ಅಪರ್ಣಾ…ಅಪ್ರತಿಮ ಪ್ರತಿಭೆ
ಅದೊಂದು ಕಾಲ…ಸರಿ ಸುಮಾರು ಹತ್ತು ಹನ್ನೆರಡು ವರುಷಗಳ ಹಿಂದೆ ಅನ್ನಬಹುದು.ನಾನು ಊರಿನ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಿದ್ದೆ.ನಮ್ಮ ಮನೆ ಸಂಪೂರ್ಣ ಹಳ್ಳಿ ವಾತಾವರಣದಲ್ಲಿತ್ತು.ಅಪ್ಪ ಮನೆಗೆ ಟಿವಿ ತಂದ ಸಂದರ್ಭದಲ್ಲಿ ನಾವು ಕನ್ನಡ ಬರುವ ತನಕ ಟಿ ವಿ ಮುಂದೆ ಹಾಜರ್.ದೂರದರ್ಶನದ ದೂರ ಅರಿವಾಗಿ ವಾರ್ತೆಯನ್ನು ಮಾತ್ರ ತಪ್ಪದೇ ನೋಡುವ ಪರಿಪಾಟಿಕೆ ಇತ್ತು.ಅಲ್ಲದೇ ಸುತ್ತ-ಮುತ್ತ ಅನ್ನೋ ಕಾರ್ಯಕ್ರಮ ಆ ದಿನಗಳಲ್ಲಿ ಬಹಳಷ್ಟು ಜನಪ್ರಿಯ.ಅದನ್ನು ನಡೆಸಿಕೊಡುತ್ತಿದ್ದವರು,ನಾಡಿನಲ್ಲಿ ಕನ್ನಡವನ್ನು ತಮ್ಮದೇ ಕಂಠಸಿರಿಯಿಂದ,ಲೀಲಾಜಾಲವಾಗಿ ಮಾತನಾಡುತ್ತಿದ್ದ ಹೆಮ್ಮೆಯ ನಿರೂಪಕಿ ಅಪರ್ಣಾರವರು.
ಆಗೆಲ್ಲಾ ಅಮ್ಮನ ಹತ್ರ ಹೇಳ್ತಿದ್ದೆ.ಅಮ್ಮಾ,ನಾನು ಒಂದಲ್ಲಾ ಒಂದು ದಿನ ಈ ತರಾ ಮಾತಾಡಬೇಕು.ಟಿ.ವಿಲಿ ಬರಬೇಕು ಅಂತಾ.ಅಮ್ಮ ಅಂತಿದ್ರು ಅದಕ್ಕೆಲ್ಲಾ ತುಂಬಾ ಓದಬೇಕು..ನೀನೂ ಕಲಿ..ಯಾವುದನ್ನಾದ್ರೂ ಮಾಡು.ಒಳ್ಳೇ ತರದ ಹಾದಿಯಲ್ಲಿ ಹೋಗು.ಎಲ್ಲರಿಗೂ ಒಳ್ಳೇ ಹೆಸರು,ಮನೆತನ,ಗೌರವ ಅಂತ ಅವರ ಕಂತೆ,ಪುರಾಣ ಶುರುವಾಗ್ತಿತ್ತು.ಆದ್ರೂ ಕೂಡಾ ಅಪರ್ಣಾ ಅವರ ಕಾರ್ಯಕ್ರಮ ನೋಡೋದ್ರಲ್ಲಿ ತುಂಬಾ ಖುಷಿ.ಕಣ್ಣಿಗೆ ಎಣ್ಣೆ ಬಿಟ್ಟು ನೋಡುತ್ತಿದ್ದೆ.ಅವರ ಭಾಷೆ,ಬಳಸು ರೀತಿ,ಅದನ್ನು ಹೇಳುವ ಒಪ್ಪಿಸುವ ಶೈಲಿ ನನ್ನನ್ನು ಸಂಪೂರ್ಣವಾಗಿ ಆವರಿಸಿದ್ದಂತೂ ಸುಳ್ಳಲ್ಲ.
ನಾನೂ ಕೂಡಾ ಅವರಂತೆ ವೇದಿಕೆಗಳಲ್ಲಿ ಮಾತನಾಡಬೇಕು ಎಂದು ಅನೇಕ ಬಾರಿ ಅಂದುಕೊಳ್ಳುತ್ತಿದ್ದೆ.ಅಪರ್ಣಾರನ್ನು ಭೇಟಿ ಆಗಬೇಕು.ಅವರನ್ನ ನೋಡಬೇಕು ಅನ್ನೋದೆ ಆ ಕಾಲದಲ್ಲಿ ನನ್ನ ಹಲವು ಹಂಬಲಗಳಲ್ಲಿ ಒಂದಾಗಿತ್ತು.ಕಾಲೇಜು ಮೆಟ್ಟಿಲೇರಿದಾಗಲೂ ಸ್ಥಳೀಯ ಕಾರ್ಯಕ್ರಮಗಳ ನಿರ್ವಹಣೆ ಮಾಡುತ್ತಿದ್ದ ಸಮಯದಲ್ಲಿ ನನ್ನ ಆತ್ಮೀಯರೊಬ್ಬರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಕಾರ್ಯಕ್ರಮ ಆಹ್ವಾನ ಪತ್ರಿಕೆ ಕೊಟ್ಟು ಬನ್ನಿ ಎಂದು ಕರೆದಾಗ ಆ ಪತ್ರಿಕೆಯಲ್ಲಿ ಮೊದಲು ಕಂಡ ಹೆಸರು..ನಿರೂಪಣೆ-ಅಪರ್ಣಾ..
ಹಾಗೂ-ಹೀಗೂ ಅಮ್ಮನಿಗೆ ಒಪ್ಪಿಸಿ ಬೆಂಗಳೂರು ಬಸ್ ಹತ್ತಿದ್ದಾಯ್ತು..ಅಪರ್ಣಾ ಮೇಡಂ ಸಿಕ್ಕಿದ್ರೆ ಬರೀ ಕನ್ನಡ,ಅಚ್ಚ,ಸ್ವಚ್ಚ ಕನ್ನಡದಲ್ಲೇ ಮಾತನಾಡಿಸಬೇಕೆಂದು ಬಸ್‌ನಲ್ಲಿ ಕುಳಿತು ಎಲ್ಲವನ್ನು ಮನನ ಮಾಡಿಕೊಳ್ಳುತ್ತಿದ್ದೆ. ಸ್ನೇಹಿತರೊಟ್ಟಿಗೆ ಹೊರಟ ಸಮಯ.ಎಲ್ಲರಲ್ಲೂ ನನ್ನದು ಒಂದೇ ಮನವಿ.ನಂಗೆ ಅಪರ್ಣಾ ಮೇಡಂನ ಪರಿಚಯಿಸಿಕೊಡಿ ಪ್ಲೀಸ್ ಎಂದೆ.ಎಲ್ಲರೂ ಸಹಕರಿಸಿದರು.ಅವರನ್ನು ನೋಡಬೇಕೆಂದು ಹೊಸ ಬಟ್ಟೆಯನ್ನ ತಗೊಂಡು ಹೊಲಿಸಿ ರೆಡಿ ಮಾಡಿಕೊಂಡ ನನ್ನ ತರಾತುರಿಯನ್ನ ಅಮ್ಮ ಗಮನಿಸಿ,ಮನೆಗೆ ಬರ್ತೀಯಾ ಅಲ್ವಾ ಅಂದದ್ದು ಇಂದಿಗೂ ನೆನಪಿದೆ.
ಅಂತೂ ಕಾರ್ಯಕ್ರಮಕ್ಕೆ ಬಂದಾಯ್ತು.ಕಲಾಕ್ಷೇತ್ರದ ವೇದಿಕೆ ಹಿಂಬದಿಯಲ್ಲಿ ಜಗಜಗಿಸುವ ಸೀರೆಯುಟ್ಟು,ಕೈ ತುಂಬಾ ಬಳೆ,ಹಣೆಯಲ್ಲಿ ಕುಂಕುಮ ಭಾರತೀಯತೆಯ ಪ್ರತೀಕದಂತೆ ಕಂಗೊಳಿಸಿಯೇ ಬಿಟ್ಟರು ಅಪರ್ಣಾ ಮೇಡಂ.ಪರಿಚಯ ಮಾಡಿಕೊಂಡೆ.ಅದೇನು ಖುಷಿ ಅಂದ್ರೆ ಅಂದು ನಾನು ಆಕಾಶದಲ್ಲೇ ತೇಲುತ್ತಿದ್ದೇನೇನೋ ಅನ್ನಿಸಲಾರಂಭಿಸುತ್ತಿತ್ತು.ಅವರ ಮಾತು,ಸರಳತೆ,ಮುಗ್ಧತೆ ಆ ಸೌಂದರ್ಯ,ಮೊದಲ ನೋಟ ಎಲ್ಲವೂ ಕೂಡಾ ಹಚ್ಚ ಹಸಿರು.ಅವರೊಟ್ಟಿಗೆ ಸ್ವಲ್ಪ ಹೊತ್ತು ಮಾತಾಡಿ ಕಾರ್ಯಕ್ರಮವನ್ನು ಸಂಪೂರ್ಣ ಆಲಿಸಿ ತುಂಬಾ ಚಂದವಾಗಿ ನಡೆಸಿ ಕೊಟ್ಟಿರಿ ಎಂದು ಕೈ ಕುಲುಕುವಾಗ,ನನ್ನಲ್ಲಿ ಒಂದು ಶಕ್ತಿ ಚಲಿಸಲಾರಂಭಿಸಿತು.ಅವರ ದೂರವಾಣಿ ಸಂಖ್ಯೆ ಕೇಳಿ ಪಡೆದೆ.ಒಂದು ಫೋಟೋ ಕ್ಲಿಕ್ಕಿಸಿ ಕೊಂಡದ್ದೂ ಆಯ್ತು.ಶುಭವಾಗಲಿ ಎಂದು ಹರಸಿ ಹೊರಟರು.
ವಾಪಾಸ್ ಊರಿಗೆ ಬಂದಮೇಲೆ ಕೇಳ್ಬೇಕಾ..ಎಲ್ಲರಲ್ಲೂ ಹೇಳುವ ಸಡಗರ.ಸಂತೋಷ ಹಂಚಿಕೊಳ್ಳುವ ಸಂಭ್ರಮ.ಮೊಬೈಲ್ ಕೈಗೆ ಬಂದ ತಕ್ಷಣ ಮತ್ತೆ ಅವರನ್ನು ಸಂಪರ್ಕಿಸಿದೆ.ಆಗಲೂ ಅಷ್ಟೇ ನಿರಾಳವಾಗಿ ಹಮ್ಮು-ಬಿಮ್ಮುಗಳಿಲ್ಲದೇ ಸರಾಗವಾಗಿ ಮಾತನಾಡಿ ಒಂದಿಷ್ಟು ಖುಷಿ ಕೊಡುವ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆವು.ತದನಂತರದ ದಿನಗಳಲ್ಲಿ ಅವರ ಸಂಪರ್ಕದಲ್ಲಿ ಇದ್ದೆಯಾದರೂ ನನ್ನದೇ ಕೆಲಸ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತಿದ್ದೆ. ಬೆಂಗಳೂರಿಗೆ ಬಂದ ಬಳಿಕ ಮತ್ತೆ ಸಂಪರ್ಕಿಸಿದೆ.ಮನೆಗೆ ಬಾ ಅಂದ್ರು. ನಿಜವಾಗಿಯು ಅವರ ಸರಳತೆಗೆ,ತಿಳಿಸಿಕೊಟ್ಟ ಕಷ್ಟ-ಸುಖ,ಕಲಿಸಿದ ಪಾಠಗಳಿಗೆ,ಮಾತನಾಡಿ ಬದಲಿಸಿದ ಅವರ ನಿರ್ಮಲ ಮನಸ್ಸಿಗೆ ಶರಣು ಶರಣಾರ್ಥಿ.
ಅವರ ಮನೆಗೂ ಹೋಗಿದ್ದಾಯ್ತು..ರುಚಿಯಾದ ಕಾಫಿ,ಒಂದಿಷ್ಟು ಮಾತುಕತೆ ಎಲ್ಲವೂ ಮನಸ್ಸಿಗೆ ಮುದ ನೀಡಿತು.ಅವರ ಮನೆಯ ವಾತಾವರಣ, ಅವರಲ್ಲಿನ ಸಂಸ್ಕಾರವನ್ನು ತೋರಿಸುತ್ತಿತ್ತು.ಬಹುಶ: ಎಂಟು ಸಾವಿರಕ್ಕೂ ಮಿಗಿಲಾದ ವೇದಿಕೆಗಳಲ್ಲಿ ಮಿಂಚಿದ,ಮಾತನಾಡಿ ಕನ್ನಡವನ್ನು ಗೆಲ್ಲಿಸುತ್ತಿದ್ದ ಅಪರ್ಣಾ ಇವರೇನಾ ಎಂದು ಅಸೂಹೆಯಾಗುತ್ತಿತ್ತು.ನಾನು ಜೀನ್ಸ್ ಪ್ಯಾಂಟ್ ಧರಿಸಿ,ಒಂದು ಟೀ ಶರ್ಟ್ ಹಾಕುತ್ತಿದ್ದ ಕಾಲದಲ್ಲಿ ಅವರ ಮನೆಗೆ ಹೋಗಿ ಬರುತ್ತಿದ್ದೆ.ಶಂಕರ ವಾಹಿನಿಯಲ್ಲಿ ಕೆಲಸ ನಿರ್ವಹಿಸುವ ಸಮಯದಲ್ಲೂ ಪ್ರತಿಯೊಂದು ಹೆಜ್ಜೆ ಗುರುತುಗಳನ್ನು ಅಪರ್ಣಾ ಮೇಡಂ ಬಳಿ ಹೇಳಿಕೊಂಡು ಹೇಗೆ ಇರಬೇಕೆಂದು ಕೇಳಿ ತಿಳಿಯುತ್ತಿದ್ದೆ.
ಒಂದು ಕಾರ್ಯಕ್ರಮ.ಅದರಲ್ಲಿ ನಾಡಿನ ಸಾಧಕರನ್ನು ಪರಿಚಯಿಸುವ,ಸಂದರ್ಶಿಸುವ ನಿರ್ವಹಣೆ ನನ್ನದಾಗಿತ್ತು.ಕಾರ್ಯಕ್ರಮದ ನಿರ್ದೇಶಕರು ನಿಮಗೆ ಯಾರಾದರೂ ಸೆಲೆಬ್ರಿಟಿ ಗೊತ್ತಿದ್ದರೆ ತಿಳಿಸಿ ಅವರ ಕಾರ್ಯಕ್ರಮ ಮಾಡೋಣ ಅಂದಾಗ ನಾನು ಹೇಳಿದ ಹೆಸರು ಅಪರ್ಣಾ ಮೇಡಂ ಅವರದ್ದು. ನಿರ್ದೇಶಕರೂ ಒಪ್ಪಿದರು.ಆಗ ಅಪರ್ಣಾ ಮೇಡಂನ ನೋಡದೇ ಸುಮಾರು ತಿಂಗಳುಗಳೇ ಆಗಿತ್ತು.ನಮ್ಮ ಕಾರ್ಯಕ್ರಮಕ್ಕೆ ಬನ್ನಿ ಅಂದಾಗ ಅವರೂ ಒಪ್ಪಿಕೊಂಡರು. ಆಫೀಸ್‌ಗೂ ಬಂದಾಯ್ತು.ನಾನು ನನ್ನ ಇತರೆ ಕಾರ್ಯಕ್ರಮಗಳನ್ನು ಮುಗಿಸಿ ಅವರ ಸಂದರ್ಶನಕ್ಕಾಗಿ ಬೇಗ-ಬೇಗ ಸೀರೆಯುಟ್ಟು ಅವರು ಕುಳಿತಿದ್ದ ರೂಮಿಗೆ ಹೋದೆ. ನನ್ನ ನೋಡಿದ ಅಪರ್ಣಾ ಮೇಡಂ ರಿಯಾಕ್ಷನ್ ಇಂದೂ ನನ್ನ ಕಣ್ಣುಗಳಲ್ಲಿ ಹಾಗೇ ಉಳಿದಿದೆ.ದೊಡ್ಡ ಕಣ್ಣುಗಳಿಂದ ಅದೇ ಮಂದಹಾಸದಿಂದ “ಸಂಧ್ಯಾ ನೀನೂ” ಎಂದು ಒಂದೊಮ್ಮೆ ಅಪ್ಪಿದರು.ಆ ಜೀನ್ಸ್ ಪ್ಯಾಂಟ್ ಹಾಕುತ್ತಿದ್ದ ಹುಡುಗಿ ಇವಳೇನಾ ಅಂದ್ರು.ನಾನು ತಲೆ ತಗ್ಗಿಸಿ ಒಂದು ಸ್ಮೈಲ್ ಕೊಟ್ಟೆ.
ನಂತರ ಕಾರ್ಯಕ್ರಮದ ರೂಪರೇಷೆಯ ಕುರಿತು ಮಾತನಾಡಿ,ಸ್ಟುಡಿಯೋಗೆ ಹೋದ್ವಿ.ನಂಗೋ ಜೀವವೇ ಬಾಯಿಗೆ ಬಂದತ್ತಾಗಿತ್ತು.ಅಂತಾ ದೊಡ್ಡ ನಿರೂಪಕರನ್ನು ನಾನು ಸಂದರ್ಶಿಸುವುದು ಹೇಗೆ ಎಂದು ಯೋಚಿಸಿ ಅದೆಲ ತಲೆಕೆಳಗಾಗಿ,ಕೊನೆಗೆ ಧೈರ್ಯ ತಂದುಕೊಂಡು ನಡೆಸಿದ್ದಾಯಿತು.ಅವರ ಮಾತುಗಳನ್ನ ಆಲಿಸುತ್ತಾ ಆಲಿಸುತ್ತಾ ನನ್ನನ್ನು ನಾನೇ ಮರೆತೆ.ಪುಟ್ಟಣ್ಣ ಅಂಕಲ್ ಶೋಧ ನಾನು ಎಂದಾಗ “ಮಸಣದ ಹೂ” ಇದೇನಾ ಅನ್ನಿಸಿತು. “ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ”,ಸಾಲು ಕಂಗೊಳಿಸಿತು. ಕಾರ್ಯಕ್ರಮ ಟಿ.ವಿ.ಯಲ್ಲಿ ಪ್ರಸಾರ ಕಂಡಾಗ ಅನೇಕರು ನಂಗೆ ಮೆಸೇಜ್ ಮಾಡಿ,ಅಭಿನಂದಿಸಿದರು.ಆ ಖುಷಿ ಇಂದಿಗೂ ಇದೆ.ಇದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ ಅನ್ನಿಸಿ,ಆ ಕಾರ್ಯಕ್ರಮವೇ ನನ್ನ ಮರೆಯಲಾಗದ ಅನುಭವಗಳಲ್ಲಿ ಒಂದು ಎಂದು ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದೆ.ಮತ್ತೊಂದು ವೇದಿಕೆಯಲ್ಲಿ ಅವರೊಟ್ಟಿಗೆ ನಿಲ್ಲುವ ಸದಾವಕಾಶ ಶಂಕರ ವಾಹಿನಿಯಿಂದ ಸಿಕ್ಕಿತ್ತು.ಅದೂ ಮರೆಯಲಾಗದ ಕಾರ್ಯಕ್ರಮವೇ.
ತದನಂತರ ಮದುವೆಗೂ ಕರೆದಿದ್ದಾಯ್ತು.ಅಪರ್ಣಾ ಮೇಡಂ ಕಾರ್ಯಕ್ರಮದ ನಿಮಿತ್ತ ಬರಲಾಗಲಿಲ್ಲ.ಮಗುವಾದಾಗ ಇಂದೂ ಚನ್ನಾಗಿ ನೆನಪಿದೆ.ಓ ಟಿ ಯಿಂದಾ ವಾರ್ಡ್‌ಗೆ ಶಿಫ್ಟ್ ಮಾಡಿದ ಬಳಿಕ ನಾನು ಮೊದಲು ಕರೆ ಮಾಡಿದ್ದು ಅಪರ್ಣಾ ಮೇಡಂ ಅವರಿಗೆ.ಹೆಣ್ಣು ಮಗು ಆಯ್ತು ಅಂದಾಗ,ಮನೆಗೆ ಮಹಾಲಕ್ಷ್ಮೀ ಬಂದಾಯ್ತು.ನಿಂಗೆ ಒಳ್ಳೇ ಸ್ನೇಹಿತೆ ಆಗ್ತಾಳೆ ಅಂತ ಹರಸಿದ್ರು…ಮಗುನ ಕರೆದುಕೊಂಡು ಬಾ ಅಂದ್ರು.ಸುಮಾರು ತಿಂಗಳುಗಳ ಬಳಿಕ ಮಗಳನ್ನ ಅವರ ಮನೆಗೆ ಕರೆದುಕೊಂಡು ಹೋದಾಗ,ಅಪರ್ಣಾ ಮೇಡಂ ನನ್ನ ಮಗಳ ಜೊತೆ ಅವರೂ ಮಗುವಾಗಿ ಆಟವಾಡಿದ್ದನ್ನು ಕಂಡು ನಿಜಕ್ಕೂ ಕಣ್ಣಾಲಿಗಳು ತುಂಬಿತು.ಅವರಲ್ಲಿ ನಾನು ಒಬ್ಬ ತಾಯಿಯನ್ನ,ಅಕ್ಕಳನ್ನ ಕಂಡಿದ್ದೆ..ಮಗುವಿನ ಜೊತೆ,ಮಗುವಾದದ್ದನ್ನ ಕಂಡು ಬೆರಗಾದೆ..
ಮತ್ತೆ ನನ್ನ ಕಾಯಕದಲ್ಲಿ ನಾನು.ಅದೊಂದು ಕಾರ್ಯಕ್ರಮ.ಅಲ್ಲಿ ಅಪರ್ಣಾ ಮೇಡಂಗೆ ಪ್ರಶಸ್ತಿ ಬಂದಿತ್ತು.ಆ ಕಾರ್ಯಕ್ರಮದ ನಿರೂಪಣೆ ನನ್ನ ಹೊಣೆ.ಆಗ ಒಂದಿಷ್ಟು ಹುಮ್ಮಸ್ಸು,ಅವರೊಟ್ಟಿಗೆ ಸೆಲ್ಫಿ,ಎಲ್ಲವೂ ಸೇರಿ ಅವರ ಬಗೆಗೆ ಹೇಳುವಾಗ “ಮಜಾ ಟಾಕೀಸ್”…ಅಪರ್ಣಾ ಅವರ ನಿರೂಪಣೆ ಅಂದ್ರೆ ಎಲ್ಲರನ್ನು ಹಿಡಿದಿಡುವ,ಜೊತೆಗೆ ಒಂದೆರಡು ಸಾಲುಗಳಲ್ಲೇ ಆಕರ್ಷಿಸುವ ಅವರು ಬಳಸುವ ಪದ, ವೀಕ್ಷರನ್ನು,ಪ್ರೇಕ್ಷಕರನ್ನು ತಲೆದೂಗಿಸುವಂತದ್ದು.ಎಲ್ಲದಕ್ಕಿಂತ ಮಿಗಿಲಾಗಿ ಸ್ನೇಹಿತೆಯಾಗಿ ಅಪರ್ಣಾ ಮೇಡಂ ನನ್ನನ್ನ ತಿದ್ದಿದ್ದಾರೆ.ನನ್ನ ನೋವುಗಳಿಗೆ ಸ್ಪಂದಿಸಿ,ಮೊಗದಲ್ಲಿ ನಲಿವು ತಂದಿದ್ದಾರೆ.ಜೀವನ ಅಂದ್ರೆ ಹೀಗೆ ಎಂದು ಹೇಳಿಕೊಟ್ಟಿದ್ದಾರೆ.ಎಷ್ಟೋ ವಿಚಾರಗಳನ್ನ ತಿಳಿಸಿದ್ದಾರೆ.
ಈ ಸಂಬಂಧಗಳೇ ಹೀಗೇನೋ.ಎಲ್ಲೋ ಹುಟ್ಟಿ,ಎಲ್ಲೋ ಬೆಳೆದು..ಕೊನೆಗೆ ನಮ್ಮ ಬದುಕನ್ನು ಕಟ್ಟಿಕೊಳ್ಳುವಾಗ ಹಲವಾರು ಸಮಸ್ಯೆಗಳು ಬಂದರೂ ಅನುಭವಗಳು ಜೀವನದುದ್ದಕ್ಕೂ ಪಾಠ ಕಲಿಸುತ್ತಾ ಹೋಗುತ್ತೆ.ಹೀಗಾಗಿ ಅಪರ್ಣಾ ಮೇಡಂ ಒಬ್ಬ ಹೆಣ್ಣು ಮಗಳಾಗಿ ಸಮಾಜದಲ್ಲಿ ನಿಂತಿದ್ದರೂ ಇನ್ನೊಬ್ಬರ ಜೀವನಕ್ಕೂ ಮಾರ್ಗದರ್ಶಕರಾಗಿದ್ದಾರೆ.ಅವರಲ್ಲಿನ ಕಲೆಗೆ ಬೆಲೆ ಕೊಡುವುದರೊಂದಿಗೆ,ಅವರನ್ನು ಅವರ ಸ್ನೇಹ ಪಡೆದ ನಾನು ಧನ್ಯ ಎಂದು ಯಾವಾಗಲೂ ಹೇಳಿಕೊಳ್ಳುತ್ತೇನೆ.ವೇದನೆ,ಸಂವೇದನೆ,ಸಹನೆ,ತಾಳ್ಮೆ,ಜಾಣ್ಮೆ ಎಲ್ಲವನ್ನೂ ಅರಿತರೆ ಹೆಣ್ಣು ಸಮಾಜದ ಕಣ್ಣಾಗುವಲ್ಲಿ ಸಂಶಯವಿಲ್ಲ.
ಅಪರ್ಣಾ ಮೇಡಂ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರ.
– ಸಂಧ್ಯಾ ಭಟ್
ಸಂಧ್ಯಾ beautiful write up. ಐದನೇ ಕ್ಲಾಸಿನಲ್ಲಿ ನಾನಿದ್ದಾಗ ಚಂದನದಲ್ಲಿ ವಾರ್ತೆ ಓದುತ್ತಿದ್ದ ಅಪರ್ಣಕ್ಕನಿಗೂ ಇವತ್ತು ನಾನು ನೋಡುತ್ತಿರುವ ಅಪರ್ಣಕ್ಕನಿಗೂ ಏನೂ ವ್ಯತ್ಯಾಸವಿಲ್ಲ. Timeless beauty ಎಂಬ ಪದ ಎಲ್ಲಿ ಓದಿದರೂ ಇವರೇ ನೆನಪಾಗ್ತಾರೆ ನಂಗೆ. ಮನಸು ಮಾತು ನಡೆ ಎಲ್ಲವೂ ಶುದ್ಧ, ಸರಳ ಇದ್ದಾಗಷ್ಟೇ ಹಾಗಿರಲು ಸಾಧ್ಯ. ಬಹಳ ಿಷ್ಟವಾಯ್ತು ಬರಹ
Wonderful expression Sandhya… keep writing..
ಥಾಂಕ್ ಯು
ನಿಮ್ಮ ಲೇಖನ ,ಅಪರ್ಣ ಅವರಲ್ಲಿ ನಿಮಗೆ ಇರುವ ಅಭಿಮಾನ ,ಓದಿ ತುಂಬಾ ಖುಷಿಯಾಯಿತು.ನಾನೂ ಅಪರ್ಣಾ ಅವರ ಅಭಿಮಾನಿ.
ಶ್ರೀಮತಿ “ಅಪರ್ಣ” ಅವರ ಕುರಿತಾಗಿ ವಿವರಣೆ ಅದ್ಭುತವಾಗಿದೆ ,
ಅವರ ಹಾಸ್ಯದ ಇನ್ನೊಂದು ಮುಖವನ್ನು “ಮಜಾ ವಿಥ್ ಸೃಜಾ ”
ಟಿ.ವಿ ಸರಣಿಯಲ್ಲಿ ನೋಡಬಹುದಾಗಿದ್ದು, ಅವರ ಆಂಗೀಕ ಅಭಿನಯ, ಒನ್ ಅಂಡ್ Only
ಡೈಲಾಗ್ ನೀಡುವ ರೀತಿ ವರ್ಣನಾತೀತ , ನಿಮ್ಮ ಲೇಖನದಲ್ಲಿ ಅವರ ಕುರಿತಾಗಿ
ನೀಡಿದ ಅಭಿಪ್ರಾಯಗಳ್ನ್ನು ಸುಂದರವಾಗಿ ಪ್ರತಿಪಾದಿಸಿರುವಿರಿ ,
ರಂಗಣ್ಣ ನಾಡ್ಗೀರ್ , ಹುಬ್ಬಳ್ಳಿ.