ಕಾಲಾಪಾನಿ

Share Button
Krishnaveni K

ಕೃಷ್ಣವೇಣಿ ಕಿದೂರು

ಮತ್ತೆ   ನೆನಪಾಗುತಿದೆ….  ದೇಶಕ್ಕಾಗಿ      ರಕ್ತ ತರ್ಪಣ ಕೊಟ್ಟ  ನಮ್ಮ  ಸ್ವಾತಂತ್ರ ಹೋರಾಟಗಾರರನ್ನು.
.
 ಅದು  ಕಾಲಾಪಾನಿಯ ಶಿಕ್ಷೆ.  ಒಮ್ಮೆ  ಅಲ್ಲಿಗೆ  ದಬ್ಬಿ   ಗೂಡಿನ  ಹಾಗಿರುವ  ಕೊಠಡಿಗೆ  ನೂಕಿ    ಬಾಗಿಲೆಳೆದು   ಬೀಗ  ಹಾಕಿದರೆ  ಅಲ್ಲಿಗೆ  ಹೊರಬೀಳುವ  ಆಸೆ ಇಲ್ವೇ ಇಲ್ಲ.  ಮನೆ,  ಮಡದಿ  ಮಕ್ಕಳ ಮುಖ  ನೋಡುವ   ಕನಸೂ ಇಲ್ಲ.   ಕಾಲಿಗೆ  ಬಿಗಿದ  ಸರಪಣಿ   ಬದುಕಿದಷ್ಟೂ  ಕಾಲ  ತೆಗೆಯುವುದಿಲ್ಲ.   ಹಗಲು  ಗಾಣಕ್ಕೆ  ಕಟ್ಟಿ   ಎಳೆಯುವ  ಕೆಲಸ,   ಕ್ರೂರ  ವಿಷಸರ್ಪಗಳಿಂದ  ತುಂಬಿದ   ಅಂಡಮಾನ್  ಕಾಡು  ಕಡಿದು  ನೆಲ ಸಮತಲ   ಮಾಡಬೇಕು;  ತುಸು  ನಿಧಾನಿಸಿದರೆ  ರಪಕ್  ಅಂತ ಬೀಳುವ  ಚರ್ಮದ  ಚಾವಟಿ ಏಟು,   ತೆಂಗಿನ ಸಿಪ್ಪೆ  ಗುದ್ದಬೇಕು.  ನೆಲ ಅಗೆಯಬೇಕು  ಎಲ್ಲವೂ  ಕೈ ಕಾಲಿಗೆ  ಬಿಗಿದ  ಸರಪಳಿ  ಸಮೇತ.  ಸ್ವಾತಂತ್ರ್ಯ ಹೋರಾಟಗಾರರು  ಹೆಚ್ಚಿದ ಹಾಗೆ   ಉಳಿದವರನ್ನು  ಹೋರಾಟಕ್ಕೆ  ಇಳಿಯದ ಹಾಗೆ  ತಡೆಯಲು,  ಬೆದರಿಸಿ  ಸುಮ್ಮನಿರಿಸಲು  ಕರಿನೀರಿನ  ಶಿಕ್ಷೆ ವಿಧಿಸಿ  ಹಡಗಿನಲ್ಲಿ ತುಂಬಿ  ನೂಕಿದರು  ಅಂಡಮಾನದ  ಕಾಡಿಗೆ.  ಅದಾಗಲೇ ಅಲ್ಲಿನ  ಮೂಲನಿವಾಸಿಗಳನ್ನು  ಗನ್  ಹಿಡಿದು  ಕೊಂದು  ಓಡಿಸಿ  ತಮ್ಮದಾಗಿಸಿದ್ದರು  ಬ್ರಿಟಿಷರು.     ಸ್ವಾತಂತ್ರ್ಯ   ಹೋರಾಟಗಾರರ   ಸಂಖ್ಯೆ  ಹೆಚ್ಚಿದ  ಹಾಗೆ  ಅದಾಗಲೇ ಇದ್ದವರನ್ನು  ಮೃಗಗಳ  ಹಾಗೆ  ದುಡಿಸಿ   ಕಟ್ಟಿಸಿದ  ಸೆಲ್ಲ್ಯುಲರ್  ಜೈಲು  ಕೈದಿಗಳಿಂದ, ಕೈದಿಗಳಿಗಾಗಿ,  ಕೈದಿಗಳಿಗೋಸ್ಕರವಾಗಿತ್ತು. ಪರಸ್ಪರ  ವಿರುದ್ಧ  ದಿಕ್ಕಿಗೆ  ಮುಖ  ಮಾಡಿ ನಿಂತ  ಮೂರು  ಮಹಡಿಗಳ  ಜೈಲು  ಭರ್ತಿ.   ಹೊಡೆತ  ತಾಳಲಾಗದೆ ಸತ್ತವರನ್ನು  ಎಸೆಯುತ್ತಿದ್ದುದು   ಸಮುದ್ರಕ್ಕೆ.  ಅರೆಜೀವವಾದವರದೂ  ಅದೇ ಪಾಡು.
 .
 ಅರೆಹೊಟ್ಟೆ,  ಅಪರಿಮಿತ  ದುಡಿಮೆ,  ಅಪಾರ ಹಿಂಸೆ  ತಾಳಲಾಗದೆ  ಒಗ್ಗೂಡಿ  ವಂದೇ  ಮಾತರಂ  ಎನ್ನುತ್ತಿದ್ದರು  ಸ್ಥೈರ್ಯ  ಕಳೆದುಕೊಳ್ಳದ  ವೀರರು.   ಒಟ್ಟೊಟ್ಟಿಗೆ ಮೂರು  ನಾಲ್ಕು  ಜನರನ್ನು  ಎಳೆದೊಯ್ದು  ನೇಣು ಕುಣಿಕೆ  ಬಿಗಿಯುತ್ತಿದ್ದರು.    ಹೆಚ್ಚಿನ  ಹೋರಾಟಗಾರರು   ಉತ್ತರಭಾರತೀಯರು,   ಅದರಲ್ಲೂ  ಪಂಜಾಬ್ ನವರು  ಬಹಳಷ್ಟು. ವೀರ ಸಾವರ್ಕರ್  ಅಲ್ಲಿನ   ಜೈಲಿನಲ್ಲಿದ್ದ   ಅಪ್ರತಿಮ  ದೇಶಭಕ್ತರು.  ಅವರಿಗೆ  ಗೊತ್ತೇ ಇರಲಿಲ್ಲ .  ಅವರ ಅಣ್ಣನೂ  ಎದುರಿನಲ್ಲಿದ್ದ  ಜೈಲು ಕಟ್ಟಡದಲ್ಲಿದ್ದರು.  ಬ್ರಿಟಿಶರಿಗೆ   ಸ್ವಾತಂತ್ರ  ಹೋರಾಟಗಾರರ  ಕೆಚ್ಚು,  ಸ್ಥೈರ್ಯ ತಗ್ಗಿಸಲು  ಗೊತ್ತಿದ್ದ  ಹಾದಿ  ಅತೀವ ಹಿಂಸೆ,  ನೇಣುಕುಣಿಕೆ  ಅಷ್ಟೆ.   ತುತ್ತ ತುದಿಗಿದ್ದ ಕೋಣೆ  ಜೈಲಿನ  ಗಾರ್ಡ್ ನದ್ದು.  ತಪ್ಪಿಸಿಕೊಳ್ಳುವ  ಯತ್ನ  ಮಾಡಿದವರನ್ನು  ಗುಂಡಿಟ್ಟು  ಕೊಲ್ಲುವ  ಅಧಿಕಾರ  ಅವನದು.
 .
ಸ್ವಾತಂತ್ರ್ಯಕ್ಕಾಗಿ   ಮನೆ  , ಮಡದಿ,  ಹೆತ್ತವರು,  ಮಕ್ಕಳ  ಮುಖ ಕಾಣದೆ  ಬದುಕು  ಕಾಲಾಪಾನಿಯ  ಶಿಕ್ಷೆ  ಅನುಭವಿಸುತ್ತ  , ಚಾಟಿಯಲ್ಲಿ  ಹೊಡೆಸಿಕೊಳ್ಳುತ್ತ ,   ಅಮೂಲ್ಯ  ಜೀವನವನ್ನು  ದೇಶದ  ಸ್ವಾತಂತ್ರ್ಯಕ್ಕೆ  ಮುಡಿಪಾಗಿಟ್ಟ ಹಲವಾರು  ದೇಶಭಕ್ತರ  ಬದುಕು, ಬವಣೆ  ,  ನೇಣು ಕೋಣೆ  ಹೇಗಿತ್ತು  ಎಂಬುದು  ಈಗಲೂ  ಅಲ್ಲಿ ಕಾಣಬಹುದು.   ನಿಸ್ವಾರ್ಥವಾಗಿ   ಹೋರಾಡಿದ  ಅವರು  ಬದುಕಿಡೀ  ನೋವು  ನುಂಗಿ  ಸ್ವತಂತ್ರ ಭಾರತದ  ಕನಸಿನಲ್ಲಿ  ಯಾತನೆ  ಸಹಿಸಿಕೊಂಡರು.
.
Cellular jail     Cellular jail1
 .
ನಿತ್ಯ ಸಂಜೆ  ಐದು  ಘಂಟೆಗೆ  ಸೆಲ್ಲ್ಯುಲರ್  ಜೈಲಿನ  ಮುಂಭಾಗದಲ್ಲಿ ಎರಡು  ಜೈಲಿನ  ಮಧ್ಯೆ  ” Sound  And  Light  Show” ನಡೆಸುತ್ತಾರೆ. ಹೋರಾಟಗಾರರ ವೀರಗಾಥೆಯನ್ನು  ಉಚ್ಚದನಿಯಲ್ಲಿ  ಪ್ರೇಕ್ಷಕರ  ಮುಂದಿಡುವಾಗ  ನಡು  ನಡುವೆ  ಚಾಟಿಯ  ಹೊಡೆತದ  ಸದ್ದು,  ಕಹಾ  ಸೇ ಶುರೂ   ಕರ್ ನಾ  ಕಹಾನಿ? ಅನ್ನುವಾಗಲೇ  ಎದೆ ಮಿಡಿಯುತ್ತದೆ,  ಮನ ಮರುಗುತ್ತದೆ.  ಸಭೆ  ಅತೀವ  ಮೌನತಾಳಿ   ಕೇಳಿ  ಕಂಬನಿ  ಹರಿಸುತ್ತದೆ.  ತ್ಯಾಗ,  ಬಲಿದಾನದ  ವೀರಗಾಥೆ  ಕೇಳಿ   ಅಲ್ಲಿನ  ಗಾಳಿ  ನಿಟ್ಟುಸಿರಿಡುತ್ತದೆ.   ದೇಶಕ್ಕಾಗಿ  ಪ್ರಾಣಾರ್ಪಣೆ ಮಾಡಿದ   ದೇಶಭಕ್ತರ   ದಿವ್ಯಾತ್ಮಗಳು  ನಿಶ್ಶಬ್ದವಾಗಿ  ತಲೆದೂಗುತ್ತವೆ.  ವಾತಾವರಣವಿಡೀ ಶೋಕಮಯ.
.
ದೇಶ ಕೊನೆಗೊಮ್ಮೆ  ಸಾವಿರಾರು  ಬಲಿದಾನಗಳ  ನಂತರ  ಸ್ವತಂತ್ರವಾದಾಗ  ಕರಿನೀರಿನ  ಶಿಕ್ಷೆಗೀಡಾದ  ಹೋರಾಟಗಾರರಲ್ಲಿ   ಜೀವಚ್ಚವವಾಗಿ  ಬದುಕಿ ಉಳಿದವರನ್ನು  ಬಿಡುಗಡೆ  ಮಾಡಿದ್ದರು.  ಅದರಲ್ಲೂ  ಶಿಕ್ಷೆಯ  ಕ್ರೌರ್ಯತೆ   ತಾಳಲಾಗದೆ  ಆಂಗ್ಲರು  ಹೇಳಿದಂತೆ  ಕೇಳಿದ   ಭಾರತೀಯ  ವೀರರಿಗೆ   ಅಲ್ಲಿ  ಬ್ರಿಟಿಶರ ಕೈಕೆಳಗೆ  ಉದ್ಯೋಗ,  ಭೂಮಿ  ಕೊಟ್ಟು  ನಿಲ್ಲಿಸಿದ್ದರು.  ಹಾಗೆ  ಅಲ್ಲಿ ನೆಲೆ  ನಿಂತ  ಹಲವಾರು  ಕುಟುಂಬಗಳಿವೆ.   ಅವರ  ಪೀಳಿಗೆ  ಅಲ್ಲೇ  ಮುಂದುವರೆದಿದೆ.   ಅನೇಕ  ಹೋರಾಟಗಾರರು  ತಮ್ಮ  ಅಮೂಲ್ಯ  ಬದುಕಿನ  ಬಹುಭಾಗವನ್ನು  ಚಿತ್ರಹಿಂಸೆ  ಅನುಭವಿಸುತ್ತ  ಕಳೆದು  ಶಕ್ತಿ,  ಆರೋಗ್ಯ  ಎರಡನ್ನೂ  ಕಳೆದುಕೊಂಡು ತಾಯ್ನಾಡಿಗೆ  ಹಿಂದಿರುಗಿದರು.   ದೇಶದ  ಪಾರತಂತ್ರ್ಯವನ್ನು  ಸಹಿಸದೆ  ಸ್ವಾತಂತ್ರ್ಯಕ್ಕಾಗಿ  ಜೀವನವನ್ನೇ  ಮುಡಿಪಾಗಿಟ್ಟ  ಅವರಿಗೆ  ಸ್ವತಂತ್ರ ದೊರೆತ  ಮೇಲೆ ಸಂದ  ಮನ್ನಣೆ   ಸಾಲದು.  ತಮ್ಮ  ಸ್ವಂತಕ್ಕೆ  ಸರ್ವಸ್ವವನ್ನು  ,  ಅಧಿಕಾರವನ್ನು  ಹಿಡಿದಿಟ್ಟುಕೊಂಡು ,   ಅರ್ಹ  ಪ್ರಾಮಾಣಿಕ  ದೇಶಭಕ್ತರನ್ನು ಮೂಲೆಗೊತ್ತಲಾಗಿತ್ತು. ಅಧಿಕಾರದ  ದಾಹ  ಮಿತಿಮೀರಿ  ದೇಶ  ಕಟ್ಟಬೇಕಾದ  ಕಾರ್ಯದ  ಬದಲಿಗೆ  ಒಡೆದು  ಆಳುವ   ನೀತಿ  ಅನುಷ್ಟಾನಕ್ಕೆ  ಬಂತು.  ಸುವರ್ಣ ಭಾರತದ  ಕಲ್ಪನೆ ಕಲ್ಪನೆಯಾಗೇ  ಉಳಿಯಿತು.
 .
Vande mataram
 .
ಸ್ವಾತಂತ್ರೋತ್ಸವದ   ಶುಭದಿನದಲ್ಲಿ  ದೇಶಕ್ಕಾಗಿ   ಬದುಕನ್ನು  ಸವೆಸಿದ,  ಬಲಿದಾನವಾದ  ಶ್ರೇಷ್ಟ ,  ಅಪ್ರತಿಮ  ಹೋರಾಟಗಾರರನ್ನು  ಸ್ಮರಿಸಿಕೊಂಡು  ಅವರಿಗೆ ಪ್ರಣಾಮಗಳು. ….
– ಕೃಷ್ಣವೇಣಿ  ಕಿದೂರು.
….

3 Responses

  1. Shobha Bhat says:

    ಲೇಖನಅರ್ಥಪೂರ್ಣವಾಗಿದ ಓದಿ
    ಮನಸ್ಸು
    ಮರುಗಿತು.

  2. Niharika says:

    ಮನ ಕಲಕಿದ ಬರಹ.

  3. ಸ್ವಾತಂತ್ರ್ಯ ಹೋರಾಟಗಾರರೆಂದರೆ ಒಂದಷ್ಟು ನೇತಾರರ ಹೆಸರುಗಳನ್ನು ಮಾತ್ರ ನೆನೆದು ಸ್ವಾತಂತ್ರ ದಿವಸದ ಆಚರಣೆಯ ಶಾಸ್ತ್ರವನ್ನು ಮುಗಿಸುವ ಈ ಜಮಾನದಲ್ಲಿ, ದೇಶಕ್ಕಾಗಿ ತಮ್ಮನ್ನೇ ತಾವು ತರ್ಪಣ ಕೊಟ್ಟ ಇಂತಹ ಮಾದರಿ ಜೀವಗಳು ಎಲ್ಲೋ ಒಂದು ಕಡೆ ಅವಗಣಿಸಲ್ಪಡುತ್ತಿವೆಯೋ ಎಂದು ಸಂಶಯವಾಗುತ್ತದೆ.

    ತಮ್ಮ ಈ ಸಾಂದರ್ಭಿಕ ಬರಹ ಅರ್ಥಪೂರ್ಣ. ಮನಸ್ಸು ಮಿಡಿಯಿತು. ದೇಶಕ್ಕಾಗಿ ತಮ್ಮನ್ನೇ ಬಲಿದಾನ ಕೊಟ್ಟ ವ್ಯಕ್ತಿಗಳಿಗೆಲ್ಲಾ ಸಲಾಂ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: