ವಿ-ಸ್ಪೋಟ
ಅದೊಂದು ಮಹಾ ಶಿಖರ. ಮಳೆ, ಗುಡುಗು, ಸಿಡಿಲಿಗೆ ಜಗ್ಗದೆ ನಿಂತ ಮೇರು ಗಿರಿ. ತಾನೇ ಶ್ರೇಷ್ಠ ಎಂದು ಬೀಗುತ್ತಿತ್ತು.
ಆರಡಿ ಮಾನವ ಬಂದ. ಗಿರಿಯ ಬುಡದಲಿ ಬಾಂಬ್ ಇಟ್ಟು, ಇಡೀ ಪರ್ವತವನ್ನೇ ನೆಲಸಮ ಮಾಡಿದ. ಅಭಿವ್ರದ್ಧಿ ಹೆಸರಲ್ಲಿ ನಗರ ಕಟ್ಟಿದ. ನಾನೇ ಶ್ರೇಷ್ಠ ಎಂದ ಮಾನವನೂ ಬೀಗತೊಡಗಿದ.
ಎಲ್ಲೆಲ್ಲೂ ಜನಸಂದನಿ. ಕೆಲವು ಮತ, ಹಲವು ಧರ್ಮ ಕಟ್ಟಿಕೊಂಡು ಕೋಮು ಗಲಭೆ ಮಾಡಿಕೊಂಡ. ಎಲ್ಲವೂ ವ್ಯಾಪಾರ..! ಅಲ್ಲಲ್ಲಿ ಅನಾಚಾರ, ಅತ್ಯಾಚಾರ, ಭ್ರಷ್ಟಾಚಾರ...! ಕೊನೆಯಿಲ್ಲದ ಕೊಲೆ, ಸುಲಿಗೆ, ರಕ್ತಪಾತ….! ತಾನು ಮಾಡುತ್ತಿರುವುದು ತಪ್ಪು ಎಂಬುದನ್ನು ಅರ್ಥೈಸಿಕೊಳ್ಳದ ‘ನವ ಮಾನವ‘ ಇವ.
ಹಾಗಾದರೆ ಇದಕ್ಕೆಲ್ಲಾ ಮಿತಿಯಿಲ್ಲವೇ…!
ಭೂಮಿತಾಯಿಗೂ ಇದನ್ನೆಲ್ಲಾ ನೋಡಿ ಸಹನೆ ಮೀರಿತು. ಅಲ್ಲಲ್ಲಿ ಕುಸಿದಳು, ಮತ್ತೆ ಕೆಲವೆಡೆ ಕಂಪಿಸಿದಳು, ಕೆನ್ನಾಲಿಗೆ ಹೊರಹಾಕಿ ಬೆಂಕಿ ಉಗುಳಿದಳು. ಮತ್ತೊಮ್ಮೆ ಜಲಧಾರೆಯಾಗಿ ಎಲ್ಲವನ್ನೂ ತನ್ನ ಒಡಲೊಳಗೆ ಎಳೆದುಕೊಂಡಳು. ಪ್ರಕ್ರತಿಯದ್ದೇನು ತಪ್ಪು?
ನಾವೇನು ನೀಡಿದ್ದೆವೋ ಅದೇ ಪ್ರತಿಯಾಗಿ ಬಂದಿದೆ. ಈ ಸ್ಪೋಟವೂ ನ್ಯಾಯವಾದದ್ದೇ.
– ಅಶೋಕ್ ಕೆ. ಜಿ. ಮಿಜಾರ್.