ಶರಣಾಗತಿ
ಕಾಣುವವರೆಗೂ ಅವಳ ಮತ್ತು ಅವಳ ಕವಿತೆಗಳ
ಕಾವ್ಯವಿಷ್ಟು ಬಿಸಿಯಾಗಿರುತ್ತದೆ
ಮತ್ತು
ನಿಶೆ ತುಂಬಿರುತ್ತದೆಯೆಂದು ಗೊತ್ತಿರಲಿಲ್ಲ
ಸುಡು ಬೇಸಿಗೆಯಲೂ
ಸುರಿವ ಬಿರು ಮಳೆಯಾಗುವ
ಕೊರೆಯುವ ಚಳಿಯಲೂ
ಅಗ್ಗಿಷ್ಠಿಕೆಯಾಗುವ
ಜಡಿಮಳೆಯ ಮದ್ಯರಾತ್ರಿಯಲೂ
ಹೊಕ್ಕುಳದ ಕಾವಾಗುವ
ಜೀವ ಮಿಡಿಸುವ ಸಹ್ಯಾದ್ರಿಯ ಹರಿದ್ವರ್ಣದ
ಕಾನನದ ನಿಗೂಢತೆಯೊಳಗೂ
ಸತ್ಯ ದರ್ಶನ ಮಾಡಿಸುವ
ನನ್ನೊಳಗಿನ ನನಗೆ
ಕನ್ನಡಿಯಾಗುವ
ಆ ಕಾವ್ಯದೊಳಗಿರುವ
ನಿಜಕ್ಕೆ
ಮತ್ತು
ನಿಜ ಮಾತ್ರಕ್ಕೆ
ಶರಣಾಗಿದ್ದೇನೆ.
– ಕು.ಸ.ಮಧುಸೂದನ ನಾಯರ್