ಗರಿಕೆ… ಎಂಬ ದೇವಮೂಲಿಕೆ
ಗರಿಕೆ, ಗರಿಕೆ ಹುಲ್ಲು ಎಂದು ಕನ್ನಡದಲ್ಲಿಯೂ ದೂರ್ವಾ,ಅನಂತ ಎಂದು ಸಂಸ್ಕೃತದಲ್ಲಿಯೂ ಈ ಹುಲ್ಲು ಅರಿಯಲ್ಪಡುತ್ತದೆ. ವಿಘ್ನ ನಿವಾರಕನಾದ ಗಣಪತಿಗೆ ಇದು ಅತ್ಯಂತ ಪ್ರಿಯವಾಗಿದ್ದು ಅವನ ಎಲ್ಲಾ ಪೂಜಾಕಾರ್ಯಗಳಲ್ಲೂ ಪ್ರಾಶಸ್ತ್ಯವನ್ನು ಪಡೆಯುತ್ತದೆ. ಮಾತ್ರವಲ್ಲದೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಅಡಕವಾಗಿವೆ. ಇದರ ವೈಜ್ಞಾನಿಕ ಹೆಸರು Cynodon dactylon ಎಂದಾಗಿದ್ದು Graminae ಸಸ್ಯ ಕುಟುಂಬಕ್ಕೆ ಸೇರಿದ್ದಾಗಿದೆ. ಗರಿಕೆಯಲ್ಲಿ ಬಿಳಿ ಮತ್ತು ಕರಿ ಎಂಬ ಎರಡು ಭೇದಗಳಿದ್ದು ಎರಡರಲ್ಲೂ ಸಮಾನ ಗುಣಗಳಿವೆ.ಭಾರತದಲ್ಲಿ ಎಲ್ಲಾ ಕಡೆ ಎಲ್ಲಾ ಕಾಲದಲ್ಲಿ ಇದು ಬೆಳೆಯುತ್ತದೆ.ಇಡೀ ಗರಿಕೆಯ ಹುಲ್ಲು ಔಷಧಿಯಾಗಿ ಬಳಕೆಯಾಗುತ್ತದೆ.
ಗುಣಗಳು:
ರಕ್ತ ದೋಷಗಳು,ಪಿತ್ತ ವಿಕಾರಗಳು,ಮೂತ್ರ ದೋಷಗಳು, ಚರ್ಮ ವ್ಯಾಧಿಗಳು,ಮಧುಮೇಹ ಹಾಗೂ ಸ್ತ್ರೀ ಸಂಬಂಧೀ ಕಾಯಿಲೆಗಳನ್ನು ನಿವಾರಿಸುತ್ತದೆ. ಶರೀರದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಉಪಯೋಗಗಳು:
1.ರಕ್ತಹೀನತೆ ಮತ್ತು ಮುಟ್ಟಿನ ಹೊಟ್ಟೆ ನೋವಿಗೆ-ಒಂದು ಚಮಚ ಗರಿಕೆ ಹುಲ್ಲಿನ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ತಿಂಗಳವರೆಗೆ ಸೇವಿಸಬೇಕು.
2.ಬೆವರುಸಾಲೆಗೆ-ಗರಿಕೆ ಮತ್ತು ತುಳಸಿ ಎಲೆಯನ್ನು ಅಕ್ಕಿ ತೊಳೆದ ನೀರಿನೊಂದಿಗೆ ಅರೆದು ಮೈಗೆ ಹಚ್ಚಬೇಕು.
3.ಗಜಕರ್ಣ ಅಥವಾ ಯಾವುದೇ ಕಜ್ಜಿ-ಗರಿಕೆ ರಸಕ್ಕೆ ಅರಸಿನ ಪುಡಿ ಸೇರಿಸಿ ಹಚ್ಚುವುದು ಪರಿಣಾಮಕಾರಿ.
4.ಬಿಳಿಮುಟ್ಟು-ಗರಿಕೆ ರಸವನ್ನು ಮೊಸರಿನೊಂದಿಗೆ ಸೇವಿಸಬೇಕು.
5.ಉರಿಮೂತ್ರ ಮತ್ತು ಮೂತ್ರಕೋಶದ ಕಲ್ಲು-ಗರಿಕೆ ರಸವನ್ನು ಎಳನೀರಿನೊಂದಿಗೆ ಸೇವಿಸಬೇಕು.
6.ಉಗುರು ಸುತ್ತು-ಗರಿಕೆಯನ್ನು ಸುಣ್ಣ ಮತ್ತು ಅರಸಿನದೊಂದಿಗೆ ಅರೆದು ಬೆರಳಿನ ಸುತ್ತಲೂ ಹಚ್ಚಬೇಕು.
7.ನಿತ್ಯವೂ ಇದರ ರಸ(ಜ್ಯೂಸ್) ಸೇವಿಸುವುದು ಮಧುಮೇಹಿಗಳಿಗೆ ಹಾಗೂ ಗ್ಯಾಸ್ಟ್ರೈಟಿಸ್ ನಿಂದ ಬಳಲುವವರಿಗೆ ಪರಿಣಾಮಕಾರಿ. ಇದರ ತಂಬುಳಿಯನ್ನೂ ಮಾಡಿ ಸೇವಿಸಬಹುದು.
ಗರಿಕೆಯು ಹೆಚ್ಚೇನೂ ಆರೈಕೆಯನ್ನು ಬೇಡದೆ ಶೀಘ್ರವಾಗಿ ಬೆಳೆಯುವುದು.ಹೂವಿನ ಕುಂಡದಲ್ಲೂ ನೆಟ್ಟು ಬೆಳೆಸಬಹುದು. ಇಷ್ಟೆಲ್ಲಾ ಗುಣಗಳನ್ನೊಳಗೊಂಡಿರುವ ಗರಿಕೆಯನ್ನು ಮನೆಯಂಗಳದಲ್ಲೇ ಬೆಳೆಸಿದರೆ ದೇವತಾರ್ಚನೆಗಾಗಿಯೂ ಔಷಧಿಯಾಗಿಯೂ ಸಲ್ಲುತ್ತದೆ.
-ಡಾ.ಹರ್ಷಿತಾ ಎಂ.ಎಸ್, ಉಡುಪಿ
Super 🙂
ಥಾಂಕ್ ಯು ..
ಒಳ್ಳೆಯ ಮಾಹಿತಿ ಡಾಕ್ಟರೇ…
ಧನ್ಯವಾದಗಳು..
ಧನ್ಯವಾದಗಳು
Gud one mam