ಸೋನ್ಸ್ ಫಾರ್ಮ್ ನ ಸಸ್ಯಸಿರಿಯ ವೈವಿಧ್ಯ
ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆಯಿಂದ ಕಾರ್ಕಳಕ್ಕೆ ಹೋಗುವ ದಾರಿಯಲ್ಲಿ ಸಿಗುವ ‘ಬನ್ನಡ್ಕ’ ಎಂಬ ಊರಿನಲ್ಲಿ ‘ಸೋನ್ಸ್ ಫಾರ್ಮ್ ಇದೆ. ಕೃಷಿಯಲ್ಲಿ ಆಸಕ್ತಿ ಇರುವವರು, ಸಸ್ಯಶಾಸ್ತ್ರವನ್ನು ಅಭ್ಯಸಿಸುವವರು ಹಾಗೂ ಕೃಷಿಭೂಮಿ ಉಳ್ಳವರು , ಸೋನ್ಸ್ ಫಾರ್ಮ್ ಗೆ ಒಂದು ಬಾರಿ ಭೇಟಿ ಕೊಟ್ಟರೆ ಬಹಳಷ್ಟು ಉಪಯುಕ್ತ ಮಾಹಿತಿಗಳು ಲಭ್ಯವಾಗುವುದು.
ಇತ್ತೀಚೆಗೆ ಸೋನ್ಸ್ ಫಾರ್ಮ್ ಗೆ ಭೇಟಿ ಕೊಟ್ಟಿದ್ದಾಗ ಅಲ್ಲಿನ ಅತಿಥೇಯರಾದ ಶ್ರೀ ಎಲ್.ಸಿ. ಸೋನ್ಸ್, ಶ್ರೀ ಐ.ವಿ. ಸೋನ್ಸ್ ಮತ್ತು ಶ್ರೀ ವಿನೋದ್ ಸೋನ್ಸ್ ನಮಗೆ ತಮ್ಮ ತೋಟದಲ್ಲಿರುವ ವಿಶಿಷ್ಟ ಬೆಳೆಗಳ ವಿಶೇಷತೆಗಳನ್ನು ಪರಿಚಯ ಮಾಡಿಕಕೊಟ್ಟರು.
ಬಾಗಿಲಿನಲ್ಲಿಯೇ ‘ಹಳದಿ ಬಣ್ಣದ ಮಲ್ಲಿಗೆ’ ಬಳ್ಳಿಯು ಸ್ವಾಗತಿಸಿತು. ಪಕ್ಕದಲ್ಲಿ ‘ಒಲಿಂಪಿಕ್ ಟಾರ್ಚ್’ ಎಂದು ಹೆಸರಿಸಲಾದ ಕೆಂಪು ಬಣ್ಣದ ಹೂವಿತ್ತು. ಪಾನ್ ಬೀಡಾದ ಕಂಪನ್ನು ಬೀರುವ ಪುಟ್ಟ ತುಳಸಿಯಂತಹ ಸಸಿ ಒಂದಿತ್ತು. ಇನ್ನೊಂದು ಗಿಡದ ಎಲೆಯನ್ನು ಸ್ವಲ್ಪ ಸಮಯ ದಿಟ್ಟಿಸಿ ನೋಡಿದರೆ ಅದರ ಎಲೆಗಳು ಕೈಮುಗಿಯುವಂತೆ ಮುಚ್ಚುತ್ತಿದ್ದುವು. ಹಾಗಾಗಿ ಅದರ ಹೆಸರು ‘ನಮಸ್ತೆ ಗಿಡ’ . ‘ಪಾಪಿರಸ್ ‘ ಹುಲ್ಲು ಹುಲುಸಾಗಿ ಬೆಳೆದಿತ್ತು. ಒಂದು ಗಿಡದ ಹಳದಿ ಹೂವನ್ನು ಕಚ್ಚಿದರೆ, ಹಲ್ಲಿನ ಆ ಭಾಗ ಸಂವೇದನೆಯನ್ನು ಕಳೆದುಕೊಳ್ಳುವುದರಿಂದ (numbness) ಅದಕ್ಕೆ ‘Tooth Ache Plant ‘ ಎಂದೇ ಹೆಸರು.
ಇನ್ನು ಸ್ಥಳೀಯ ಹಾಗು ವಿದೇಶಿ ಮೂಲದ ಹಲವಾರು ಪ್ರಭೇದದ ಹೂವು,ಹಣ್ಣು, ಇತರ ವಸ್ತುಗಳನ್ನು ಕೊಡುವ ಮರಗಳಿದ್ದುವು. ಉದಾ: ಅನನಾಸು, ಪನ್ನೇರಳೆ, ವಿವಿಧ ತಳಿಗಳ ಸಪೋಟ, ರಂಬೂಟಾನ್, ಧೂರಿಯನ್ , ಡ್ರ್ಯಾಗನ್ ಫ್ರೂಟ್ , ದಾಲ್ಛಿನ್ನಿ, ಲವಂಗ, ಜಾಯಿಕಾಯಿ, ಕರ್ಪೂರ, ಡೀಸೆಲ್ ಮರ…. ..ಇತ್ಯಾದಿ. ಒಂದೆಡೆ ಬಿದಿರು ಮೆಳೆಗಳ ಕಾಡಿನಲ್ಲಿ ಹಲವಾರು ತಳಿಗಳಿದ್ದುವು. ಪ್ರತಿ ಮರಕ್ಕೂ ಅದರ ಸ್ಥಳೀಯ ಹೆಸರು ಮತ್ತು ಸಸ್ಯಶಾಸ್ತ್ರೀಯ ಹೆಸರನ್ನು ನಮೂದಿಸಿರುವುದು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.
ಪ್ರವಾಸಿಗರಿಗಾಗಿ ತೆರೆದಿರುವ ತೋಟದ ಭಾಗದಲ್ಲಿ, ನಮ್ಮ ಗಮನಕ್ಕೆ ಬಂದ ಕೆಲವು ಗಿಡ/ಮರಗಳನ್ನು ಮಾತ್ರ ಹೆಸರಿಸಿದ್ದೇನೆ. ಇನ್ನೂ ಬಹಳಷ್ಟು ಸಸ್ಯ ವೈವಿಧ್ಯ ಅಲ್ಲಿದೆ. ಸ್ಥಳೀಯ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಕಾಳುಮೆಣಸು, ಅನನಾಸು, ಹಲಸು, ಮಾವು ಇತ್ಯಾದಿ ಇದ್ದೇ ಇದೆ.
ಸೋನ್ಸ್ ಫಾರ್ಮ್ ನವರು ಹಲವಾರು ಗಿಡಗಳನ್ನು ವಿವಿಧ ದೇಶಗಳಿಂದ ತಂದು ನೆಟ್ಟು ವಿನೂತನವಾದ ತೋಟವನ್ನು ರೂಪಿಸಿದ್ದಾರೆ. ಇದನ್ನು ಆಸಕ್ತರಿಗೆ ಸೊಗಸಾಗಿ ವಿವರಿಸುತ್ತಾರೆ. ಇಲ್ಲಿಗೆ ಹಲವಾರು ಮಂದಿ ವಿದೇಶೀಯರೂ ಬರುತ್ತಾರೆ. ತೋಟದ ಕೆಲವು ಉತ್ಪನ್ನಗಳನ್ನು ಅಲ್ಲಿ ಕೊಂಡುಕೊಳ್ಳಬಹುದು. ಬಹಳಷ್ಟು ಮಾಹಿತಿ ಜತೆಗೆ ತಾಜಾ ಅನಾನಸ್ ಜ್ಯೂಸ್ ಕೊಟ್ಟು ಆದರಿಸಿದ ಅವರಿಗೆ ಧನ್ಯವಾದಗಳು.
ಆಸಕ್ತರಿಗಾಗಿ ವಿಳಾಸ: Soans Farm, Belvai Moodbidri, D.K 574213
Phone : 08258 236261 / 202561
– ಹೇಮಮಾಲಾ.ಬಿ
oh nice
Supper
Really useful info I many times come across this SOANS FARM while coming to and from KARKALA
Very nice information Mam….
Thank you very much : D
ಉತ್ತಮ ಮಾಹಿತಿಗಾಗಿ ಧನ್ಯವಾದಳು