ಆಷಾಡಮಾಸ ಬಂದೀತವ್ವ ಚಾಮುಂಡಿಬೆಟ್ಟ ತುಳುಕೀತವ್ವ
ಚಾಮುಂಡಿಬೆಟ್ಟದಲ್ಲಿ ಜನಸಾಗರ ನೋಡಬೇಕಾದರೆ ಆಷಾಡಮಾಸದಲ್ಲಿ ಒಮ್ಮೆ ಭೇಟಿ ಕೊಡಬೇಕು. ಆಗ ಕಾಣುವ ನೋಟವೇ ಬೇರೆ ತರಹ. 26.07.2015 ರಂದು ಆ ಕ್ಷಣಕ್ಕೆ ಸಾಕ್ಷಿಯಾಗುವ ಅವಕಾಶ ನಮಗೆ ದೊರೆತಿತ್ತು. ಬೆಳಗ್ಗೆ 6.30 ಕ್ಕೆ ಚಾಮುಂಡಿಬೆಟ್ಟದ ಪಾದದ ಬಳಿ ಸೇರಿದಾಗ ಭರ್ತಿ 80 ಕ್ಕೂ ಮಿಕ್ಕಿ ಜನ ಸೇರಿದ್ದರು. ತಂಡದ ಆಯೋಜಕರಲ್ಲಿ ಒಬ್ಬರಾದ ಪರಶಿವಮೂರ್ತಿ ನಮ್ಮನ್ನೆಲ್ಲ ಸ್ವಾಗತಿಸಿ ಯಾವ ದಾರಿಯಲ್ಲಿ ಹೋಗಬೇಕೆಂದು ಹೇಳಿದರು. 7.15 ಕ್ಕೆ ನಾವು ಪರಿಸರ ಸ್ನೇಹಿ ನಡಿಗೆ ಪ್ರಾರಂಭಿಸಿದೆವು. ಚಾಮುಂಡಿವನದ ದಾರಿಯಲ್ಲಿ ಸಾಗಿ ಟಾರು ರಸ್ತೆಗೆ ಸೇರಿದೆವು. ಚಾಮುಂಡಿವನದಲ್ಲಿ ಅನೇಕ ಔಷಧೀ ಸಸ್ಯ ಬೆಳೆಸಿದ್ದರು. ನಿಧಾನಕ್ಕೆ ನಡೆಯುತ್ತ ಪ್ರಕೃತಿಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುತ್ತ ಸಾಗಿದೆವು. ಬೆಟ್ಟ ಈಗ ಹಸುರಿನಿಂದ ಕಂಗೊಳಿಸುತ್ತಿತ್ತು. ಹುಲ್ಲುಗಳು ಹೂ ಬಿಟ್ಟು ಮನಸೆಳೆಯುತ್ತಿದ್ದುವು. 80 ಜನರಲ್ಲಿ ನಿಧಾನ ನಡಿಗೆಯವರು, ಜೋರು ನಡಿಗೆಯವರು, ಸಾಧಾರಣ ನಡಿಗೆಯವರು ಎಂದು ಪ್ರತ್ಯೇಕ ಗುಂಪುಗಳಾದವು. ನನ್ನೊಡನೆ ಅಣ್ಣನ ಮಕ್ಕಳಾದ ಅಕ್ಷಯ, ಅನೂಷಾ ಮತ್ತು ಸ್ನೇಹಿತೆ ರೇಷ್ಮಾ ಇದ್ದರು. ಅವರಿಗೆ ಇದು ಹೊಸ ಅನುಭವ.
ಬಿಸಿರಕ್ತ ಹೆಚ್ಚಳಗೊಂಡ ಕೆಲವು ಯುವಕರು ರಸ್ತೆಯ ಇಳಿಜಾರಿನಲ್ಲಿ ಸೈಕಲ್, ಬೈಕುಗಳಲ್ಲಿ ವೇಗವಾಗಿ ಬೆಟ್ಟದಿಂದ ಬರುತ್ತಿದ್ದರು. ಹಾಗಾಗಿ ನಾವು ಬಲು ಎಚ್ಚರದಿಂದ ರಸ್ತೆಬದಿಯಲ್ಲಿ ನಡೆದೆವು. ಯಾರಾದರೂ ಸೈಕಲಿನವರಿಗೆ ಅಡ್ಡ ಬಂದರೆ ಅಪಾಯ ಕಟ್ಟಿಟ್ಟಬುತ್ತಿ. ಬ್ರೇಕ್ ಹಾಕಿದರೂ ಪ್ರಯೋಜನವಾಗಲಿಕ್ಕಿಲ್ಲ. ಮಕ್ಕಳು ಮನೆಗೆ ಬರುವಲ್ಲೀವರೆಗೂ ಹೆತ್ತವರಿಗೆ ಆತಂಕ ತಪ್ಪಿದ್ದಲ್ಲವೆನಿಸಿತು.
ನಂದಿ ಇರುವ ಸ್ಥಳದಿಂದ ಉತ್ತನಹಳ್ಳಿ ಕಡೆಗೆ ಸಾಗುವ ಮಾರ್ಗದಲ್ಲಿ ಮುಂದುವರಿದೆವು. ಸ್ವಲ್ಪ ದೂರ ಸಾಗಿದಾಗ ಮರದ ನೆರಳಿನಲ್ಲಿ ಜಿ.ಡಿ. ಸುರೇಶ್ ಮಾರುತಿ ಓಮ್ನಿಯಲ್ಲಿ ತಿಂಡಿ ತಂದು ನಮ್ಮನ್ನು ಎದುರುಗೊಂಡರು. ಉಪ್ಪಿಟ್ಟು, ಸಿಹಿ ಪೊಂಗಲ್, ಬಾಳೆಹಣ್ಣು ಹೊಟ್ಟೆಬಿರಿಯ ತಿಂದು, ಚಹಾ ಕುಡಿದು ಸುಧಾರಿಸಿದೆವು! ಗುಂಪಿನ ಛಾಯಾಚಿತ್ರ ತೆಗೆಸಿಕೊಂಡು ಮುಂದುವರಿದೆವು. ಬೆಟ್ಟ ಹತ್ತುವಾಗ ಮೈಸೂರು ಪೇಟೆಯ ಸೊಬಗನ್ನು ನೋಡಿದೆವು. ಮನೆಗಳೆಲ್ಲ ಬೆಂಕಿಪೊಟ್ಟಣಗಳಂತೆ ಭಾಸವಾದುವು.
ಚಾಮುಂಡಿಬೆಟ್ಟಕ್ಕೆ ಹೋಗಲು ಮೂರು ನಾಲ್ಕು ದಾರಿಗಳಿವೆ ಎಂಬುದೇ ತಿಳಿದಿಲ್ಲ. ಉತ್ತನಹಳ್ಳಿ ಮಾರ್ಗವಾಗಿ ಸಾಗಿದಾಗ ಎಡಕ್ಕೆ ಮೆಟ್ಟಲುಗಳು ಕಾಣುತ್ತವೆ. ಈ ದಾರಿ ಇದೆಯೆಂದು ನನಗೂ ಇದು ಹೊಸ ವಿಷಯ. ಅಲ್ಲಿ ಸಾಗಿದೆವು. ಕುರುಚಲು ಗಿಡಗಳ ಮಧ್ಯೆ ಸುಮಾರು ಮೆಟ್ಟಲು ಏರಬೇಕು. ಉತ್ತನಹಳ್ಳಿ ಕಡೆಯಿಂದ ನಡೆದು ಬರುವವರು ಈಗಲೂ ಇದೇ ದಾರಿಯಿಂದ ಬೆಟ್ಟದೆಡೆಗೆ ಸಾಗುವುದು. ಮೆಟ್ಟಲು ಹತ್ತುತ್ತ ಸಾಗಿದೆವು. ನನ್ನ ಗೆಳತಿಗೆ ಹಾಗೂ ಇನ್ನು ಕೆಲವರಿಗೆ ಅಷ್ಟರಲ್ಲಿ ಸುಸ್ತಾಗಿತ್ತು. ಅಬ್ಬ, ಸಾಧ್ಯವೇ ಇಲ್ಲ, ಇನ್ನೂ ಎಷ್ಟು ದೂರ ಇದೆ? ಎಂದು ಕೇಳಲು ತೊಡಗಿದರು. ಹೀಗೆ ಎಂದು ಗೊತ್ತಿದ್ದರೆ ಬರುತ್ತಲೇ ಇರಲಿಲ್ಲ ಎಂಬ ಮಾತು ಕೇಳಿ ಬಂತು! ನಮ್ಮ ತಂಡದಲ್ಲಿ ಪ್ರಥಮಬಾರಿಗೆ ಇಂಥ ನಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾದವರು ಸಾಕಷ್ಟು ಜನರಿದ್ದರು. ಕೆಲವರು ತಿಂಡಿ ತಿಂದಾದಮೆಲೆ ಅಲ್ಲಿಂದಲೇ ನಿರ್ಗಮಿಸಿದ್ದರು. ಅರ್ಧ ದಾರಿ ಮೆಟ್ಟಲು ಹತ್ತಿದ್ದೇ ಕೆಲವರಿಗೆ ಏದುಸಿರು ಬಂದು, ಸಾಕಪ್ಪ, ನನ್ನಿಂದ ಸಾಧ್ಯವಿಲ್ಲ ಎಂದು ಕೂತೇ ಬಿಟ್ಟರು. ನೋಡಿ, ಇನ್ನು ಸ್ವಲ್ಪ ಹತ್ತಿದರೆ ಆಯಿತು. ಗುರಿ ದೂರವಿಲ್ಲ, ಇಷ್ಟು ಬಂದವರಿಗೆ ಇನ್ನು ಸ್ವಲ್ಪ ದೂರ ಹೋಗುವುದು ಕಷ್ಟವೇ ಅಲ್ಲ, ಇದೇನು ಮಹಾ ಎನ್ನಬೇಕು. ಎಂದು ಹುರಿದುಂಬಿಸುತ್ತ, ನಡೆಮುಂದೆ ನುಗ್ಗಿ ನಡೆಮುಂದೆ ಎಂಬ ಮಂತ್ರ ಜಪಿಸುತ್ತ ಅವರನ್ನೆಲ್ಲ ಕೂತಲ್ಲಿಂದ ಎಬ್ಬಿಸಿ ಮುಂದೆ ಸಾಗಿದೆವು.
ಈ ದಾರಿ ದೇವಿಕೆರೆ ಬಳಿಗೆ ಸೇರುತ್ತದೆ. ಅಂತೂ ದೇವಿಕೆರೆ ತಲಪುವಾಗ ಗಂಟೆ 11.15. ಅಲ್ಲಿ ಜನರ ದಂಡು ಸಾಕಷ್ಟು ಇತ್ತು. ಕೋತಿಗಳ ಹಿಂಡೂ ಅಲ್ಲಿದ್ದುವು. ಅಲ್ಲಿಂದ ಹತ್ತಿಪ್ಪತ್ತು ಮೆಟ್ಟಲು ಹತ್ತಿದರೆ ಚಾಮುಂಡಿ ದೇವಸ್ಥಾನ. ಅದಾಗಲೇ ಬಸವಳಿದಿದ್ದ ಕೆಲವರ ಬಾಯಿಂದ ಅಯ್ಯೋ ಇಲ್ಲೂ ಮೆಟ್ಟಲು ಹತ್ತಬೇಕಾ ಎಂಬ ಉದ್ಗಾರ ಬಂತು! ಮೆಟ್ಟಲುಗಳನ್ನು ವಿಶಾಲವಾಗಿ ಕಟ್ಟಿದ್ದಾರೆ. ನಾವು ಅಲ್ಲಿ ನಿಲ್ಲದೆ ಮೆಟ್ಟಲು ಹತ್ತಿ ದೇವಾಲಯದ ಬಳಿ ಬಂದೆವು. ದೇವಾಲಯದ ಒಳಗೆ ಹೋಗಲು ಜನರ ಸಾಲೋ ಸಾಲು. ಜನಮರುಳೋ ಜಾತ್ರೆ ಮರುಳೋ ಎಂಬ ಗಾದೆಯನ್ನು ಜನ ಮರುಳೋ ಆಷಾಡಮಾಸ ಮರುಳೋ ಎಂದು ಮಾರ್ಪಡಿಸಬಹುದು. ರಾಜಕಾರಣಿಗಳ ವಾಹನಗಳು ಸಾಲು ಸಾಲಾಗಿ ಬರುವುದು ಕಂಡಿತು. ನಾವು ಅಲ್ಲಿ ನಿಲ್ಲದೆ ಮೆಟ್ಟಲು ಮೂಲಕ ಕೆಳಗೆ ಧಾವಿಸಿದೆವು.
1100 ಮೆಟ್ಟಲು ಇಳಿಯುವ ದಾರಿಯಲ್ಲಿ ಒಂದಷ್ಟು ಜನ ಭಕ್ತರು ಪ್ರತೀ ಮೆಟ್ಟಲಿಗೆ ಅರಿಶಿನ ಕುಂಕುಮ ಬಳಿಯುತ್ತ ಹತ್ತುತ್ತಿದ್ದರು. ಮೆಟ್ಟಲು ರಕ್ತವರ್ಣದಿಂದ ಕಂಗೊಳಿಸಿತ್ತು. ಕೆಂಪಾದವೋ ಎಲ್ಲ ಮೆಟ್ಟಲು ಕೆಂಪಾದವೋ ಭಕ್ತರ ಪರಾಯಣದಿಂದ ಎಲ್ಲ ಕೆಂಪಾದವೋ ಎಂದು ಹಾಡಬಹುದು! ದಾರಿ ಮಧ್ಯೆ ಸಿಗುವ ಹನುಮಂತನ ಗುಡಿ ಭಕ್ತರ ಪರಾಕಾಷ್ಠೆಗೆ ಸಿಲುಕಿ ಬಿಳಿ ಗೋಡೆ ಕುಂಕುಮಲೇಪಿತಗೊಂಡು ಕೆಂಬಣ್ಣಕ್ಕೆ ತಿರುಗಿತ್ತು. ಆಷಾಡಮಾಸದಲ್ಲಿ ಬೆಟ್ಟಕ್ಕೆ ಹೋದರೆ ಭಕ್ತಿಯ ಉತ್ಕಟಾವಸ್ಥೆ ನೋಡಲು ಸಿಗುತ್ತದೆ.
ನಾವು ಮೆಟ್ಟಲಿಳಿದು ೧೨.೧೫ಕ್ಕೆ ಬೆಟ್ಟದ ಪಾದ ತಲಪಿದೆವು. ನಾವು ಸುಮಾರು ೮-೧೦ ಕಿಮೀ ನಡೆದಿದ್ದೆವು. ಅನೂಷಾ ಮತ್ತು ರೇಶ್ಮಾ ಇವರಿಗೆ ಈ ಕಾರ್ಯಕ್ರಮ ಖುಷಿ ಕೊಟ್ಟಿತು. ಈ ಪರಿಸರ ಸ್ನೇಹಿ ನಡಿಗೆ ಕಾರ್ಯಕ್ರಮವನ್ನು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರು ಇದರ ಸದಸ್ಯರಾದ ಎಂ.ವಿ. ಪರಶಿವಮೂರ್ತಿ ಹಾಗೂ ಜಿ.ಡಿ. ಸುರೇಶ ಆಯೋಜಿಸಿ ಪ್ರಾಯೋಜಿಸಿದ್ದರು. ನಡಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದದ್ದು ಅವರಿಗೆ ಸಂತಸವಾಗಿತ್ತು ಹಾಗೂ ಇದರಲ್ಲಿ ಭಾಗವಹಿಸಿದ ನಮಗೆಲ್ಲರಿಗೂ ಧನ್ಯತಾಭಾವ ಮೂಡಿಸಿತ್ತು. ಆಯೋಜಕ ಪ್ರಾಯೋಜಕರಿಬ್ಬರಿಗೂ ಧನ್ಯವಾದ.
– ರುಕ್ಮಿಣಿಮಾಲಾ, ಮೈಸೂರು
ಚಾಮು೦ಡಿ ಬೆಟ್ಟ ಚಾರಣ ಓದಿ ಕುಶಿ ಆಯಿತು
ಚಾಮುಂಡಿ ಬೆಟ್ಟದ ಚಾರಣ ನಾನೇ ಮಾಡಿದಷ್ಟು ಖುಷಿಯಾಯ್ತು…!!