ಕಾದಂಬರಿ : ‘ಸುಮನ್’ – ಅಧ್ಯಾಯ 1

Share Button


(ಲೇಖಕಿಯವರ ಕಿರು ಪರಿಚಯ:
ಶ್ರೀಮತಿ ಸುಚೇತಾ ಗೌತಮ್‌ ಅವರು ಎಂ.ಟೆಕ್ ಪದವೀಧರೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಸಾಫ್ಟವೇರ್ ಕ್ಷೇತ್ರದಲ್ಲಿ ಉದ್ಯೋಗ ಮಾಡಿದ್ದಾರೆ. ಸಾಮಾಜಿಕ, ವೈಜ್ಞಾನಿಕ ಹಾಗೂ ಸೈಬರ್‌ ಕ್ರೈಮ್‌ ಕತೆಗಳನ್ನು ಬರೆಯುತ್ತಾರೆ. ಇವರ ವೈವಿಧ್ಯಮಯ ಕತೆಗಳು ಹಾಗೂ ಕಿರು ಕಾದಂಬರಿಗಳು ಹಲವಾರು ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.


ಶ್ರೀಮತಿ ಸುಚೇತಾ ಗೌತಮ್ ಅವರ ‘ಸುಮನ್’ ಎಂಬ ಸಾಮಾಜಿಕ ಕಾದಂಬರಿಯು ಇಂದಿನಿಂದ ‘ಸುರಹೊನ್ನೆ’ಯಲ್ಲಿ ಪ್ರಕಟವಾಗಲಿದೆ )

ಕಂಕಣ ಬಲ

ಅಶ್ವತನಾರಾಯಣರು ಊರಿನ ಪ್ರಮುಖ ಕಾಲೇಜೊಂದರಲ್ಲಿ ವಿಜ್ಞಾನದ ಪ್ರಾಧ್ಯಾಪಕರು. ಅವರಿಗೆ ಒಬ್ಬ ಮಗಳು. ಅವಳ ನಂತರ ಅವಳಿ ಜವಳಿ ಗಂಡು ಮಕ್ಕಳಿಬ್ಬರು, ಸಂಜಯ(ಸಂಜು) ಹಾಗೂ ಸಂದೀಪ. ಅವರ ಹೆಂಡತಿ ರಾಜಲ̧ಕ್ಷ್ಮಿ  ಗಂಡನಿಗೆ ತಕ್ಕ ಸತಿ.

ಆ ಮಗಳೇ ಸುಮನ್. ಸುಮನ್ ಒಂದು ಸುಮವೇ ಸರಿ. ನೋಡಲು ಸುಮ, ಅವಳ ಮನಸ್ಸು ಸುಮ. ದೇವರು ಪುರುಸತ್ತಿನಲ್ಲಿದ್ದಾಗ ಪ್ರೀತಿಯಿಂದ ಮಾಡಿದ್ದ ಅವಳನ್ನು. ನಕ್ಷತ್ರಗಳಂತೆ ಮಿನುಗುವ ನಯನ, ಅವುಗಳ ಮೇಲೆ ಕಾಮನಬಿಲ್ಲನ್ನು ಸೆರೆ ಹಿಡಿದ ಹುಬ್ಬುಗಳು. ತಿದ್ದಿದ ಮೂಗು ಅದರ ಕೆಳಗೆ ಪುಟ್ಟ ಬಾಯಿ. ನಕ್ಕರೆ ಮರೆಯಾದ ಸೂರ್ಯ ಒಮ್ಮೆಲೆ ಆಕಾಶದಲ್ಲಿ ಮೂಡಿದ ಅನುಭವ ನೋಡಿದವರಿಗೆ. ಸೊಂಟ ತಾಕಲೋ ಬೇಡವೋ ಅನ್ನುವಷ್ಟು ದಟ್ಟ ರೇಷ್ಮೆಯಂತಹ ಕೇಶರಾಶಿ. ಬಿಸಿಲಿನಲ್ಲಿ ಮಿರಿಮಿರಿ ಎನ್ನುವಷ್ಟು ಹೊಳಪು ಅದಕ್ಕೆ. ಇದು ಯಾರೋ ಕವಿ ಅಥವ ಶಿಲ್ಪಿಯ ಕಲ್ಪನೆಯೋ ಎನ್ನುವ ಮೈಮಾಟ. ಕೆನೆ ಹಾಲು ಹಾಗೂ ಗುಲಾಬಿ ಸಂಮಿಶ್ರಣದ ಗೌರವರ್ಣ. ಸುಮನ್ ಹೂವಾಗಿದ್ದರೆ ಯಾವ ಹೂವಾಗಿದ್ದಿರಬಹುದು ಎಂಬ ಪ್ರಶ್ನೆ ದೇವರನ್ನೇ ಕಾಡಿರಬಹುದು.

ಇನ್ನು ಅವಳ ಮನಸ್ಸು ಬೆಣ್ಣೆಯಷ್ಟು ಮೃದು. ಅವರ ಮನೆಯಲ್ಲಿ ಎಲ್ಲರು ಮಾನಿಸಕವಾಗಿ ಹಾಗೂ ದೈಹಿಕವಾಗಿ ಸ್ವಸ್ಥರಾಗಿದ್ದಾರೆ ಎಂದು ಅಳಿಯಲು ಅವಳನ್ನೊಮ್ಮೆ ನೋಡಿದರೆ ಸಾಕು. ಯಾರಿಗಾದರೂ ಏನಾದರೂ ಆದರೇ ಅವಳ ನಗುವಿನಲ್ಲೊಂದು ಎಳೆ ಕಮ್ಮಿ, ಅವಳ ಸ್ವರದಲ್ಲೊಂದು ದುಃಖದ ನೆರಳು. ಮನೆಯವರ ಬಾಯಲ್ಲಿ ಮೂರು ಹೊತ್ತು “ಸುಮನ್ ಸುಮನ್”. ಅವಳನ್ನು ಯಾರೂ ಎತ್ತರದ ಧ್ವನಿಯಲ್ಲಿ ಮಾತಾಡಿಸುವುದೇ ಇಲ್ಲ. ಎಲ್ಲಿ ಅತ್ತು ಬಿಡುವಳೋ ಎಂಬ ಭಯ, ಕಾಳಜಿ ಎರಡೂ. ಧ್ವನಿ ಎತ್ತರಿಸುವ ಅವಶ್ಯಕತೆಯೇ ಇರಲಿಲ್ಲ. ಎಲ್ಲರನ್ನು ಅನುಸರಿಸಿಕೊಂಡು ಹೊಂದಿಕೊಂಡು ಹೋಗುತ್ತಿದ್ದಳು ಸುಮನ್. ಅವರಪ್ಪನ ಆದರ್ಶವನ್ನು ಅರೆದು ಕುಡಿದು ಆದರ್ಶವನ್ನೆ ಆ ಮೃದು ಮನಸ್ಸಿಗೆ ಕವಚ ಮಾಡಿಕೊಂಡಿದ್ದಳು. ಯಾವುದೇ ವಿಷಯದಲ್ಲಾಗಲಿ ಇದು ಸರಿ ಇದು ತಪ್ಪು ಎರಡೇ ದಡಗಳು ಅದಕ್ಕೆ. ಎಲ್ಲಾ ಕಪ್ಪು ಬಿಳುಪು. ಮಧ್ಯ ಯಾವುದೇ ಬಣ್ಣಕ್ಕೆ ಅವಕಾಶವಿರಲಿಲ್ಲ. “ದ್ವಂದ್ವ” ಪದಕ್ಕೆ ಅರ್ಥವೇ ಇರಲಿಲ್ಲ ಅವಳ ಪದಪುಂಜದಲ್ಲಿ.

ಎಲ್ಲಾ ಹುಡುಗಿಯರಿಗೂ ಮದುವೆಯಾಗುತ್ತದೆ, ಮಕ್ಕಳು ಆಗುತ್ತದೆ ಎಂದು ಯಾವಾಗ ಅರಿವಾಗಿತ್ತೋ ಅದೇ ಅವಳ ಆಸೆ ಹಾಗೂ ಕನಸಾಗಿತ್ತು. ಅವಳಿಗೆ ಪ್ರೀತಿಯ ಗಂಡ, ಮುದ್ದಾದ ಮಕ್ಕಳು ಬೇಕು. ಅದೇ ಅವಳ ಜೀವನದ ಗುರಿ, ದೇವರು ಅವಳನ್ನು ಜಾಣಳನ್ನಾಗಿ ಮಾಡಿದ್ದ ಆದರೆ ಮಹತ್ವಾಕಾಂಕ್ಷೆ ಕೊಟ್ಟಿರಲಿಲ್ಲ. ತರಗತಿಯಲ್ಲಿ ಸಲೀಸಾಗಿ ಮೊದಲ ಸ್ಥಾನ ಪಡೆಯುತ್ತಿದ್ದಳು. ಪಿಯುಸಿಯಲ್ಲಿ ಪಿಸಿಎಮ್ಬಿ ತೆಗೆದುಕೊಂಡು ಇಂಜಿನಿಯರಿಂಗ್ ಆದರೂ ಸರಿ ವೈದ್ಯಕೀಯವಾದರೂ ಸರಿ ಎಂದು ಸಿಇಟಿ ಬರೆದಳು. ಅವರದೇ ಊರಿನ ಪ್ರಖ್ಯಾತ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಸೀಟು ದೊರೆಯಿತು. ಸಂತೋಷದಿಂದಲೆ ಸೇರಿದಳು. ಇಂಜಿನಿಯರಿಂಗ್ ನೀರು ಕುಡಿದಷ್ಟು ಸಲೀಸಾಗಿ ಪ್ರಥಮ ದರ್ಜೆಯಲ್ಲಿ ತೇಗರ್ಡೆಯಾದಳು. ಮಹತ್ವಾಕಾಂಕ್ಷೆ ಇರಲಿಲ್ಲ ಸುಮನ್‍ ಗೆ ಆದರೆ ಜ್ಞಾನದ ಮೋಹ ತುಂಬಾ ಇತ್ತು. ಒಂದೊಂದು ವರ್ಷದಲ್ಲಿ ಒಂದೋ ಎರಡೋ ವಿಷಯದ ಹುಚ್ಚು ಹಿಡಿಯುತ್ತಿತ್ತು ಅವಳಿಗೆ. ಆ ವಿಷಯದ ಬೆನ್ನು ಹತ್ತಿ ಅದರಲ್ಲಿ ಪರಿಣತಿ ಪಡೆಯುತ್ತಿದ್ದಳು. ಕೊನೆಯ ವರ್ಷದಲ್ಲಿ ಎಲ್ಲರೂ ಕೆಲಸಕ್ಕೆ ಅಥವಾ ಓದಿನ ಬಗ್ಗೆ ಯೋಚಿಸಲಾರಂಭಿಸಿದರೇ ಇವಳು ತನಗೆ ಮದುವೆಯಾಗುವ ಸಮಯ ಹತ್ತಿರ ಬಂತು ಎಂದು ಸಂತಸಗೊಂಡಳು.

ಮಗಳಿಗೆ ಗಂಡು ಹುಡುಕುವ ಎಂದು ಅಶ್ವತನಾರಾಯಣರು ಬೀರುವಿನಲ್ಲಿಟ್ಟ ಸುಮನಳ ಜಾತಕ ತೆಗೆದರು. ನೋಡಿದರೇ ಸುಮನದು ಮೂಲಾ ನಕ್ಷತ್ರ. ಅಂದರೆ ಮಾವನಿರದ ಮನೆಯಾಗಬೇಕು. ಒಂದು ನಿಮಿಷ ವಿಚಲಿತಗೊಂಡರು. ಯಾಕೋ ಗಂಡು ಸಿಗುವುದು ಕಷ್ಟ ಎನಿಸಿತು. ಅಲ್ಲಿಯವರೆಗೂ ಸುಮನ್ ಕೆಲಸಕ್ಕೆ ಸೇರುವುದು ಲೇಸು ಎನಿಸಿ “ಸುಮನ್ ಮನೆಯಲ್ಲಿದ್ದೇನು ಮಾಡ್ತೀಯಾ ಮರಿ? ಮದುವೆಯಾಗೊವರೆಗೂ ಇಲ್ಲೆ ಕಾಲೇಜಿನಲ್ಲಿ ಕೆಲಸಕ್ಕೆ ಸೇರು” ಎಂದರು. ಸರಿ ಸುಮನ್ ತನ್ನ ವಿಭಾಗಕ್ಕೆ ಹೋಗಿ ಅರ್ಜಿ ಹಾಕಿದಳು. ಅದರ ಮುಖ್ಯಸ್ಥರಾದ ಸುರೇಶ ಅವರಿಗೆ ಅವಳನ್ನು ತೆಗೆದುಕೊಳ್ಳಲು ಯಾವ ಅಡಚನೆಯೂ ಕಾಣಲಿಲ್ಲ. ಸುಮನ್ ಸಂತೋಷದಿಂದಲೆ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಸೇರಿದಳು. ತುಂಬ ಮುತುವರ್ಜಿಯಿಂದ ಪಾಠಕ್ಕೆ ತಯಾರಾಗಿ ಚೆನ್ನಾಗಿ ಪಾಠ ಮಾಡುತ್ತಿದ್ದಳು. ಹುಡುಗರಿಗೆ ಅವಳು ಹೇಳುವ ವಿಷಯದಲ್ಲಿ ಕುತೂಹಲ ಮೂಡಿ, ಆ ವಿಷಯಕ್ಕೆ ಮಾರು ಹೋಗಿ ಅದರ ಬೆನ್ನು ಹತ್ತುತ್ತಿದ್ದರು. ನಾ ಮುಂದೆ ತಾ ಮುಂದೆ ಎಂಬ ಪೈಪೋಟಿ ಅವರಲ್ಲಿ ಶುರುವಾಗಿ ಆ ವಿಷಯದಲ್ಲಿ ತುಂಬಾ ಒಳ್ಳೆ ಅಂಕಗಳನ್ನು ಗಳಿಸುತ್ತಿದ್ದರು. ಹಾಗಿತ್ತು ಸುಮನಳ ಉತ್ಸಾಹ ಹಾಗೂ ಹುಮ್ಮಸ್ಸು. ಕೊಟ್ಟ ಕೆಲಸ ಅವಳು ಮಾಡಿದರೆ ಇನ್ನು ಅದನ್ನು ಪರಿಶೀಲಿಸುವುದೇ ಬೇಡ ಎಂಬ ಭರವಸೆ ಅವರ ಮುಖ್ಯಸ್ಥರಿಗೆ ಬಂದಿತ್ತು.  ಒಂದೇ ಒಂದು ವರ್ಷದಲ್ಲಿ.

ಸುಮನ್ ಮ್ಯಾಮ್ ತುಂಬ ಆದರ್ಶವಾದಿ, ಸ್ಟ್ರಿಕ್ಟು. ಅವರಿಗೆ ಮೂಗಿನ ಮೇಲೆ ಕೋಪ. ಇದು ವಿಧ್ಯಾರ್ಥಿಗಳ ಅಭಿಪ್ರಾಯ. ರಜೆ ಮುಗಿಸಿ ಬಂದು ವೇಳಾಪಟ್ಟಿಯಲ್ಲಿ ಅವಳ ಹೆಸರು ನೋಡಿದರೆ ಆ ವಿಷಯದಲ್ಲಿ ಇನ್ನು ತಾನು ಖಚಿತವಾಗಿ ಉತ್ತಿರ್ಣನಾಗುತ್ತೇನೆ ಎಂಬ ಭರವಸೆ ಪ್ರತಿ ವಿಧ್ಯಾರ್ಥಿಯಲ್ಲೂ ಮೂಡುತ್ತಿತ್ತು. ಎರಡೇ ಎರಡು ವರ್ಷದಲ್ಲಿ ಅಂತಹ ಹೆಸರು ಗಳಿಸಿದ್ದಳು. ಪಾಠದಲೊಂದೇ ಅಲ್ಲ ಕಾಲೇಜಿನಲ್ಲಿ ನಡೆಯುವ ಬೇರೆ ಚಟುವಟಿಕೆಗಳಿಗೂ ಅವಳ ಮುಖ್ಯಸ್ಥರು ಸುಮನಳನ್ನೇ ಕಳುಹಿಸುತ್ತಿದ್ದರು. ಹಾಗಿತ್ತು ಅವಳ ದಕ್ಷತೆ ಹಾಗೂ ವರ್ಚಸ್ಸು.

ಇತ್ತ ಅವಳ ತಂದೆ ಸಂಬಂಧಿಗಳಿಗೆಲ್ಲ ಜಾತಕ ಕೊಟ್ಟು ವರನಿಗಾಗಿ ಹುಡುಕುತ್ತ ಹೊರಟರು. ಊರಿನಲ್ಲಿದ್ದ ವಧು ವರಾನ್ವೇಷಣೆ ಕೇಂದ್ರದಲೆಲ್ಲ ಅವಳ ಹೆಸರು ನೋಂದಾಯಿಸಿದರು. ಸ್ನೇಹಿತರ ಕಿವಿ ಮೇಲೂ ಹಾಕಿದರು. ಆದರೆ ಏನೂ ಪ್ರಯೋಜನವಿಲ್ಲ. ಜಾತಕದಲ್ಲಿದ್ದ ಮೂಲಾ ನಕ್ಷತ್ರವೇ ಅವಳ ಮದುವೆಗೆ ಮೂಲವಾಯಿತು. ಬಂದು ಹೋಗುವವರೆಲ್ಲ “ಸುಮನ್‍ ಗೆ ಮದುವೆಯಾಗಲಿಲ್ಲವೆ?” ಎಂದು ಕೇಳುವವರೇ. “ಇಲ್ಲ” ಎಂದರೆ ಇಷ್ಟು ಮುದ್ದಾದ ಹುಡುಗಿಗೆ ಇನ್ನೂ ಗಂಡು ಸಿಕ್ಕಲಿಲ್ಲವೆ ಎಂದು ಯಾರಿಗೂ ನಂಬಿಕೆಯಾಗುತ್ತಿರಲಿಲ್ಲ. ಮೂಲಾ ನಕ್ಷತ್ರ ಎಂದರೆ ಅಯ್ಯೋ ಆ ಜಾತಕ ಬಿಟ್ಟು ಬೇರೆ ಜಾತಕ ಬರಿಸಿ ಬಿಡಿ ಎಂಬ ಪುಕಟ್ಟೆ ಸಲಹೆ ನೀಡುವರು ಕೆಲವರಾದರೇ ಸುಮನ್ ನೀನೇ ಯಾರನ್ನಾದರು ಲವ್ ಮಾಡಿ ಬಿಡು ಎಂದು ತಮಾಷೆ ಮಾಡುವರಿನಿಷ್ಟು ಜನ. ಜಾತಕ ಬೇರೆ ಬರೆಸುವುದು ಅವರಪ್ಪನ ಆದರ್ಶದ ಎದುರು ಸೋಲುವ ಸಲಹೆಯೇ ಸರಿ. ಇನ್ನು ಸುಮನ್‍ ಗೆ ಮದುವೆಯಾಗದೆ ಯಾರನ್ನೂ ಇಷ್ಟಪಡುವುದು ಅವಳಿಗೆ ಒಪ್ಪದ ಮಾತು. ಜನರ “ಮದುವೆಯಾಗಲಿಲ್ಲವೆ” ಎಂಬ ಪ್ರಶ್ನೆಗೆ ಮುದಡಿ ಹೋಗಿದ್ದಳು. ಅವಳು ಒಬ್ಬ ಹೆಣ್ಣು ಅವಳಿಗೂ ಮದುವೆ ಆಸೆ ಇರುವುದು. ಅವಳನ್ನು ಹಾಗೆ ಕೇಳಿ ಅವಳ ಮನಸ್ಸನ್ನು ನೋಯಿಸಬಾರದು ಎನ್ನುವ ಅನುಕಂಪ ಯಾರಿಗೂ ಇಲ್ಲ.

ತಮ್ಮ ಕಣ್ಣ ಮುಂದೆ ಓದಿದ ಜಾಣ ಹುಡುಗಿ ಎಂದು ಅವಳಿಗೆ ಈಗ ಸಹೋದ್ಯೋಗಿಗಳಾಗಿದ್ದ ಅವಳ ಅಧ್ಯಾಪಕರು “ಮುಂದೆ ಓದು ಸುಮನ್, ಎಮ್.ಇ ಮಾಡು ಇಲ್ಲ ಬೆಂಗಳೂರಿಗೆ ಹೋಗಿ ಸಾಫ್ಟವೇರ್ ಕೆಲಸ ಹುಡಕಿಕೋ” ಎನ್ನುತ್ತಿದರು. “ನನಗೆ ಈಗಲೋ ಅಗಲೋ ಮದುವೆಯಾಗುತ್ತದೆ ಆಮೇಲೆ ನಾನು ಮನೆಯಲ್ಲಿರುವೆ” ಎಂದು ಅವರ ಸಲಹೆಯನ್ನು ನಗೆಯಲ್ಲಿ ಹಾರಿಸಿ ಬಿಡುತ್ತಿದ್ದಳು. ಅಶ್ವತನಾರಾಯಣರ ಪರಿಶ್ರಮಕ್ಕೆ ತಾವು ಮುಂದವರಿಯಬಹುದು ಎಂದೆನಿಸುವ ಒಂದಾದರೂ ವರ ಸಿಗಲಿಲ್ಲ. ಕೊನೆಗೆ ಕಂಕಣ ಕೂಡಿ ಬಂದಾಗ ದೇವರೇ ದಾರಿ ತೋರಿಸುತ್ತಾನೆ ಎಂದು ದೇವರ ಮೇಲೆ ಭಾರ ಹಾಕಿದರು. ಸುಮನ್ ಒಳಗೊಳಗೆ ದುಃಖಿಸಿದರೂ ತನ್ನ ಕಾಲೇಜಿನ ಕೆಲಸದಲ್ಲಿ ತನ್ನನ್ನು ಮುಳಗಿಸಿಕೊಂಡು ಒಂದೊಂದೇ ದಿನ ನೂಕುತ್ತಿದ್ದಳು. ಮನೆಯಲ್ಲಿ ಮಂಕು ಬಡಿದಿತ್ತು. ತಮ್ಮಂದಿರು ಓದು ಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದರು. ರಾಜಲಕ್ಷ್ಮಿ ಮಗಳ ಮುಂದೆ ಧೈರ್ಯಗೆಡದೆ ಅವಳಿಲ್ಲದ್ದಿದಾಗಲೆಲ್ಲ ಕೊರಗುತ್ತಿದ್ದರು. ಹೀಗೇ ವರ್ಷಗಳು ಉರುಳುತ್ತ ಹೋದವು. ಮನೆಯಲ್ಲಿ ಎಲ್ಲರಿಗೂ ಅವಳ ಮದುವೆಯದೇ ಚಿಂತೆ. ಸುಮನ್‍ ಗೂ ನಿರಾಸೆಯಾಗಿತ್ತು. ಅವಳ ಸಹಪಾಠಿಳಿಗೆಲ್ಲ ಮದುವೆಯಾಗಿ ಮಕ್ಕಳಾಗಿದ್ದವು, ಜೀವನದಲ್ಲಿ ತೊಡಕೇ ಕಾಣದ ಅವಳಿಗೆ  ಈಗ  ಹತ್ತಲಾರದ ಒಂದು ಬೆಟ್ಟದ ಎದುರು ನಿಂತಂತೆ ಭಾಸವಾಗುತ್ತಿತ್ತು.

ಸುಮನ್‍ ಗೆ ಇಪತ್ತೆಂಟು ತುಂಬಲು ಇನ್ನೊಂದು ತಿಂಗಳು. ಅವಳಪ್ಪನಿಗೆ ನಿವೃತ್ತಿಯಾಯಿತು. ಇತ್ತ ಅವಳ ಮದುವೆಯೂ ಆಗಲಿಲ್ಲ. ಅದರ ಆಸೆಯಲ್ಲಿ ಅವಳು ತನ್ನ ಓದನ್ನೂ ಮುಂದವರಿಸಲಿಲ್ಲ. ಹೀಗಿರುವಾಗ ಒಂದು ದಿನ ಪರಿಚಯಸ್ಥರು ಅವರಪ್ಪನಿಗೆ ಒಂದು ವರನ ವಿವರಗಳನ್ನು ಕೊಟ್ಟು ವಿಚಾರಿಸಲು ಹೇಳಿದರು. ವಿಚಾರಿಸಿದಾಗ ತಿಳಿದು ಬಂದ ವಿವರಗಳು ಅಶ್ವತನಾರಾಯಣರಿಗೆ ಪ್ರಶಸ್ತವಾಗಿ ಕಂಡವು. ಹುಡುಗನ ಹೆಸರು ಗಿರೀಶ. ಅವನಿಗೆ ಮುಖ್ಯವಾಗಿ ತಂದೆ ಇರಲಿಲ್ಲ. ಹಾಗೇ ತಾಯಿ ಕೂಡ ಇರಲಿಲ್ಲ. ಹುಡುಗ ಬೆಂಗಳೂರಿನ ಪ್ರತಿಷ್ಟಿತ ಕಾಲೇಜೊಂದರಲ್ಲಿ ಬಿ.ಇ ಮುಗಿಸಿ ಬೆಂಗಳೂರಿನ ಐ.ಐ.ಎಮ್‍ನಿಂದ ಎಂ.ಬಿ.ಎ ಮಾಡಿದ್ದ. ಸಿಂಗಾಪುರದಿಂದ ಕೂಡ ಒಂದು ಮ್ಯಾನೆಜಮೆಂಟ್ ಪದವಿ ಪಡೆದು ಅಮೆರಿಕ, ಜರ್ಮನಿ, ಲಂಡನ್ನನಿನಲ್ಲಿ ಕೆಲಸ ಮಾಡಿ ಈಗ ಬೆಂಗಳೂರಿನ ಒಂದು ಒಳ್ಳೆಯ ಐ.ಟಿ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದ. ಅವನಿಗೀಗ ಮೂವತ್ತೈದು ವರ್ಷ ವಯಸ್ಸು. ಅವನ ಚಿಕ್ಕಪ್ಪ, ಚಿಕ್ಕಮ್ಮ ಊರಿನಲ್ಲಿದ್ದರು. ಹೋಗಿ ಹುಡುಗನ ಚಿಕ್ಕಪ್ಪ ಚಿಕ್ಕಮ್ಮನನ್ನು ಭೇಟಿಯಾಗಿ ಜಾತಕ ಫೋಟೋ ಕೊಟ್ಟು ಬಂದರು. ಒಂದೇ ವಾರದಲ್ಲಿ ಹುಡುಗ ಹುಡಗಿಯನ್ನು ನೋಡಲು ಬಯಸಿದ್ದಾನೆ ಎಂಬ ಉತ್ತರ ಕೇಳಿ ಸುಮನ್ ಮನೆಯಲ್ಲಿ ಹೇಳು ತೀರದ ಸಂಭ್ರಮ. ಬಾಡಿದ ಸುಮನ್ ಮುಖ ಸ್ವಲ್ಪ ಗೆಲುವಾಯಿತು.

ಇವರುಗಳು ಸಂತೋಷವಾಗಿ ಭೇಟಿಯಾಗಬಹುದು ಎಂದಿದ್ದೆ ತಡ ಒಂದು ಭಾನುವಾರ ಗಿರೀಶ ತನ್ನ ಚಿಕ್ಕಪ್ಪ ಚಿಕ್ಕಮ್ಮನೊಂದಿಗೆ ಸುಮನಳನ್ನು ನೋಡಲು ಬಂದ. ಸುಮನ್ ಗುಲಾಬಿ ಬಣ್ಣದ ಲಖನವ್ ಸೀರೆಯಲ್ಲಿ ಗುಲಾಬಿಯನ್ನೆ ಹೋಲುತ್ತಿದ್ದಳು. ಅತಿಥಿಗಳು ಬಂದು ಹೋದ ಮೇಲೆ ಅಶ್ವತನಾರಾಯಣರು “ಹುಡುಗ ನೋಡಲು ಚಿನ್ನಾಗಿದಾನೆ ತುಂಬ ಓದಿದವನು ಬೇರೆ. ಒಪ್ಪಿದರೆ ನಮ್ಮ ಸುಮನಳ ಅದೃಷ್ಟ” ಎಂದು ರಾಜಲಕ್ಷ್ಮಿಗೆ ಹೇಳಿ ಅಂದು ಸಂತಸದಿಂದ ನಿದ್ರೆ ಮಾಡಿದರು. ರಾಜಲಕ್ಷ್ಮಿ ದೇವರಿಗೆ ತುಪ್ಪದ ದೀಪ ಹಚ್ಚಿ “ಕಂಕಣ ಬಲ ಕೂಡಿ ಬರಲಿ ನನ್ನ ಮಗಳಿಗೆ” ಎಂದು ಬೇಡಿದರು. ಮಾರನೆಯ ದಿನ ಹುಡುಗ ಒಪ್ಪಿದ್ದಾನೆ ಎಂದು ಗಿರೀಶನ ಚಿಕ್ಕಪ್ಪ ಕರೆ ಮಾಡೇ ಬಿಟ್ಟರು. ಅಶ್ವತನಾರಾಯಣರು ಸುಮನ್ “ನಿಂಗೆ ಒಪ್ಪಿಗೆಯೇನಮ್ಮ” ಎಂದು ಕೇಳಿದಕ್ಕೆ ಸುಮನಳ ನಗುವೇ ಉತ್ತರ. ಹುಡುಗನಿಗೆ ತಂದೆ ತಾಯಿ ಇಲ್ಲದ್ದರಿಂದ ತಾವೇ ಧಾರೆ ಎರೆಸಿಕೊಳ್ಳುತ್ತೇವೆ ಎಂದು ಗಿರೀಶನ ಚಿಕ್ಕಪ್ಪ ಹೇಳಿದರು. ಅವರ ಜೊತೆಯಲ್ಲಿ ಅಶ್ವತನಾರಾಯಣರು ಪುರೋಹಿತರ ಬಳಿ ಹೋಗಿ ದೀಪಾವಳಿಯಾದ ಮೂರು ದಿನಕ್ಕೆ ಲಗ್ನದ ಮುಹೂರ್ತ ಗೊತ್ತು ಮಾಡಿಕೊಂಡು ಬಂದರು.

ಅಶ್ವತನಾರಾಯಣರ ಮನೆ ಸಂತೋಷ ಸಂಭ್ರಮದಿಂದ ಕಂಗೊಳೆಸುತ್ತಿತ್ತು. ಎಲ್ಲರ ಮುಖದಲ್ಲು ಏನೋ ಉಲ್ಲಾಸ ಏನೋ ಸಂತಸ. ಬಂದು ಹೋದವರಿಗೆಲ್ಲ ಗಿರೀಶನ ಫೋಟೋ ತೋರಿಸಿ ನಮ್ಮ ಸುಮನಳ ಅದೃಷ್ಟ ತುಂಬ ಚೆನ್ನಾಗಿದೆ ಎಂದು ಬೀಗುವರು. ಸುಮನ್ ಕನ್ನಡಿಯಲ್ಲಿ ತನ್ನ ಮುಖ ನೋಡಿ ಒಮ್ಮೆ ನಕ್ಕರೆ ಒಮ್ಮೆ ನಾಚುತ್ತಾಳೆ. “ಸುಮನ್ ಗಿರೀಶ” ಎಂದು ಕಾಗದದ ಚೂರುಗಳಲ್ಲಿ ಬರೆದು ಸಂತಸಪಡುತ್ತಾಳೆ. ಅವಳು ನಡೆದರೆ ಅವಳ ಕಾಲ್ಗೆಜ್ಜೆ ಏನೋ ಹೊಸದೊಂದು ರಾಗ ಹಾಡುತ್ತಿತ್ತು.

ಮದುವೆಗೆ ಇನ್ನು ಎರಡು ತಿಂಗಳಿದ್ದರೂ ಮಾಡಲು ಅದೆಷ್ಟು ಕೆಲಸ. ಜವಳಿ ತೆಗೆಯಬೇಕು, ಬೆಳ್ಳಿ ಸಾಮಾನು ಮಾಡಲು ಹಾಕಬೇಕು. ಸುಮನ್‍ ಗೆ ಒಡವೆ ಮಾಡಿಸಬೇಕು, ಛತ್ರ ಗೊತ್ತು ಮಾಡಬೇಕು, ಅಡಿಗೆಯವರನ್ನು ಹುಡುಕಬೇಕು ಇನ್ನೂ ಏನೇನೋ. ಮನೆಯಲ್ಲಿ ಎಲ್ಲರಿಗೂ ಕೈ ತುಂಬ ಕೆಲಸ. ಹುಡುಗನ ಚಿಕ್ಕಿಪ್ಪ “ಹುಡುಗ ಚಿಕ್ಕದಾಗಿ ಮಧ್ಯಾಹ್ನದ ಹೊತ್ತಿಗೆ ಮುಗಿಯುವ ಹಾಗೆ ಮದುವೆ ಮಾಡಿಕೊಡಿ ಎಂದು ಹೇಳಿದ್ದಾನೆ” ಎಂದು  ತಿಳಿಸಿದರು. “ಅಂದೇ ಸಂಜೆ ಹುಡುಗ ಹುಡುಗಿ ಬೆಂಗಳೂರಿಗೆ ಹೋಗಿ ಅಲ್ಲಿಂದ ಮಧುಚಂದ್ರಕ್ಕೆ ವಿದೇಶಕ್ಕೆ ಹೊರಡುವರು” ಎಂದು ಸೇರಿಸಿದರು. ಅಶ್ವತನಾರಾಯಣರಿಗೆ ಏನೂ ಅಭ್ಯಂತರವಿಲ್ಲದ್ದರಿಂದ ಸಂತೋಷದಿಂದ ಒಪ್ಪಿದರು. 

ಅಶ್ವತನಾರಾಯಣರು ಹೆಂಡತಿ ಮಗಳ ಜೊತೆಗೂಡಿ ಮಗನ ಮನೆಗೆ ಬಂದಿಳಿದರು. ಮಳಿಗೆಗಳಿಗೆ ಓಡಾಡಿ ಮಗಳಿಗೆ ಒಪ್ಪುವ ಸೀರೆಗಳನ್ನು ಆರಿಸಿದರು. ಚಿನ್ನದ ಅಂಗಡಿಗೆ ಹೋಗಿ ಸುಮನ್‍ ಗೆ ಹಿಡಿಸಿದ ಒಂದು ಹವಳದ ಸೆಟ್‌ ಅನ್ನು ಕೊಂಡರು. ಊರಿಗೆ ಬಂದು ಪರಿಚಯಸ್ಥ ಅಕ್ಕಸಾಲಿಗನಿಗೆ ಹೇಳಿ ಬೆಳ್ಳಿಯ ಸಾಮಾನು, ಸುಮನ್‍ ಗೆ ದಿನ ಹಾಕಿಕೊಳ್ಳಲು ಎರಡು ಜೊತೆ ಹೊಸ ವಿನ್ಯಾಸದ ಬಳೆಗಳು, ಮಾಂಗಲ್ಯದ ಸರ ಎಲ್ಲಾ ಮಾಡಲು ಹಾಕಿದರು. ಸುಮನಳನ್ನು  ಎತ್ತಾಡಿಸಿದ ಕೆಲಸದ ಲಕ್ಷ್ಮಿಗೆ ಭರ್ಜರಿ ಸೀರೆ ತೆಗೆದಿದ್ದಾಯಿತು. ಪಕ್ಕದ ಮನೆ ಗಿರಿಜಮ್ಮ, ಮೂಲೆ ಮನೆ ಸರೋಜಮ್ಮ ಇಬ್ಬರೂ ರಾಜಲಕ್ಷ್ಮಿಯವರ ಗೆಳತಿಯರು. ಅವರಿಬ್ಬರಿಗೂ ಕಾಂಚಿವರಂ ಸೀರೆ, ಗಿರಿಜಮ್ಮನ ಎಜಮಾನರಾದ ಶ್ರೀಧರ ಮೂರ್ತಿಗಳಿಗೆ ಶರ್ಟು ಪ್ಯಾಂಟ್ ಬಟ್ಟೆ ಕೊಂಡಿದ್ದಾಯಿತು. ಹೀಗೇ ಒಂದೊಂದು ಸಾಮಾನನ್ನು ಆಸೆ, ಪ್ರೀತಿಯಿಂದ ಅಶ್ವತನಾರಾಯಣರು, ರಾಜಲಕ್ಷ್ಮಿ ಊರೆಲ್ಲಾ ಓಡಾಡಿ ಆರಿಸಿ ತೆಗೆದಿಟ್ಟರು. ಎಲ್ಲಾದಕ್ಕು ಸುಮನ್ ಸಂಭ್ರಮದಿಂದ ಓಡಾಡಿ ಅವರುಗಳ ಕಣ್ಣಿಗೆ ಹಬ್ಬವಾದಳು.

ದೀಪಾವಳಿ ಹಬ್ಬ ಆ ಸಲಿ ಅಶ್ವತನಾರಾಯಣರ ಮನೆಯಲ್ಲಿ ಬರಿ ಪಾಯಸದ ಊಟದಲ್ಲಿ ಮುಗಿದಿತ್ತು. ಸುಮನಳನ್ನು ಟೈಲರ್ ಅಂಗಡಿಗೆ ಕರೆದೊಯ್ಯಬೇಕು, ಬಳೆ ಅಂಗಡಿಗೆ ಕರೆದೊಯ್ಯಬೇಕು, ಅವಳು ಮರೆತ ಸೇಫ್ಟಿ ಪಿನ್ ತರಬೇಕು. ಇವೇ ಮೊದಲಾದ ಕೆಲಸಕ್ಕೆ  ತಮ್ಮಂದಿರು ನಾ ಮುಂದೆ ತಾ ಮುಂದೆ ಎಂದು ಹುಮ್ಮಸ್ಸಿನಿಂದ ಓಡಾಡುತ್ತಿದ್ದರು. ಊರಿಂದ  ನೆಂಟರು ಬಂದು ಮನೆ ಗಿಜಿಗಿಜಿಯಾಗಿತ್ತು. ದೇವರ ಸಮಾರಾಧನೆಯ ಊಟ ಮಾಡಿದ ಸುಮನ್‍ ಗೆ ಪಾರ್ಲರ್ ಹುಡುಗಿ ಗೋರಂಟಿ ಹಚ್ಚಿ ಒಂದು ಕಡೆ ಕೂರಿಸಿದಳು. ಅವಳ ಗೆಳತಿಯರಾದ ಶ್ವೇತ ಹಾಗೂ ಲತಾ ಅವಳನ್ನು ರೇಗಿಸಿ ಅವಳ ಗುಲಾಬಿ ಕೆನ್ನೆ ಕೆಂಪಗಾಗಿಸಿದರು. ನಾಳೆಯೇ ಮದುವೆ.

ಕೊನೆಗೂ ಸುಮನಳ ಆಸೆ ಕೈಗೂಡುವ ದಿನ ಬಂದೇ ಬಿಟ್ಟಿತು. ಮೊಗ್ಗಿನ ಜಡೆ, ಮೀನಾಕ್ಷಿ ಬಣ್ಣದ ಸೀರೆ ಉಟ್ಟು ಮಾಂಗಲ್ಯಧಾರಣೆಗೆ ಕುಳಿತ ಸುಮನ್ ಸುರಲೋಕದ ಅಪ್ಸರೆಯಂತಿದ್ದಳು. ಗಟ್ಟಿ ಮೇಳದ ಮಧ್ಯ ಗಿರೀಶ ತಾಳಿ ಕಟ್ಟಿ ಧಾರ್ಮಿಕವಾಗಿ ಸುಮನಳನ್ನು ವರಿಸಿದ. ಹನ್ನೆರಡು ಗಂಟೆಗೆಲ್ಲ ಊಟ, ಒಂದು ಗಂಟೆಗೆ ಗಿರೀಶನ ಚಿಕ್ಕಪ್ಪ ಚಿಕ್ಕಮ್ಮ ಮನೆ ತುಂಬಿಸುವ ಶಾಸ್ತ್ರ ಮಾಡಿಯೇ ಬಿಟ್ಟರು. ಸುಮನ್ ಬಟ್ಟೆ ಬದಲಿಸಿ ಕಡು ನೀಲಿ ಬಣ್ಣದ ಚುಡಿದಾರ ಹಾಕಿಕೊಂಡು ಗಂಡನ ಜೊತೆ ಹೊಸ ಜೀವನದ ಹೊಸ್ತಿಲಲ್ಲಿ ನಿಂತಿರುವಳು. “ನಮ್ಮ ಮನೆಯ ಅಂಗಳದ ಹೂವನ್ನು ನಿಮ್ಮ ಮನೆಯ ಅಂಗಳಕೆ” ಇದು ಸುಮನ್‍ ಗಾಗಿಯೇ ಬರೆದ ಹಾಡು. ತಂದೆ ತಾಯಿಗಳಿಗೆ ನಮ್ಮಸ್ಕರಿಸಿ ಕೆನ್ನೆ ಮೇಲೆ ಹರಿದು ಹೋಗುತ್ತಿರುವ ಕಣ್ಣೀರನ್ನು ಒರಿಸುತ್ತ ಗಿರೀಶನ ಕಾರು ಹತ್ತಿದಳು.

ಅಶ್ವತನಾರಾಯಣರು ಹಾಗೂ ರಾಜಲಕ್ಷ್ಮಿ ಕಾರು ಕಾಣುವವರೆಗೂ ಕೈ ಬೀಸುತ್ತ ನಿಂತಿದ್ದರು. ಸುಮನಳ ತಮ್ಮಂದಿರ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು.

(ಮುಂದುವರಿಯುವುದು)

-ಸುಚೇತಾ ಗೌತಮ್.‌ 

20 Responses

  1. MANJURAJ H N says:

    ಸರಾಗವಾಗಿ ಓದಿಸಿತು.
    ಮುಂದುವರಿದ ಭಾಗ ಆಸಕ್ತಿದಾಯಕವಾಗಿರಬಹುದು.
    ಸಡನ್ನಾದ ತಿರುವುಗಳು ಸಹ ಬರಬಹುದು. ಇರಲಿ.

    ಮಧ್ಯಮವರ್ಗದವರ ತವಕ ಮತ್ತು ತಲ್ಲಣ,
    ವಸ್ತು ಮತ್ತು ನಿರೂಪಣೆ ಇಷ್ಟವಾಯಿತು. ಅಭಿನಂದನೆಗಳು

  2. ಕಾದಂಬರಿಯ ಆರಂಭ ಚೆನ್ನಾಗಿದೆ… ಮುಂದೆ ಓದಬೇಕೆಂಬ ಕುತೂಹಲ ಮೂಡಿದೆ..ಅಭಿನಂದನೆಗಳು ಗೆಳತಿ ಸುಚೇತ..

  3. Anonymous says:

    Superb.. Keep it up

  4. ನಯನ ಬಜಕೂಡ್ಲು says:

    Very Nice. ಮುಂದೇನು ಅನ್ನುವ ಕುತೂಹಲ

  5. Swarna says:

    Very nice and interesting to read, eagerly waiting for the next .

  6. ವಿದ್ಯಾ says:

    ಕುತೂಹಲಕಾರಿ

  7. Padma Anand says:

    ಕುತೂಹಲ ಹುಟ್ಟಿಸುತ್ತಾ ಶುಭಾರಂಭಗೊಂಡಿದೆ. ಅಭಿನಂದನೆಗಳು.

  8. Prathibha M M says:

    So beautiful writing Sucheta.

  9. ಶಂಕರಿ ಶರ್ಮ says:

    ‘ಸುಮನ್` ಕಾದಂಬರಿಯ ಮೊದಲ ಕಂತಲ್ಲಿಯೇ ನಾಯಕಿಯ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡೆವು!…ಮುಂದೇನು ಎಂಬ ಕುತೂಹಲದೊಂದಿಗೆ ಕಾಯುವೆವು. ಸರಳ, ಸುಂದರ ಶೈಲಿ ಇಷ್ಟವಾಯ್ತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: