ವಿದ್ಯುತ್ ದಾಸರ ಮನೆಯ ಕಥೆ.. .
ಕೆಲವು ದಿನಗಳ ಹಿಂದೆ ನಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇಲಾಖೆಯವರು ಬಂದು ಪರೀಕ್ಷಿಸಿ, ಕಂಬದಲ್ಲಿ ಕರೆಂಟ್ ಇದೆ, ನಿಮ್ಮ ಮನೆ ಕೇಬಲ್ ಕೆಟ್ಟೋಗಿದೆ, ಇಲೆಕ್ಟ್ರಿಶಿಯನ್ ಕರೆಸಿ ಸರಿಪಡಿಸಿಕೊಳ್ಳಿ, ಎಂದರು. ಇಲೆಕ್ಟ್ರಿಶಿಯನ್ ಬಂದು , ಕಂಬ ಮತ್ತು ಮನೆಯ ಅಂತರಕ್ಕೆ ಸರಿಹೊಂದುವ ಅಳತೆಯ ಕೇಬಲ್ ತಂದು, ರಸ್ತೆಯನ್ನು ಅಗೆದು, ಹೊಸ ಪೈಪ್ ಹಾಕಿ, ವಿದ್ಯುತ್ ಸಂಪರ್ಕ ಪಡೆಯುವಷ್ಟರಲ್ಲಿ ಎರಡು ದಿನವಾಗಿತ್ತು. ಈ ಎರಡು ದಿನ ನಮ್ಮ ಪರಿಪಾಡಲು ಹೇಳತೀರದು.
ಮಿಕ್ಸಿ ಹಾಕಲಾಗದೆ ಇದ್ದುದರಿಂದ ಅಡುಗೆಮನೆಗೆ ಅರ್ಧ ದಿನದ ವಿರಾಮ ಘೋಷಿಸಿ ಹೋಟೆಲ್ ನಲ್ಲಿ ಉಂಡೆವು . ಟ್ಯಾಂಕ್ ನಲ್ಲಿರುವ ನೀರು ಖಾಲಿಯಾದರೆ, ಸಂಪ್ ನಿಂದ ನೀರನ್ನು ಹಾಯಿಸಲು ವಿದ್ಯುತ್ ಇಲ್ಲ ಎಂದು ಮನಗಂಡು ಆ ದಿನದ ಮಟ್ಟಿಗೆ ನೀರಿನ ಮಿತವ್ಯಯದ ಬಗ್ಗೆ ಎಂದೂ ಇಲ್ಲದ ಕಾಳಜಿ ವಹಿಸಿದೆವು. ಕೊನೆಗೆ ಟ್ಯಾಂಕ್ ನೀರು ಖಾಲಿಯಾದಾಗ ಸಂಪ್ ನಿಂದ ಬಕೆಟ್ ನಲ್ಲಿ ನೀರೆತ್ತಿ ಸ್ನಾನ ಪೂರೈಸಿದೆವು.
” ಅನಗತ್ಯವಾಗಿ ದೀಪ ಉರಿಯುತ್ತಿದೆ….ಈ ಹವೆಗೆ ಫ್ಯಾನ್ ಬೇಕಾ…ಕರೆಂಟ್ ವೇಸ್ಟ್ ಆಗುತ್ತೆ …..ಇನ್ನೇನು ಯು.ಪಿ.ಎಸ್ ಕೂಡ ಡಿಸ್ ಚಾರ್ಜ್ ಆಗುತ್ತದೆ….. ” ಎಂದು ಪರಸ್ಪರ ದೂಷಿಸಿಕೊಂಡೆವು. ಸೋಲಾರ್ ದೀಪ ಸರಿ ಇದೆಯೇ ಎಂದು ಪರೀಕ್ಷಿಸಿದೆವು. ಬೇಕಾದರೆ ಇರಲಿ ಎಂದು ಮೋಂಬತ್ತಿಯನ್ನೂ ತಂದಿರಿಸಿದೆವು . ಕಂಪ್ಯೂಟರ್ ಬಳಸಲಾಗದೆ, ಇಂಟರ್ನೆಟ್ ಸಿಗದೆ, ಕಿರಿಕಿರಿ ಅನುಭವಿಸಿದೆವು. ರಾತ್ರಿಯಿಡೀ ಫ್ಯಾನ್ / ಸೊಳ್ಳೆ ನಿವಾರಕ ಬಳಸಲಾಗದೆ ಇದ್ದುದರಿಂದ ನಿದ್ರೆ ಬಾರದೆ ಒದ್ದಾಡಿದೆವು. ಅಂತೂ ಅನಿವಾರ್ಯವಾಗಿ ನಮಗೇ ಅರಿವಾಗದಂತೆ ನೀರು ಮತ್ತು ವಿದ್ಯುತ್ ಮಿತವ್ಯಯ ಮಾಡಿ ಪರಿಸರದ ಬಗ್ಗೆ ಕಾಳಜಿ ಮೆರೆದೆವು!
ಯು.ಪಿ.ಎಸ್. ಕೇವಲ 4-5 ಗಂಟೆಗಳ ಕಾಲ ಬೆಂಬಲ ನೀಡಿ ನಿಷ್ಕ್ರಿಯವಾಯಿತು. ಅಂದು ಭಾನುವಾರವಾದುದರಿಂದ, ಬೇಕಾಗಿದ್ದ ವಸ್ತುಗಳು ಅಂಗಡಿಯಲ್ಲಿ ಸಿಗದ ಕಾರಣ, ಮರುದಿನ ರಿಪೇರಿ ಆಗುವ ವರೆಗೆ ತಾಳ್ಮೆಗೆಟ್ಟು ಕಾಯುವುದೊಂದೇ ಆಗ ನಮಗಿದ್ದ ಆಯ್ಕೆ.
ನಮ್ಮ ಅಕ್ಕಪಕ್ಕದ ಮನೆಯ ಸಹೃದಯರು ‘ಸ್ನಾನಕ್ಕೆ, ಊಟಕ್ಕೆ ನಮ್ಮ ಮನೆಗೆ ಬನ್ನಿ…. ನಮ್ಮ ಮನೆಯಿಂದ ತಾತ್ಕಾಲಿಕ ಕನೆಕ್ಷನ್ ತೆಗೆದುಕೊಳ್ಳಕಾಗುತ್ತಾ ಕೇಳಿ……ತಾಮ್ರದ ವಯರ್ ಇದ್ದರೆ ಕಂಬದಿಂದ ನೇರವಾಗಿ ವಿದ್ಯುತ್ ಪಡೆಯಬಹುದು..’ ಇತ್ಯಾದಿ ಸಲಹೆ ಕೊಟ್ಟರು. ಸ್ವಲ್ಪ ಸಮಯ ನನ್ನ ಲಾಪ್ ಟಾಪ್ ಮತ್ತು ಮೊಬೈಲ್ ಅನ್ನು ಅವರ ಮನೆಯಲ್ಲಿ ಚಾರ್ಜ್ ಮಾಡಲು ಇರಿಸಿ ಬಂದಿದ್ದಾಯಿತು.
ನಮ್ಮ ಮನೆಯ ಪಕ್ಕದಲ್ಲಿಯೇ ಅಂಗಡಿಯೊಂದಿರುವುದರಿಂದ ಅಲ್ಲಿಗೆ ಹೋಗುವವರು, ಮನೆಯ ಮುಂದೆ ರಸ್ತೆಯನ್ನು ಅಗೆಯುವುದನ್ನು ಕಂಡು ‘ ಏನು ಕೆಲಸ ನಡೆಯುತ್ತಾ ಇದೆಯೇ….ನಿಮ್ಮ ಮನೆ ಕಟ್ಟಿ ಸುಮಾರು ವರ್ಷ ಆಯಿತಲ್ಲಾ ಅದಕ್ಕೇ ಕೇಬಲ್ ಹೋಗಿದೆ….ಕೆಲವು ಕೇಬಲ್ ಗಳು ಬಾಳಿಕೆ ಬರಲ್ಲ….ದಪ್ಪದ ಕೇಬಲ್ ಹಾಕಿಸಿ….ಹಳೆ ಮನೆನಾ….ನಿಮ್ದು ಯಾವೂರು…. ಇಲ್ಲಿ ಬಂದು ಎಷ್ಟು ವರ್ಷ ಆಯಿತು…..ಎಲ್ಲಿ ಕೆಲಸ…..’ ಇತ್ಯಾದಿ ಮಾತನಾಡಿಸಿ ಸಲಹೆಯನ್ನೂ ಕೊಟ್ಟು ಹೋಗುತ್ತಿದ್ದರು. ಮರುದಿನ ಸಂಜೆಯ ವಾಯುವಿಹಾರದ ಸಮಯದಲ್ಲೂ ಕೆಲವರು ‘ಕರೆಂಟ್ ಸರಿಯಾಯಿತೆ’ ಎಂದು ವಿಚಾರಿಸಿದರು. ಅಂತೂ ಈ ಕಾರಣದಿಂದಲೇ ನಮ್ಮ ಮನೆಗೆ ವಿಶೇಷ ಗಮನ, ಮಾನ್ಯತೆ ಎರಡೂ ಲಭಿಸಿ, ಕೆಲವರ ಪರಿಚಯವೂ ಆಗಿದ್ದು ಕೂಡಾ ಕರೆಂಟ್ ಮಹಾತ್ಮೆ!
ಬಾಲ್ಯದಲ್ಲಿ ಸೀಮೆಎಣ್ಣೆಯ ಬುಡ್ಡಿದೀಪದ ಬೆಳಕಿನಲ್ಲಿಯೇ ಓದಿದ್ದಾದರೂ, ಒರಳು ಕಲ್ಲಿನಲ್ಲಿ ದೋಸೆಗೆ ರುಬ್ಬಿ ಗೊತ್ತಿದ್ದರೂ, ಈಗ ಕರೆಂಟ್ ಇಲ್ಲದಿದ್ದರೆ ಇಷ್ಟೆಲ್ಲಾ ಕಷ್ಟವಾಗುತ್ತದೆ! ಕಣ್ಣಿಗೆ ಕಾಣದ ವಿದ್ಯುತ್ ನಮ್ಮನ್ನು ಅದೆಷ್ಟು ದಾಸ್ಯಕ್ಕೊಳಪಡಿಸಿದೆ! ಹಾಗಾದರೆ, ವಿದ್ಯುತ್ ಸಂಪರ್ಕವೇ ಇಲ್ಲದ ಮನೆಗಳಲ್ಲಿ ಜನ ನೆಮ್ಮದಿಯಿಂದ ಇರುವುದಿಲ್ಲವೇ….ಮಲೆನಾಡು, ಕರಾವಳಿಯ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ವಾರಗಟ್ಟಲೇ ಕರೆಂಟ್ ಇಲ್ಲದಿರುವುದೂ ಇದೆ. ಹಾಗಾಗಿ ಇದು ವಿದ್ಯುತ್ ದಾಸರ ಮನೆಯ ಕಥೆ.. .
– ಹೇಮಮಾಲಾ.ಬಿ