ಒಂದು ಬೆಕ್ಕಿನ ಕಥೆ..
ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿತು, ಸರಿಯಾಗಿ ಶ್ರವಣ, ಗ್ರಹಣ, ಸ್ಮರಣ ಮತ್ತು ಮನನ ಮಾಡುತ್ತಿದ್ದರೆ ವಿದ್ಯೆ ಸಿದ್ಧಿಸುತ್ತದೆ, ಇಲ್ಲವಾದರೆ ಅದು ‘ಶ್ರಾದ್ಧದಂದು ಶಾಸ್ತ್ರಕ್ಕೆ ಬೆಕ್ಕು ಕಟ್ಟಿದಂತೆ’ ಎಂದು ಈವತ್ತು ಕೇಳಿದೆ. ಹಾಗಾದರೆ ”ಒಂದು ಬೆಕ್ಕಿನ ಕಥೆ”ಯನ್ನು ಕೇಳಲು ಆಸಕ್ತಿಯಿದೆಯೇ ?
ಸಂಪ್ರದಾಯಸ್ಥ ಕುಟುಂಬದ ಮನೆಯ ಯಜಮಾನರೊಬ್ಬರು ಎಲ್ಲಾ ಆಚಾರ-ವಿಚಾರಗಳನ್ನು ಶ್ರದ್ಧೆಯಿಂದ ಪಾಲಿಸುತ್ತಾ ಜೀವನ ಮಾಡುತ್ತಿದ್ದರು. ಅವರ ಮನೆಯಲ್ಲಿ ಪ್ರೀತಿಯಿಂದ ಸಾಕಿದ ಬೆಕ್ಕು ಇತ್ತು.
ವರ್ಷಂಪ್ರತಿ ಯಜಮಾನ ತಂದೆಯವರ ಶ್ರಾದ್ಧ (ತಿಥಿ) ಕಾರ್ಯಕ್ರಮವಿರುತಿತ್ತು. ಆ ದಿನದಂದು, ಬೆಕ್ಕು ಅತ್ತಿತ್ತ ಓಡಾಡುತ್ತಾ ಕಿರಿಕಿರಿ ಮಾಡುವುದು ಬೇಡವೆಂದು ಅದನ್ನು ಒಂದು ಕಂಬಕ್ಕೆ ದಾರದಿಂದ ಕಟ್ಟಿ, ಶ್ರಾದ್ಧ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದ ನಂತರ ಯಜಮಾನರು ಬೆಕ್ಕಿಗೆ ಕಟ್ಟಿದ ದಾರವನ್ನು ಬಿಡಿಸುತ್ತಿದ್ದರು.
ಯಜಮಾನರಿಗೊಬ್ಬ ಮಗನಿದ್ದ. ಅವನ್ನು ಅಪ್ಪನ ಪದ್ಧತಿಯನ್ನು ನೋಡುತ್ತಾ ಬೆಳೆದ. ಆ ಬೆಕ್ಕನ್ನು ಶ್ರಾದ್ಧದಂದು ಮಾತ್ರ ಯಾಕೆ ಕಟ್ಟಿ ಹಾಕುತ್ತಿದ್ದೆ ಎಂದು ಅಪ್ಪ ಹೇಳಿಕೊಡಲಿಲ್ಲ. ಮಗನೂ ಈ ಬಗ್ಗೆ ಕೇಳಿ ತಿಳಿದುಕೊಂಡಿರಲಿಲ್ಲ. ಕಾಲಾನಂತರದಲ್ಲಿ ಯಜಮಾನರು ತೀರಿಕೊಂಡರು. ಅವರು ಸಾಕಿದ ಬೆಕ್ಕು ಕೂಡ ಸತ್ತು ಹೋಗಿತ್ತು.
ಈಗ ಮಗನಿಗೆ ತನ್ನ ಅಪ್ಪನ ತಿಥಿ ಮಾಡುವ ಸರದಿ. ತನ್ನ ತಂದೆಯವರು, ಬೆಕ್ಕನ್ನು ಕಟ್ಟಿದ ನಂತರವೇ ಶ್ರಾದ್ಧದ ವಿಧಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದುದನ್ನು ನೋಡಿ ಬೆಳೆದ ಇವನು, ಅದು ಶ್ರಾದ್ಧದ ಸಂಪ್ರದಾಯ ಎಂದೇ ತಿಳಿದಿದ್ದ. ಮನೆಯ ಬೆಕ್ಕು ಸತ್ತು ಹೋಗಿದ್ದುದರಿಂದ, ಹೇಗೋ ಕಷ್ಟಪಟ್ಟು ಬೆಕ್ಕೊಂದನ್ನು ತಂದು ಅದನ್ನು ಕಂಬಕ್ಕೆ ಕಟ್ಟಿ ಹಾಕಿ ಶ್ರಾದ್ಧದ ಕೆಲಸಕ್ಕೆ ತೊಡಗಿದ.
ಬೆಕ್ಕು ಸರ್ವಸ್ವತಂತ್ರವಾಗಿ ಓಡಾಡುತ್ತಿರುವ ಪ್ರಾಣಿ. ಮೊದಲೇ ಅಪರಿಚಿತ ಬೆಕ್ಕು, ಮೇಲಾಗಿ ಕಂಬಕ್ಕೆ ಕಟ್ಟಿ ಹಾಕಿದಾಗ ಸುಮ್ಮನಿರುವುದೇ ? ರಂಪವೋ ರಂಪ. ಇದರ ಗಲಾಟೆ ತಾಳಲಾರದೆ, ಪುರೋಹಿತರು ” ಆ ಬೆಕ್ಕನ್ನು ಯಾಕೆ ಕಟ್ಟಿ ಹಾಕಿದ್ದೀಯ, ಬಿಟ್ಟುಬಿಡಬಾರದೇ…ಶ್ರಾದ್ಧದ ಬದಲು ಬೆಕ್ಕಿಗೆ ಗಮನ ಕೊಡುವಂತಾಯಿತು “ ಎಂದರು.
“ಎಲ್ಲಾದರೂ ಉಂಟೆ, ಅಷ್ಟು ಕಷ್ಟ ಪಟ್ಟು ಬೆಕ್ಕನ್ನು ಹಿಡಿದು ತಂದಿದ್ದೇನೆ, ಅದನ್ನು ಕಟ್ಟಿ ಹಾಕುವುದು ಶ್ರಾದ್ಧದ ಅವಿಭಾಜ್ಯ ಅಂಗವಲ್ಲವೇ?….ಅದು ನಮ್ಮ ತಂದೆಯವರು ಆಚರಿಸುತ್ತಿದ್ದ ಸಂಪ್ರದಾಯ..” ಎಂದು ಮಗ ಉತ್ತರಿಸಿದ!
“ಅಯ್ಯೋ ಮರುಳೇ, ಇದ್ಯಾವ ಸಂಪ್ರದಾಯ, ಬೆಕ್ಕಿಗೆ ಏನು ಗೊತ್ತಾಗುತ್ತದೆ, ಶ್ರಾದ್ಧದ ದಿನ ಅತ್ತಿತ್ತ ಓಡಾಡಿ ತೊಂದರೆ ಕೊಡದಿರಲೆಂದು ನಿಮ್ಮ ಅಪ್ಪ ಅದನ್ನು ಕಟ್ಟಿ ಹಾಕುತ್ತಿದ್ದರು…ಯಾವುದೇ ವಿಷಯವನ್ನು ಅರ್ಥಮಾಡಿಕೊಳ್ಳದೆ ಆಚರಿಸಬಾರದು…..” ಎಂದು ಪುರೋಹಿತರು ಮಾರುತ್ತರಿಸಿದರು!
– ಹೇಮಮಾಲಾ.ಬಿ
ಈ ಕಥೆ ನನ್ನ ಅಪ್ಪ ಎಡೆಗೆಡೆಗೆ ಹೇಳಿ ಕೇಳಿದ್ದೇನೆ. ತುಂಬಾ ಅರ್ಥವತ್ತಾದ ಸ್ವಾರಸ್ಯವಾದ ಕಥೆ
Appa belisida aalada marake nenu hakikoloke agutta
ನಿಜ ನಮ್ಮಲ್ಲಿ ಅದೆಷ್ಟೋ ಆಚರಣೆಗಳು
ಅಜ್ಜ ನೆಟ್ಟ ಆಲದಮರ ದಂತೆ ಹೀಗೇ ನಡೆಯುತ್ತಲಿದೆ
ಅರಿತು ಆಚರಿಸುವುದು ಸಂಸ್ಕಾರಕ್ಕೂ ಆಚರಣೆಗೂ ಸಲ್ಲುವ ಗೌರವ
ಅರಿವುಣಿಸುವ ಲೇಖನಕ್ಕೆ ಧನ್ಯವಾದಗಳು
ಶ್ರೀ ಗೋಪೀನಾಥ್ ಅವರೇ, ಧನ್ಯವಾದಗಳು.
ಸುರಹೊನ್ನೆಗೆ ಬರಹಗಳನ್ನು ಕಳುಹಿಸುವುದರ ಜತೆಗೆ, ಇತರ ಲೇಖಕರ ಬರಹಗಳನ್ನು ಓದಿ, ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವ ನಿಮಗೆ ಅನಂತ ವಂದನೆಗಳು.
ನಮ್ಮಲ್ಲಿ ಆಚರಿಸುತ್ತಿರುವ ಬಹಳಷ್ಟು ಸಂಪ್ರದಾಯಗಳ ಕತೆ ಇದೇ ಅಲ್ಲವೇ ?
ಆಧಾರ ರಹಿತ ಆಚರಣೆಗಳು.
🙂 good story…mam
ಧನ್ಯವಾದಗಳು.