ಬಯಲುಸೀಮೆ ಮತ್ತು ಮಲೆನಾಡಿನ ಒಂದು ಅನುಭವ
ಬೇಸಿಗೆಕಾಲ ಬಂತೆಂದರೆ ಬಯಲುಸೀಮೆಯಲ್ಲಿ ಸೂರ್ಯ ಕೆಂಡವನ್ನೆ ಉಗುಳುತ್ತಾನೆ, ಇಲ್ಲಿನ ಬೀಸಿಲಿನ ಝಳಕ್ಕೆ ನದಿ, ಹಳ್ಳ, ಕೊಳ್ಳ, ಹೊಂಡಗಳೆಲ್ಲಾ ಬತ್ತಿ ಬರಿದಾಗುತ್ತವೆ. ಅಂತರಜಲ ಕುಸಿತದಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಎಲ್ಲಿಲ್ಲದ ಪರದಾಟ. ಗ್ರಾಮೀಣ ಜನರಿಗೆ ಶುದ್ಧನೀರು ಸೀಗುವದಂಂತೂ ಗಗನ ಕುಸುಮ. ಈ ಕಾರಣಕ್ಕಾಗಿಯೇ ಕಳೆದ ನಾಲ್ಕು ದಶಕಗಳಿಂದ ಮಹಾದಾಯಿ ನದಿ ಜೋಡನೆಯ ಹೋರಾಟ ನಡೆದಿದೆ. ಪ್ರಸ್ತುತ ಈ ಹೋರಾಟ ತೀವ್ರ ಸ್ವರೂಪವನ್ನು ತಳೆದಿದೆ. ಇನ್ನು ಮಳೆಗಾಲ ಬಂತೆಂದರೆ ಸಾಕು ನಮ್ಮ ಹಳ್ಳಿಯ ರೈತರೆಲ್ಲಾ ಡಾ. ರಾಜ್ ಅಭಿನಯದ ಆ ‘ಚಲಿಸುವ ಮೋಡಗಳು’ ಚಿತ್ರವನ್ನು ನೋಡಿದ್ದಾರೊ ಇಲ್ಲೊ ಗೊತ್ತಿಲ್ಲ, ಆದರೆ ನಿತ್ಯ ಹಣೆಗೆ ಕೈ ಹಚ್ಚಿಕೊಂಡು ಆಗಸದಲ್ಲಿ ಮಲೆನಾಡಿನತ್ತ ಮುಖಮಾಡಿರುವ ಚಲಿಸುವ ಮೋಡಗಳನ್ನು ಮಾತ್ರ ಬಯಲೆಂಬ ಚಿತ್ರಮಂದಿರಲ್ಲಿ ತುಂಬಾ ನೋವಿನಿಂದ ನಿತ್ಯ ನೋಡುತ್ತಲೇ ಇರುತ್ತಾರೆ. ಒಟ್ಟು ಅತೀವೃಷ್ಟಿ ಅಥವಾ ಅನಾವೃಷ್ಟಿ ಈ ಎರಡನ್ನೆ ನಮ್ಮ ಜನ ಅನುಭವಿಸೊದು. ಒಣಬೇಸಾಯದಲ್ಲಿ ಯಾರಾದರೂ ಬೇಳೆ ಬೆಳೆದುಕೊಂಡಿದ್ದರೆ ಅದು ಅಕಾಲಿಕ ಮಳೆಯಿಂದ.
ಒಟ್ಟು ಬಯಲುಸೀಮೆಯ ರೈತರಿಗೆ ಕೃಷಿ ಭೂಮಿಯ ಮೇಲೆ ಭರವಸೆಯೇ ಇಲ್ಲದಂತಾಗಿದೆ. ಈ ಕಾರಣಕ್ಕಾಗಿಯೇ ಕೆಲವರು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ ನಿವೇಶನಗಳನ್ನಾಗಿ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಮಗ/ಮೊಮ್ಮಗನ ನೌಕರಿಗಾಗಿ ಖಾಸಗಿ (ಶಿಕ್ಷಣ/ಬ್ಯಾಂಕ್) ಸಂಸ್ಥೆಯ ಆಡಳಿತ ಮಂಡಳಿಯವರಿಗೆ ತಮ್ಮ ಜಮೀನನ್ನೆ ಬರೆದುಕೊಟ್ಟ ಸಂಗತಿಗಳು ಸಾಕಷ್ಟಿವೆ. ಅಪಾರ ಮೌಲ್ಯವುಳ್ಳ ಆಸ್ತಿಯನ್ನು ಕೊಟ್ಟು ಖಾಸಗಿ ಸಂಸ್ಥೆಯಲ್ಲಿ ಕಸಗೂಡಿಸುವ ಕೆಲಸಕ್ಕೆ ಅಣಿಯಾಗಿರುವುದನ್ನು ಕಣ್ಣಾರೆ ಕಂಡಿರುವೆ. ಮುಖ್ಯವಾಗಿ ಸರಕಾರ ಗಮನಿಸಬೇಕು ‘ಖಾಸಗಿ ಆಡಳಿತ ಮಂಡಳಿಯವರ ಕೈ ಕೆಳಗೆ ನೌಕರಿ ಮಾಡುವವರೆಲ್ಲರಿಗೂ ಸರಕಾರದಿಂದಲೇ ಸಂಬಳ ಬಟವಡೆಯಾಗುತ್ತಿದೆ.’ ಈ ನಿಟ್ಟಿನಲ್ಲಿ ಸರಕಾರವೇ ಒಂದು ಗಟ್ಟಿಯಾದ ತಿರ್ಮಾನ ತೆಗೆದುಕೊಳ್ಳಬೇಕಿದೆ, ಅದೇನೆಂದರೆ ‘ಮಾನ್ಯ ರೈತಭಾಂದವರೆ, ನೌಕರಿ ಆಸೆಗಾಗಿ ನಿಮ್ಮ ಸ್ವಂತ ಜಮೀನನ್ನು (ಆಯಾ ಪ್ರಾದೇಶಿಕತೆಗೆ ಅನುಗುಣವಾಗಿ ಎಕರೆ/ಗುಂಟೆ ನಿಗದಿಪಡಿಸಿದಂತೆ) ಸರಕಾರಕ್ಕೆ ಅರ್ಥಾತ್ ಕೃಷಿ ಇಲಾಖೆಗೆ ವರ್ಗಾಯಿಸುವುದಾದರೆ ನಿಮ್ಮ ಕುಟುಂಬದ ಒರ್ವ ಸದಸ್ಯರಿಗೆ ಅವರ ವಿದ್ಯಾರ್ಹತೆಯ ಆಧಾರದ ಮೇಲೆ ಸರಕಾರ ಅನುದಾನಿತ ಸಂಸ್ಥೆ/ಬ್ಯಾಂಕ್‌ಗಳಲ್ಲಿ ಅಥವಾ ಸರಕಾರದ ವಿವಿಧ ಇಲಾಖೆಗಳಲ್ಲಿ ನೌಕರಿ ನೀಡುತ್ತದೆ.‘ ಇಂತಹದ್ದೊಂದು ಸ್ಪಷ್ಟ ಆದೇಶ ಹೊರಬಿದ್ದರೆ ಬಯಲುಸೀಮೆಯ ಬಹುತೇಕ ಕೃಷಿಭೂಮಿ ಖಾಸಗಿಯವರ ಕೈ ತಪ್ಪಿ ಸರಕಾರದ ಹೆಸರಿಗೆ ವರ್ಗಾವಣೆಯಾಗುತ್ತವೆ. ಹೀಗೆ ವರ್ಗಾವಣೆಯಾದಂತಹ ಜಮೀನುಗಳಲ್ಲಿ ಕೃಷಿ/ಅರಣ್ಯ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯಗಳ ಸಿಬ್ಬಂದಿ ಹಾಗೂ ಆಧುನಿಕ ಕೃಷಿ ಉಪಕರಣಗಳ ಸಹಾಯದಿಂದ ಸರಕಾರ ಏನೇಲ್ಲಾ ಬೆಳೆಯುವ ಮೂಲಕ, ನೇಣಿಗೆ ಶರಣಾಗುತ್ತಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ. ಒರ್ವ ಅನ್ನದಾತ ಕನಿಷ್ಟ ಹತ್ತು ನೌಕರರಿಗೆ ಸಮ ಅನ್ನೊ ಸಂದೇಶವನ್ನು ಸರಕಾರ ಪ್ರಾಯೋಗಿಕವಾಗಿ ತೋರಿಸಬೇಕು. ನೌಕರರ ಕೃಷಿಕಾಯಕವನ್ನು ನೋಡಿ ಅಭಿನವ ಕುವೆಂಪು ‘ಉಳುವಾ ನೌಕರ ನೋಡಲ್ಲಿ’ ಅನ್ನೊ ಮತ್ತೊಂದು ಕೃಷಿಕ್ರಾಂತಿ ಗೀತೆಯನ್ನು ರಚಿಸುವಂತಾಗಲಿ. ಬಯಲುಸೀಮೆಯಲ್ಲಿ ನನಗೆ ಸುಮಾರು 15 ಎಕರೆ ಜಮೀನಿದೆ ಆದರೆ ಇಂದು ಆ ಜಮೀನಿನಲ್ಲಿ ಕೃಷಿಮಾಡಿ ಬದುಕು ಕಟ್ಟಿಕೊಳ್ಳಲು ಅಸಾಧ್ಯವೆಂದು ಮನಗಂಡು ಒಂದು ಪುಟ್ಟ ನೌಕರಿ ಅರಸಿ ಮಲೆನಾಡಿಗೆ ಬಂದು ನೆಲೆಸಿರುವೆ, ಮಲೆನಾಡಿನಲ್ಲಿ ಕೇವಲ ಒಂದು ಎಕರೆ ಜಮೀನಿದ್ದರೆ ಸಾಕು ಪುಟ್ಟದಾದ ಬದುಕೊಂದನ್ನು ಕಟ್ಟಿಕೊಳ್ಳಬಹುದು.
ಬಿಸಿಲನ್ನೆ ಹಾಸಿ, ಹೊದ್ದು ಮಲಗಿದ ನಮಗೆ ಮಲೆನಾಡಿನಲ್ಲಿ (ಮಳೆಗಾಲದಲ್ಲಿ) ಬಿಸಿಲು ಬಿದ್ದರೆ ಖುಷಿಯಾಗುತ್ತದೆ. ಅದೇಷ್ಟೊಸಾರಿ ತೊಳೆದ ಬಟ್ಟೆಗಳನ್ನೆ ಒಣಗಿಸಲು ಹರಸಾಹಸ ಪಟ್ಟಿದ್ದೇವೆ. ಬಯಲುಸೀಮೆಯಲ್ಲಿ ನಾಲ್ಕುದಶಕ ಕಳೆದಿದ್ದರೂ ಕೊಡೆ ಹಿಡಿದುಕೊಂಡು ನಡೆದವರಲ್ಲ ನಾವು, ಕೊಡೆ ಇದ್ದರೂ ಕೂಡಾ ಅವು ಅರಳಿದ್ದಕ್ಕಿಂತ ಮುದುಡಿಕೊಂಡಿದ್ದೆ ಜಾಸ್ತಿ. ಆದರೆ ಇಲ್ಲಿ ಕೊಡೆ ಅಥವಾ ರೇನಕೋಟ್ ಇಲ್ಲದೆ ನಡೆದಾಡಲು ಸಾಧ್ಯವೇ ಇಲ್ಲ.
– ವೀರಲಿಂಗನಗೌಡ್ರ