ಬೊಗಸೆಬಿಂಬ

ರೈತನ ಪರವಾಗಿ…

Share Button

Divya Ishan

ಊರ ಹಳ್ಳಿ, ಕೆರೆ, ನಾಲೆಗಳೆಲ್ಲಾ ಬತ್ತಿ ಬರಿದಾಗಿವೆ ಎಂಬ ರೈತನ ಗೋಳಿಗೆ ಕೆಲವರ ಬೇಜವಾಬ್ದಾರಿ ಪ್ರತಿಕ್ರಿಯೆ  ನಿಮ್ಮಂತ ರೈತರು ಹೊಳೆ, ಕೆರೆಗೆ ಪಂಪ್‌ಸೆಟ್ಟು ಇಟ್ಟಿದ್ದೇ ಇದಕ್ಕೆಲ್ಲಾ ಕಾರಣ ಎಂದು. ಸಾಲವೆಂಬ ಶೂಲ ಅಲ್ಲಲ್ಲಿ ಕೆಲ ರೈತರನ್ನ ಬಲಿ ತೆಗೆದುಕೊಳ್ಳತ್ತಿದ್ದರೆ, ಇಂತಹ ಘೋರ ಅಪವಾದ ಇಡೀ ರೈತಾಪಿ ವರ್ಗವನ್ನೇ ನೇಣಿಗೇರಿಸುವುದರಲ್ಲಿ ಸಂಶಯವಿಲ್ಲ.

ಹಳ್ಳಿ ಮೂಲೆಗಳಲ್ಲಿ ಯಾರಿಗೂ ಉಪದ್ರವವಾಗದಂತೆ ನಮ್ಮೆಲ್ಲರ ಅನ್ನ ಬೆಳೆಯುತ್ತಿರುವ ರೈತರ ಮೇಲೆ ಇಂತಹ ಕಟು ಟೀಕೆ ಎಷ್ಟರ ಮಟ್ಟಿಗೆ ಸಮಂಜಸ? ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’… ಎಂಬಂತೆ ಪ್ರಕೃತಿ ದತ್ತ ಜಲಸಂಪನ್ಮೂಲವನ್ನು ಮೊಗೆದು ಬೆಳೆ ಬೆಳೆಯುತ್ತಿರುವ ರೈತನನ್ನು ದೂಷಿಸುವ ಮೊದಲು ಪ್ರಕೃತಿಯ ಒಡಲನ್ನು ಬಗೆದು ಖಜಾನೆ ತುಂಬಿಕೊಳ್ಳುತ್ತಿರುವ ರಿಯಲ್ ಎಸ್ಟೇಟ್, ಗಣಿಗಾರಿಕೆ, ಮರಳು ದಂಧೆಯಂತಹ ಪ್ರಕೃತಿ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವವರ ವಿರುದ್ಧವಿರಲಿ ಕೂಗು. ರೈತ ಬಡವನವೇ ಇರಬಹುದು. ಆದರೆ ಪ್ರಕೃತಿಯ ಮಡಿಲಿಗೆ, ಕನ್ನ ಹಾಕುವಷ್ಟು ಭಂಡನಲ್ಲ್ಲ.

ಕೃಷಿಗೆ ಹೊಳೆ, ಕೆರೆಗಳ ನೀರು ಉಪಯೋಗಿಸುವುದು ಸಲ್ಲ ಎಂದಾದಲ್ಲಿ ‘ಬಿಸ್ಲೇರಿ ವಾಟರ್’ನ ಉಪಯೋಗಿಸಬೇಕೆ? ಪ್ರಕೃತಿಯ ಸಂಪನ್ಮೂಲದ ಕಿಂಚಿತ್ತಾದರೂ ಸದುಪಯೋಗವಾಗುತ್ತಿರುವುದೇ ಆದಲ್ಲಿ ಅದು ರೈತಾಪಿ ವರ್ಗದಿಂದ ಮಾತ್ರ ಎಂಬುದೇ ಹೆಮ್ಮೆಯ ವಿಷಯ. ರೈತಾಪಿಗಳ ಈ ಪ್ರಯತ್ನ ಶ್ಲಾಘನೀಯವೇ ಹೊರತು ಖಂಡನೀಯವಲ್ಲ. ಬೆವರು ಸುರಿಸಿ ರೈತ ಭೂತಾಯಿಯಿಂದ ಪಡೆಯುತ್ತಿರುವುದು ನಮ್ಮೆಲ್ಲರ ಅನ್ನವನ್ನು ಹೊರತು ಚಿನ್ನವನ್ನಲ್ಲ. ಈ ಅನ್ನವೆಂಬ ಚಿನ್ನದ ಬೆಲೆ ತಿಳಿಯುವುದು ರೈತಾಪಿ ವರ್ಗ ಕೈಚಲ್ಲಿ ಕುಳಿತಾಗ. ಆ ದಿನ ಬಹು ದೂರವೇನಿಲ್ಲ. ಎಲ್ಲರ ಅನ್ನ ಬೆಳೆಯುವ ದೈವ ಸ್ವರೂಪಿ ರೈತನ ನಿಂದನೆ ಮಹಾ ಪಾಪವೆಂಬುದರ ಅರಿವಿರಲಿ. ಏಕೆಂದರೆ ರೈತ ಒಲಿದರೆ ಮಾತ್ರ ನಮಗೆ ಅನ್ನ, ಮುನಿದರೆ ಮಣ್ಣು. ಅಂದಹಾಗೆ ರೈತರೇನು ಮುನ್ನೂರ ಅರವತ್ತೈದು ದಿನಗಳೂ ಹೊಳೆ ಕರೆಗಳ ನೀರನ್ನು ಕೃಷಿಗೆ ಉಪಯೋಗಿಸುವುದಿಲ್ಲ. ಬಿರು ಬೇಸಿಗೆಯಲ್ಲೂ ಅವರು ಹೊಳೆ ನೀರಿಗೆ ಮೂರೆ ಹೋಗದಿದ್ದರೆ ನಾವು ಮಣ್ಣು ಮುಕ್ಕ ಬೇಕಾದಿತು.

farmer drought

ನಮ್ಮ ದೇಶದ ಬಹಳಷ್ಟು ರೈತರು ಅನಕ್ಷರಸ್ಥರಿರಬಹುದು. ಆದರೆ ಅವಿವೇಕಿಗಳಂತೂ ಖಂಡಿತಾ ಅಲ್ಲ. ಭೂತಾಯಿಯ ವಿರುದ್ಧ ನಡೆದರೆ ಹುಲ್ಲು ಕಡ್ಡಿಯೂ ಬೆಳೆಯಲು ಅಸಾಧ್ಯವೆಂಬ ಸಾಮಾನ್ಯ ಪರಿಜ್ಞಾನ ಅವರಿಗಿದ್ದೇ ಇದೆ. ಮಳೆ ನೀರ ಕೊಯ್ಲು, ಹನಿ ನೀರಾವರಿ ಅಂತೆಲ್ಲಾ ಮಳೆ – ಬೆಳೆ ಎರಡನ್ನೂ ಕಾಯ್ದುಕೊಳ್ಳಲು ಹೆಣಗಾಡುತ್ತಿರುವ ರೈತರನ್ನು ಟೀಕಿಸುವುದರ ಬದಲು ಮನೆ ಟೆರೇಸಿನಲ್ಲಿ ಈಜುಕೊಳ, ಅಂಗಳದಲ್ಲಿ ಕಾರಂಜಿ ಎಂದು ಸಾವಿರಾರು ಲೀಟರ್ ನೀರನ್ನು ಪೋಲು ಮಾಡಿ ಐಶಾರಾಮದಿಂದ ಬದುಕುತ್ತಿರುವ ನಮ್ಮ ಸಮಾಜದ ಶ್ರೀಮಂತ ಹಾಗೂ ಪ್ರಭಾವ ಶಾಲಿಗಳನ್ನು ವಿರೋಧಿಸಲಿ ಇದೇ ಸಂಕುಚಿತ ಮನೋಭಾವದ ಜನಗಳು. ರೈತ ಕೃಷಿಗೆ ನೀರು ಬಳಸಿ ಹೊಳೆ- ಕೆರೆಗಳು ಬರಿದಾದವೆಂದಾದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮಲ್ಪೆ ಬೀಚ್ ನಮ್ಮ ಸೆಲೆಬ್ರಿಟಿಗಳ ಮನೆಯಂಗಳದಲ್ಲಿರುವುದು ಅಸಾಧ್ಯವೇನಲ್ಲ. ಇದರ ಬಗ್ಗೆ ಗಂಭೀರವಾಗಿ ಚಿಂತಿಸಲಿ ರೈತಾಪಿಯ ನಿಂದಕರು.

ಇದು ನೀರಿನ ಅಭಾವಕ್ಕೆ ರೈತನ ಹೊಣೆ ಮಾಡುತ್ತಿರುವುದು ಒಂದೆಡೆಯಾದರೆ ಇನ್ನೊಂದಡೆ ನಮ್ಮ ರೈತಾಪಿ ಮೇಲಿರುವ ಘನಘೋರ ಅಪವಾದ ‘ಭೂಮಿ ಒತ್ತುವರಿ’. ದೇಶದ ಒಟ್ಟು ಆದಾಯದಲ್ಲಿ ಕೃಷಿಯದು ಸಿಂಹಪಾಲಿರುವುದೆಂದು ನಾವೆಲ್ಲಾ ಓದಿಕೊಂಡಿದ್ದೇವೆ ತಿಳಿದುಕೊಂಡಿದ್ದೇವೆ(?) ಕೃಷಿ ಭೂಮಿಗೆಂದು ಜಾಗ ಒತ್ತುವರಿ ಆಗಿದ್ದು ಹೌದೇ ಆಗಿದ್ದಲ್ಲಿ ಈ ಹೊತ್ತಿಗೆ ನಮ್ಮ ನಾಡು ಬಂಗಾರವಾಗುತ್ತಿತ್ತೇ ಹೊರತು ಬೆಂಗಾಡಾಗಿರುತ್ತಿರಲಿಲ್ಲ. ಈ ಅಪವಾದದ ಇನ್ನೊಂದು ಮುಖ ನದಿ, ಕೆರೆಗಳ ಒತ್ತುವರಿ. ನಮ್ಮ ದೇಶದಲ್ಲಿ ಕೃಷಿಭೂಮಿಗಾಗಿ ಗಣನೀಯ ಮಟ್ಟದಲ್ಲಿ ನದಿಗಳ ಒತ್ತುವರಿ ಆಗಿದ್ದೇ ಹೌದಾದಲ್ಲಿ ‘ಸಿಲಿಕಾನ್ ಸಿಟಿ’ ಎಂದು ಕರೆಯಿಸಿಕೊಳ್ಳುತ್ತಿರುವ ಬೆಂಗಳೂರು ‘ಹಸಿರು ನಗರಿ’ ಎಂಬ ಬಿರುದು ಪಡೆದಿರುತ್ತಿತ್ತು. ಧರ್ಮಾಂಬುಧಿ ಕೆರೆ, ಕೋರಮಂಗಲ ಕೆರೆ, ತಿಪ್ಪಗೊಂಡನ ಹಳ್ಳಿ ಕೆರೆ ಹೀಗೆ ನಾನಾ ಕೆರೆಗಳ ಸಮಾಧಿ ಮೇಲೆ ಬೆಂಗಳೂರಿನಲ್ಲಿ ಎದ್ದು ನಿಂತಿರುವುದು ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳು, ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು ವಿನ: ಹೊಲ-ತೋಟವಲ್ಲ. ಇದಕ್ಕೂ ರೈತನೇ ಹೊಣೆಯೇ? ರೈತಾಪಿ ಕೃಷಿಗಾಗಿ ಭೂಮಿ ಒತ್ತುವರಿ ಮಾಡಿಲ್ಲವೆಂದಲ್ಲ. ಆದರೆ ಬಕಾಸುರರಂತೆ ಪ್ರಕೃತಿಯನ್ನೇ ಕಬಳಿಸುತ್ತಿರುವ ಪ್ರಭಾವಿ ಉದ್ಯಮಿಗಳು, ರಾಕಕಾರಣಿಗಳ ಮುಂದೆ ಇವರ ಸ್ವಾರ್ಥ ನಗಣ್ಯ.

ದೇಶದಲ್ಲಿ ಕುಡಿಯಲು ನೀರಿಲ್ಲದೆ ಹಾಹಾಕಾರದ ನಡುವೆ ಐ.ಪಿ.ಎಲ್. ಕ್ರಿಕೇಟ್‌ನ ದುಂದು ಹಾವಳಿ ಬೇಕಿತ್ತೇ? ಹಣ ನೀರಿನಂತೆ ಪೋಲಾಗುತ್ತಿದೆ. ನೀರು ದುರುಪಯೋಗವಾಗುತ್ತಿದೆ. ಕ್ರಿಕೆಟ್ ಗ್ರೌಂಡ್ ಅನ್ನು ತೇವವಾಗಿಡಲು ಎಷ್ಟು ನೀರು ವ್ಯಯವಾಗುತ್ತಿದೆ ಎಂಬುದರ ಬಗ್ಗೆ ಯಾರಿಗೂ ಗಮನವಿಲ್ಲವೇ? ಕೈಗಾರಿಕೀಕರಣದಿಂದ ಮಲಿನಗೊಂಡ ನದಿಗಳ ನೀರು ನಾಯಿ ಮೊಲೆಯ ಹಾಲಿನಂತೆ ನಿರುಪಯೋಗವಾಗುತ್ತಿರುವುದು ಶೋಚನೀಯವಲ್ಲವೇ?
ಕೋತಿ ತಾನು ಬೆಣ್ಣೆ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಪರಿಸರ ನಾಶಮಾಡಿ ಬರಗಾಲ ಸೃಷ್ಟಿಸುತ್ತಿರುವ ಅಂಶಗಳು, ವರ್ಗಗಳೇ ಬೇರೆ ಆದರೆ ಅಪವಾದ ಮಾತ್ರ ನಿಸ್ಸಹಾಯಕ ರೈತನ ಮೇಲೆ! ಎಂತಹ ವಿಪರ್ಯಾಸ ಅಲ್ಲವೇ?

IPL- water

ಎತ್ತಿಗೆ ಜ್ವರ ಬಂದಿತೆಂದು ಕೋಣಕ್ಕೆ ಬರೆ ಎಳೆದಂತೆ ನಗರಗಳಿಗೆ ನೀರು, ವಿದ್ಯುತ್ ಸರಬರಾಜಿಗಾಗಿ ಹಳ್ಳಿಗಳನ್ನು ಕತ್ತಲ ಕೂಪಕ್ಕೆ ದೂಡಿ, ನದಿಗಳ ತಿರುವಿಗೆ ಹುನ್ನಾರ ನಡೆಯುತ್ತಿದೆ. ವಿದೇಶಿ ಬಂಡವಾಳ, ಉದ್ಯೋಗ ಸೃಷ್ಠಿ ಎಂಬ ನೆಪಗಳಿಂದ ಕೈಗಾರಿಕೆಗಳಿಗಾಗಿ ಕೃಷಿ ಭೂಮಿ ಕಬಳಿಕೆಯಾಗುತ್ತಿರುವುದು ನಗ್ನ ಸತ್ಯ. ರೈತರು ಭೂಮಿ ಒತ್ತುವರಿ ಮಾಡುತ್ತಿದ್ದಾರೆಂದೂ ಬೊಬ್ಬೆ ಹಾಕುತ್ತಿರುವ ಜನಗಳು ಕೃಷಿಗಾಗಿ ನಗರದ ತೆರವು ಅಥವಾ ಕಾರ್ಖಾನೆಯ ತೆರವು ಎಂಬ ಒಂದೇ ಒಂದು ನಿದರ್ಶನ ಕೊಡಲಿ.

ಸ್ಪೆಶಲ್ ಇಕಾನಾಮಿಕ್ ಜೋನ್ (SEZ) ಪಾಲಿಸಿಯನ್ನು ನಮ್ಮ ಹಿಂದಿನ ಸರ್ಕಾರ 2000 ನೇ ಇಸವಿ ಏಪ್ರಿಲ್‌ನಲ್ಲಿ ಜಾರಿಗೆ ತಂದಿತು. ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಅಂತರಾಷ್ಟ್ರೀಯ ವ್ಯಾಪಾರದ ಬೆಳವಣಿಗೆಯ ದಿಸೆಯಲ್ಲಿ ಭೂಮಿ ತ್ಯಾಗ ಮಾಡಿದ್ದು ನಮ್ಮ ರೈತರೇ. ಆದರೆ ನಮ್ಮ ಸರ್ಕಾರ ಕೃಷಿಭೂಮಿಗೆ ಪರಿಹಾರವಾಗಿ ಕೊಟ್ಟ ಧನ ಮಾತ್ರ ತಿಲ ಸಮಾನ. ಒರಿಸ್ಸಾದ ಕಲಿಂಗ ನಗರದಲ್ಲಿ SEZ ಎಂದು ವಶ ಪಡಿಸಿಕೊಂಡ ಬಂಗಾರದಂತ ಕೃಷಿಭೂಮಿಗೆ ಸರ್ಕಾರ ಕೊಟ್ಟ ಪರಿಹಾರ ಧನ ಅಲ್ಲಿಯ ನೆಲದ ಮಾರುಕಟ್ಟೆ ಬೆಲೆಯ 1:10 ರಷ್ಟು ಮಾತ್ರ. ಎಂತಹ ವಂಚನೆ ಅಲ್ಲವೇ?.

ಕಸ್ತೂರಿ ರಂಗನ್ ವರದಿಯನ್ವಯ ಪಶ್ಚಿಮ ಘಟ್ಟಗಳಲ್ಲಾದ ಅರಣ್ಯ ಒತ್ತುವರಿ ತೆರೆಗೊಳಿಸುವ ಕಾರ್ಯಕ್ಕೆ ಮೊದಲ ಬಲಿಪಶು ರೈತ. ಕಾಡು ಕಡಿದು, ಗುಡ್ಡ ಉರುಳಿಸಿ ಎದ್ದು ನಿಂತಿರುವ ಕಾರ್ಖಾನೆಗಳು, ರೆಸಾರ್ಟ್‌ಗಳು, ಕಟ್ಟಡ ಸಮುಚ್ಚಯಗಳ ಒಂದೇ ಒಂದು ಇಟ್ಟಿಗೆ ಸಹ ಅಲಗಾಡಿಸುವ ತಾಕತ್ತು ನಮ್ಮ ಸರ್ಕಾರಕ್ಕಾಗಲೀ, ಅಧಿಕಾರಿಗಳಿಗಾಗಲೀ ಇಲ್ಲ. ಏಕೆಂದರೆ ಅವು ಶ್ರೀಮಂತರ, ಅಧಿಕಾರಿ ಶಾಹಿಗಳ, ಪ್ರಭಾವ ಶಾಲಿಗಳ ಸೊತ್ತು. ರೈತನ ಆಕ್ರಂದನಕ್ಕೆ ಎಲ್ಲರೂ ಜಾಣ ಕಿವುಡರು. ಮೊದಲೇ ರೈತಾಪಿಗಳು ಬಳಲಿ ಬೆಂಡಾಗಿದ್ದಾರೆ. ಅಂತಹದರಲ್ಲಿ ಇಂತಹ ಅರ್ಥಹೀನ ಹೇಳಿಕೆಗಳ ನೀಡುವ ಬೇಜವಾಬ್ದಾರಿ ಜನಗಳನ್ನು ಪ್ರೋತ್ಸಾಹಿಸುವುದು ಬೇಡ. ಭೂತಾಯಿ ಹಾಗೂ ಜನಗಳ ಸೇವೆ ಮಾಡುವ ಯೋಗ, ಯೋಗ್ಯತೆ ಎಲ್ಲರಿಗೂ ದಕ್ಕುವುದಿಲ್ಲ. ಈ ನಿಟ್ಟಿನಲ್ಲಿ ರೈತಾಪಿಗಳು ಸಮಾಜದಲ್ಲಿ ಅತ್ಯುನ್ನತ ವರ್ಗಕ್ಕೇರುತ್ತಾರೆ. ಪರಿಸರದ ನಿಜವಾದ ಸ್ನೇಹಿತರಿವರು. ನಾನು ಪಾಟೇಕರ್ ಅಂತಹ ಸಹೃದಯಿಗಳ ಸಮಾನ ನಾವು ರೈತರ ಆರ್ಥಿಕ ಸಮಸ್ಯೆಗಳಿಗೆ ನೆರವಾಗಲಾಗದಿದ್ದರೂ ಅವರನ್ನ ಕೀಳರಿಮೆಯಿಂದ ನೋಡದೆ ಗೌರವಿಸೋಣ.

ಕೃಷಿ ಈ ದೇಶದ ಬೆನ್ನೆಲುಬು. ರೈತ ಕೃಷಿಯ ಬೆನ್ನೆಲುಬು. ರೈತನ ಬೆನ್ನು ತಟ್ಟಿ ಫ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳೋಣ. ನಮ್ಮ – ನಿಮ್ಮೆಲ್ಲರ ನೈತಿಕ ಬೆಂಬಲವಿದ್ದಲ್ಲಿ ರೈತ ಎಂತಹ ಬವಣೆಗಳನ್ನು ಜಯಿಸಿ ಬಂಗಾರ ಬೆಳೆದು ನೆಲ, ಜಲ, ಜನರನ್ನ ಶ್ರೀಮಂತರಾಗಿಸುವುದಕ್ಕೆ ಶಕ್ಯನಾಗುತ್ತಾನೆ. ನಾವಿದ್ದೇವೆ ನಿಮ್ಮೊಡನೆ ಎಂದು ರೈತರಿಗೆ ಭರವಸೆ ನೀಡೋಣ. ಪರಿಸರ ರಕ್ಷಣೆ, ಕೃಷಿಯ ಉನ್ನತಿಗೆ ಪ್ರತಿಯೊಬ್ಬರೂ ಟೊಂಕ ಕಟ್ಟಿ ನಿಲ್ಲೋಣ.

ಒಕ್ಕೊರಲಿಂದ ಮೊಳಗಲಿ ಜೈ ಜವಾನ್ ಜೈ ಕಿಸಾನ್.

 

 – ದಿವ್ಯಾ ರಾವ್

 

7 Comments on “ರೈತನ ಪರವಾಗಿ…

  1. ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ…ಉತ್ತಮ ಬರಹ.

  2. Kalla raajakaaranigalilla diruttiddare…namma desha subheekksha vaahiruttiytu……raitarigondu kivimaatu….mundina malegaaldashtu hottige nimma jameeninalli ondondu hondavannu tegedu nimma jameeninalli bidda neeru pakkada jameeninalle inguva haageondu gundi maadikolli….

  3. ಚಿಂತನಶೀಲ ಬರವಣಿಗೆ ಪ್ರತಿಯೊಬ್ಬರು ಯೋಚಿಸಬೇಕು .ಆದರೆ ಯಾರು ತಲೆಕೆಡಿಸಿಕೊಳ್ಳುವುದಿಲ್ಲ ಅಷ್ಟೇ .

  4. ರೈತರು ನಮ್ಮ ದೇಶದ ಬೆನ್ನೆಲುಬು….ಅದನ್ನೇ ಮುರಿಯುತ್ತಿದ್ದಾರೆ ನಮ್ಮ ರಾಜಕಾರಿಣಿಗಳು…!!

  5. ಪ್ರಿಯ ದಿವ್ಯಾರವರೆ ನಿಜಕ್ಕೂ ಉತ್ತಮ ಬರಹವನ್ನೇ ನೀಡಿದ್ದೀರಿ. ಆದರೆ ನಮ್ಮ ನೈತಿಕ ಬೆಂಬಲವೊಂದೇ ರೈತನಿಗೆ ಸಾಲುವುದಿಲ್ಲ. ಬದಲಿಗೆ ನಮ್ಮಂತಹ ಅಕ್ಷರಸ್ಥರಿಗೆ ಉದ್ಯೋಗ ದೊರೆಯುತ್ತದೆಯೆಂಬ ಏಕೈಕ ಕಾರಣಕ್ಕ ವಿಶೇಷ ಆರ್ಥಿಕ ವಲಯಗಳಿಗೆ ಬೆಂಬಲ ಕೊಡುವುದನ್ನು ನಾವು ನಿಲ್ಲಿಸಬೇಕು. ನಮ್ಮ ಹಡಗಿನಂತ ಕಾರುಗಳು ಓಡಾಡುವುದಕ್ಕೆ ಅನುಕೂಲವಾಗಲಿಯೆಂದು ನಾವು ಚತುಷ್ಪತ ರಸ್ತೆಗಳಿಗೆ ಬೇಡಿಕೆಯಿಟ್ಟು ಪಡೆಯುವುದನ್ನು ನಿಲ್ಲಿಸಬೇಕು. ಹೀಗೆ ರೈತನಿಗೆ ಮುಳುವಾಗುವಂತಹ ಯಾವುದೇ ಯೋಜನೆಗಳಿಗೂ ಬೆಂಬಲ ನೀಡದೆ ಸರಕಾರದ ರೈತ ವಿರೋಧಿ ನೀತಿಯನ್ನು ವಿರೋಧಿಸಿದಾಗ ಮಾತ್ರ ನಮ್ಮೆಲ್ಲರ ಮಾತುಗಳಿಗೆ ಅರ್ಥ ಬರುತ್ತದೆ.
    ಈ ಬಗ್ಗೆ ಯೋಚಿಸುವದಿಕ್ಕಿನಲ್ಲಿ ನಿಮ್ಮೀ ಪುಟ್ಟ ಬರಹ ಻ಅನುವು ಮಾಡಿಕೊಟ್ಟಿದ್ದಕ್ಕೆ ದನ್ಯವಾದಗಳು.
    ನಿಮ್ಮ ಬರವಣಿಗೆ ಇನ್ನಷ್ಟು ಜನಪರವಾಗಿರಲೆಂದು ಹಾರೈಸುವೆ. ನಿಮ್ಮ ಮಿತ್ರ,-

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *