ಹೋಗಬೇಕಿದೆ
ಹೋಗುತ್ತೇನೆ ನಾನು
ನೋವುಗಳ ನುಂಗಲಾಗದೆ
ಬೆನ್ನಿಗಿರಿವ ಚೂರಿಗಳ ತಡೆಯಲಾಗದೆ!
ಹೋಗುತ್ತೇನೆ ನಾನು
ದ್ವೇಷದಲಿ ವಿಶ್ವಾಸವಿಡಲಾಗದೆ
ಪ್ರೀತಿಕರುಣೆಗಳ ತೊರೆಯಲಾಗದೆ!
ಕನಸುಗಳಿದ್ದದದ್ದು ನಿಜ
ರೆಕ್ಕೆಗಳೂ ಇದ್ದವು
ಹಾರಲು ಆಕಾಶವೂ ಇತ್ತು
ಅವಕಾಶವೂ ಇತ್ತು
ನೆಲದೊಳಗೆ ಹೂತು ಹೋದಕಾಲು
ಸ್ಥಾವರದ ಬಂಡೆಯನ್ನಾಗಿಸಿ ನಿಂತಲ್ಲೇ ಬೇರು ಬಿಟ್ಟು ಬಿಟ್ಟೆ!
ಈಗೆಲ್ಲಿ ನೋಡಿದರೂ ಅದೇ ಸುದ್ದಿ:
ಬಂದೂಕುಗಳು ಮೊರೆಯುತ್ತಿವೆ
ಬಾಂಬುಗಳುಸಿಡಿಯುತ್ತಿವೆ
ಹೋಗಲೇಬೇಕು ನಾನು
ಇಲ್ಲಿದ್ದು ಗೆಲ್ಲಲಾಗದೆ
ಸೋತು ತಲೆಬಾಗದಿರಲು
ಹೋಗಿಬಿಡುತ್ತೇನೆ ನಾನು
ಬಂದೂಕಗಳಿರದ ಅಂಬರದ ನಾಡಿಗೆ
ಬಾಂಬುಗಳು ಸಿಡಿಯದ ದೇವತೆಗಳೂರಿಗೆ
ಕನಸುಗಳನೆಲ್ಲ ಸುಟ್ಟು
ರೆಕ್ಕೆಗಳ ಕತ್ತರಿಸಿ
ಬೇರುಗಳ ತುಂಡರಿಸಿ
ಹೋಗುತ್ತೇನೆ ಮತ್ತೆ ಬರಲಾರದ ನಾಡಿನತ್ತ
ಕೆಡಿಸದಿರು ಚಿತ್ತ!
;
– ಕು.ಸ.ಮಧುಸೂದನರಂಗೇನಹಳ್ಳಿ