ಪಾಪಿ
ಮನುಷ್ಯ
ಪ್ರೀತಿಸುತ್ತಾನೆ
ದ್ವೇಷಿಸುತ್ತಾನೆ
ವ್ಯಾಮೋಹಗಳ ದಳ್ಳುರಿಯಲ್ಲಿ
ದಹಿಸಿಕೊಳ್ಳುತ್ತಾನೆ
ಪ್ರೀತಿಸುವಾಗ ಕವಿತೆ ಬರೆದು
ದ್ವೇಷಿಸುವಾಗ ಕತ್ತಿ ಮಸೆದು
ಅವುಡುಗಚ್ಚಿ ಯುದ್ದಕ್ಕೆ ನಿಲ್ಲುತ್ತಾನೆ
ಅವಳಿಗಾಗಿ ಕವಿತೆ ಬರೆದವನು
ಅವಳನ್ನು ಕತ್ತಿಯಲಿ ಇರಿಯಲೂ ಬಲ್ಲ
ಕೊಲ್ಲಲು ಕೋವಿ ಹಿಡಿದ ಕೈಗಳಿಂದಲೇ
ಅವಳ ಗಲ್ಲವನೊಲುಮೆಯಲ್ಲಿ ನೇವರಿಸಬಲ್ಲ
ಪಾಪದ
ಪಾಪಿ ಮನುಷ್ಯ
ಪ್ರೀತಿಸುತ್ತಾನೆ ದ್ವೇಷಿಸುತ್ತಾನೆ
– ಕು.ಸ.ಮಧುಸೂದನ್ ನಾಯರ್