ಸುಮಾರು 25 ವರ್ಷದ ಹಿಂದೆ ನಾನು ಹೈಸ್ಕೂಲು ಓದುತ್ತಿದ್ದಾಗ ನಮ್ಮ ಊರಿನಲ್ಲಿ ನಡೆದ ಘಟನೆಯಿದು. ನನ್ನ ಗೆಳತಿಯೊಬ್ಬಳ ಅಕ್ಕ ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿ, ಅವನ ಜೊತೆ ಓಡಿಹೋಗಿ ಮದುವೆಯಾದಳು. ಗೆಳತಿಯ ಮನೆಯ ಹಿರಿಯರು ಊರಿಗೇ ಶಾಸ್ತ್ರ, ಸಂಪ್ರದಾಯ ಬೋಧಿಸುವ ಕಟ್ಟಾ ಸಂಪ್ರದಾಯಸ್ಥರು. ಸರಿ, ಮನೆಯ ಸಂಪ್ರದಾಯಸ್ಥ ಹಿರಿಯರೆಲ್ಲ ಸಭೆ ಸೇರಿ, ಗಂಭೀರವಾಗಿ ಚರ್ಚಿಸಿ, ಕೆಳ ಜಾತಿಯವನನ್ನು ಮದುವೆಯಾದ ಮಗಳ ಘಟ ಶ್ರಾದ್ಧ ಮಾಡುವಂತೆ ಅವಳ ತಂದೆತಾಯಿಗಳಿಗೆ ಆಜ್ಞಾಪಿಸಿದರು. (ಮಗಳು ಕೆಳ ಜಾತಿಯವನನ್ನು ಮದುವೆಯಾದರೆ, ಅವಳು ತಮ್ಮ ಪಾಲಿಗೆ ಸತ್ತಳೆಂದು ಭಾವಿಸಿ ಬದುಕಿರುವಾಗಲೆ ಅವಳ ತಿಥಿ ಮಾಡುವ ಕ್ರೂರ ಸಂಪ್ರದಾಯ ತೀರ ಇತ್ತೀಚಿನ ತನಕ ಚಾಲ್ತಿಯಲ್ಲಿತ್ತು). ಆದರೆ ಮಗಳು ಬದುಕಿರುವಂತೆಯೆ ಶ್ರಾದ್ಧ ಮಾಡಲು ಒಲ್ಲನೆಂದ ಅವಳ ಅಪ್ಪ ಅಮ್ಮನನ್ನು ಆ ಹಿರಿಯರು ತಮ್ಮ ಮನೆತನದಿಂದ ಬಹಿಷ್ಕರಿಸಿದರು. ಈ ಘಟನೆಯಿಂದ ನಾನು, ನನ್ನ ಸ್ನೇಹಿತೆಯರೆಲ್ಲ ತುಂಬಾ ನೊಂದುಕೊಂಡೆವು. ಅಂತರ್ಜಾತೀಯ ವಿವಾಹದ ಬಗ್ಗೆ ಒಂದಷ್ಟು ಒಣ ಚರ್ಚೆ ನಡೆಸಿದೆವು. ನಮ್ಮ ತಂದೆತಾಯಿಯರು ನಮನ್ನೆಲ್ಲಾ ಬೈದು, ಬೇರೆ ಜಾತಿಯ ಹುಡುಗರನ್ನು ಕಣ್ಣೆತ್ತಿ ನೋಡದಂತೆ ನಮಗೆ ಕಟ್ಟೆಚ್ಚರ ಕೊಟ್ಟರು. ಬೇರೆ ಜಾತಿಯ ಗಂಡು ಹುಡುಗರನ್ನು ಬಿಡಿ, ಗಂಡು ಪ್ರಾಣಿಗಳನ್ನೂ ನಾವು ಆಗ ಕಣ್ಣೆತ್ತಿ ನೋಡುತ್ತಿರಲಿಲ್ಲ. ಅಂದ ಹಾಗೆ, ಹುಡುಗರೂ ನಮ್ಮನ್ನು ನೋಡುತ್ತಿರಲಿಲ್ಲ, ಆ ವಿಷಯ ಬೇರೆ.
ಇತ್ತೀಚೆಗೆ ಊರಿಗೆ ಹೋಗಿದ್ದಾಗ ಜನರ ಬಾಯಲ್ಲಿ ಅಂತರ್ಜಾತೀಯ ವಿವಾಹದ ಬಗ್ಗೆಯೆ ಮಾತುಗಳು! ಊರಿನಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾದುದರಿಂದ ಬಹಳಷ್ಟು ಗಂಡು ಮಕ್ಕಳು ಮದುವೆಯಾಗದೆ ಉಳಿದಿರುವರಂತೆ. ಅದಕ್ಕೆ ಸಂಪ್ರದಾಯಸ್ಥ ಹಿರಿಯರೆಲ್ಲ ತಮ್ಮ ಜಾತಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ಬೇರೆ ಜಾತಿಯ ಹೆಣ್ಣನ್ನು ತಮ್ಮ ಜಾತಿಗೆ ಜಾತ್ಯಾಂತರಿಸಿ(?), ಗಂಡುಮಕ್ಕಳಿಗೆ ಮದುವೆ ಮಾಡಬಹುದು ಎಂದು ತೀರ್ಮಾನ ಕೊಟ್ಟರಂತೆ. ಬೇರೆ ಜಾತಿಯ, ಬೇರೆ ರಾಜ್ಯದ ಮತ್ತು ಅನಾಥಾಶ್ರಮದ ಹೆಣ್ಣು ಮಕ್ಕಳನ್ನು ತಂದು ಪೋಷಕರು ತಮ್ಮ ಗಂಡುಮಕ್ಕಳಿಗೆ ಮದುವೆ ಮಾಡಿದರಂತೆ!
ಅಂತೂ, ಹಳ್ಳಿಗಳಲ್ಲಿ ಹೆಣ್ಣುಮಕ್ಕಳ ಅಭಾವದ ಕಾರಣದಿಂದಲೊ, ಶಿಕ್ಷಣದಿಂದ ಬಂದ ಆಧುನಿಕ ಮನೋಭಾವದಿಂದಲೊ, ಜಾತಿಯೆಂಬ ಭದ್ರ ಕೋಟೆ ಒಡೆದು, ಅಂತರ್ಜಾತೀಯ ವಿವಾಹಕ್ಕೆ ದಾರಿಯಾಗಿದೆ. ಸಾಮಾಜಿಕ ಬದಲಾವಣೆ ಕಾಲದ ನಿಯಮವಲ್ಲವೆ? ಆದರೆ, ಮದುವೆಯಾದ ಹೆಣ್ಣನ್ನು ಗಂಡನ ಜಾತಿಗೆ ಸೇರಿಸುವ ಸಂಪ್ರದಾಯವಿರುವುದರಿಂದ ಇಲ್ಲಿ ಜಾತಿ ವ್ಯವಸ್ಥೆ ಮಾತ್ರ ಅಳಿದಿಲ್ಲ. ಅಲ್ಲದೆ, ಮೇಲ್ಜಾತಿಯ ಹೆಣ್ಣು ಕೆಳ ಜಾತಿಯ ಗಂಡನ್ನು ಮದುವೆಯಾಗಲು ಇನ್ನೂ ವಿರೋಧವಿದೆ.
ಅಂತರ್ಜಾತೀಯ ವಿವಾಹವಾದ ಗಂಡು, ಹೆಣ್ಣು ತಾವು ಯಾವ ಜಾತಿಗೂ ಸೇರುವುದಿಲ್ಲ ಎಂದು ಜಾತ್ಯಾತೀತರಾಗಿ ಬಾಳಿದರೆ ನಮ್ಮ ದೇಶದಲ್ಲಿ ಜಾತಿಯ ಪಿಡುಗು ನಿಧಾನವಾಗಿ ಅಳಿಯಬಹುದಲ್ಲವೆ?
– ಪೂರ್ಣಿಮಾ ಕೆ
18/02/2014
ಉತ್ತಮ ಸ್ಪಂದನೆ. ನಿಮ್ಮ ಅನಿಸಿಕೆಗೆ ನನ್ನ ಸಹಮತವಿದೆ!
ತಿಳಿಹಾಸ್ಯದೊಂದಿಗೆ ಚೆನ್ನಾಗಿದೆ
At that time parents have opposed ,it i liked it , ,
ಇದ್ದನೇ ಕಾಲ ನಿರ್ಣಾಯ ಎನ್ನೋದು ,ತುಂಬಾ ಚೆನ್ನಾಗಿದ್ದೆ