ಹೊಸವರ್ಷಕ್ಕೆ ಮಹಿಳಾ ಪರ ನಿರೀಕ್ಷೆ
ವರ್ಷದ ಕಾಲಗಣನೆ ನಮ್ಮ ಹಿಂದೂ ರೀತ್ಯ ಸೌರಮಾನ ಮತ್ತು ಚಾಂದ್ರಮಾನ ಎಂಬುದಾಗಿ ಎರಡು ರೀತಿಯಲ್ಲಿ ಪ್ರಮುಖವಾದುದು.ನಮ್ಮ ಈಗಿನ ಎಲ್ಲ ವ್ಯವಹಾರಗಳಲ್ಲೂ ಬ್ರಿಟಿಷರಿಂದ ಬಳುವಳಿಯಾಗಿ ಬಂದ ಆಂಗ್ಲ ಪದ್ಧತಿ.ಆದರೆ ನಮ್ಮ ಆಚರಣೆ,ಜ್ಯೋತಿಷ್ಯಕ್ಕೆ ಸಂಬಂಧ ಪಟ್ಟಂತೆ ನಮ್ಮ ಹಿಂದೂ ರೀತ್ಯ ಉಪಯೋಗಿಸಿ ಕೊಳ್ಳುತ್ತೇವೆ.ಇದೀಗ ದೇಶದೆಲ್ಲೆಡೆ ಆಂಗ್ಲ ಪದ್ಧತಿ ಆಚರಿಸುವಾಗ,ನಮ್ಮೆಲ್ಲ ವಹಿವಾಟುಗಳೂ ಇದಕ್ಕೆ ಹೊಂದಿಕೊಂಡಿರುವಾಗ ನಾವದನ್ನೂ ಒಪ್ಪಿಕೊಳ್ಳಲೇ ಬೇಕಲ್ಲವೇ?
ದಿನಗಳು ಉರುಳುತ್ತವೆ. ಕಾಲ ಸರಿಯುತ್ತದೆ.ಮತ್ತೆ ಬಂದೇ ಬಂತು ಹೊಸವರ್ಷ!.ಹೊಸವರ್ಷಕ್ಕೆ ಹೊಸನಿರೀಕ್ಷೆ ಬೇಕಲ್ಲವೇ? ಹೌದು.ಜನಮಾನಸರಿಗೊದಗಿದ ಆಧುನಿಕ ಅನಾಹುತ,ವೈಪರೀತ್ಯಗಳನ್ನು ಚಿಂತಿಸಿದಾಗ ನಾಗರಿಕರ ಮನ ತಲ್ಲಣಗೊಳ್ಳುತ್ತಿದೆ.ಅದರಲ್ಲೂ ಮಹಿಳಾಲೋಕಕ್ಕೊದಗಿದ ಕಂಟಕ ವ್ಯಾಘ್ರರೀತಿಯದು!. ರಾಕ್ಷಸೀಯ ಪ್ರವೃತ್ತಿಯದು!!.ಅಕ್ಷಮ್ಯಅಪರಾಧ!!!
|ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ| ಎಂಬ ಸುಭಾಷಿತವನ್ನು ಕೇಳಿದ್ದೇವೆ. ಆದರೆ ಈ ಆಧುನಿಕ ಸಮಾಜದಲ್ಲಿ ಆಗುತ್ತಿರುವುದೇನು? ಹೆಣ್ಣುಶಿಶು ಭೂಮಿಗೆ ಬಿದ್ದ ಕ್ಷಣದಿಂದಲೇ ಅದನ್ನು ಕಾಮುಕರ ಕಣ್ಣಿಂದ ರಕ್ಷಣೆ ಮಾಡುವ ಹೊಣೆ ಹೆತ್ತ ಮಾತೆಗಿರಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ಯಾವುದೇ ಸುದ್ದಿವಾಹಿನಿಯಲ್ಲಿ ಬರುವುದು ಒಬ್ಬಳು ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ! ಜನ್ಮಕೊಟ್ಟ ತಂದೆಯಿಂದ ಅತ್ಯಾಚಾರಕ್ಕೊಳಗಾಗುವುದು,
ಅಥವಾ ಬೇರೆಯವರಿಗೆ ಈ ನಿಟ್ಟಿನಲ್ಲಿ ಮಾರುವುದು,ಇಂತಹ ಘಟನೆಗಳನ್ನೆಲ್ಲ ಈ ಹಿಂದೆ ಊಹಿಸುವುದಕ್ಕೂ ಸಾಧ್ಯವಿರಲಿಲ್ಲ.ರಾಮಾಯಣದ ರಾವಣನೋ ಮಹಾಭಾರತದ ದುಶ್ಯಾಸನನೋ ಇವರುಗಳೆಲ್ಲ ಈಗಿನ ಕಾಮುಕ ಕಂಟಕರಿಂದ ಉತ್ತಮರು ಎನ್ನದೆ ವಿಧಿಯಿಲ್ಲ.ದುರ್ಘಟನೆ, ದುಷ್ಟ ಸಮಾಚಾರಗಳನ್ನ ಮಾತನಾಡುವಾಗ, “ ಕಾಲಕೆಟ್ಟುಹೋಯ್ತು”ಎಂಬುದಾಗಿ ಜನರ ಬಾಯಿಂದ ಬರುವುದು ವಾಡಿಕೆ.ಆದರೆ ಕಾಲಕೆಡುವುದಲ್ಲ.ಜನರೇ ಕೆಡುತ್ತಾರೆ.ಕೆಡಿಸುತ್ತಾರೆ. ಹೆಚ್ಹುತ್ತಿರುವ ಲೈಂಗಿಕ ಕಿರುಕುಳಗಳನ್ನು ತಡೆ-ಹಿಡಿಯುವ ಬಗೆ ಹೇಗೆ ಎಂಬುದಾಗಿ ನಿರಂತರ ಚಿಂತಿಸಬೇಕಾಗುತ್ತದೆ.
ಹಿಂದೆ ಬಾಪೂಜಿ ಹೇಳಿದ್ದರು “ಮಧ್ಯರಾತ್ರಿಯಲ್ಲಿ ನಡುರಸ್ತೆಯಲ್ಲಿ ಹೆಣ್ಣು ನಿರ್ಭಯವಾಗಿ ನಡೆದಾಡುವಂತಾದರೆ, ನಮ್ಮ ಸ್ವಾತಂತ್ರ್ಯಕ್ಕೆ ಸರಿಯಾದ ಅರ್ಥ ಬರುತ್ತದೆ” ಎಂದು.ಆದರೆ,ಈಗ ಹಾಡುಹಗಲೇ ಹೆಣ್ಣುಮಕ್ಕಳು ನಿರ್ಭಯವಾಗಿ ಓಡಾಡುವುದಕ್ಕಾಗುತ್ತದೆಯೇ? ಹೆಣ್ಣು ಸಂತಾನಕ್ಕೆ ನಿರ್ಭಯತೆ,ರಕ್ಷಣೆ ಹೊಸ ವರ್ಷದಲ್ಲಿ ನಿರೀಕ್ಷಿಸ ಬಹುದೇ?
ನಿರ್ಭಯತೆ ನಮ್ಮ ನಾಡಿನಲ್ಲಿ ಯಾವಾಗ ಸಿಕ್ಕೀತು?
ಇಂದಿನ ಸಮಾಜ;–ಆಧುನಿಕ ಸಮಾಜ ವಿದ್ಯಾವಂತರೆನಿಸಿಕೊಂಡಿದ್ದಾರೆ.ಆದರೆಇಂದು,ಬಹುತೇಕವಿದ್ಯಾವಂತರೆಸಿಕೊಂಡವರಲ್ಲಿ ಆ ವಿದ್ಯೆಗಿರಬೇಕಾದ ವಿನಯ,ನೀತಿ,.ಸನ್ನಡತೆ,ಸಚ್ಹಾರಿತ್ರ್ಯ ಮೊದಲಾದ ಮೌಲ್ಯಗಳ ಕೊರತೆ ಎದ್ದು ಕಾಣುತ್ತದೆ.ಗುರು-ಹಿರಿಯರ,ಮಾತಿಗೆ ಬೆಲೆಕೊಡದೆ ಸ್ವೇಚ್ಹಾಚಾರಿಗಳೇ ತುಂಬಿಕೊಂಡು,ಕೊಲೆ,ಸುಲಿಗೆ,ಲೈಂಗಿಕ ಹಗರಣ ತನ್ನ ಕಬಂಧ ಬಾಹುವನ್ನೆ ಚಾಚಿದೆ!.ಇಂತಹ ಹೀನಾಯ ಪರಿಸ್ಥಿತಿಗೆ ಎಲ್ಲಿ ಪರಿಹಾರ?ಶಾದಿಭಾಗ್ಯ,ಅನ್ನಭಾಗ್ಯ ಕ್ಕಿಂತ ಶೀಲ ಭಾಗ್ಯವೇ ಹೆಣ್ಣಿಗೆ ಮುಖ್ಯ. ಎಂದರಿತು ಸರಕಾರವೇ ಹೆಣ್ಣಿನ ರಕ್ಷಣೆಗೆ ಪ್ರಥಮತ: ಶೀಘ್ರ ಕಾರ್ಯ ರೂಪಿಸಲೇಬೇಕು.
ಹೊಸ ವರ್ಷದಲ್ಲಿ ಮಹಿಳಾಸಂತಾನಕ್ಕೆ ಸರಿಯಾದ ರಕ್ಷಣಾಭಾಗ್ಯವನ್ನ ನಿರೀಕ್ಷಿಸೋಣವೇ?
– ವಿಜಯಾಸುಬ್ರಹ್ಮಣ್ಯ,ಕುಂಬಳೆ