ಮಳೆಯ ತಾನನ..ನೆನಪುಗಳ ರಿಂಗಣ
ಸುಡು ಸುಡು ರಣ ಬಿಸಿಲಿನ ಹಾಹಾಕಾರಕ್ಕೋ,ಅಹಂಕಾರಕ್ಕೋ ಸೆಡ್ಡು ಹೊಡೆದಂತೆ ಈಗ ಭೋರೆಂದು ಸುರಿಯುತ್ತಿದೆ ಮಳೆ.ಇಷ್ಟು ದಿನ ಉರಿ ಬಿಸಿಲಲ್ಲಿ ಕುದ್ದು,ಬೆಂದು ,ಆರಿ ಬಸವಳಿದ ಬಿಸಿಲಿನ ಝಳದ ತಾರಕಕ್ಕೇರಿದ ತಾಪದ ಇನಿತು ಕುರುಹೇ ಇಲ್ಲದಂತೆ ಮತ್ತೆ ಮಳೆ ಹೊಯ್ಯುತ್ತಿದೆ.ಆ ವೈಶಾಖದ ಸುಡು ಧಗೆಯಲ್ಲಿ ಮತ್ತಷ್ಟು ಪ್ರಖರವಾಗಿ ಜ್ವಲಿಸುತ್ತಾ ನಿಂತ ಉರಿವ ಸೂರ್ಯನಿಗೆ ನಿತ್ಯ ಶಪಿಸುತ್ತಾ,ಮುಗಿಲಿನತ್ತ ಆಸೆಗಣ್ಣಿನ ಮೊಗ ನೆಟ್ಟು ಮಳೆಯನ್ನು ನೆನೆಯದ ದಿನಗಳೇ ಇಲ್ಲವಾಗಿತ್ತು.ನೆನೆದವರ ಮನದಲ್ಲಿ ಎಂಬಂತೆ ಎಲ್ಲವನ್ನೂ ಶಾಂತಗೊಳಿಸುತ್ತಾ,ತಂಪಾಗಿಸುತ್ತಾ,ಎಲ್ಲ ಬೇಗೆಯನ್ನು ಶಮನಗೊಳಿಸುತ್ತಾ ಭೋರೆಂದು ಸುರಿಯುತ್ತಿದೆ ಮಳೆ ಹೊರಗೆ.ಮಳೆಯೆಂದರೆ ಬರೇ ಮಳೆಯಲ್ಲ,ಅದು ಬದುಕಿನ ಭಾವವೂ ಎನ್ನುವ ಭಾವ ಹುಟ್ಟಿಸುವಂತೆ ಪರಿಶುದ್ಧವಾಗಿ ತಾಧ್ಯಾತ್ಮತೆಯಿಂದ ಸುರಿಯತೊಡಗಿದೆ.ಮಳೆಯ ನಾದದ ಗುನುಗು ಕಿವಿಯೊಳಗೆ ಇಳಿದು ಮನದಾಳವ ಹೊಕ್ಕು ಕೂಡಿಟ್ಟ ನೆನಪುಗಳನ್ನೆಲ್ಲಾ ಹೊರತೆಗೆದು ಪದರ ಪದರವಾಗಿ ಒಂದೊಂದನ್ನೇ ಸಾಲಾಗಿ ಮನದ ಹಜಾರದಲ್ಲಿ ಜತನದಲ್ಲಿ ತಂದು ಕುಳ್ಳಿರಿಸುತ್ತಿದೆ.ಮಳೆಗೆ ಹಲುಬದ,ಮಳೆಗೆ ನೆನೆಯದ,ತೇವಗೊಳ್ಳದ,ತೇಲದ,ನೆನಪುಗಳಿಗೆ ಜಾರದ,ಬದುಕಿಗೆ ಜೀವ ತುಂಬಿಕೊಳ್ಳದ ಜೀವಿಗಳು ಎಲ್ಲಿ ತಾನೇ ಇದ್ದಾರು?ಈ ಹೊತ್ತಲ್ಲಿ ನಮ್ಮ ಮನಸು ಮಗುವಾಗಿ ಬಾಲ್ಯಕ್ಕೆ ಜಾರಿಕೊಳ್ಳದಿದ್ದರೆ ಹೇಗೆ?.
ನಮ್ಮದು ಬಂಟಮಲೆಯೆಂಬ ಮಹಾಕಾನನದ ತಪ್ಪಲಿನಲ್ಲಿರುವ ಊರು.ಇಲ್ಲಿ ಮಳೆ ಸುರಿಯಿತೆಂದರೆ ಮುಗಿಯಿತು.ಎಡೆಬಿಡದೆ ಆಕಾಶ ಭೂಮಿ ಒಂದಾಗುವಂತೆ ರಚ್ಚೆ ಹಿಡಿದು ಅಳುವಂತೆ ದಿನಪೂರ್ತಿ ಜಿಟಿಗುಟ್ಟಿ ಸುರಿಯುವ ಮಳೆ.ದಿನಪೂರ್ತಿ ಕತ್ತಲಾವರಿಸಿ ಹಗಲು-ರಾತ್ರೆಗಳ ವ್ಯತ್ಯಾಸಗಳು ಗೊತ್ತಾಗದಂತಹ ಪರಿಸ್ಥಿತಿ.ಎಡೆಬಿಡದೆ ಸುರಿಯುವ ಮಳೆಯ ಜೊತೆಗೆ ಸುಸ್ತೇ ಆಗದಂತೆ ನಿರಂತರ ಸದ್ದು ಮಾಡುವ ಕಪ್ಪೆ,ಜೀರುಂಡೆ,ಮತ್ತ್ಯಾವುದೋ ಹೆಸರರಿಯದ ಕೀಟಗಳ ಕರ್ಕಶ ಸಂಗೀತ.ಅದರ ಜೊತೆಗೆ ಗುಡುಗು ಸಿಡಿಲಿನ ಆರ್ಭಟ.ಅಲ್ಲಿ ಅದೆಂಥಾ ಗುಡು ಸಿಡಿಲು ಹಾಯುತ್ತದೆಯೆಂದರೆ, ಅಳ್ಳೆದೆಯವರನ್ನು ಅಲುಗಾಡಿಸಿ, ಬೆಚ್ಚಿಬೀಳಿಸಿ, ನೆಲಕ್ಕುರುಳಿಸಿ ಪ್ರಜ್ಞೆ ತಪ್ಪಿಸುವಷ್ಟು .ಬದುಕನ್ನ ವರ್ಷವಿಡೀ ಪೊರೆಯುವ ಅದೆಷ್ಟೋ ಕಂಗು, ತೆಂಗು, ಬಾಳೆಗಳು ಸಿಡಿಲ ಹೊಡೆತಕ್ಕೆ ನಲುಗಿ ಕ್ಷಣಮಾತ್ರದಲ್ಲಿ ನಿಂತಲ್ಲೇ ಸುಟ್ಟು ಭಸ್ಮವಾಗಿ ಬಿಡುತ್ತಿದ್ದವು. ಇಲ್ಲವೇ ಮಳೆಯ ಹೊಡೆತಕ್ಕೆ ತತ್ತರಿಸಿ ಧೈನೇಸಿ ಸ್ಥಿತಿಯಲ್ಲಿ ನೆಲವನ್ನಪ್ಪಿಬಿಡುತ್ತಿದ್ದವು.ಇ ನ್ನು ನರ ಮನುಷ್ಯರು ನಾವು ಮನೆಯೊಳಗಿದ್ದ ಮಾತ್ರಕ್ಕೆ ಸುರಕ್ಷಿತರಲ್ಲ. ನೆಲಕ್ಕೆ ಕಾಲು ತಾಗಿಸಲಾಗದಂತೆ ಚಟಾಪಟೀರೆಂದು ಏಕಾ ಏಕಿ ಛಳ್ಳನೆ ಕಾಲಿಗೆ ಬಂದು ಬಡಿದು ವಿದ್ಯುತ್ ಪ್ರವಹಿಸಿ ದಿಗಿಲು ಹುಟ್ಟಿಸಿ ಬಿಡುತ್ತಿತ್ತು.ಆದರೂ ಮಿಂಚು ಮಿಂಚಿದಾಕ್ಷಣ, ಅದರ ಕಾಕದೃಷ್ಟಿ ತಮ್ಮ ಮೇಲೆ ಬೀಳದಿರಲೆಂದು ಮನೆಯೊಳಗಿದ್ದ ಕಬ್ಬಿಣದ ಹತ್ಯಾರಗಳನ್ನೆಲ್ಲಾ ಹೊರಗೆ ಎಸೆದು ಮನೆ ಮಂದಿಯೆಲ್ಲಾ ನಿರುಮ್ಮಳರಾಗುತ್ತಿದ್ದರು. ಆದರೂ ಸಿಡಿಲು ಬಡಿದು ಹತರಾಗುವ ಹೃದಯ ವಿಧ್ರಾವಕ ಘಟನೆಗಳು ಮನಕಲುಕುತ್ತಿತ್ತು. ಇದು ಜೀವ ಉಳಿಸುವ ಅಳಿಸುವ, ಕಾರುಣ್ಯ ಮತ್ತು ಕಾಠಿಣ್ಯತೆ ಎರಡನ್ನೂ ತುಂಬಿಕೊಂಡ ಮಳೆಗಾಲದ ಮಾಯೆ.
ಆಗ ಇನ್ನೂ ವಿದ್ಯುತ್,ಫೋನ್ ಯಾವ ಸಂಪರ್ಕಗಳೂ ಹೆಚ್ಚಿನ ಮನೆಗಳನ್ನು ಮುಟ್ಟಿರಲಿಲ್ಲ.ಮುಟ್ಟಿದ್ದರೂ ಆ ಬಿರುಮಳೆ ಶಾಶ್ವತವಾದ ರಜೆಯನ್ನು ಮಳೆಗಾಲ ಮುಗಿಯುವವರೆಗೂ ಅವುಗಳಿಗೆ ದಯಪಾಲಿಸಿ ಬಿಡುತ್ತಿತ್ತು.ಹಾಗಾಗಿ ಮಳೆಗಾಲವಿಡೀ ಚಿಮಣಿ ಲಾಂದ್ರದಲ್ಲಿ ಸೂರ್ಯನನ್ನು ನೆನೆಯುತ್ತಾ,ಅವನನ್ನು ಅಲ್ಲೇ ಆವಾಹಿಸಿಕೊಳ್ಳಬೇಕಾದಂತಹ ಅನಿವಾರ್ಯತೆ.ಅಂತಹ ಮಳೆಗಾಲದಲ್ಲೇ ಶಾಲೆಯ ಆರಂಭ.ಶಾಲೆಗೂ ಮಳೆಗೂ ಎಂಥದೋ ಬಿಡಲಾಗದ ಅವಿನಾಭಾವ ಸಂಬಂಧ.
ಶಾಲೆಗೂ-ಮನೆಗೂ ನಡುವೆ ನಡೆದು ಸಾಗಲಾರದಷ್ಟು ಅಂತರವಿದ್ದುದರಿಂದ,ಬಂಟಮಲೆಯೆಂಬ ಕಾನನದೊಳಗಿಂದ ಶಾಲೆಗೆ ಹೋಗಿ ಪಾಠ ಕಲಿಯುವುದು ಒಂದು ಕನಸೇ ಸರಿ.ಹಾಗಂತ ಶಾಲೆ ಕಲಿಯದೇ ಇದ್ದರೆ ಹೇಗಾದೀತು? ಶಾಲೆಗೆ ಹೋಗದಿದ್ದರೆ ಚೋಮ,ಚನಿಯ,ಐತೆಯರ ಜೊತೆಗೆ ಮಳೆಗಾಲವಿಡೀ ಅಡಿಕೆ ಹೆಕ್ಕಬೇಕಾದೀತು ಅಂತ ಸಣ್ಣಗೆ ಹೆದರಿಕೆ ಹುಟ್ಟಿಸಿ,ನನ್ನ ಹೆತ್ತವರು ನನ್ನನ್ನು ಕೊಡಗಿನ ದೂರದ ಹಳ್ಳಿಯಲ್ಲಿದ್ದ ಅಜ್ಜಿ ಮನೆಯಲ್ಲಿ ನನ್ನ ಶಾಲೆ ಕಲಿಯಲು ಬಿಟ್ಟದ್ದು. ಅಲ್ಲಿಯ ಮಳೆಯ ಅನುಭವ ಬಂಟಮಲೆಗಿಂತ ಬೇರೇನೇ ತೆರದಲ್ಲಿ ನನ್ನಲ್ಲಿ ತೆರೆದುಕೊಂಡದ್ದು.ಮತ್ತು ನನ್ನ ಬಾಲ್ಯ ಆ ಮಳೆಯಲ್ಲಿ ನೆನೆಯುತ್ತಾ ಕವಿತೆಯಂತೆ ಅರಳಿಕೊಳ್ಳುತ್ತಾ ಹೋದದ್ದು.ಕೊಡಗಿನಲ್ಲಿ ಒಮ್ಮೊಮ್ಮೆ ಬೀಡು ಬೀಸಾಗಿ ಹುಚ್ಚುಗಟ್ಟಿ ಸುರಿಯುವ ಮುಸಲಾಧಾರೆ ಮಳೆಯಾದರೆ ಉಳಿದಂತೆ ಕೊರೆವ ಚಳಿಯಲ್ಲಿ ಪಿರಿಪಿರಿ ಎಂದು ಎಂದು ಸಣ್ಣಗೆ ನಿಂತೂ ನಿಲ್ಲದಂತೆ ಹನಿಯುತ್ತಲೇ ಇರುವ ಹನಿಮಳೆ.ಇವೆಲ್ಲದರ ನಡುವೆ ಶಾಲೆಗೆ ಹೋಗಬೇಕೆಂದರೆ,ಕಾಡಿನ ಬಳಸು ದಾರಿ ಇಲ್ಲದಿದ್ದರೂ,ಒಂದೆರಡು ತೋಡು.ಒಂದು ತುಂಬಿ ಹರಿಯುವ ಸಣ್ಣ ನದಿ,ಅದಕ್ಕೆ ಜೋಡಿಸಿದ ಪಾಲ,ಇವುಗಳ ಮೇಲೆಲ್ಲಾ ಜೀವ ಕೈಯಲ್ಲಿ ಬಿಗಿ ಹಿಡಿದಿಟ್ಟುಕೊಂಡು,ಸರ್ಕಸ್ ಮಾಡಿಕೊಂಡೇ ಹೋಗ ಬೇಕಾದ ಪ್ರಮೇಯ.ಏನು ಅನಾಹುತಗಳಾಗದೇ ಆ ಕಾಲಘಟ್ಟ ನಾವು ದಾಟಿ ಬಂದದ್ದು ಒಂದು ಪವಾಡವೇ ಸರಿ.ಇನ್ನು ಕಾಫಿ ತೋಟದ ನಡುವೆ ಹಾದು ಹೋಗುವಾಗ,ಬಿಡದೇ ಅಂಟಿಕೊಂಡು ರಕ್ತದೊಳಗೆ ಒಂದಾಗುವಷ್ಟು ಗೆಳೆತನ ಬಯಸಿ ಬರುತ್ತಿದ್ದ ಜಿಗಣೆಗಳ ನಂಟು.ಬೀಸುವ ಗಾಳಿಗೆ ತಲೆಕೆಳಗಾಗಿ ತಿರುವು ಮುರುವಾಗಿ ಪೇಚಿಗೆ ಸಿಕ್ಕಿಸುತ್ತಿದ್ದ,ಅದೆಷ್ಟೋ ರಂದ್ರಗಳನ್ನು ರಂಗೋಲಿಯಂತೆ ಬಿಡಿಸಿಕೊಂಡ,ಕಡ್ಡಿ ಮುರಿದುಕೊಂಡು,ತೇಪೆ ಹಾಕಿಸಿಕೊಂಡ ಕಳೆದ ವರ್ಷದ ಅದೇ ಹಳೆ ಕೊಡೆ.ಅದರ ಜೊತೆಗೆ ಪಾಚಿಗಟ್ಟಿದ ನೆಲ ಬರೇ ಕಾಲಿಗೆ ತಾಕಿದೊಡನೇ ನಮ್ಮ ಸ್ಕೇಟಿಂಗ್ ಶುರುವಾಗಿ ಬಿಡುತ್ತಿತ್ತು.ಅಪರೂಪಕ್ಕೊಮ್ಮೆ ಹಾಕಿದ ಹವಾಯಿ ಚಪ್ಪಲಿ ರಪ ರಪನೆ ಕೆಸರಿನ ಚಿತ್ತಾರದ ಕಸೂತಿಯನ್ನು ನಮ್ಮ ಲಂಗದ ಮೇಲೆಲ್ಲಾ ಬರೆಯಿಸಿ,ನಮ್ಮ ಬಟ್ಟೆಗಳಿಗೆ ಹೊಸ ರೂಪು ತುಂಬಿ ಕೊಡುತ್ತಿತ್ತು.
ಇವೆಲ್ಲದರ ನಡುವೆಯೂ ಮಳೆಗೆ ಏನೆಲ್ಲಾ ಹರಸಾಹಸ ಪಟ್ಟುಕೊಂಡು ನಡೆದೇ ಹೋಗಬೇಕಾದಂತಹ ಪರಿಸ್ಥಿತಿ.ಬಹುತೇಕ ಎಲ್ಲಾ ಮನೆ ಮಕ್ಕಳ ಪರಿಸ್ಥಿತಿ ಇದೇ ಆದಕಾರಣ ಇದರಲ್ಲಿ ಹೆಚ್ಚುಗಾರಿಕೆಯೇನೂ ಇರಲಿಲ್ಲ.ಆದಕಾರಣ ಇದರಿಂದ ವಿನಾಯಿತಿ,ರಿಯಾಯಿತಿ ಸಿಗಬೇಕೆಂದರೆ ಮಳೆಗೆ ನೆನೆದು ಸಿಕ್ಕಾಪಟ್ಟೆ ಜ್ವರ ಹಿಡಿಸಿಕೊಂಡು ಗುಡಿಹೊದ್ದು ಮಲಗಬೇಕಷ್ಟೆ.ಆದರೆ ತಮಾಷೆಯ ಸಂಗತಿಯೆಂದರೆ,ಮಳೆಗೂ ದೇಹಕ್ಕೂ ಒಗ್ಗಿ ಹೋಗಿ ಕಳ್ಳ ಜ್ವರವೂ ಕೂಡ ನಮ್ಮನ್ನು ಬಂದು ತಾಕುತ್ತಿರಲಿಲ್ಲ.ಆದರೂ ಬೆಳಗ್ಗೆ ಶಾಲೆಗೆ ಹೊರಡುವಾಗ ಮಾತ್ರ ಅಷ್ಟೇ ಅಕ್ಕರಾಸ್ಥೆಯಿಂದ ಒಣಗಿದ ಸಮವಸ್ತ್ರ ಧರಿಸಿ ಹೊರಡುವುದಷ್ಟೆ.ಮನೆಯ ಮೆಟ್ಟಿಲಿಳಿದದ್ದೊಂದೇ ಗೊತ್ತು,ಬಟ್ಟೆಯೆಲ್ಲಾ ಒದ್ದೆಮುದ್ದೆ.ಕೈಯಲ್ಲಿ ಹಿಡಿದ ಕೊಡೆ ನೆಪಕ್ಕಷ್ಟೆ.ಹಿಂದಕ್ಕೆ ಬೆನ್ನಿಗಂಟಿಸುವ ಪಾಟೀ ಚೀಲವನ್ನು ಮುಂದಕ್ಕೆ ಹಾಕಿಕೊಂಡು,ಮಗುವನ್ನು ಜೋಕೆಯಲ್ಲಿ ಬಗಲಿಗಿಟ್ಟುಕೊಂಡು ನಡೆಯುವಂತ ವ್ಯರ್ಥ ಪ್ರಯತ್ನ ಮಾಡುತ್ತಿದ್ದೆವು.ಆದರೂ ಪಾಟಿ ಚೀಲ ನೆನೆಯುತ್ತಿತ್ತು.ಸ್ಲೇಟಿನಲ್ಲಿ ಬರೆದ ಅಕ್ಷರಗಳೆಲ್ಲಾ ಅಳಿಸಿ ಹೋಗುತ್ತಿತ್ತು.ಬರೆದಿದ್ದರೂ ಬರೆಯದೇ ಬಂದದ್ದೇಕೆ?ಸುಳ್ಳು ಸುಳ್ಳೇ ಹೇಳುತ್ತೀರ ಅಂತ ಗದರಿಸುವ ಟೀಚರಮ್ಮ ಸುಖಾಸುಮ್ಮಗೆ ಕೊಟ್ಟ ಪೆಟ್ಟಿನ ಬಿಸಿಗೆ ಅಳುವು ಒತ್ತರಿಸಿ ಬಂದು ಮಳೆ ನೀರಿನಂತೆ ಕಣ್ಣಿನಿಂದ ಇಳಿದು ಹೋಗುತ್ತಿತ್ತು.ಮನೆಗೆ ಬಂದಾಕ್ಷಣ ಎಲ್ಲ ಮರೆತವರಂತೆ ನಮ್ಮ ಪಾಟಿ ಚೀಲ,ಸಮವಸ್ತ್ರಗಳು ಗರಿ ಗರಿ ಚಳಿ ಕಾಯಿಸುತ್ತಾ ಒಲೆಯ ಕಟ್ಟೆಯ ಮೇಲೆ ಬಂದು ಕುಳಿತುಕೊಳ್ಳುತ್ತಿದ್ದವು. ನಾವೂ ಕೂಡ ಅಷ್ಟು ಹೊತ್ತು ಮಾಡಲು ಬೇರೇನು ಕೆಲಸವಿಲ್ಲದೆ ಒಲೆ ಬುಡಕ್ಕೆ ಮೈಯಾನಿಸಿ ,ಸಣ್ಣಗೆ ಉರಿಯುವ ಬೆಂಕಿಗೆ ಚಳಿ ಕಾಯಿಸುತ್ತಾ,ಹಾಲಿಲ್ಲದ ಕರಿ ಕಾಫಿಯಲ್ಲಿ ಅಮೃತದ ಸವಿಯನ್ನು ಅನುಭವಿಸುತ್ತಾ,ಅದನ್ನು ಚೂರು ಚೂರೇ ಗುಟುಕರಿಸುತ್ತಾ ಯಾವುದೋ ಅರಿಯದ ಕನಸಿನ ಲೋಕದಲ್ಲಿ ತೇಲಿ ಹೋಗುತ್ತಿದ್ದೆವು.ಇಷ್ಟರ ನಡುವೆಯೂ ನೆಪ ಮಾತ್ರಕ್ಕೆ ಮಳೆಗಾಲದ ರಜೆ ನಮಗೆ ಮಂಜೂರಾಗಿ ಬಿಡುತ್ತಿತ್ತು.ಹಾಗಂತ ಒದ್ದೆ ಮುದ್ದೆಯಲ್ಲಿ ಶಾಲೆಗೆ ಹೋಗಬೇಕಿಲ್ಲ,ಮನೆಯೊಳಗೆ ಬೆಚ್ಚಗಿರ ಬಹುದೆಂಬ ಯಾವ ಆಸೆಯನ್ನೂ ಇಟ್ಟು ಕೊಳ್ಳುವಂತಿಲ್ಲ.ಯಾಕೆಂದರೆ ಮಳೆಗಾಲದ ರಜೆಗೇ ಕಾಯುತ್ತಿದ್ದವರಂತೆ ನಮ್ಮ ಮನೆ ಮಂದಿಯೆಲ್ಲಾ,ಆ ಸಮಯಕ್ಕೆ ಸರಿಯಾಗಿಯೇ ಹೊಲ ಗದ್ದೆಗಳ ಕೆಲಸಗಳನ್ನು,ಇನ್ನಿತರ ಮಾಡಿ ಮಾಡಿ ಮುಗಿಸಲೇ ಬೇಕಾದ ಅನಿವಾರ್ಯ ಕೆಲಸಗಳನ್ನು ಇಟ್ಟುಕೊಂಡು,ಆ ರಜೆಯನ್ನು ನಮ್ಮಿಂದ ಸದುಪಯೋಗ ಪಡಿಸಿಕೊಂಡ ಭಾವದಲ್ಲಿ ಅವರು ಕೃತಾರ್ಥರಾಗುತ್ತಿದ್ದರು.ನಾವುಗಳು ಇದ್ಯಾವುದರ ಪರಿವೆಯೇ ಇಲ್ಲದೆ,ಆರದ ಅರಿವೆಯಲ್ಲೇ ಗರಿಗೆದರಿದ ಹಕ್ಕಿಗಳಾಗುತ್ತಿದ್ದೆವು.ಸುರಿವ ಮಳೆಯನ್ನು ಹೊಸ ಬಗೆಯಲ್ಲಿ ಕಣ್ತುಂಬಿ ಕೊಳ್ಳುತ್ತಾ,ಯಾವುದೋ ಮಧುರ ಆಲಾಪಕ್ಕೆ ಕಿವಿಯಾಗುತ್ತಿದ್ದೆವು.
ಎಷ್ಟೇ ತೋಯಿಸಿದರೂ,ಎಷ್ಟೇ ಕಂಗೆಡಿಸಿದರೂ ಎಲ್ಲಾ ಕಾಲಗಳಿಗಿಂತಲೂ ಮಳೆಗಾಲ ಮಾತ್ರವೇ ಏಕಕಾಲದಲ್ಲಿ ಒಳಗೊಂದು ಆರದ ತೇವ ಹಾಗೂ ಸದಾ ಕಾಲ ಬೆಚ್ಚಗಿನ ಅನುಭೂತಿಯನ್ನು ಬದುಕಿನುದ್ದಕ್ಕೂ ಕಾಪಿಟ್ಟು ಸಲಹುತ್ತದೆ ಎಂಬುದು ಪ್ರತೀ ಭಾರಿ ಮಳೆ ಸುರಿಯುವಾಗಲೂ ಅನ್ನಿಸುತ್ತದೆ. ಹಲಸಿನ ಹಣ್ಣು,ಮಾವಿನ ಹ%
“.ಹನಿಯುವ ಮಳೆ ಒಂಟಿ ತಂತಿ ನೇಕೆಯ ಮೇಲಿಂದ ಹಿಡಿದು ಗಿಡ ಮರದ ಎಲೆಗಳ ಮೇಲೆಲ್ಲಾ ತೋರಣ ಕಟ್ಟಿ ಸಂಭ್ರಮಿಸುವಾಗ,ಉದುರುವ ಹನಿಗಳು ಕಟ್ಟಿ ಕೊಡುವ ಯಾವ ಕನಸುಗಳೂ ನಮ್ಮ ಮಕ್ಕಳಲ್ಲಿ ಮೊಳೆಯುತ್ತಿಲ್ಲವಲ್ಲವೆಂಬ ವಿಷಾದದ ಸುಯಿಲೊಂದು ಎದೆಯ ನಡುವಿನಿಂದ ಹಾಗೇ ಹರಿದು ಹೋಗುತ್ತಿದೆ.ಆದರೂ ಮಳೆ ಸುರಿಯುತ್ತಿದೆ.ಗತಕ್ಕೂ ವರ್ತಮಾನಕ್ಕೂ ಮಳೆ ತಂತುವಾಗಿ ಸುರಿಯುತ್ತಿದೆ…ನೆನಪುಗಳ ಮೆರವಣಿಗೆಗೆ ಸುರಿವ ಮಳೆಯೊಂದು ಅರಿವಿಲ್ಲದೆಯೇ ಸಾಕ್ಷಿಯಾಗುತ್ತಿದೆ..”
ಎಷ್ಟು ಅರ್ಥಗರ್ಭಿತವಾದ, ಸುಂದರವಾದ ಪದಜೋಡಣೆ ..ಬರಹ ಆಪ್ತವೆನಿಸಿತು, ಸ್ಮಿತಾ ಅವರೇ.
ಲೇಖನ ಬಹಳ ಆಪ್ತವಾಯಿತು .ನಾನೂ ಏಕೆ ಬಾಲ್ಯದ ಶಾಲಾದಿನಗಳನ್ನು ಬರೆಯಬಾರದು ಅನಿಸುತ್ತಿದೆ