ಗುಬ್ಬಣ್ಣನ ದಶಾವತಾರ ಮತ್ತು ಇತರ ಪ್ರಹಸನಗಳು
‘ಎಲ್ಲಾದರೂ ಇರು, ಎಂತಾದರೂ ಇರು; ಎಂದೆಂದಿಗು ನೀ ಕನ್ನಡವಾಗಿರು’ – ಎಂಬ ಕುವೆಂಪುರವರ ಕವಿವಾಣಿಯನ್ನು ನಾವೆಲ್ಲಾ ಕೇಳಿದ್ದೇವೆ. ಆಧುನಿಕತೆಯತ್ತ ದಾಪುಗಾಲಿಡಬೇಕಾದ ಪ್ರಸ್ತುತ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲು ಬಹಳ ಕಷ್ಟ, ಆದರೂ ಖಂಡಿತಾ ಸಾಧ್ಯವಿದೆ ಎಂದು ಪ್ರಮಾಣೀಕರಿಸಿ ತೋರಿಸಿದವರು ಶ್ರೀ ನಾಗೇಶ, ಮೈಸೂರು.
ಮೂಲತ: ಮೈಸೂರಿನವರಾದ ಶ್ರೀ ನಾಗೇಶ್ ಅವರು ಉದ್ಯೋಗ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದಾರೆ. ತನ್ನ ಸುತ್ತುಮುತ್ತಲಿನ ವಿಚಾರಗಳಿಗೆ ಹಾಸ್ಯದ ಲೇಪನ ಕೊಟ್ಟು ಹಲವಾರು ಲಘುಬರಹ, ಕವನ, ಕಥೆ,ಲೇಖನಗಳನ್ನು ಬರೆದಿದ್ದಾರೆ. ವಿದೇಶದಲ್ಲಿದ್ದರೂ ಕನ್ನಡಾಂಬೆಗೆ ಚಿರಋಣಿಯಾಗಿದ್ದುಕೊಂಡು, ಹಳೆ ಸಾಲವನ್ನು ತೀರಿಸಬೇಕಾದ ಹೊಣೆ ಹೊತ್ತವರಂತೆ ನಿರಂತರವಾಗಿ, ವಿನೂತನವಾಗಿ, ವಿವಿಧ ಆಯಾಮಗಳಲ್ಲಿ ಬರೆಯಬೇಕೆಂಬ ಇವರ ಆಸಕ್ತಿ ಮತ್ತು ಪರಿಶ್ರಮ ಶ್ಲಾಘನೀಯ.
‘ಗುಬ್ಬಣ್ಣನ ದಶಾವತಾರಗಳು ಮತ್ತು ಇತರ ಪ್ರಹಸನಗಳು’– ಈ ಲಘುಬರಹಗಳ ಸಂಕಲನದಲ್ಲಿ ಕಾಲ್ಪನಿಕ ನಾಯಕ ‘ಗುಬ್ಬಣ್ಣ’ನ ವಿಶಿಷ್ಟ ನಡಾವಳಿಗಳ ಮೂಲಕ ನಗು ಉಕ್ಕಿಸಿದ್ದಾರೆ. ತಮ್ಮ ಉದ್ಯೋಗ ಜಗತ್ತಿನ ಆಗು-ಹೋಗುಗಳು, ಆಧುನಿಕ ಉಪಕರಣಗಳು, ಸಿಂಗಾಪುರದ ಕೆಲವು ವಿದ್ಯಮಾನಗಳು, ಭಾಷಾ-ವಿಶೇಷಗಳು, ಆಚಾರ-ವಿಚಾರಗಳು, ಸಹಜವಾಗಿ ಕೆಲವು ಲೇಖನಗಳಲ್ಲಿ ಅಲ್ಲಲ್ಲಿ ತನ್ನ ಛಾಪನ್ನು ಮೂಡಿಸಿವೆ.
ಶ್ರೀ ನಾಗೇಶ್ ಅವರ ಕನ್ನಡ ಸೇವೆ ಇನ್ನಷ್ಟು, ಮತ್ತಷ್ಟು ಹೆಚ್ಚಾಗಲಿ ಎಂದು ಆಶಿಸುತ್ತೇವೆ.
– ಸಂಪಾದಕಿ
ಸುರಗಿ ಬಳಗಕ್ಕೆ ಅಭಿನಂದನೆಗಳು. ಶ್ರೀ ನಾಗೇಶ್ ಅವರ ಹರಟೆಗಳನ್ನು ಇ-ಪುಸ್ತಕರೂಪದಲ್ಲಿ ಬಹಳ ಸುಂದರವಾಗಿ ಪ್ರಕಟಿಸಿದ್ದೀರಿ. ಓದು ಕೂಡ ಉಚಿತ ! ಧನ್ಯವಾದಗಳು. ಆದಷ್ಟೂ ಬೇಗ ಹೊತ್ತಿಗೆ ರೂಪದಲ್ಲೂ ಬರಲೆನ್ನುವ ಹಾರೈಕೆ.