ವಿ – ಚಿತ್ರ
ಅದು ರಾಷ್ಟೀಯ ಮಟ್ಟದ ಚಿತ್ರ ಕಲಾ ಪ್ರದರ್ಶನ. ಮೊದಲ ಬಹುಮಾನ ಪಡೆದ ವರ್ಣಚಿತ್ರದ ಮುಂದೆ ಜನ ಗುಂಪು ಗುಂಪಾಗಿ ನಿಂತು, ಏನೇನೋ ಟೀಕೆ ಮಾಡಿ ಮುಂದೆ ಸಾಗುತ್ತಿದ್ದರು. ಕಾಲೇಜು ಹುಡುಗರ ಗುಂಪು ಬಂತು, ಅವರಲ್ಲಿ ಒಬ್ಬ ಕೇಳಿದ, “ಲೇ ಮಚ್ಚಾ, ಈ ಪೈಂಟಿಂಗ್ ಗೆ ಯಾಕೋ ಫ಼ಸ್ಟ್ ಪ್ಲೇಸ್ ಕೊಟ್ರು? ಏನಾದ್ರೂ ಅರ್ಥ ಆಯ್ತಾ ಮಗಾ?” ಇನ್ನೊಬ್ಬ ದಿಟ್ಟಿಸಿ ನೋಡಿ,”ಏನೋ ಇದು.. ಸಿಂಪಲ್ ಪೈಂಟಿಂಗ್ ಕಣೋ, ಒಬ್ಬಳು ತಲೇ ಮೇಲೊಂದು ಸೊಂಟದ ಮೇಲೊಂದು ಕೊಡ ಹಿಡ್ಕೊಂಡು ಹೋಗ್ತಿದ್ದಾಳಷ್ಟೇ…ಇದಕ್ಕೇ ಫ಼ಸ್ಟ್ ಪ್ರೈಜ್ ಬರೋದಾದ್ರೆ ನಾನೂ ಬರೀತಿದ್ದೆ” ಅದ್ಕೆ ಮತ್ತೊಬ್ಬ,”ನೀ ಪೈಂಟ್ ಮಾಡಿದ್ರೆ ಆ ಲೇಡಿ ಮತ್ತೂ ಸ್ಟೈಲ್ ಕಾಣ್ತಿದ್ಲು” ಎಂದಾಗ ಎಲ್ಲರೂ ಬಿದ್ದು ಬಿದ್ದು ನಕ್ಕು ಮುಂದೆ ಹೋಗಬೇಕೆಂದವರು, ಹುಡುಗಿಯರು ಬರೋದು ನೋಡಿ ಅಲ್ಲೇ ಪಕ್ಕದಲ್ಲಿ ನಿಂತರು.
ಈಗ ಗರ್ಲ್ಸ್ ಕಮೆಂಟ್ ಶುರುವಾಯ್ತು. ಒಬ್ಬಳು ಹೇಳಿದಳು,”ಏ ಇದು ನೀರಿನ ಸಮಸ್ಯೆ ಕಣೇ.. ಅದ್ಕೇ ಫ಼ಸ್ಟ್ ಪ್ಲೇಸ್” ಅಂದಳು. ಇದನ್ನೇ ಕಾಯ್ತಿದ್ದ ಹುಡುಗರು ಗೊಳ್ಳನೆ ನಕ್ಕರು. ಹುಡುಗರು ನಮ್ಮನ್ನೇ ಗಮನಿಸ್ತಿದ್ದಾರೇಂತ ಗೊತ್ತಾಗಿ ಇನ್ನೊಬ್ಬಳು, ಸ್ವಲ್ಪ ಗಟ್ಟಿಯಾಗಿಯೇ ಹೇಳಿದಳು,”ಈ ಚಿತ್ರದಲ್ಲಿ ಆಕಾಶ ನೋಡೇ.. ಇದು ಬೇಸಿಗೆ ಕಾಲ ಅದ್ಕೇ ಮೋಡ ಇಲ್ಲ್ದದೆ ನೀಲಿಯಿದೆ. ಅದ್ಕೆ ಬರ ಬಂದಿದೆ ಕಣೇ” ಈಗ ಹುಡುಗರು ಮತ್ತೂ “ಓಓಓಓ…” ಎಂದ ಉದ್ಗಾರ ತೆಗೆದು ಗೇಲಿ ಮಾಡಿದರು. ಅಷ್ಟರಲ್ಲಿ ಒಬ್ಬಳು,”ಏ ನೋಡ್ರೇ ಕನ್ನಡ ಸರ್ ಬಂದ್ರು ಸುಮ್ನಿರ್ರೇ…” ಎಲ್ರೂ ಮುಸಿಮುಸಿ ನಕ್ಕು ಸುಮ್ಮನಾದರು.
ಒಬ್ಬಳು ಹುಡುಗಿ ಧೈರ್ಯ ಮಾಡಿ,”ಸರ್, ನಮ್ಗೆ ಈ ಚಿತ್ರ ಏನೂಂತಾನೆ ಗೊತ್ತಾಗಿಲ್ಲ ಸರ್, ಸ್ವಲ್ಪ ಹೇಳಿ ಸರ್, ನಿಮ್ಗೆ ಏನು ಗೊತ್ತಾಯ್ತೂಂತ..” ಆ ಚಿತ್ರದ ಹತ್ತಿರ ಬಂದ ಕನ್ನಡ ಮೇಷ್ಟ್ರು, ತಮ್ಮ ಜಾರುತ್ತಿದ್ದ ಕನ್ನಡಕ ಸರಿಪಡಿಸಿಕೊಂಡು ತುಂಬಾ ಹೊತ್ತು ಗಮನಿಸಿ,”ವಾವ್.. ಏನು ಬರೆದಿದ್ದಾರೆ ಈ ಚಿತ್ರ..! ಎಷ್ಟು ಅರ್ಥ ಕೊಡ್ತದೆ ಗೊತ್ತಾ ಮಕ್ಕಳೇ ಇದು…! ಇಲ್ಲಿ ನೋಡಿ ಈ ಮಹಿಳೆ ಒಂದು ಕೊಡ ಸೊಂಟದಲ್ಲಿ ಇನ್ನೋಂದು ತಲೆ ಮೇಲೆ ಹಿಡ್ಕೊಂಡು ಹೋಗ್ತಿದ್ದಾಳೆ ಅಂದ್ರೆ ಅಲ್ಲಿ ಬಡತನ ಇದೆ. ಇಲ್ಲಿ ದಾರಿ ನೋಡಿ ದುರ್ಗಮವಾಗಿದೆ ಅಂದ್ರೆ.. ಅದು ಹಳ್ಳಿ..!” ಅಷ್ಟು ಹೇಳುತ್ತಿದ್ದಂತೆ ತುಂಟಿ ಹುಡುಗಿ,”ಅದ್ಕೇ ಫ಼ಸ್ಟ್ ಪ್ರೈಜ್ ಬಂತಾ ಸರ್” ಎಂದು ರಾಗವಾಗಿ ಕೇಳಿಯೇ ಬಿಟ್ಟಳು.
ಪ್ರತ್ಯುತ್ತರವಾಗಿ,“ಇಲ್ಲಮ್ಮ, ಖಂಡಿತಾ ಇಲ್ಲ. ಚಿತ್ರ ಇಷ್ಟೇ ಆಗಿದ್ದಲ್ಲಿ ಖಂಡಿತಾ ಬಹುಮಾನ ಬರುತ್ತಿರಲಿಲ್ಲ. ನಾವು ಸರಿಯಾಗಿ ಗಮನಿಸಿದರೆ.. ಇಲ್ಲಿ ನೋಡಿ ಶಾಲೆಯ ಸಮವಸ್ತ್ರದ ಈ ಪುಟ್ಟ ಹುಡುಗಿ ನೀರು ಹೊತ್ತೊಯ್ಯುವ ಅಮ್ಮನ ಸೀರೆಯ ತುದಿ ಹಿಡಿದು ಮೇಲಕ್ಕೆ ನೋಡುತ್ತಾ ನಡೆಯುತ್ತಿದ್ದಾಳೆ. ಇಲ್ಲಿ ಮೇಲೆ ಆಗಸದಲ್ಲಿ ಹಾರುವ ವಿಮಾನ ನೋಡುತ್ತಿದ್ದಾಳೆ..! ಅಂದ್ರೆ… ಕಿತ್ತು ತಿನ್ನುವ ಬಡತನವಿದ್ದರೂ… ಗಗನಸಖಿಯೋ… ವಿಮಾನ ಚಾಲಕಿಯೋ… ಆಗುವ ಕನಸು ಕಾಣುತ್ತಿದ್ದಾಳೆ…! ಈಗ ಹೇಳಿ ಮಕ್ಕಳೇ.. ಇದಕ್ಕೇ ತಾನೇ ಮೊದಲ ಬಹುಮಾನ ಸಿಗಬೇಕು?“. ಎಲ್ಲರೂ ಹೌದೆಂದು ತಲೆದೂಗುತ್ತಿರಬೇಕಾದರೆ, ಚಿತ್ರಕಾರ ಬಂದು ನಾಮಫಲಕ ಹಾಕಿದ.. ಅದರಲ್ಲಿ ಹೀಗಿತ್ತು..
“ಬಾರ್ನ್ ಟು ಡ್ರೀಮ್..ಸಲಾಮ್ ಟು ಅಬ್ದುಲ್ ಕಲಾಮ್”.. ಅದಕ್ಕೇ ಹೇಳೋದು ಚಿತ್ರ ಅರ್ಥವಾಗುವವರಿಗೆ ಮಾತ್ರ..!
– ಅಶೋಕ್ ಕೆ. ಜಿ. ಮಿಜಾರ್.
ಕಥೆಯಲ್ಲಿ ಅಡಗಿದ ತತ್ವ ಮತ್ತು ನಿರೂಪಣೆ ಇಷ್ಟವಾಯಿತು .
ಸೂಪರ್ ಅಶೋಕ್. ತುಂಬಾ ಚೆನ್ನಾಗಿ ಬರೆದಿದ್ದೀರಿ .
ಕಥೆಯು ಚೆನ್ನಾಗಿದೆ… ನಿರೂಪಣೆ ಹಾಗೂ ಅಂತ್ಯ ಇಷ್ಟವಾಯ್ತು…