ಹಲಸಿನ ಬೀಜದ ಉಂಡೆ
ಹಲಸಿನ ಹಣ್ಣನ್ನು ತಿಂದಾದ ಮೇಲೆ ಉಳಿಯುವ ಬೀಜವನ್ನು ಅಸಡ್ಡೆಯಿಂದ ಹಸುಗಳಿಗೆ ತಿನ್ನಲಿಕ್ಕೆ ಹಾಕಿದರಾಯಿತು ಎಂದು ಭಾವಿಸುವವರೇ ಜಾಸ್ತಿ. ಅಪರೂಪಕ್ಕೆ ಕೆಲವರು ಹಲಸಿನ ಬೀಜವನ್ನು ಸುಟ್ಟು ಹಾಕಿ ತಿನ್ನುತ್ತಾರೆ. ಚಾಕೊಲೇಟ್, ತರಾವರಿ ಬೇಕರಿ ತಿನಿಸುಗಳು ಇಲ್ಲದೆ ಇದ್ದ ಕಾಲದಲ್ಲಿ ಹಳ್ಳಿಮಕ್ಕಳು ಹಲಸಿನ ಬೀಜವನ್ನು ಸುಟ್ಟು ತಿನ್ನುವುದರಲ್ಲಿ ಮಹದಾನಂದ ಪಡೆಯುತ್ತಿದ್ದರು.
ಇನ್ನು ಕೆಲವರು ಹಲಸಿನ ಬೀಜವನ್ನು ಹೆಚ್ಚಿ, ತರಕಾರಿಗಳ ಜತೆ ಮಿಶ್ರ ಮಾಡಿ ಹುಳಿ ಮಾಡುವುದಿದೆ. ನಾಲ್ಕಾರು ಹಲಸಿನ ಬೀಜಗಳನ್ನು ಬೇಯಿಸಿ, ರುಬ್ಬಿ , ತೊಗರಿಬೇಳೆಯ ಕಟ್ಟಿನ ಬದಲು ಇದನ್ನೇ ಬಳಸಿ ತಿಳಿಸಾರು ಮಾಡಿದರೆ ಯಾವುದರಿಂದ ತಯಾರಿಸಿದ್ದೆಂದು ಗೊತ್ತಾಗುವುದಿಲ್ಲ. ಮಿತವ್ಯಯ ಕೂಡ!
ಹಲಸಿನ ಬೀಜದಿಂದ ಸಿಹಿತಿನಿಸನ್ನು ತಯಾರಿಸುವ ವಿಧಾನವ ಹೀಗೆ :
1. ಸಿಪ್ಪೆ ತೆಗೆದ ಹಲಸಿನ ಬೀಜಗಳನ್ನು ಬೇಯಿಸಿ ಕುಟ್ಟಿ ಪುಡಿಮಾಡಿ.
2 ಇದಕ್ಕೆ ಕಾಯಿತುರಿ, ಬೆಲ್ಲದ ತುರಿ, ಏಲಕ್ಕಿ ಪುಡಿ, ಚಿಟಿಕೆ ಉಪ್ಪು ಸೇರಿಸಿ ಮತ್ತೆ ಕುಟ್ಟಿ.
3. ಕೈಗೆ ಒಂದು ಚೂರು ತುಪ್ಪ ಹಚ್ಚಿಕೊಂಡು ಉಂಡೆ ಕಟ್ಟಿ.
ಹಲಸಿನ ಬೀಜದ ಉಂಡೆಯ ರುಚಿ ಸೂಪರ್ !
ಈ ಉಂಡೆಯನ್ನು ಅಕ್ಕಿಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿದರೆ, ಹಲಸಿನ ಬೀಜದ ಸುಕ್ಕಿನುಂಡೆಯಾಗುತ್ತದೆ.
ಗೋಧಿಹಿಟ್ಟಿನ ಕಣಕ ತಯಾರಿಸಿ, ಹಲಸಿನ ಬೀಜದ ಸಿಹಿಉಂಡೆಯನ್ನು ಹೂರಣದಂತೆ ಬಳಸಿ, ಲಟ್ಟಿಸಿ ಬೇಯಿಸಿದರೆ, ಹಲಸಿನ ಬೀಜದ ಹೋಳಿಗೆಯೂ ಸಿದ್ಧ.
ಇವೆಲ್ಲಾ ಸರಳ ಮತ್ತು ರುಚಿಕರವಾದ ಗ್ರಾಮೀಣ ತಿನಿಸುಗಳು.
– ಹೇಮಮಾಲಾ.ಬಿ
ಈ ಹಲಸಿನ ಬೀಜದ ಉಂಡೆ ಯ ರುಚಿ ಇನ್ನೂ ಸ್ವಲ್ಪ ಹೆಚ್ಚಿಸಿ ಕೊಡಲೇ?ಹೀಗೆ ಮಾಡಿ—ಹಲಸಿನ ಬೀಜಗಳನ್ನು ಕುಟ್ಟಿ ಪುಡಿ ಮಾಡಿದ ಬಳಿಕ ತೆಂಗಿನಕಾಯಿಯನ್ನು ತಿರುವಿ ಬೆಲ್ಲದ ಹುಡಿ ಸೇರಿಸಿ ಸ್ವಲ್ಪ ತುಪ್ಪ ಹಾಕಿ ಒಲೆಯಮೇಲಿಟ್ಟು ಮಗುಚಿರಿ.ಹೂರಣವು ಗಟ್ಟಿ ಆಗಿ ಸೌಟಿನಿಂದ ಬೀಳತೊಡಗಿದ ಮೇಲೆ ಹಲಸಿನ ಬೀಜದ ಪುಡಿಯನ್ನು ಸೇರಿಸಿರಿ .ಏಲಕ್ಕಿ ಪುಡಿಬೆರೆಸಿ ಉಂಡೆ ಕಟ್ಟಿ ತಿನ್ನಲು ಕೊಟ್ಟರೆ ಯಾವ ುಂಡೆ ಎಂದು ತಿಳಿಯಲು ಕಷ್ಟ ಪಡುತ್ತಾರೆ!!!!ಕೆಲವರು ಮಾತ್ರ ಸರಿಯಾಗಿ ಪತ್ತೆ ಹಚ್ಚುತ್ತಾರೆ.ಇದು ನನ್ನ ಪ್ರತೀ ಸಲದ ಅನುಭವ.ನೀವೂ ಮಾಡಿ ನೋಡಿ ನನಗೂ ತಿಳಿಸಿ.
ಪಾಯಸ ಕೂಡಾ ಮಾಡುತ್ತಾರೆ ಸಖತ್ ಆಗಿರುತ್ತೆ
ಹಲಸಿನ ಬೀಜದ ಉಂಡೆ ಸೂಪರ್ .ಇದರಿಂದ ಖಾರ ತಿ೦ಡಿಗಲನ್ನೋ ತಯಾರಿಸಬಹುದಾಗಿದೆ
ಒಳ್ಳೆಯ ತಿನಿಸು…ಅದನ್ನು ಹೀಗೂ ಉಪಯೋಗಿಸಬಹುದೆಂದು ತಿಳಿದಿರಲಿಲ್ಲ…ಪ್ರಯತ್ನಿಸುತ್ತೇನೆ..ಧನ್ಯವಾದಗಳು ಮೇಡಂ.