ಭಾಷೆಯು ಸೃಷ್ಟಿಸುವ ಸಂಭ್ರಮ…
ನಮ್ಮ ಯುವಯೋಧರು ಹಿಮಾಲಯ ಪರ್ವತಕಣಿವೆಗಳಲ್ಲಿ, ಮರುಭೂಮಿಯ ಸುಡುಬಿಸಿಲು-ಕೊರೆಯುವ ಚಳಿಯಲ್ಲಿ, ಭೋರ್ಗರೆಯುವ ಸಮುದ್ರದಲ್ಲಿ, ಕಟ್ಟೆಚ್ಚರದಿಂದ ನಿದ್ದೆಗೆಟ್ಟು ದೇಶ ಕಾಯುತ್ತಿದ್ದಾರೆ. ತಮ್ಮ ಕುಟುಂಬದಿಂದ ದೂರವಿರುವ ಅನಿವಾರ್ಯತೆಯೂ ಬಹಳಷ್ಟು ಮಂದಿಯನ್ನು ಕಾಡುತ್ತದೆ. ‘ಮೇರಾ ಭಾರತ್ ಮಹಾನ್’ ನಲ್ಲಿ ಇಂದು ನಾವೆಲ್ಲರೂ ನೆಮ್ಮದಿಯಿಂದ ಇರಲು ಅವರೇ ಮುಖ್ಯ ಕಾರಣ. ದೇಶ ಕಾಯುವ ಯೋಧರಿಗೆಲ್ಲರಿಗೂ ಶಿರಸಾ ನಮನಗಳು.
ಕಳೆದ ವಾರ, ಹುಬ್ಬಳ್ಳಿ-ಧಾರವಾಡ-ಕೂಡಲಸಂಗಮ -ಹಂಪೆಯ ಸುತ್ತುಮುತ್ತಲಿನ ಪ್ರೇಕ್ಷಣೀಯ ಸ್ಠಳಗಳಿಗೆ ಭೇಟಿ ಕೊಟ್ಟಿದ್ದಾಗ, ನಮ್ಮ ಕಾರಿನ ಸಾರಥಿಯಾಗಿದ್ದವರು ಶ್ರೀ ಶರಣಪ್ಪ ನವಲಿಯವರು. ನಮ್ಮ ಮಾತುಕತೆಯ ನಡುವೆ ಗೊತ್ತಾದ ವಿಚಾರವೇನೆಂದರೆ ಅವರು ಸೇನೆಯಿಂದ ನಿವೃತ್ತಿ ಹೊಂದಿ ತಾತ್ಕಾಲಿಕವಾಗಿ ಕಾರು ಚಲಾಯಿಸುವ ವೃತ್ತಿ ಮಾಡುತ್ತಿದ್ದಾರೆ .
ಶರಣಪ್ಪ ಅವರು ಯುದ್ಧಭೂಮಿಯ ಆತಂಕದ ಕ್ಷಣಗಳನ್ನು, ಪ್ರಕೃತಿ ವಿಕೋಪಗಳನ್ನು ತೀರಾ ಹತ್ತಿರದಿಂದ ಬಲ್ಲವರು. ಸೇನೆಯ ಶಿಸ್ತಿನ ಜೀವನ,ಪ್ರತಿಕೂಲ ಹವಾಮಾನ, ಕ್ಲಿಷ್ಟ ಸನ್ನಿವೇಶಗಳಲ್ಲಿ ಆಹಾರದ ಅಲಭ್ಯತೆ….ಇತ್ಯಾದಿ ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕಾರು ಚಲಾಯಿಸಿದರು.
ಹಿಂದೆ ಜೈಸಲ್ಮೇರ್ ಗೆ ಹೋಗಿದ್ದಾಗ, ನಾವು ಕನ್ನಡ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಗಡಿಭದ್ರತಾ ಯೋಧರೊಬ್ಬರು ಸಂತಸ ಪಟ್ಟು ನಮ್ಮನ್ನು ಮಾತನಾಡಿಸಿದುದನ್ನು ನೆನಪಿಸಿಕೊಂಡೆ. ಕೂಡಲೇ ಶರಣಪ್ಪ ಹೀಗೆಂದರು “ಕರ್ನಾಟಕದ ಗಡಿ ದಾಟಿದ ಮೇಲೆ, ಎಲ್ಲೆಲ್ಲೋ ಇರ್ತೇವಲ್ಲ…ಅಲ್ಲಿ ಯಾರಾದ್ರೂ ಕನ್ನಡ ಪದ ಮಾತಾಡೋರು ಬಂದ್ರೆ ಅಮೃತ ಸಿಕ್ಕ ಹಾಗೆ ಆಗುತ್ತೆ… “
ಇದೇ ಅಲ್ಲವೇ ನಿಜವಾದ ಭಾಷಾ ಪ್ರೇಮ ಮತ್ತು ಭಾಷೆಯು ಸೃಷ್ಟಿಸುವ ಸಂಭ್ರಮ!
– ಹೇಮಮಾಲಾ.ಬಿ
ದೂರದ ಬಿಹಾರದಲ್ಲಿ ನನಗೂ ಹಾಗೆಯೇ ಅನ್ನಿಸುತ್ತದೆ. ಕನ್ನಡ ಮಾತನಾಡುವವರು ಯಾರೂ ಸಿಗ್ತಾ ಇಲ್ಲ. ದೂರವಾಣಿಯಲ್ಲಿ ಮಾತ್ರ ಸಾಧ್ಯ.
ಚೀನಾ- ಭಾರತ ಗಡಿಯಲ್ಲಿ , ಆ ಕಠಿಣ ಹವಾಮಾನದಲ್ಲಿ ನಮ್ಮ ಯೋಧರ ಹಗಲಿರುಳಿನ ವ್ಯತ್ಯಾಸವಿಲ್ಲದ ಬದುಕು ಕಂಡಿದ್ದು ಬದುಕಿಡೀ ಮರೆಯಲಾರೆ.