ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 4
17-04-2019 ಶುಕ್ರವಾರ
ನಾವು ರಾತ್ರಿ ಚೆಕ್ ಇನ್ ಮಾಡಿದ ಹೋಟೆಲಿನ ಬಗ್ಗೆ ಹೇಳಲೇಬೇಕು. ಇದರ ಹೆಸರು ‘ಗ್ರ್ಯಾಂಡ್ ಜಪಾನಿಂಗ್ ಹೋಟೆಲ್’. ಒಮಯ ಎನ್ನುವ ಸ್ಥಳದಲ್ಲಿತ್ತು. ಇಲ್ಲಿ ಹೋಟೆಲ್ ರಿಸೆಪ್ಷನ್ ಅಂದರೆ ಸ್ವಾಗತ ಕೋರುವ ಸ್ಥಳದಲ್ಲಿ ಯಾರೂ ಇರುವುದಿಲ್ಲ! ಏಕೆ ಇಡೀ ಹೋಟೆಲ್‌ನಲ್ಲಿಯೇ ಒಂದು ನರಪಿಳ್ಳೆ ಕಾಣಿಸುವುದಿಲ್ಲ! ಬದಲಾಗಿ ಸ್ವಾಗತಕ್ಕೆಂದು ಒಂದು ಕಂಪ್ಯೂಟರ್, ಫೋನ್ ಮತ್ತು ಸ್ಕ್ಯಾನರ್ ಕುಳಿತಿರುತ್ತವೆ. ನಾವೇ ಇದನ್ನೆಲ್ಲಾ ಉಪಯೋಗಿಸಿ, ನಮ್ಮ ಪಾಸ್‌ಪೋರ್ಟ್, ಸ್ಕ್ಯಾನ್ ಮಾಡಬೇಕು. ನಮಗೆ ರೂಮು ಮತ್ತು ಕೀ ಸಿಗುತ್ತದೆ. ಲಿಫ್ಟ್‌ನಲ್ಲಿ ಹೋಗುವಾಗಲೂ ಪಾಸ್‌ವರ್ಡ್ ಬೇಕು. ರೂಮಿಗಂತೂ ಹೇಳುವುದೇ ಬೇಡ. ಎಲ್ಲಾ ಜೋಪಾನವಾಗಿ ಬರೆದಿಟ್ಟುಕೊಳ್ಳಬೇಕು. ನಮ್ಮ ಲಗೇಜ್ ನಾವೇ ಹೊರಬೇಕು. ಇಷ್ಟೆಲ್ಲಾ ಮಾಡಿಕೊಂಡು ರೂಮಿಗೆ ಎಂಟ್ರಿ ಕೊಟ್ಟೆವು. ಅಲ್ಲಿ ಕಿರಿದಾದ ರೂಮನ್ನು ನೋಡಿ ಕಿರಿಕಿರಿ ಆಯಿತು. ಜಪಾನಿನಲ್ಲಿ ಹೀಗೆಯೇ ಬಿಡಿ. ಓಡಾಡಲೂ ಸ್ಥಳ ಇರುವುದಿಲ್ಲ.
ಬೆಳಗಿನ ಉಪಾಹಾರವು ‘ತಿಲಗ’ ಎನ್ನುವ ಹೋಟೆಲಿನಲ್ಲಿತ್ತು. ಕ್ಯೊಟೋನಲ್ಲಿಯೂ ಇಡ್ಲಿ, ವಡೆ ಲಭ್ಯವಾಯಿತು! ಮೃದುವಾದ ವಡೆ ಚೆನ್ನಾಗಿತ್ತು. ಇಡ್ಲಿ ಗಟ್ಟಿಯಾಗಿ ಕೂತಿತ್ತು! ತಿಲಗ ಹೋಟೆಲಿನ ಮಾಲೀಕನ ದೇಶಪ್ರೇಮ ನನಗೆ ತುಂಬಾ ಹಿಡಿಸಿತು. ಹೋಟೆಲಿನ ಹೊರಗಡೆ ಎರಡೂ ಕಡೆ ಭಾರತದ ಧ್ವಜಗಳು ರಾರಾಜಿಸುತ್ತಿದ್ದವು. ದೇಶಾಭಿಮಾನದಿಂದ ಎದೆಯುಬ್ಬಿತ್ತು. ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡೆ. ನನ್ನನ್ನು ನೋಡಿ ಇನ್ನೂಕೆಲವರು ಫೋಟೋ ತೆಗೆದುಕೊಂಡರು.
ನಾವು ಹೊರಡುವ ಮೊದಲು ನಮ್ಮ ಮಾರ್ಗದರ್ಶಿ ಮಿನು ಬಂದರು. ನಮ್ಮ ಭೇಟಿ ಕಿಂಕಾಕು ಜಿ ಮಂದಿರಕ್ಕಾಗಿತ್ತು.
ಕಿಂಕಾಕು ಜಿ ದೇವಾಲಯ : ಇದರ ಅರ್ಥ ಚಿನ್ನದ ಪೆವಿಲಿಯನ್ ಅಥವಾ ಚಿನ್ನದ ಗುಡಾರದ ದೇವಾಲಯ ಎಂದು. ಇದೊಂದು ಜೆನ್ ಬೌದ್ಧ ದೇವಾಲಯ. ನೂರಾರು ಜನ ಭೇಟಿ ನೀಡುತ್ತಾರೆ. ಈ ಸ್ಥಳವನ್ನು ರಾಷ್ಟ್ರೀಯ ವಿಶೇಷ ಚಾರಿತ್ರಿಕ ಸ್ಥಳ ಮತ್ತು ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಲಾಗಿದೆ. ಇಲ್ಲಿಯ ಭೂದೃಶ್ಯ ಕೂಡ ವಿಶೇಷ ಎಂದು ಪರಿಗಣಿಸಲಾಗಿದೆ. ಬಹಳ ಹಿಂದೆ ಈ ಸ್ಥಳ ಒಬ್ಬ ಶಕ್ತಿಶಾಲಿ ಮುತ್ಸದ್ದಿ ಆಗಿದ್ದ ಸೈಯೋಂಬಿ ಕಿಂಟ್‌ಸುನೆ ಎನ್ನುವವನಿಗೆ ಸೇರಿತ್ತು. ಈ ಸ್ಥಳವನ್ನು 1397 ರಲ್ಲಿ ಆಶಿಕಾಗ ಯೋಶಿಮಿತ್ಸು ಎನ್ನುವ ಶೋಗನ್ (ವೀರ, ಪ್ರಮುಖ) ಕೊಂಡುಕೊಂಡನು. ಇದನ್ನು ಕಿಂಕಾಕು-ಜಿ ಸಂಕೀರ್ಣವಾಗಿ ಮಾಡಲಾಯಿತು. ಯೋಶಿಮಿತ್ಸುವಿನ ಮಗ ತಂದೆಯ ಮರಣದ ನಂತರ ಅವನ ಇಚ್ಛೆಯಂತೆ ಈ ಕಟ್ಟಡವನ್ನು ಜೆನ್ ದೇವಾಲಯವನ್ನಾಗಿ ಮಾಡಿದ. ಈ ಕಟ್ಟಡವನ್ನು 1950 ನೇ ಇಸವಿಯಲ್ಲಿ ಒಬ್ಬ ತಲೆಕೆಟ್ಟ ಸನ್ಯಾಸಿ ಬೆಂಕಿ ಹಚ್ಚಿ ಸುಟ್ಟುಹಾಕಿದ. ನಂತರ ಇದನ್ನು 1955 ರಲ್ಲಿ ಮತ್ತೆ ಕಟ್ಟಲಾಯಿತು. ಈಗಿರುವ ಕಟ್ಟಡವೇ ಅದು.
ಜೊತೆಗೆ ಸುಂದರ ಜೆನ್ ಹೂತೋಟ ಮತ್ತು ಕೊಳ ಇದೆ. ಬಂಡೆಗಳನ್ನು ತಂದು ಸುಂದರವಾಗಿ ಕಾಣಲು ಇಟ್ಟಿದ್ದಾರೆ. ಮೂರು ಅಂತಸ್ತಿನ ಎತ್ತರ 12.5 ಮೀ (40 ಅಡಿ) ಇದೆ. ಪಗೋಡ ಶೈಲಿಯಲ್ಲಿದೆ. ಕಟ್ಟಡದ ಮೇಲೆ ಚಿನ್ನದ ತಗಡಿನ ಹೊದಿಕೆ ಇದೆ. ಆದ್ದರಿಂದಲೇ ಕಿಂಕಾಕು ಅಂದರೆ ಚಿನ್ನದ ಹೊದಿಕೆ ಎಂದು ಕರೆಯುತ್ತಾರೆ. ಹೊದಿಕೆಯ ದಪ್ಪ 0.1 ಮಿ.ಮೀ. (u=1/1000 mm). ಚಿನ್ನವು ಇತ್ಯಾತ್ಮಕ ಯೋಚನೆ ಮತ್ತು ಮಾಲಿನ್ಯವನ್ನು ದೂರ ಮಾಡುತ್ತದಂತೆ. ಕಿಂಕಾಕು-ಜಿ ದೇವಾಲಯ ತಾಜ್‌ಮಹಲ್‌ನಂತೆ ಬಹಳ ದೊಡ್ಡದಾಗಿಲ್ಲದಿದ್ದರೂ ಅದರದ್ದೇ ಆದ ಸೌಂದರ್ಯದಿಂದ ಕೂಡಿದೆ. ಇದೊಂದು ವಿಶ್ವ ಪಾರಂಪರಿಕ ತಾಣ. ಈ ದೇವಾಲಯ ನನಗೆ ಅಮೃತಸರದಲ್ಲಿರುವ ಚಿನ್ನದ ದೇವಾಲಯವನ್ನು ನೆನಪಿಗೆ ತಂದಿತು. ಇಲ್ಲಿಯೂ ಮುಂದೆ ಒಂದು ಕೊಳವಿದೆ. ಕೊಳದ ಹೆಸರು ಕ್ಯೊಕೊ-ಚಿ ಜಪಾನಿ ಭಾಷೆಯಲ್ಲಿ ‘ಕನ್ನಡಿ ಕೊಳ’, ಇದರಲ್ಲಿ ಚಿನ್ನದ ದೇವಾಲಯದ ಪ್ರತಿಬಿಂಬ ಬಹಳ ಚೆನ್ನಾಗಿ ಕಾಣಿಸುತ್ತದೆ. ನನಗೆ ಕ್ಯಾಂಬೋಡಿಯದ ಆಂಕರ್‌ವಾಟ್ ದೇವಸ್ಥಾನದ ನೆನಪಾಯಿತು. ಅದೂ ಕೂಡ ಮುಂದೆ ಇರುವ ನೀರಿನಲ್ಲಿ ಪ್ರತಿಫಲಿಸಿದಾಗ ನೋಡಲು ತುಂಬಾ ಚೆನ್ನಾಗಿರುತ್ತದೆ. ಎಲ್ಲರೂ ಈ ಹಿನ್ನೆಲೆಯಲ್ಲಿ ಫೋಟೋ ತೆಗೆದುಕೊಂಡೆವು.
ನಮ್ಮ ಜೊತೆಯಲ್ಲಿ ಬಂದಿದ್ದ ಒಬ್ಬ ದಂಪತಿ ಕ್ಯಾಮೆರ, ಸ್ಮಾರ್ಟ್‌ಫೋನು ಇಲ್ಲದೆಯೇ ಬಂದಿದ್ದರು, ಇವರು ನಮ್ಮ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದವರು. ನನಗೆ ಅವರನ್ನು ಕಂಡರೆ ವಿಶೇಷ ಗೌರವ. ನಾನೇ ಅವರ ಫೋಟೋಗಳನ್ನು ತೆಗೆದು ನಂತರ ಕಳುಹಿಸಿಕೊಟ್ಟೆ. ಕಿಂಕಾಕು-ಜಿ ಯ ಮೇಲಿನ ಎರಡು ಅಂತಸ್ತುಗಳು ಶುದ್ಧ ಚಿನ್ನದ ತಗಡಿನಿಂದ ಹೊದಿಸಲ್ಪಟ್ಟಿವೆ. ಬುದ್ಧ ಹಜಾರದಲ್ಲಿ ಬುದ್ಧನ ಚಿತಾಭಸ್ಮವಿದೆ. ಇಂತಹ ಸ್ಥಳಕ್ಕೆ ಶರಿಡೆನ್ ಎಂದು ಹೆಸರು. ಮೂರು ಅಂತಸ್ತುಗಳೂ ವಿಭಿನ್ನ ಜಪಾನಿ ವಾಸ್ತು ಕಲೆಯಿಂದ ಕಟ್ಟಲ್ಪಟ್ಟಿವೆ. ಇವು ಶಿಂಡೆನ್, ಸಮುರಾಯ್ ಮತ್ತು ಜ಼ೆನ್ ಕಲೆಗಳು. ಮೊದಲನೆಯ ಅಂತಸ್ತು, ಶಿಂಡನ್ ಶೈಲಿಯಲ್ಲಿದೆ. ಈ ಅಂತಸ್ತಿನ ಹೆಸರು ಧರ್ಮಜಲದ ಕೋಣೆ. ಅರಮನೆ ಶೈಲಿಯಲ್ಲಿದ್ದು ತೆರೆದಂತೆಯೇ ಇದೆ. ಎರಡನೆಯ ಅಂತಸ್ತು, ಶಬ್ದ ಅಲೆಗಳ ಗೋಪುರ. ಇದು ಸಮುರಾಯ್ ಶೈಲಿಯಲ್ಲಿದೆ. ಸಮುರಾಯ್ ಎಂದರೆ ವೀರರು, ಶ್ರೀಮಂತರು. ಇಲ್ಲಿ ಬುದ್ಧ ಹಜಾರ ಮತ್ತು ಕನ್ನೊನ್ (ಕರುಣೆಯ ದೇವಿ) ಮಂದಿರ ಇದೆ. ಮೂರನೆಯ ಅಂತಸ್ತು ಜೆನ್ ಶೈಲಿಯಲ್ಲಿದೆ. ಇದು Cupola of the ultimate ಅಂದರೆ ಅಂತಿಮ ಗೋಲಾಕಾರದ ಶಿಖರ. ಮಾಡು ಹೆಂಚಿನ ಹೊದಿಕೆಯದ್ದು, ಮಂದಿರದ ಮೇಲೆ ಶಿಖರದ ಹಾಗೆ ಚಿನ್ನದ ಗರುಡಪಕ್ಷಿ ಇದೆ. ರೆಕ್ಕೆ ಬಿಚ್ಚಿ ಹಾರಲು ತಯಾರಾದಂತಿದೆ. ಇದನ್ನು ‘ಕರೂರ’ ಎಂದು ಕರೆಯುತ್ತಾರೆ. ಒಳಗಡೆ ಮಂದಿರಗಳಿವೆ.
ಕಿಂಕಾಕು-ಜಿ ದೇವಾಲಯದ ಸುತ್ತ ಸುಂದರ ತೋಟ ಇದೆ. ಅನೇಕ ರೀತಿಯ ಮರಗಿಡಗಳಿವೆ. ಜಪಾನಿ ಮೇಪಲ್ ಮರಗಳು ಇವೆ. ಇದರಲ್ಲಿ ಚಿಕ್ಕ ಎಲೆಗಳು ಮತ್ತು ಚಿಕ್ಕ ಹೂಗೊಂಚಲುಗಳಿವೆ. ಹಿಂದಿನ ರಾತ್ರಿ ಮಳೆ ಬಂದಿದ್ದರಿಂದ ತೋಟ ತಂಪು ತಂಪಾಗಿತ್ತು. ಕಿಂಕಾಕು ಜಿ ದೇವಾಲಯವನ್ನು ಕಣ್ತುಂಬಿಕೊಂಡು ವಿದಾಯ ಹೇಳಿ ಮುಂದೆ ನಡೆದೆವು.
ಚಳಿಗಾಲದಲ್ಲಿ ಕಿಂಕಾಕುಜಿ ದೇವಾಲಯ ಹಿಮದಿಂದ ಆವರಿಸಿರುತ್ತಂತೆ. ಅದೊಂದು ರೀತಿಯ ಸೊಬಗನ್ನು ನೀಡುತ್ತದಂತೆ ಕಿಂಕಾಕುಜಿಯ ಟಿಕೆಟ್ ಬಹಳ ಗಮನ ಸೆಳೆಯುವಂತಿದೆ. ಉದ್ದವಾಗಿದ್ದು ಜಪಾನಿ ಅಕ್ಷರಗಳು ದೊಡ್ಡದಾಗಿ ಅಚ್ಚಾಗಿವೆ. ಇದು ಸುಮಾರು ಒಂದು ಅಡಿ ಉದ್ದ ಮತ್ತು ಮೂರು ಇಂಚು ಅಗಲ ಇದೆ. ಜಪಾನೀ ಭಾಷೆಯಲ್ಲಿ ಉದ್ದಕ್ಕೂ ಬರೆದಿದೆ. ಎರಡು ಕೆಂಪು ಚೌಕಾಕಾರದ ಮುದ್ರೆಗಳಿವೆ. ಆಕರ್ಷಣೀಯವಾಗಿದೆ. ಇದು ಅದೃಷ್ಟದ ಗುರುತು (ಚಾರ್ಮ್) ಆಗಿ ಮನೆಯಲ್ಲಿ ಇಟ್ಟುಕೊಳ್ಳಬಹುದಂತೆ. ಟಿಕೆಟ್ ಇಲ್ಲದೆ ಮಂದಿರದ ಒಳಗೆ ಯಾರೂ ಪ್ರವೇಶ ಮಾಡಕೂಡದು.
(ಮುಂದುವರಿಯುವುದು)
ಈ ಬರಹದ ಹಿಂದಿನ ಸಂಚಿಕೆಯನ್ನು ಓದಲು ಈ ಕೊಂಡಿಯನ್ನು ಕ್ಲಿಕ್ಕಿಸಿ : http://surahonne.com/?p=33170
-ಡಾ.ಎಸ್.ಸುಧಾ, ಮೈಸೂರು
Nice
Thanks madam
ಕಿಂಕಾಕು-ಜಿ ದೇವಾಲಯದ ವರ್ಣನೆಯೊಂದಿಗೆ ಪ್ರವಾಸಕಥನ ಸೊಗಸಾಗಿ ಮೂಡಿಬರುತ್ತಿದೆ.
ನೀವು ಮಾಡಿರುವ ದೇಶದ ಪ್ರವಾಸ ಕಥನ ಓದಿಸಿಕೊಂಡು ಹೋಗುತ್ತದೆ ಅಷ್ಟೇ ಅಲ್ಲ ಅದೃಶ್ಯಗಳನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತಿರುವ ನಿಮಗೆ ಧನ್ಯವಾದಗಳು ಮೇಡಂ.
ಪ್ರವಾಸ ಕಥನ ಚೆನ್ನಾಗಿ ಮೂಡಿ ಬಂದಿದೆ
ಕಿಂಕಾಕು ದೇವಸ್ಥಾನದ ವಿವರಣೆ ಚೆನ್ನಾಗಿದೆ. ಕಿಂಕಾಕುವಿಗೂ ಕಿಂಕಾಪಿಗೂ ಸಂಬಂದವಿದೆಯಾ?
ಪೂರಕ ಚಿತ್ರದೊಂದಿಗೆ ಸುಂದರ ಪ್ರವಾಸ ಕಥನ ಖುಷಿಕೊಟ್ಟಿತು.