ದೀಪಾವಳಿಯಲ್ಲೂ ಗೋವಿಗೆ ಮಹತ್ವ
ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ, ನಶ್ವರದಿಂದ ಐಶ್ವರ್ಯದೆಡೆಗೆ ಕೊಂಡೊಯ್ಯುವ ಸಂಕೇತವೇ ದೀಪಾವಳಿ. ದೀಪ ಎಂದರೆ ಬೆಳಕು, ಜ್ಯೋತಿ. ದೀವಿಗೆ, ಹೀಗೆ ಬೆಳಕಿಗೆ ಹಲವಾರು ಪರ್ಯಾಯ ಪದಗಳಿದ್ದರೂ ಅಂತರಾರ್ಥ ನಮ್ಮ ಬಾಳು ಬೆಳಗ ಬೇಕು, ಪ್ರಜ್ವಲಿಸಬೇಕೆಂಬುದು.
“ಎಣ್ಣೆ ಹೊಯ್ಯಮ್ಮ ದೀಪಕೆ” ಸೇಡಿಯಾಪು ಕೃಷ್ಣ ಭಟ್ಟರ ಕವನದ ಸಾಲು ಇಲ್ಲಿ ನೆನಪಿಗೆ ಬರುತ್ತಿದೆ. ದೀಪ ಉರಿಯುತ್ತಿರಬೇಕಾದರೆ ಅದಕ್ಕೆ ಎಣ್ಣೆ ಹೊಯ್ಯುತ್ತಿರಬೇಕು.ಅರ್ಥಾತ್ ವಿದ್ಯೆ, ಬುದ್ಧಿ, ವಿವೇಕ,ವಿಚಾರ, ಪ್ರತಿಭೆ,ಮೊದಲಾದ ಜಾಣ್ಮೆಯ ಎಣ್ಣೆಯನ್ನು ಹೊಯ್ಯುತ್ತಿದ್ದರೆ ಬಾಳು ಬೆಳಗುತ್ತಿರುತ್ತದೆ. ಮನುಜರ ಜೀವನದಲ್ಲಿ ಗೋವಿನ ಪಾತ್ರವೂ ಒಂದು ದೀವಿಗೆಯಾಗಿದೆ .
ಅಂತೆಯೇ ದೀಪಾವಳೀ ಹಬ್ಬದಲ್ಲಿ ಒಂದು ದಿನ ಗೋಪೂಜೆಯೂ ನಡೆಯುತ್ತದೆ. ಹಿಂದೂಗಳಿಗೆ ಗೋಮಾತೆಯೂ ಜನ್ಮದಾತೆಗೆ ಸಮಾನವಾದುದು. ಅದನ್ನು ಕಾಮಧೇನು ಎಂದು ಕರೆದು ಪೂಜನೀಯ ಸ್ಥಾನ ಕಲ್ಪಿಸಿದ್ದಾರೆ. ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ಗೋಪಾಲಕನೆಂಬ ಹೆಸರಿನಿಂದ ಕರೆಯಲ್ಪಡುತ್ತಾನೆ. ಕೃಷ್ಣ ಪರಮಾತ್ಮನೊಂದಿಗೆ ಗೋವೂ ಇದ್ದುದಾದರೆ; ಅದು ಪರಿಪೂರ್ಣವೆನಿಸುತ್ತದೆ. ಗೋಗ್ರಾಸ ನೀಡಿಯೇ ಬ್ರಾಹ್ಮಣರು ಭೋಜನ ಮಾಡುವ ಸಂಸ್ಕೃತಿ.
ನರಕ ಚತುರ್ದಶಿಯಂದು ಎಣ್ಣೆ ಹಬ್ಬ, ಅಮವಾಸ್ಯೆಯಂದು ಲಕ್ಷ್ಮೀ ಪೂಜೆ, ಪಾಡ್ಯದಂದು ಅಂಗಡಿ ಪೂಜೆ ಹಾಗೂ ಗೋಪೂಜೆ ನಡೆಯುತ್ತದೆ. ಅಂದು ಗೋವುಗಳನ್ನು ಸ್ನಾನ ಮಾಡಿಸಿ, ಅವುಗಳ ಕೊರಳಿಗೆ ಪಾರೆ ಹೂವಿನೊಂದಿಗೆ ಇತರ ಹೂಗಳನ್ನೂ ನೇಯ್ದು, ಮಾಲೆ ಹಾಕಿ ಮುಸ್ಸಂಜೆ ಹೊತ್ತಿಗೆ ಆರತಿ ಮಾಡಿ ಪೂಜೆ ಮಾಡಿ ಸೌತೆಕಾಯಿ ಕಡುಬು ಮಾಡಿ ಗೋವುಗಳಿಗೆ ತಿನ್ನಿಸುವ ರೂಢಿ, ಸನಾತನ ಸಂಸ್ಕೃತಿ.
ಯಾರ ಮನೆ ಹಿತ್ತಿಲಲ್ಲಿ ಕಲ್ಪವೃಕ್ಷವೂ ಹಟ್ಟಿಯಲ್ಲಿ ಗೋವುಗಳೂ ಇವೆಯೋ ಆ ಮನೆಯಲ್ಲಿ ದುರ್ಭಿಕ್ಷೆ ಕಾಲಿಡದು ಎಂಬ ಮಾತಿದೆ. ಸಂತರ್ಪಣೆಯ ಪೂರ್ತಿ ಫಲ ಸಿಗಬೇಕಾದರೆ ಗೋಗ್ರಾಸ ನೀಡಲೇ ಬೇಕು.ಗೋವುಗಳ ಸಹವಾಸ,ಅವುಗಳ ಸಾಮೀಪ್ಯ ಮಾನವನ ಆರೋಗ್ಯಕ್ಕೆ ಸಹಕಾರಿಯೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ಆರೋಗ್ಯವಂತ ಗೋವಿನ ಜೊಲ್ಲಿನಲ್ಲಿ ಅನೇಕ ಔಷಧೀಯ ಗುಣವಿದೆಯಂತೆ. ಅಷ್ಟೇ ಅಲ್ಲ, ಪಂಚಗವ್ಯ[ಶುದ್ಧೀಕರಿಸಿದ ಗೋಮೂತ್ರ,ಗೋಮಯ, ಹಾಲು, ಮೊಸರು, ತುಪ್ಪ]ದಿಂದ ಮಾರಕ ಕಾಯಿಲೆಗಳಾದ ಕ್ಯಾನ್ಸರ್, ಏಡ್ಸ್ ಗಳಿಗೂ ಪರಿಹಾರವಿದೆ ಎಂದು ದೃಢಪಟ್ಟಿದೆ.ಪಶುಪಾಲನೆ ಮತ್ತು ಗೋಸೇವಾ ಕಾರ್ಯಗಳು ಧಾರ್ಮಿಕ ಮತ್ತು ಆರೋಗ್ಯ ದೃಷ್ಟಿಯಿಂದ ಮಾತ್ರ ನೋಡತಕ್ಕ ಅಂಶಗಳೂ ಅಲ್ಲ.ನಮ್ಮ ಜೀವನಕ್ಕೆ ಅಗತ್ಯವಾದ ಆಹಾರೋತ್ಪನ್ನದ ವ್ಯವಸಾಯ ಹಾಗೂ ಆರ್ಥಿಕ ದೃಷ್ಟಿಯಿಂದಲೂ ಇವು ಪ್ರಾಧಾನ್ಯತೆ ಪಡೆಯುತ್ತವೆ.ಬರೇ ಗೋವೊಂದನ್ನು ಸಾಕಿ; ಹಾಲು ಹಾಗೂ ಗೊಬ್ಬರವನ್ನು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುವ ಸಾಕಷ್ಟು ಕುಟುಂಬಗಳು ನಮ್ಮ ನಾಡಿನಲ್ಲಿವೆ.ಎತ್ತುಗಳಿಂದ ಉಳುಮೆ, ಗಾಡಿ ಕಟ್ಟುವಿಕೆ ಹಾಗೂ ಉತ್ತಮ ತಳಿಗಳ ಸಂತಾನಕ್ಕಾಗಿ ಬೀಜದ ಹೋರಿ ಸಾಕುವಿಕೆ ಇವೆಲ್ಲ ಎತ್ತುಗಳಿಂದಾಗುವ ಪ್ರಯೋಜನವಾದರೆ; ಕರೆಯುವ ಹಸುಗಳಿಂದ ಗೊಬ್ಬರ ಮತ್ತು ಕ್ಷೀರೋತ್ಪನ್ನದ ದ್ವಿಗುಣ ಲಾಭಗಳು!!.
ಈಗೀಗ ಕೆಲವು ರಾಜಕೀಯ ಪಕ್ಷಗಳು ತಮ್ಮ ಪಕ್ಷಕ್ಕೆ ಜನಬೆಂಬಲ ದೊರಕಲೆಂಬ ಉದ್ದೇಶದಿಂದ ಗೋಹತ್ಯೆಗೆ ಪ್ರೋತ್ಸಾಹಿಸುವುದು ಅತ್ಯಂತ ಖೇದಕರ.ಇದು ಎದೆಹಾಲುಣಿಸಿ ಸಲಹಿದ ತಾಯಿಯನ್ನು ಕೊಲೆ ಮಾಡಿದಂತೆಯೇಸರಿ. ಹೆತ್ತಮ್ಮ ಮಗುವಿಗೆ ಒಂದು ಅಥವಾ ಎರಡು ವರ್ಷ ಎದೆಹಾಲುಣಿಸಿದರೆ; ಗೋವು ನಮ್ಮ ಜೀವನ ಪರ್ಯಂತ ಹಾಲುಣಿಸುತ್ತದೆ ಎಂಬುದನ್ನು ಮರೆಯಬಾರದು. ಭಾರತದಲ್ಲಿ ಜನಿಸಿದವನೊಬ್ಬ ಹಸುವಿನ ಹಾಲು ಅಥವಾ ಹಾಲು ಬೆರೆಸಿದ ಚಾ, ಕಾಫಿ, ಹೀರುತ್ತಿದ್ದು; ಗೋಹತ್ಯೆಗೆ ಬೆಂಬಲ ನೀಡುತ್ತಾನೆಂದರೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗುತ್ತದೆ.ಈ ದುರದೃಷ್ಟಕ್ಕೆ ಏನೆನ್ನೋಣ?. ಮಾನವ ಗೋಮಾಂಸ ತಿನ್ನದೆ ಆರೋಗ್ಯವಾಗಿ ಬಾಳ ಬಹುದು.ಆದರೆ ಗೋವಿನ ಸಂಬಂಧವಿಲ್ಲದೆ ಒಂದು ದಿನವೂ ಸಮರ್ಪಕವಾಗಿ ಬಾಳಲಾರ!.ಮಾನವನಿಗೆ ಮೊದಲು ಆಹಾರ,ಮತ್ತೆ ಆರೋಗ್ಯ, ಆರ್ಥಿಕ ಅನುಕೂಲತೆಯೊಂದಿಗೆ ಐಶ್ವರ್ಯ ಇವುಗಳೆಲ್ಲವನ್ನೂ ಕರುಣಿಸುವ, ಏನು ಮಾಡಿದರೂ ಮಾತನಾಡದೆ ಸಹಿಸುವ ಮಹಾಮಾತೆಯನ್ನು ರಕ್ಷಿಸೋಣ, ಪೂಜಿಸೋಣ.
– ವಿಜಯಾ ಸುಬ್ರಹ್ಮಣ್ಯ, ಕುಂಬಳೆ.
ಉಪಯುಕ್ತ ಮಾಹಿತಿ..ಧನ್ಯವಾದಗಳು
ಉತ್ತಮ ಸಾಂದರ್ಭಿಕ ಬರಹ…ರಾಜಕೀಯ ಡೊಂಬರಾಟದಲ್ಲಿ ನಡೆಯುವ ವಿದ್ಯಮಾನಗಳನ್ನು ನೋಡಿದರೆ ಖೇದವೆನಿಸುತ್ತದೆ..ಮನಸ್ಸು ಭಾರವಾಗುತ್ತದೆ…
ರೇಖಾ , ಶಂಕರಿ ಶರ್ಮ, ಓದಿ ಅಭಿಪ್ರಾಯ ಹೇಳಿದ ನಿಮಗೆ ಧನ್ಯವಾದಗಳು.
ಉತ್ತಮ ಲೇಖನ .ದೀಪಾವಳಿಯ೦ದು ನಮ್ಮಲ್ಲಿ ಗೋಪೂಜೆ ಮಾಡುತ್ತೇವೆ .
ಆತ್ಮೀಯ ಹೇಮಮಾಲಾ ದೀಪಾವಳಿಯ ಶುಭಾಶಯಗಳೊಂದಿಗೆ ಸಮಯೋಚಿತವಾಗಿ ಮತ್ತೊಮ್ಮೆ ಪ್ರಕಟಿಸಿದ ನಿಮಗೆ ಮನದಾಳದ ಧನ್ಯವಾದಗಳು.
ತುಂಬಾ ಚೆನ್ನಾಗಿ ಬರೆದಿದ್ದೀರಿ. ಅರ್ಥಪೂರ್ಣ.
ಧನ್ಯವಾದಗಳು ಶೃತಿ ಶರ್ಮಾ. ಹಾಗೂ ಮತ್ತೊಮ್ಮೆ ಪ್ರಸ್ತುತ ಪಡಿಸಿದ ಹೇಮಮಾಲಾ ಅವರಿಗೆ.