಕೆ ಆ ತಟ್ಟೆಗಳು ಬಿದ್ದದ್ದು ಕಾಣಿಸಿತು. ಆತನಿಗೆ ಸಹಜವಾಗಿಯೇ ಕಿರಿಕಿರಿಯಾಗಿ ಬಸ್ಸಿನ ಬದಿಗೆ ಕೈಯಿಂದ ಹೊಡೆದು, ಬಸ್ಸನ್ನು ನಿಲ್ಲಿಸುವ ಪ್ರಯತ್ನ ಮಾಡಿದುದೂ ಕಂಡಿತು.
ಕೊನೆಯದಾಗಿ ಊಟ ಮಾಡಿ ಮಿಕ್ಕುಳಿದ ಕಸವನ್ನೂ ಪ್ಲಾಸ್ಟಿಕ್ ಕವರ್ ಒಳಗೆ ಹಾಕಿ ಅದನ್ನೂ ಕಿಟಿಕಿಯಿಂದ ಎಸೆದರು. ಅದು ಈಗಾಗಲೇ ಅಸಮಾಧಾನಗೊಂಡಿದ್ದ ಬೈಕ್ ಸವಾರನ ಅತಿ ಪಕ್ಕಕ್ಕೆ ಬಿತ್ತು. ಇನ್ನಷ್ಟು ಕೋಪಗೊಂಡ ಆತ ವೇಗವನ್ನು ಹೆಚ್ಚಿಸಿ ಮುಂದೆ ಹೋಗಿ, ಬಸ್ ನ ನಿರ್ವಾಹಕನ ಬಳಿ ವಿಷಯ ತಿಳಿಸಿ, ಬಸ್ಸಿನೊಳಗೆ ಬಂದರು. ಈ ನಡುವೆ , ಮುಂದಿನ ಸೀಟಿನವರು ಕಿಟಿಕಿಯ ಪರದೆಯನ್ನು ಸರಿಸಿ ‘ನಮಗೇನೂ ಗೊತ್ತಿಲ್ಲ,ನಾವೇನು ಮಾಡಿಲ್ಲ’ ಎಂಬಂತೆ ಕುಳಿತಿದ್ದರು. ಬಸ್ ನ ಒಳಗೆ ಬಂದ ಬೈಕ್ ಸವಾರ ನಮ್ಮ ಕಡೆಗೆ ನೋಡುತ್ತಾ ‘ಯಾರು ಕಸ ಹೊರಗಡೆಗೆ ಎಸೆದಿದ್ದು…ವೆಹಿಕಲ್ಸ್ ಓಡಾಡುತ್ತಿರುವಾಗ ಕಸ ಹಾಕಿದರೆ ತೊಂದರೆ ಆಗಲ್ವಾ? ‘ ಅಂದರು . ಇವರುಗಳು ತುಟಿ ಬಿಚ್ಚಲಿಲ್ಲ. ನನ್ನ ಅಕ್ಕಪಕ್ಕದ ಸೀಟಿನ ಒಂದಿಬ್ಬರು ನಾನೇ ಏನೋ ಅಚಾತುರ್ಯ ಮಾಡಿರಬಹುದೆಂಬ ಗುಮಾನಿಯಿಂದಲೋ, ಕುತೂಹಲದಿಂದಲೋ ನನ್ನ ಕಡೆಗೇ ನೋಡಿದಂತೆ ಭಾಸವಾಗಿ ನನಗೆ ಮುಜುಗರವಾಗತೊಡಗಿತು.
.
ಈಗ ನಾನು ನಿಜ ಹೇಳಲೇ ಎಂದು ಚಿಂತಿಸುತ್ತಿದ್ದಾಗ, ಪುನ: ಮಾತನಾಡಿದ ಆತ ನಮ್ಮ ಮುಂದಿನ ಸೀಟಿನವರನ್ನು ಉದ್ದೇಶಿಸಿ ‘ ಐ ಹಾಡ್ ಸೀನ್ ಯು ಮೇಡಂ…ಇದೇ ಸೀಟ್ ನಿಂದ ಎಸೆದದ್ದು…ಆಗ ಕರ್ಟನ್ ಇರ್ಲಿಲ್ಲ…ಈಗ ಹಾಕಿದ್ದೀರ, ಯಾಕೆ? ….ನನಗೆ ಬೇಕಾದಷ್ಟು ಕೆಲ್ಸ ಇದೆ..ಅಟ್ ಲೀಸ್ಟ್ ನೀವು ಒಂದು ಸಾರಿ ಅಂದಿದ್ರೆ ನಾನು ಬಸ್ ಒಳಗೆ ಬರ್ತಿರ್ಲಿಲ್ಲ….ಇನ್ನು ಮುಂದೆ ಬಸ್ ಮೂವಿಂಗ್ ನಲ್ಲಿರುವಾಗ ಕಸ ಹಾಕ್ಬೇಡಿ’ ಅಂತ ಸಂಭಾವಿತವಾದೆ, ದೃಢ ದನಿಯಲ್ಲಿ ಹೇಳಿದರು. ಅದುವರೆಗೂ ಸುಮ್ಮನಿದ್ದ ಆಕೆಯ ಪತಿ ‘ಸಾರಿ.. ಗೊತ್ತಾಗ್ಲಿಲ್ಲ..’ ಅಂದರು. ಇಷ್ಟಾದ ಮೇಲೆಯೂ ಆಕೆ ಮಾತ್ರ ಸಾರಿ ಅನ್ನಲಿಲ್ಲ. ಬಸ್ ನ ನಿರ್ವಾಹಕರು ಕೂಡಾ ‘ಕಸ ಹಾಕೋಕೆ ಅಂತಾನೆ ಇಲ್ಲಿ ಸೀಟ್ ನಲ್ಲಿ ಪೌಚ್ ಇದೆಯಲ್ಲಾ.. ಹೊರಗೆ ಎಸಿಬೇಡಿ’ ಅಂತ ದನಿಗೂಡಿಸಿದಾಗ ಅಲ್ಲಿಗೆ ಆ ವಿಷಯ ಮುಕ್ತಾಯವಾಯಿತು.
ರಾತ್ರಿ ಬಸ್ ನ ಪ್ರಯಾಣ ಎಂದು ಗೊತ್ತಿದ್ದ ಮೇಲೆ, ಮನೆಯಲ್ಲೋ ಹೋಟೆಲ್ ನಲ್ಲೋ ಊಟ ಮುಗಿಸಿಯೇ ಹೊರಡುವುದು ಉತ್ತಮ ಅಭ್ಯಾಸ. ಕಾರಣಾಂತರದಿಂದ ಸಾಧ್ಯವಾಗದಿದ್ದರೆ, ಇತರರಿಗೆ ಕಿರಿಕಿರಿಯಾಗದಂತೆ ಊಟ ಮುಗಿಸುವುದು ಸಭ್ಯತೆ. ಬಸ್ ಪ್ರಯಾಣದ ಸಮಯದಲ್ಲಿ ಕೈತೊಳೆಯಲು ಅನಾನುಕೂಲವಾಗುವುದರಿಂದ ಲಭ್ಯವಿದ್ದರೆ ಸ್ಪೂನ್ ನಲ್ಲಿ ಊಟಮಾಡಿ, ಟಿಶ್ಯೂ ಪೇಪರ್ ಅಥವಾ ಕರವಸ್ತ್ರದಲ್ಲಿ ಕೈ ಒರೆಸಿ, ಕಸವನ್ನು ಕವರ್ ನಲ್ಲಿ ಹಾಕಿ ಮುಂದಿನ ನಿಲ್ದಾಣ ಬಂದಾಗ ಕಸದ ಡಬ್ಬಿಗೆ ಹಾಕಿ, ಕೈತೊಳೆಯುವುದು ನಾಗರಿಕತೆ. ಅಕಸ್ಮಾತ್ ಆಗಿ ನಮ್ಮಿಂದ ಏನಾದರೂ ತಪ್ಪಾದರೆ, ಅದನ್ನು ಒಪ್ಪಿಕೊಂಡು ಕ್ಷಮಾಪಣೆ ಕೇಳುವುದು ಸಂಸ್ಕೃತಿ. ಅದರ ಬದಲು ತಮ್ಮ ತಪ್ಪನ್ನು ಮರೆಮಾಚುವಂತೆ ನಿರ್ಲಕ್ಶ್ಯ ವಹಿಸುವವರಿಗೆ ಏನನ್ನಬೇಕು ? ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?
ನನಗಂತೂ ಆ ಬೈಕ್ ಸವಾರ ಯುವಕನ ಗೌರವಯುತವಾದ ನಡವಳಿಕೆ ಮತ್ತು ಅರ್ಥಪೂರ್ಣವಾದ ಪ್ರತಿಭಟನೆ ಇಷ್ಟವಾಯಿತು.
– ಹೇಮಮಾಲಾ.ಬಿ