ಸ್ವಾತಂತ್ರ್ಯ ದಿನ….ಮಕ್ಕಳಿಗೂ ಬೇಕು ಸಂಭ್ರಮಾಚರಣೆ
“ಸಹನಾ,independence day celebration ಗೆ ಮಕ್ಕಳನ್ನ ಸ್ಕೂಲಿಗೆ ಕಳುಹಿಸ್ಲೇಬೇಕಾ? compulsary ನಾ?attendance ಇದ್ಯಾ?ಯಾಕೆ ಕೇಳಿದೆ ಅಂದ್ರೆ,ಆ ದಿನ ಕೂಡ ನಾನು ಬೇಗ ಎದ್ದು ಅವರನ್ನ ರೆಡಿ ಮಾಡ್ಬೇಕು ಅಲ್ವಾ?” ಇದು ಒಬ್ಬ ಜವಾಬ್ದಾರಿ ಸ್ಥಾನದಲ್ಲಿ ನಿಂತ, ಮುಂದಿನ ಭಾರತದ ಪ್ರಜೆಯನ್ನು ಭಾರತೀಯನಾಗಿಯೇ ರೂಪಿಸಬೇಕಾದ ತಾಯಿಯೊಬ್ಬಳು ನನ್ನ ಬಳಿ ಕೇಳಿದ ಪ್ರಶ್ನೆ.ಒಂದು ಕ್ಷಣ ನನಗೆ ಈ ಪ್ರಶ್ನೆ ಇರಿಸುಮುರಿಸಾದರೂ, ತುಸು ಕೋಪ ಬಂದರೂ,ಅವರಿಗೆ ತಿಳಿ ಹೇಳುವ ಸರದಿ ನನ್ನದಾಗಿತ್ತು(ತಿಳಿ ಹೇಳುವ ಅರ್ಹತೆ ಇದೆಯೊ ಇಲ್ಲವೋ ಗೊತ್ತಿಲ್ಲ). ” ಮಕ್ಕಳನ್ನ ಖಂಡಿತಾ independence day celebrationಗೆ ಕಳುಹಿಸಬೇಕು. atleast ಅವರ ಶಾಲೆಯಲ್ಲಿ ಹೇಗೆ ಆಚರಿಸುತ್ತಾರೆ,ಯಾಕೆ ಆಚರಿಸ್ತಾರೆ ಅನ್ನೋದಾದ್ರು ಗೊತ್ತಾಗ್ಲಿ. ಒಂದು ದಿನ ಕೊಂಚ ಬೇಗ ಎದ್ದು ಶಾಲೆಗೆ ಹೋದ್ರೆ ಏನು ತೊಂದ್ರೆ?ಅವ್ರಿಗೂ ಆ ಸಂಭ್ರಮದಲ್ಲಿ ಪಾಲ್ಗೊಳ್ಳೋ ಅವಕಾಶ ಕೊಡಿ” ಅಂದೆ. ಅದಕ್ಕವರು,” ಅದೇನೋ ಸರಿ ಸಹನಾ, ನೋಡ್ತೀನಿ”..ಎಂದು ಹೇಳಿದರು.
‘ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು’ ಎನ್ನುವ ಹಿತನುಡಿಯು, ಇಂತಹ ಕೆಲವು ತಾಯಂದಿರನ್ನು ನೋಡಿದರೆ, ಎಷ್ಟು ಸರಿ? ಎಂದೆನಿಸದಿರದು. ಇತ್ತೀಚೆಗೆ ದೇಶಪ್ರೇಮ, ದೇಶಭಕ್ತಿ ಎನ್ನುವುದೆಲ್ಲಾ ಒಂದು ದಿನಕ್ಕೆ ಮೀಸಲಾಗುತ್ತಿದೆ ಎನ್ನುವ ಸೂಚನೆ ಇರುವಾಗಲೇ, ಆ ಒಂದು ದಿನದಲ್ಲಿಯೂ ಕೂಡ ಭಾಗಿಯಾಗುವ ಮನಸ್ಸುಗಳ ಕೊರತೆ ಎದ್ದು ಕಾಣುತ್ತಿದೆ.
ಶಾಲೆಗಳಲ್ಲಿ ಈ ದಿನದಂದು ಹಾಜರಾತಿ ಕಡ್ಡಾಯವೆಂಬ ನಿಯಮವಿದ್ದರೂ, ಕೆಲವು ಹೆತ್ತವರು,” ಅಯ್ಯೋ, ಹೋಗ್ಲಿ ಬಿಡು. ಹೋಗದೇ ಇದ್ರೆ ಏನೂ ತೊಂದ್ರೆ ಇಲ್ಲ. ನೀ ಮಲ್ಕೋಪ್ಪಾ” ಎಂಬ (ಅ)ಹಿತನುಡಿಗಳನ್ನಾಡಿ, ಮತ್ತೆ ಬೆಚ್ಚಗೆ ಹೊದೆಸಿ ಮಲಗಿಸುತ್ತಾರೆ. ಶಾಲೆಯಲ್ಲಿ “ಬೋಲೋ ಭಾರತ್ ಮಾತಾ ಕೀ” ಎಂದು ಜಯಕಾರ ಹಾಕುತ್ತಾ ಧ್ವಜಾರೋಹಣ ಮಾಡುತ್ತಿದ್ದರೆ, ಆ ಮಗು ಹಾಸಿಗೆಯಲ್ಲಿ ನಿದ್ದೆಗೆ ಜೈಕಾರ ಹಾಕುತ್ತಿರುತ್ತದೆ. ಎಂಥಹಾ ವಿಪರ್ಯಾಸ! ಇಲ್ಲಿ ತಪ್ಪು ಖಂಡಿತಾ ಮಗುವಿನದ್ದಲ್ಲ. ತಪ್ಪು, ತಿದ್ದಿ ತೀಡಿ ತಿಳಿಹೇಳಬೇಕಾದ ಹೆತ್ತವರದ್ದು.
ಹಾಗಿದ್ದರೆ ಇಲ್ಲೊಂದು ಪ್ರಶ್ನೆ ಮೂಡಬಹುದು, “ಶಾಲೆಯ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಮಾತ್ರಕ್ಕೆ ಅದು ದೇಶಪ್ರೇಮವೆಂದು ಅರ್ಥವೇ?” ಎಂದು. ಇದಕ್ಕೆ ನಾ ಕೊಡುವ ಉತ್ತರ”ಹೌದು”. ಯಾಕೆಂದರೆ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅಲ್ಲವೇ? ದೇಶಪ್ರೇಮದ ಬೀಜವು ಮೊಳಕೆಯೊಡೆಯುವುದು ಇಲ್ಲಿಯೇ.ಈ ದಿನದಂದು ಶಾಲೆಗಳಲ್ಲಿ ಒಂದು ವಿಭಿನ್ನ ವಾತಾವರಣ ಸೃಷ್ಟಿಯಾಗುತ್ತದೆ.ದೇಶಭಕ್ತಿಗೀತೆಗಳು, ಕೇಸರಿ, ಬಿಳಿ, ಹಸಿರುಬಣ್ಣಗಳಿಂದ ಕೂಡಿದ ಅಲಂಕಾರಗಳು, ಸ್ವಾತಂತ್ರ್ಯಹೋರಾಟಗಾರರ ಕುರಿತಾದ ಭಾಷಣಗಳು, ಆಗಸದೆತ್ತರದಲ್ಲಿ ಹಾರಾಡುವ ನಮ್ಮ ದೇಶದ ಬಾವುಟ ಎಲ್ಲವೂ “ನಮ್ಮ ದೇಶ, ನಾವು ಭಾರತೀಯರು” ಎಂದು ಹೆಮ್ಮೆಯಿಂದ ಬೀಗುವಂತೆ ಮಾಡುತ್ತದೆ.ಮುಂದೆ ನಮ್ಮ ಮಕ್ಕಳು ಹೆಮ್ಮೆಯಿಂದ ಎದೆತಟ್ಟಿ “ನಾನು ಭಾರತೀಯ, ನನ್ನ ದೇಶ ಭಾರತ” ಎಂದು ಹೇಳಬೇಕಾದರೆ ಇಂಥಹುದ್ದೆಲ್ಲಾ ಅಡಿಪಾಯವೇ ಸರಿ.
ಸ್ವಾತಂತ್ರ್ಯ ದೊರಕಬೇಕಾದರೆ ಬಲಿಯಾದ ಜೀವಗಳೆಷ್ಟೋ, ಹರಿದ ರಕ್ತವೆಷ್ಟೋ, ಅನಾಥರಾದವರೆಷ್ಟೋ, ತಂದೆತಾಯಿಯ ಕಳಕೊಂಡವರೆಷ್ಟೋ, ಹೆಗಲೆತ್ತರಕ್ಕೆ ಬೆಳೆದ ಮಕ್ಕಳನ್ನು ಕಳೆದುಕೊಂಡವರೆಷ್ಟೋ, ಬ್ರಿಟೀಷರ ದಾಸ್ಯದಲ್ಲಿ ಬದುಕ ಸವೆಸಿ ಮರೆಯಾದವರೆಷ್ಟೋ, ಹೊಟ್ಟೆಗೆ ಹಿಟ್ಟಿಲ್ಲದೆ ಹಸಿದು ಬಳಲಿದವರೆಷ್ಟೋ, ನೇಣಿನ ಕುಣಿಕೆಗೆ ಕೊರಳೊಡ್ಡಿದವರೆಷ್ಟೋ?ಇವೆಲ್ಲವನ್ನೂ ಒಂದು ಬಾರಿ ನೆನೆಯೋಣ.
ಇಷ್ಟೆಲ್ಲಾ ಕಷ್ಟ-ನಷ್ಟಗಳ, ತ್ಯಾಗ-ಬಲಿದಾನಗಳ ದಾರಿಯಲ್ಲಿ ಹಾದು ಬಂದ “ಸ್ವಾತಂತ್ರ್ಯ” ದೊರಕಿದ ಈ ಪವಿತ್ರ ದಿನದ ಆಚರಣೆಯಲ್ಲಿ ನಾವೆಲ್ಲಾ ಪಾಲ್ಗೊಳ್ಳಬೇಕು. ಹಿರಿಯರ ತ್ಯಾಗವನ್ನು ನೆನೆದು, ಅವರಿಗೆ ಕೃತಜ್ಞತೆ ಸಲ್ಲಿಸಲು ಈ ಒಂದು ದಿನವನ್ನಾದರೂ ಮೀಸಲಿಡಬೇಕು.
– ಸಹನಾ ಪುಂಡಿಕಾಯಿ
ನೀವು ಹೇಳುತ್ತಿರುವುದು 100 % ಕರೆಕ್ಟ್ …
ತುಂಬಾ ಉತ್ತಮ ಚಿಂತನೆ, ಬರಹ.