ನಿಸರ್ಗ ಸ್ವರ್ಗ- ಹರ್-ಕಿ- ದುನ್, ಚಾರಣ ಭಾಗ-1
ಕಾಯೋದು ಇದೆಯಲ್ಲ ಅದು ಒಂಥರಾ ಹೆಲ್. ಮೂರು ತಿಂಗಳ ಮೊದಲು Youth Hostels Association of India ದವರು ನಡೆಸುವ ಹರ್-ಕಿ-ದುನ್ ಚಾರಣಕ್ಕೆ ಬುಕ್ ಮಾಡಿಕೊಂಡ್ವಿ, 9 ದಿನದ ಈ ಕಾರ್ಯಕ್ರಮಕ್ಕೆ ನಿಗದಿಪಡಿಸಿದ ಮೊತ್ತ ರೂ 5000/- ಮಾತ್ರ. ನಾನು ನೆಟ್‌ನಲ್ಲಿ ಚೆಕ್ ಮಾಡಿದೆ, ಬೇರೆ ಬೇರೆ ಚಾರಣ ಸಂಸ್ಥೆಗಳು ಕುರಿತು. ಈ ಚಾರಣ ಕಾರ್ಯಕ್ರಮವನ್ನು ಬಹಳಷ್ಟು ಚಾರಣ ಸಂಸ್ಥೆಗಳು ನಡೆಸುತ್ತವೆ. ಅಷ್ಟೊಂದು ಚಂದ ಈ ಚಾರಣದ ಹಾದಿ. ಅವರೆಲ್ಲಾ ಚಾರ್ಜು ಮಾಡ್ತಾ ಇದ್ದದ್ದು, ರೂ.9000 ದಿಂದ 14000 ದವರೆಗೆ. ಕಳೆದ ಹಲವಾರು YHAI ನ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ನನಗೆ ಅವರ ಕಾರ್ಯಕ್ರಮಗಳು ಎಷ್ಟು ಅಚ್ಚುಕಟಾಗಿರುತ್ತವೆ ಅನ್ನೋದು ಗೊತ್ತು. ಹೀಗಾಗಿ ಯಾವುದೇ ಚಿಂತೆಯಿಲ್ಲದೆ ಅವರ ಕಾರ್ಯಕ್ರಮಗಳಿಗೆ ಹೋಗೋದು. ಎರಡು ತಿಂಗಳು ಮೊದಲು ಟ್ರೈನ್ ಷೆಡ್ಯೂಲ್ ತಯಾರಿ ಮಾಡಿಕೊಂಡು ರಿಸರ್ಜವೇಷನ್ ಕೂಡ ಮಾಡಿಕೊಂಡಾಯ್ತು. ಇನ್ನು ಉಳಿದದ್ದು ಒಂದೇ ಕೆಲಸ. ಅದು ಎಂದರೆ 2 ತಿಂಗಳು ಕಾಯೋದು. ಅದೇ ದೊಡ್ಡ ಕಷ್ಟದ ಕೆಲಸ. ಈ ಮಧ್ಯೆ ಸ್ಪಲ್ಪ ತಯಾರಿ ಕೂಡ ಮಾಡ್ಕೋಬೇಕು. ಫಿಟೆನೆಸ್‌ಗಾಗಿ ವಾಕ್ ಮಾಡೋದು, ಬೆಚ್ಚನೆ ಉಡುಗೆಗಳನ್ನು ಜೋಡಿಸಿಕೊಳ್ಳೋದು, ಅದಕ್ಕೂ ಹೆಚ್ಚಾಗಿ ಮಾನಸಿಕವಾಗಿ ತಯಾರಾಗೋದು.
ಅಂತೂ ನೋಡ್ತಾ ಇದ್ದ ಹಾಗೇ ಎರಡು ತಿಂಗಳು ಕಳೆದು ಪ್ರಯಾಣದ ದಿನ ಬಂದೇ ಹೋಯ್ತು. ನಮ್ಮದು ಕಾರ್ಯಕ್ರಮದ ಕೊನೆಯ ತಂಡ. 30-05-2015 ರಿಂದ ಶುರುವಾಗಿ 07-06-2015 ಕ್ಕೆ ಮುಗಿಯುವಂತಹದು. Reporting Base camp ಡೆಹ್ರಾಡೂನ್‌ನ ಸಹಸ್ತ್ರಧಾರಾ ಎಂಬಲ್ಲಿ. ಹೀಗಾಗಿ ಚೆನ್ನೈಯಿಂದ ಡೆಹ್ರಾಡೂನ್‌ಗೆ ಡೈರೆಕ್ಟ್ ಟ್ರೈನ್ ಹಿಡಿದು ಹೊರಟ್ವಿ, ನಾವು 9 ಜನ ಗಂಗೋತ್ರಿ ಘಟಕದಿಂದ.
ಹರ್-ಕಿ-ದುನ್ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುರಿತು ಒಂದು ಪರಿಚಯ ಮಾಡಿಕೊಂಡು ಬಿಡೋಣ.
ಹರ್ ಎಂದರೆ ಶಿವ. ದುನ್ ಅಂದರೆ ಕಣಿವೆ (ವ್ಯಾಲಿ). ಶಿವ ವಾಸವಾಗಿರುವ ಕಣಿವೆಯೆಂದೇ ಪ್ರಸಿದ್ಧಿ. ಇಲ್ಲೇ ಪುರಾಣ ಪ್ರಸಿದ್ಧ ಸ್ವರ್ಗಾರೋಹಿಣಿ ಪರ್ವತ ಇರೋದು. ಪಾಂಡವರು ತಮ್ಮ ಅಂತಿಮ ಯಾತ್ರೆಯನ್ನು ಕೈಗೊಂಡ ಪರ್ವತ. ಯುದಿಷ್ಠಿರ ಮಾತ್ರ ಒಂದು ನಾಯಿಯೊಡನೆ ಸಂಪೂರ್ಣ ಪರ್ವತವನ್ನು ಏರಿ ಐಕ್ಯವಾಗುತ್ತಾನೆ. ಉತ್ತರಖಾಂಡ ರಾಜ್ಯದ, ಉತ್ತರಕಾಶಿ ಜಿಲ್ಲೆಯ, ಪುರೋಲಾ ತಾಲ್ಲೂಕಿನಲ್ಲಿದೆ ಈ ಹರ್-ಕೆ-ದುನ್ ಕಣವೆ. ಪುರೋಲಾದಿಂದ 50 ಕಿ.ಮೀ ದೂರದಲ್ಲಿ ಸಾಂಕ್ರಿ ಎಂಬ ಹಳ್ಳಿ. ಅಲ್ಲಿವರೆಗೆ ವಾಹನ ಸಂರ್ಪಕ ಇದೆ. ಮುಂದೆ ತಾಲೂಕಾ ಎಂಬ ಇನ್ನೊಂದು ಹಳ್ಳಿ 11 ಕಿ.ಮೀ ದೂರದಲ್ಲಿದೆ. ಅಲ್ಲಿಯವರೆಗೆ ಕಷ್ಟಪಟ್ಟು ಸ್ಥಳೀಯ ಸಣ್ಣ ವಾಹನದಲ್ಲಿ ಹೋಗಬಹುದು. ಬಹುಶ ಅದೇ ಹಳ್ಳಿ ಎಲ್ಲ ರೀತಿಯ ಸಂಪರ್ಕಗಳಿಗೂ ಕೊನೆ.
ಅದರ ನಂತರದ ನೂರಾರು ಹಳ್ಳಿಗಳಲ್ಲಿ No conveyance, No Power, No telephones, No hospitals, No schools. No ಗಳ ಲಿಸ್ಟ್ ಮಾಡುತ್ತಾ ಇದ್ದರೆ ನೋ ಎಂಡ್. ಅಲ್ಲಿಯ ಜನ ಜೀವನ ಹೇಗಿರಬಹುದೆಂದು ಇದರಿಂದ ಕಲ್ಪನೆ ಮಾಡಿಕೊಳ್ಳಬಹುದು. ಇದ್ದ ಪುಟ್ಟ ಜಮೀನಿನಲ್ಲಿ ಆಲೂಗಡ್ಡೆ ಬೆಳೆದುಕೊಳ್ಳುತ್ತಾರೆ. ಬಹುಶ ಅದು ಅವರ ಉಪಯೋಗಕ್ಕೆ ಮಾತ್ರ. ಕುರಿ ಮತ್ತು ದನಗಳನ್ನು ಸಾಕಿಕೊಂಡಿದ್ದಾರೆ. ಬೇರೆ ಎಲ್ಲಾ ಅಗತ್ಯವಿರುವ ಸಾಮಾನುಗಳು ಸಾಂಕ್ರಿಯಿಂದ ಬರಬೇಕು. ಹೊತ್ತುಕೊಂಡೇ ತರಬೇಕು ಅಥವಾ ಮ್ಯೂಲ್‌ಗಳನ್ನು ನಂಬಿಕೊಳ್ಳಬೇಕು. ಆಶ್ಚರ್ಯ ಅಂದರೆ, ಈ ಭಾಗದ ಜನರೆಲ್ಲಾ ಮಹಾಭಾರತದ ಕೌರವರ ಆರಾಧಕರು. ಮೋರಿ ಮತ್ತು ಓಸ್ಲಾ ಎಂಬ ಹಳ್ಳಿಗಳಲ್ಲಿ ದರ್ಯೋಧನನ ದೇವಸ್ಥಾನಗಳು ಇವೆ,
ಉತ್ತರಖಾಂಡ ರಾಜ್ಯದಲ್ಲಿ 2 ಹಿಮಾಲಯ ಪ್ರಾಂತ್ಯಗಳು ಬರುತ್ತವೆ. ಗಢವಾಲ ಮತ್ತು ಕುಮಾಯೂ. ಗಢವಾಲ ಪ್ರಾಂತ್ಯದಲ್ಲಿ ಚಾರ್‌ಧಾಮ್‌ಗಳು ಅಂದರೆ ಗಂಗೋತ್ರಿ, ಯುಮನೋತ್ರಿ, ಬದರಿ, ಕೇದಾರ್ ಹಾಗೂ ಬಾಲಿ ಪಾಸ್, ಗೋಮುಖ್ ತಪೋವನ್, ಹರ್-ಕಿ-ದುನ್, ರೂಪ್‌ಕುಂಡ್, ಕೇದಾರ್‌ಕಾಂತಾ, ಶಿವಲಿಂಗ್, ಕುವಾರಿ ಪಾಸ್, ವ್ಯಾಲಿ ಆಫ್ ಫ್ಲವರ್, ಪಿಂಡೋಲಿ ಗ್ಲೇಸಿಯರ್‍ಸ್, ಖಾಟ್‌ಲಿಂಗ್ ಮುಂತಾದ ಪ್ರಸಿದ್ಧ ಸುಂದರ ಪ್ರದೇಶಗಳಿವೆ. ಕುಮಾಯೂ ಹಿಮಾಲಯ ಪ್ರಾಂತ್ಯದಲ್ಲಿ ನೈನಿತಾಲ್, ಭಾಗೇಶ್ವರ್, ಚಂಪಾರಣ್, ಅಲ್ಮೋರ, ರಾಣಿಕೇತ್, ಮುಕ್ತೇಶ್ವರ್, ಪಿಂಡಾರಿ ಗ್ಲೇಸಿಯರ್, ಆದಿಕೈಲಾಶ್, ಪಂಚ್‌ಚುಲಿ, ನಂದಾದೇವಿ ಮುಂತಾದ ಸುಂದರ ಪ್ರದೇಶಗಳು. ಸಾಕಷ್ಟು ಚಾರಣ ಪ್ರದೇಶಗಳು ತುಂಬಿವೆ ಈ ಎರಡೂ ಪ್ರಾಂತ್ಯದಲ್ಲಿ. ಚಾರಣಿಗರ ಸರ್ಗ್ವವೇ ಈ ಪ್ರದೇಶದಲ್ಲಿದೆ.
30 ನೇ ತಾರೀಖು ಬೆಳಗ್ಗೆ 7.00 ಗಂಟೆಗೇ ಡೆಹ್ರಾಡೂನ್ ತಲುಪಿದ್ವಿ. ಅಲ್ಲಿಂದ ಸಹಸ್ತ್ರಧಾರ 16 ಕಿ.ಮೀ. ಅಲ್ಲಿ ನಮ್ಮ ಕ್ಯಾಂಪ್. ಆಟೋ ಮಾಡಿಕೊಂಡು ಸಹಸ್ತ್ರಧಾರಾ ಕ್ಯಾಂಪ್‌ಗೆ Report ಮಾಡಿಕೊಂಡ್ವಿ. ಬಾಲ್ಡಿ ನದಿಯ ದಂಡೆಯ ಮೇಲೆ ಸುಂದರವಾಗಿ ಟೆಂಟ್‌ಗಳನ್ನು ಜೋಡಿಸಿದ್ದರು. ಸುತ್ತಲೂ ಬೆಟ್ಟಗಳು. ಬ್ರೆಡ್ ಮತ್ತು ಖೀರು ಕೊಟ್ರು ತಿಂಡಿಗೆ. ಆ ದಿನ ನಮಗೆ ಮತ್ತೆ ಬೇರೆ ಕೆಲಸ ಇಲ್ಲ. ಹೀಗಾಗಿ ಮಸೂರಿ ನೋಡಿಬರುವ ತೀರ್ಮಾನ ಮಾಡಿ ಟ್ಯಾಕ್ಸಿ ಮಾಡಿಕೊಂಡು ಮಸೂರಿಗೆ ಹೋಗಿ ಬಂದು, ಸಂಜೆ ಬಾಲ್ಡಿ ನದಿ ನೀರಿನಲ್ಲಿ ಸ್ನಾನಮಾಡಿ, ಒಳ್ಳೆಯ ಭೋಜನ ಸೇವಿಸಿ ಮಲಗಿದ್ವಿ, ರಾತ್ರಿ ಸ್ಪಲ್ಪ ಕೂಲ್ ಆಗಿತ್ತು ಪುಣ್ಯಕ್ಕೆ. ಹೀಗಾಗಿ ಸ್ವಲ್ಪ ನಿದ್ರೆ ಬಂತು. ಮರುದಿನ ಬೆಳ್ಳಿಗೆ 7.30 ಕ್ಕೆ ಅಲ್ಲಿಂದ ಸಾಂಕ್ರಿ ಬೇಸ್‌ಕ್ಯಾಂಪ್‌ಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಬೇಕು. ನಮ್ಮ ಈ ಕೊನೆಯ ತಂಡದಲ್ಲಿ 45 ಜನ ಇದ್ವಿ ಕನಿಷ್ಟ 10 ಘಂಟೆಗಳ ಪ್ರಯಾಣ ಅಂತ ಹೇಳಿದರು. ಬರೀ 200 ಕಿಮೀ ಗೆ 10 ಘಂಟೆ ಯಾಕೆ ಅಂತ ಆ ಮೇಲೆ ಪ್ರಯಾಣಿಸುತ್ತಾ ಇದ್ದ ಹಾಗೇ ಗೊತ್ತಾಯ್ತು. ಪೂರ್ತಿ ಅಂಕು ಡೊಂಕು ರಸ್ತೆ. ಒಂದು ಕಡೆ ಯುಮನೆ ಹರಿಯುವ ಕೊಳ್ಳ, ಇನ್ನೊಂದು ಕಡೆ ಬೆಟ್ಟಗಳ ಅಂಚು. ಕೆಲವೊಮ್ಮೆ ಹೆದರಿಕೇನೂ ಆಗೋದು. ಕೊನೆಯ 50 ಕಿ.ಮೀ ಅಂತೂ ಇನ್ನೂ ಸುಂದರ. ಓಕ್ ಹಾಗೂ ಪೈನ್ ಮರಗಳ ಅರಣ್ಯ. ಗೋವಿಂದ ಪಶು ವಿಹಾರ ವೈಲ್ಡ್ ಲೈಫ್ ಸ್ಯಾಂಕ್ಚುರಿನಲ್ಲಿ ನಮ್ಮ ಕೊನೆಯ 25 ಕಿ.ಮೀ ಗಳ ಪ್ರಯಾಣ. ಪ್ರಯಾಣ ಸುಸ್ತು ಅನಿಸಲೇ ಇಲ. ಸಣ್ಣಗೆ ಮಳೆ ಬರ್‍ತಾ ಇತ್ತು. ಚಳಿ ಪ್ರದೇಶ ಶುರು ಆಗಿಬಿಟ್ಟಿತ್ತು. ಬಸ್ಸು ಎ.ಸಿ. ಬಸ್ ಆಗಿ ಮಾರ್ಪಟ್ಟಿತ್ತು. ಸಾಂಕ್ರಿ ಬೇಸ್ ಕ್ಯಾಂಪ್‌ಗೆ ತಲುಪಿದಾಗ ಸಂಜೆ 5.30. ಬಸ್ ಇಳಯುತ್ತಾ ಇದ್ದ ಹಾಗೇ ಅಲ್ಲಿನ ನೋಟ ನೋಡಿ ತುಂಬಾ ಸಂತೋಷ ಆಗಿಹೋಯ್ತು. ಎಷ್ಟು ಸುಂದರ ಸ್ಥಳದಲ್ಲಿ, ಎಷ್ಟೊಂದು ಸುಂದರವಾಗಿ ಕ್ಯಾಂಪ್ ಹಾಕಿದ್ದಾರೆ YHAI ನವರು. ರಿಯಲೀ ಗ್ರೇಟ್. ಸುತ್ತಲಿನ ದೊಡ್ಡ ದೊಡ್ಡ ಬೆಟ್ಟಗಳು ಮೋಡದಲ್ಲಿ ಮರೆಯಾಗಿದ್ದವು. ದೊಡ್ಡ ದೊಡ್ಡ ಮೋಡದ ಅಲೆಗಳನ್ನು ನೋಡುವುದೇ ಒಂದು ಚಂದ.
ಇಳೀತಾ ಇರೋ ಹಾಗೇ ಪಕೋಡಾ, ಟೀ ರೆಡಿ ಇತ್ತು. ಬಿಸಿ ಬಿಸಿ ಪಕೋಡಾ, ತಿಂದಷ್ಟು ಕೊಡ್ತಾನೇ ಇದ್ರು. ಚಳಿಗೆ ರುಚಿ ರುಚಿ ಅನಿಸ್ತಾ ಇತ್ತು. ನಂತರ ನೋಂದಣಿ, ಟೆಂಟ್‌ಅಲಾಟ್‌ಮೆಂಟ್, Sleeping bag, ಬ್ಲಾಂಕೆಟ್ ವಿತರಣೆ. ಟೆಂಟ್ ಒಳಗೆ ಸೇರಿಕೊಂಡ್ವಿ. ಆಯಾಸವಿಲ್ಲದ ಪ್ರಯಾಣವಾಗಿದ್ದರಿಂದ ರೆಸ್ಟ್ ಬೇಕೆನಿಸಲಿಲ್ಲ. ಮಳೆ ನಿಂತು ಆಕಾಶ ಕೂಡ ಸ್ವಚ್ಛವಾಗಿತ್ತು. ಕ್ಯಾಮೆರಾ ಹಿಡಿದು ಟೆಂಟ್‌ನಿಂದ ಹೊರಗೆ ಬಂದಾಗ, ಅಬ್ಬಾ, ಆ ಸೌಂದರ್ಯ. ದೂರದಲ್ಲಿ ಹಿಮದಿಂದ ಆವರಿಸಿದ ಬೆಟ್ಟಗಳು ಬೆಳ್ಳಿಗೆ ಹೊಳೀತಾ ಇವೆ. ತಕ್ಷಣ ಖುಷಿ ಆಯ್ತು. ನಮ್ಮದು ಕೊನೆಯ ತಂಡವಾಗಿದ್ದರಿಂದ ಹಿಮ ನೋಡಲಿಕ್ಕೂ ಸಿಕ್ಕೋದಿಲ್ಲವೇನೋ ಅನ್ಕೊಂಡಿದ್ದೆ. ಸಮಾಧಾನವಾಯ್ತು.
ಈಗ ಇಲ್ಲಿ ರಾತ್ರಿ ಕತ್ತಲಾಗುವುದು 8.00 ಘಂಟೆಗೆ ಮತ್ತು ಬೆಳಕು ಕಾಣುವುದು ಬೆಳಗ್ಗೆ 4.30 ಕ್ಕೆ. 8.00 ಘಂಟೆಗೆ ಊಟಕ್ಕಾಗಿ ವಿಷಲ್ ಆಯ್ತು. ತಟ್ಟೆ. ಲೋಟಾ ಹಿಡಿದು ಓಡಿದ್ದು, ಡಿನ್ನರ್‌ನಲ್ಲಿ ರೋಟಿ, ಆಲೂ ಬೈಂಗನ್ ಮಸಾಲಾ, ಕಿಚಿಡಿ ಮತ್ತು ಖೀರು. ಎಲ್ಲವೂ ರುಚಿಕಟ್ಟಾಗಿತ್ತು. ಪಟ್ಟಾಗಿ ತಿಂದದ್ದು. ನಂತರ ಅರ್ಧ ಘಂಟೆ camp fire. ಆ ದಿನ ರಾತ್ರಿ ಸುಮಾರು 5,6 ಡಿಗ್ರಿ ಟೆಂಪರೇಚರ್ ಇತ್ತು ಅನಿಸುತ್ತೆ. ಬೆಚ್ಚಗೆ ಸ್ಲೀಪಿಂಗ್ ಬ್ಯಾಗ್‌ನಲ್ಲಿ ಹೊಕ್ಕು ಮೇಲೆ ರಗ್ಗು ಎಳೆದು ನಿದ್ದೆ ಹೋದದ್ದು. ಸಾಂಕ್ರಿ, ಸಮುದ್ರ ಮಟ್ಟದಿಂದ 6350 ಅಡಿ ಎತ್ತರದಲ್ಲಿದೆ.
(ಮುಂದುವರಿಯುವುದು..)
– ಅನಂತ ದೇಶಪಾಂಡೆ
ವಾಹ್ .ಬಹಳ ಸು೦ದರ ಅನುಭವ .ಬರವಣಿಗೆಯೂ ಸರಳ ಸು೦ದರ ಫೋಟೋ ಗಳೂ ಚೆನ್ನಾಗಿವೆ.ಥ್ಯಾಂಕ್ಸ್ ಟು ಸುರಹೊನ್ನೆ .
Very good
good one
Awesome write up! Very informative and also lively! Making me wait for next episode.. 🙂
ತುಂಬಾ ಸುಂದರವಾಗಿ ನಿರೂಪಿಸುತ್ತಾ ಇದೀರಿ. ಎದುರಿಗೇ ಕೂತು ಕೇಳಿದ ಹಾಗಿದೆ. ಹಿಮಾಲಯ ಚಾರಣದ ಅನುಭವಗಳು ಎಷ್ಟು ಓದಿದರೂ ಸಾಕು ಅನಿಸುವುದಿಲ್ಲ. ಮುಂದಿನ ಸಂಚಿಕೆಯ ನಿರೀಕ್ಷೆಯಲ್ಲಿ….