ಒಂದು ಅರಮನೆ = ಒಂದು ಗನ್, ಬೆಲೆ ಸರಿಯಾಗಿದೆಯಲ್ಲ?
ಎಪ್ರಿಲ್ 2012 ರಲ್ಲಿ ಹಿಮಾಚಲ ಪ್ರದೇಶದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಬಂದಿದ್ದೆವು.
ಹಿಮಾಚಲ ಪ್ರದೇಶದ, ಕುಲುವಿನ ‘ನಗ್ಗರ್’ ಎಂಬಲ್ಲಿ, ಬಹಳ ಸುಂದರವಾದ, ಬೆಲೆಬಾಳುವ ಮರಗಳಲ್ಲಿ ಕೆತ್ತಿರುವ ಅದ್ಭುತವಾದ ಕುಸುರಿ ಕೆತ್ತನೆಗಳನ್ನೊಳಗೊಂಡ ಅರಮನೆಯಿದೆ. ಇದನ್ನು ‘ನಗ್ಗರ್ ಕಾಸಲ್ ‘ ಎಂತಲೂ ಕರೆಯುತ್ತಾರೆ.
ಈ ಅರಮನೆಯನ್ನು 16 ಯ ಶತಮಾನದಲ್ಲಿ, ‘ರಾಜ ಸಿಧಿ ಸಿಂಗ್’ ಕಟ್ಟಿಸಿದನಂತೆ.ಆ ಕಾಲದಲ್ಲಿ ,ನಗ್ಗರ್ ಕುಲು ಪ್ರಾಂತದ ರಾಜಧಾನಿಯಾಗಿತ್ತು. ಯಾವುದೇ ಲೋಹಗಳನ್ನು ಬಳಸದೆ, ಕೇವಲ ಮರದ ದಿಮ್ಮಿಗಳನ್ನು ಮತ್ತು ಕಲ್ಲುಗಳನ್ನು ಬಳಸಿ, ಅಂದಿಗೆ ದುರ್ಗಮವಾಗಿದ್ದಿರಬಹುದಾದ ಬೆಟ್ಟ ಪ್ರದೇಶದಲ್ಲಿ, ಇಷ್ಟು ದೊಡ್ಡದಾದ ಅಪೂರ್ವ ಅರಮನೆಯನ್ನು ಕಟ್ಟಿದವರ ಕಟ್ಟಡ ವಿನ್ಯಾಸ ಕೌಶಲಕ್ಕೆ ಬೆರಗಾಗುತ್ತೇವೆ. ಅಲ್ಲಿ ಸಂಭವಿಸಿದ 1905 ರಲ್ಲಿ ಎದುರಾದ ಭೂಕಂಪವನ್ನೂ ಎದುರಿಸಿಯೂ ಈ ಕಟ್ಟಡ ಸದೃಢವಾಗಿದೆ.
ಸ್ಥಳದಲ್ಲಿ ಹಾಕಲಾಗಿದ್ದ ಫಲಕದ ಪ್ರಕಾರ, 1846 ರಲ್ಲಿ, ಬ್ರಿಟಿಷರು ಕುಲು ಪ್ರದೇಶವನ್ನು ವಶಪಡಿಸಿಕೊಂಡರು. ಆಗಿನ ರಾಜನಾಗಿದ್ದ ‘ಗ್ಯಾನ್ ಸಿಂಗ್’ ಈ ಅರಮನೆಯನ್ನು, ಅಲ್ಲಿಗೆ ಬಂದ ಬ್ರಿಟಿಷ್ ಕಮಿಶನರ್ ‘ಮೇಜರ್ ಹೇ’ ಅವರಿಗೆ ಒಂದು ‘ಗನ್’ ‘ ಗೆ ಬದಲಾಗಿ ವಿನಿಮಯ ಮಾಡಿಕೊಂಡನಂತೆ!
ಕಮಿಶನರ್ ಈ ಅರಮನೆಗೆ ಐರೋಪ್ಯ ಶೈಲಿಯ ಚಿಮಿಣಿ, ಮೆಟ್ಟಿಲುಗಳು ಇತ್ಯಾದಿ ಅಳವಡಿಸಿದನಂತೆ. ಕಾಲಾನಂತರದಲ್ಲಿ ಇದು ‘ಬ್ರಿಟಿಷರ ಕೋರ್ಟ್’ ಆಗಿ ಬಳಕೆಯಾಯಿತು. 1947 ರಲ್ಲಿ ಬ್ರಿಟಿಷರ ನಿರ್ಗಮನದ ನಂತರ ಈ ಅರಮನೆ ಪ್ರವಾಸಿಗಳಿಗಾಗಿ ತೆರೆದುಕೊಂಡಿದೆ. ಸದ್ಯಕ್ಕೆ ಅರಮನೆಯ ಒಂದು ಭಾಗದಲ್ಲಿ ಹೋಟೆಲ್ ಇದೆ. ಹಿಮಾಲಯದ ಮಡಿಲಿನಲ್ಲಿರುವ ಈ ಅರಮನೆಯ ಅಂಗಳದಲ್ಲಿ ನಿಂತಾಗ ಕಾಣಸಿಗುವ ಪ್ರಕೃತಿ ಸೌಂದರ್ಯ ವರ್ಣನಾತೀತ.
ಬೆಲೆ ಕಟ್ಟುವುದಾದರೆ, ಆ ಅರಮನೆಯಲ್ಲಿರುವ ಸಾವಿರಾರು ದೇವದಾರು ಮರಗಳ ಕನಿಷ್ಟ ಒಂದು ದಿಮ್ಮಿಯಷ್ಟೂ ಬೆಲೆ ಇರಲಾರದ ಒಂದು ಜುಬುಬಿ ಗನ್ ಪಡೆಯಲು ಇಡೀ ಅರಮನೆಯನ್ನು ಬ್ರಿಟಿಷರಿಗೆ ಕೊಟ್ಟ ರಾಜನ ಮೌಢ್ಯತೆ, ಮುಗ್ಧತೆಗೆ ಏನೆನ್ನಬೇಕು? ಆತನನ್ನು ಯಾಮಾರಿಸಿದವರ ಜಾಣತನಕ್ಕೆ ಮಿತಿಯೇ ಇಲ್ಲ! ಇತಿಹಾಸವನ್ನು ಕೆದಕಿದರೆ ಇಂತಹ ಉದಾಹರಣೆಗಳು ಇನ್ನೆಷ್ಟಿವೆಯೋ?
– ಹೇಮಮಾಲಾ. ಮೈಸೂರು
(ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಬರಹ)
super place
ಬರಹ ಅಪರೂಪದ ವಿಚಾರ ತಿಳಿಸಿತು . ಜೊತೆಗೇ ನಮ್ಮಲ್ಲಿ ಒಂದು ಗಾದೆ ಇದೆ . ತಕ್ಷಣಕ್ಕೆ ಅದು ನೆನಪಾಯಿತು. ” ಅದ್ಯಾರಿಗೋ ಏನು ಗೊತ್ತು ಮಾಣಿಕ್ಯದ ಬೆಲೆ ” ಅಂತ. ಚೆನ್ನಾಗಿ ಹೊಂದುವ ಹಾಗಿದೆ.