ಕಲೆಗೆ ಎಲ್ಲೆ ಎಲ್ಲಿದೆ…ಕನ್ನಿಕಾ ಪರಮೇಶ್ವರಿ ಮಹಾತ್ಮೆ

Share Button

Vasavi- Yakshagana-11092015

 

ಸಾಮಾನ್ಯವಾಗಿ ಯಕ್ಷಗಾನ ಕಾರ್ಯಕ್ರಮಗಳಲ್ಲಿ ರಾಮಾಯಣ ಅಥವಾ ಮಹಾಭಾರತದ ಕಥೆ-ಉಪಕಥೆಗಳ ಪ್ರಸ್ತುತಿಯಿರುತ್ತದೆ. ಆದರೆ, ನಿನ್ನೆ ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ, ಬೆಳ್ಳಿಪಾಡಿ ಯಕ್ಷಗಾನ ಟ್ರಸ್ಟ್ ಅವರ ವತಿಯಿಂದ, ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ಪ್ರಸ್ತುತಪಡಿಸಿದ ಕಾರ್ಯಕ್ರಮದ ಕಥಾವಸ್ತು ವಿಭಿನ್ನವಾಗಿತ್ತು. ಕಥಾನಕದ ಹೆಸರು ‘ ಕನ್ನಿಕಾ ಪರಮೇಶ್ವರಿ ಮಹಾತ್ಮೆ’.

ನನಗೆ ಅರ್ಥವಾದಂತೆ, ಕಥಾಸಾರಾಂಶ ಹೀಗಿತ್ತು:

ಆಂಧ್ರಪ್ರದೇಶದ ಪೆನುಗೊಂಡನಲ್ಲಿ ಕುಸುಮಶ್ರೇಷ್ಠಿ ಎಂಬ ಶ್ರದ್ಧಾಳು ಅಲ್ಲಿನ ಅರಸನಾಗಿದ್ದ. ಮಕ್ಕಳಿಲ್ಲದ ಆತ, ತನ್ನ ಗುರುವಿನ ಆದೇಶದಂತೆ ಪುತ್ರಕಾಮೇಷ್ಠಿಯಾಗ ಮಾಡಿದ. ದಂಪತಿಗಳ ಭಕ್ತಿಗೆ ಮೆಚ್ಚಿದ ಪಾರ್ವತಿದೇವಿಯು ತಾನೇ ಅವರ ಮಗಳಾಗಿ ಜನಿಸಿ ‘ವಾಸವಿ’ ಎಂಬ ಹೆಸರಿನಿಂದ ಕರೆಯಲ್ಪಟ್ಟು ಅಪ್ರತಿಮ ಸುಂದರಿಯಾಗಿ ಬೆಳೆಯುತ್ತಿದ್ದಳು.

ಪ್ರತಿವರ್ಷದ ವಾಡಿಕೆಯಂತೆ, ಕುಸುಮ ಶ್ರೇಷ್ಠಿಯು ಶಿವರಾತ್ರಿಯಂದು ಊರ ಶಿವದೇವಾಲಯದಲ್ಲಿ ನರ್ತನಸೇವೆಯನ್ನು ಹಮ್ಮಿಕೊಂಡಿದ್ದ. ಅದೇ ದಿನ, ಅಲ್ಲಿಗೆ, ಆ ಕಾಲದಲ್ಲಿ ಮಹೇಂದ್ರಪುರದ ಚಕ್ರವರ್ತಿಯಾಗಿದ್ದ ವಿಷ್ಣುವರ್ಧನನು ದಿಗ್ವಿಜಯ ಪ್ರವಾಸ ಮಾಡುತ್ತಾ ಬಂದನು. ಅವನನ್ನು ಗೌರವಾದರದಿಂದ ಸ್ವಾಗತಿಸಿ, ನರ್ತನಸೇವೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಮಂತ್ರಿಸಿದ,  ಕುಸುಮ ಶ್ರೇಷ್ಠಿ . ಅಲ್ಲಿ ವಾಸವಿಯ ಸೌಂದರ್ಯ ಮತ್ತು ನರ್ತನ ನೋಡಿ ಬೆರಗಾದ ವಿಷ್ಣುವರ್ಧನನು ಅವಳನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಕುಸುಮಶ್ರೇಷ್ಠಿಯ ಬಳಿ ಕೇಳಿಕೊಂಡನು.

ಈಗಾಗಲೇ ವಿವಾಹಿತನಾದ, ಬೇರೆ ಕುಲದ ಚಕ್ರವರ್ತಿಗೆ ಮಗಳನ್ನು ಕೊಡಲು ಮನಸ್ಸಿಲ್ಲದೆ ಇದ್ದರೂ, ಸಾಮಂತ ಅರಸನಾದ ತಾನು , ಚಕ್ರವರ್ತಿಯ ಮಾತನ್ನು ಮೀರಲು ಸಾಧ್ಯವೇ ಎಂಬ ಆತಂಕದಲ್ಲಿದ್ದ ಕುಸುಮಶ್ರೇಷ್ಠಿಯು, ತನ್ನ ಕುಲಬಾಂಧವರ ಮತ್ತು ಮಗಳ ಅಭಿಪ್ರಾಯವನ್ನೂ ಕೇಳಿ ಕೊನೆಗೆ “ಮಗಳನ್ನು ಕೊಡಲಾರೆ” ಅಂದನು. ಇದರಿಂದ ಅವಮಾನಿತನಾದ ವಿಷ್ಣುವರ್ಧನನು ಬಲಾತ್ಕಾರದಿಂದ ವಾಸವಿಯನ್ನು ಕೊಂಡೊಯ್ದು ಪಾಣಿಗ್ರಹಣ ಮಾಡುವುದಾಗಿ ಬೆದರಿಸಿ ಸೈನ್ಯ ಸಮೇತನಾಗಿ ಪೆನುಗೊಂಡವನ್ನು ಮುತ್ತಿದನು.

ಆಗ ವಾಸವಿಯು, ತಾನೆಂದೂ ವಿಷ್ಣುವರ್ಧನನ ವಶವಾಗುವುದಿಲ್ಲ ಎಂದು ತನ್ನ ನಿಜರೂಪವನ್ನು ತಂದೆ-ತಾಯಿಯರಿಗೆ ಪ್ರದರ್ಶಿಸಿ, ತಾನು ಪಾರ್ವತಿದೇವಿಯಾಗಿದ್ದು, ವೈಶ್ಯ ಸಮುದಾಯಕ್ಕೆ ಒಳಿತಾಗಲಿ, ತನ್ನನ್ನು ‘ಕನ್ನಿಕಾ ಪರಮೇಶ್ವರಿ’ ಎಂದು ಆರಾಧಿಸಲಿ ಎನ್ನುತ್ತಾ ಅಗ್ನಿಪ್ರವೇಶ ಮಾಡಿದಳು. ಹೀಗೆ ಪೆನುಗೊಂಡದಲ್ಲಿ ವಾಸವಿಯು ‘ಕನ್ನಿಕಾ ಪರಮೇಶ್ವರಿ‘ಯಾಗಿ ಸ್ಥಾಪನೆಗೊಂಡು, ದೇವಿಯ ಆರಾಧನೆ ಆರಂಭವಾಯಿತು.

ಪೂರ್ವ ಕರಾವಳಿಯ ಹಿನ್ನೆಲೆಯ ಕಥಾನಕವೊಂದನ್ನು ಪಶ್ಚಿಮ ಕರಾವಳಿಯ ಮೂಲದ ಕಲಾವಿದರು ಪ್ರಸ್ತುತಪಡಿಸಿದುದು ‘ಕಲೆಗೆ ಎಲ್ಲೆ ಎಲ್ಲಿದೆ’ ಎಂಬುದನ್ನು ಪುನರಪಿ ಸಾಬೀತುಪಡಿಸಿತು. ಉತ್ತಮ ಪ್ರದರ್ಶನವನ್ನು ನೀಡಿದ ಕಲಾವಿದರಿಗೆ ಮತ್ತು ಸದಭಿರುಚಿಯ ಕಾರ್ಯಕ್ರಮಗಳನ್ನು ಆಯೋಜಿಸುವ-ಪ್ರಾಯೋಜಿಸುವ ಎಲ್ಲರಿಗೂ ನಮನಗಳು.

 

 – ಹೇಮಮಾಲಾ.ಬಿ

3 Responses

  1. savithri s bhat says:

    ಸು೦ದರ ಚಿಕ್ಕ ಚೊಕ್ಕ ಕಥಾ ನಿರೂಪಣೆ

  2. Radhika Krishnamurthy says:

    ಚಿಕ್ಕದಾಗಿ ಚೊಕ್ಕದಾಗಿ ತಿಳಿಸಿದಿರಿ. ಧನ್ಯವಾದ. ಪ್ರಾಥಮಿಕ ತರಗತಿಗಳಲ್ಲಿ ಕೆಲವೊಂದು ಪಾತ್ರಗಳಿಗೆ ಹೆಜ್ಜೆ ಹಾಕಿದ ನೆನಪಾಯಿತು.

  3. Pushpa C Hanumanthaiah says:

    Nanage kannika parameshwari thayiya bagge hinnale gottiralilla.thanks for the info

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: