ಹೊಸ ಓದು: ‘ಮನು ಇನ್ ಕಿಷ್ಕಿಂಧಾ’
‘ ಮಕ್ಕಳಾಟವು ಚಂದ ಮತ್ತೆ ಯೌವನ ಚಂದ’ ಹೀಗೆ ಸಾಗುತ್ತದೆ ಜನಪದ ಹಾಡಿನ ಸೊಲ್ಲೊಂದು. ಬೊಚ್ಚು ಬಾಯಗಲಿಸಿ ಕಣ್ಣರಳಿಸಿ ನಗುವ ಎಳೆಯ ಕಂದನ ಮುಗ್ಧ ಆತ್ಮ ವಿಶ್ವಾಸ, ಎದ್ದು ಬಿದ್ದು ನಡೆಯುವ ನಿರ್ಮಲ ಚಿತ್ತ ಹಾಗೂ ಛಲದಿಂದ ನಾವು ಕಲಿಯಬೇಕಾದದ್ದು ಬೇಕಾದಷ್ಟಿದೆ. ಹಾಗಿದ್ದೂ ಮಕ್ಕಳ ಮನಸ್ಸಿನ ಕನವರಿಕೆಗಳು, ಮನಸ್ಸಿನ ನಲ್ಮೆ ಕಾತರ ಮುಗ್ಧ ಆತಂಕಗಳನ್ನು ನಾವು ಅರಿಯಲು ಪ್ರಯತ್ನಿಸುವುದು ಕಡಿಮೆಯೇ. ನಮ್ಮ ವಿದ್ಯಾಭ್ಯಾಸ ಪದ್ಧತಿ, ರಾಜಕೀಯ ಮೊದಲುಗೊಂಡು ಸಾಮಾಜಿಕ ಸಂಸ್ಠೆಗಳು ಎಲ್ಲವೂ ದೊಡ್ಡವರನ್ನು ಕೇಂದ್ರೀಕರಿಸಿರುವಂತದ್ದು. ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಮಗು ಮನಸ್ಸನ್ನು ಅರಳಿಸಿ ಬೆಳೆಸುವಲ್ಲಿ ಅಪಾರ ಪಾತ್ರ ವಹಿಸುತ್ತದೆ.
ಆವು ಚಿಕ್ಕವರಾಗಿರುವಾಗ ಚಂದ ಮಾಮ, ಬಾಲಮಂಗಳ, ಬಾಲಮಿತ್ರ, ಪುಟಾಣಿ,, ಪಂಚತಂತ್ರ ಕಥೆಗಳು, ಭಾಗವತ, ಹೀಗೆಲ್ಲ ನಮ್ಮ ಕಥಾ ಪ್ರಪಂಚವಿತ್ತು. ಇನ್ನು ನಮ್ಮ ಪ್ರೀತಿಯ ಅಜ್ಜಿ ದೋಸೆ, ಕಡುಬು ಎಂದೆಲ್ಲ ಅಕ್ಕಿ, ಉದ್ದು ರುಬ್ಬುತ್ತಲೇ ಕಥೆ ಹೇಳಿ ನಮ್ಮ ಮನಸ್ಸನ್ನು ವಿಸ್ತರಿಸಿದ ಬಗೆ ನೆನೆದರೆ ಕಣ್ಣು ಹನಿಗೂಡುತ್ತದೆ. ಹೆಚ್ಚು ಹೆಚ್ಚು ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಈ ಸಂದರ್ಭದಲ್ಲಿ ಆಂಗ್ಲ ಭಾಷೆಯಲ್ಲಿಯೇ ಅವರು ಕತೆಗಳನ್ನು ಓದುತ್ತಿರುವುದು ವಾಸ್ತವ. ಈ ನಿಟ್ಟಿನಲ್ಲಿ ಪ್ರಭಾಕರ ಆಚಾರ್ಯ ಅವರ ‘ಮನು ಇನ್ ಕಿಷ್ಕಿಂಧಾ” ಒಂದು ಅತ್ಯುತ್ತಮ ಓದು ಆಗಿದೆ.
ಮನು ಎಂಬ ಹನ್ನೊಂದು ವಯಸ್ಸಿನ ಹುಡುಗ ತನ್ನ ತಂದೆ ತಾಯಿಯರೊಂದಿಗೆ ಮಥೇರನ್ ಎಂಬ ಹಿಲ್ ಸ್ಟೇಶನ್ ಗೆ ಹೋಗಿದ್ದಾಗ ಆಕಸ್ಮಿಕವಾಗಿ ಕುದುರೆಯಿಂದ ಆಳವಾದ ಕಣಿವೆಗೆ ಬೀಳುತ್ತಾನೆ. ( ಅವನಿಗೆ ಕುದುರೆ ಸವಾರಿ ಎಂದರೆ ಬಲು ಇಷ್ಟ) . ಇಲ್ಲಿನ ವೈಶಿಷ್ಟ್ಯ ವೆಂದರೆ ಆತ ಕಾಲದಲ್ಲಿ ಹಿಂದಕ್ಕೆ ಅಂದರೆ ತ್ರೇತಾಯುಗಕ್ಕೆ ಅದರಲ್ಲೂ ಕಿಷ್ಕಿಂಧೆಗೆ ಹೋಗುತ್ತಾನೆ. ಕಿಷ್ಕಿಂಧೆಯಲ್ಲಿ ಅದು ಸಂಕ್ರಮಣ ಕಾಲ. ರಾಮಾಯಣದಲ್ಲಿ ಸೀತೆಯನ್ನರಸಿ ಬಂದ ರಾಮ, ಲಕ್ಷ್ಮಣರಿಗೆ ವಾನರ ಸೇನೆ ಸಹಾಯ ಮಾಡುವ ಸಂಧಿ ಕಾಲ. ಈ ಸಂದರ್ಭದಲ್ಲಿ ಮನುವಿಗಾದರೋ ಭವಿಷ್ಯದಿಂದ ಬಂದವನಾದ್ದರಿಂದ ಮುಂದೆ ಏನಾಗುತ್ತದ ಎಂದು ಮಕ್ಕಳ ರಾಮಾಯಣ ಓದಿ ಗೊತ್ತು. ಮನು ಅಲ್ಲಿ ತನ್ನ ಸಹಜ ಕುತೂಹಲದಿಂದ ಎಲ್ಲರ ಕಣ್ಮಣಿಯಾಗುತ್ತನೆ, ಬಿಲ್ವಿದ್ಯೆ ಕಲಿಯುತ್ತಾನೆ, ಅಲ್ಲಿನ ವಾನರ ಪುಟಾಣಿಗಳಿಗೆ ಕ್ರಿಕೆಟ್ ಕೂಡ ಕಲಿಸುತ್ತಾನೆ, ಅಷ್ಟು ಸಾಲದ್ದಕ್ಕೆ ಒಂದು ರಾಕ್ಷಸನನ್ನು ಕೊಲ್ಲುತ್ತಾನೆ, ಒಂದು ರಾಜಕುಮಾರಿಯನ್ನು ರಕ್ಷಿಸುತ್ತಾನೆ! ಸಾಕಲ್ಲವೆ ಮಕ್ಕಳ ಮನ ಮುದಗೊಳಿಸಲು! ಇಲ್ಲಿ ಸಾಹಸವಿದೆ, ಉತ್ಸಾಹವಿದೆ, ಒಂದು ಉಪ ಪಠ್ಯದಂತೆ ಜೀವನದ ದಾರ್ಶನಿಕತೆಯೂ ಇದೆ. ಅಲ್ಲಿ ಎಷ್ಟು ಚೆನ್ನಾಗಿದ್ದರೂ ಮನುವಿಗೆ ತನ್ನ ತಂದೆ, ತಾಯಿ, ಜಗಳವಾಡಲು ಪುಟ್ಟ ತಂಗಿ ಎಲ್ಲ ನೆನಪಾಗುತ್ತಾರೆ. ಹನುಮಂತ, ರಾಮ, ಲಕ್ಷ್ಮಣ, ಸುಗ್ರೀವ ಎಲ್ಲರನ್ನು ಅವನು ಭೇಟಿಯಾಗುತ್ತಾನೆ. ಹನುಮಂತನ ಸಹಾಯ ಹಾಗೂ ತನ್ನ ಅಚಲ ಇಚ್ಛಾ ಶಕ್ತಿ ಹಾಗೂ ಏಕಾಗ್ರತೆಯಿಂದ ಅವನು ಮರಳಿ ತನ್ನ ಲೋಕಕ್ಕೆ ಬರುತ್ತನೆ.
ಅರ್ಥಾತ್ ಅವನಿಗೆ ಮೂರು ದಿನಗಳ ನಂತರ ಎಚ್ಚರವಾಗುತ್ತದೆ. ತನ್ನೆಲ್ಲ ಸ್ಮೃತಿಗಳು ಅವನಿಗೆ ‘ರಿಯಲ್’ ಆಗಿದ್ದರೂ ತನ್ನ ಕಥೆಯನ್ನು ಯಾರೂ ನಂಬುವುದಿಲ್ಲವೆಂದು ಅವನಿಗೆ ಗೊತ್ತು. ಹೀಗಾಗಿಯೇ ಅವನು ತನ್ನ ನೆಚ್ಚಿನ ‘ಅಂಕಲ್’ ಗೆ ಮಾತ್ರ ಈ ಕಥೆಯನ್ನು ಹೇಳುತ್ತಾನೆ ಹಾಗೂ ಈ ಅಂಕಲ್ ಈ ಅನುಭವಗಳನ್ನು ಮೂರು ವರ್ಷಗಳ ಅವಧಿಯಲ್ಲಿ ದಾಖಲಿಸುತ್ತಾನೆ.
ಪ್ರಭಾಕರ ಆಚಾರ್ಯರು ಮುಂಬೈ ಯುನಿವರ್ಸಿಟಿಯಲ್ಲಿ ಆಂಗ್ಲ ಭಾಷೆಯಲ್ಲಿ ಪ್ರೊಫ಼ೆಸರ್ ಆಗಿ ನಿವೃತ್ತರಾದವರು. ಕನ್ನಡ, ಆಂಗ್ಲ ಭಾಷೆಗಳೆರಡರಲ್ಲೂ ಅವರಿಗೆ ಅಪಾರ ಪರಿಣತಿ. ಈ ಪುಸ್ತಕವಲ್ಲದೆ ‘ ದ ಸುರಗಿ ಟ್ರೀ’ ಎಂಬ ಆಂಗ್ಲ ಕೃತಿ ಹಾಗೂ ‘ ಕವಿತೆಯ ಓದು’ ಎಂಬ ವಿಮರ್ಶಾ ಕೃತಿಯನ್ನು ರಚಿಸಿರುತ್ತಾರೆ. ಹಾಗಿದ್ದರೂ ಅವರ ಈ ಕೃತಿಯಲ್ಲಿ ಬೌದ್ಧಿಕತೆಯ ಭಾರಕ್ಕಿಂತ ಕಲ್ಪನೆ, ಸರಳತೆಯೇ ಪ್ರಧಾನವಾಗಿದ್ದು ಮಕ್ಕಳಿಗೆ ಮನ ಮುಟ್ಟುವಂತೆ ಇದೆ. ಮನು ಕಿಷ್ಕಿಂಧೆಯಲ್ಲಿ ಮಾಡುವ ಸಾಹಸಗಳು, ಬಾಲ್ಯ ಸಹಜ ತುಂಟತನಗಳು ಹೀಗೆ ಈ ಪುಸ್ತಕ ಹೃದ್ಯವಾಗಿದೆ. ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಪ್ರಾವೀಣ್ಯ ಇರುವ ಪ್ರಭಾಕರ ಆಚಾರ್ಯರವರ ಲೇಖನಿಯಲ್ಲಿ ಇನ್ನೂ ಈ ರೀತಿಯ ಸದಭಿರುಚಿಯ ಕೃತಿಗಳು ಮೂಡಿ ಬರಲಿ ಎಂದು ಹಾರೈಕೆ.ಈ ಹ್ಯಾರಿ ಪಾಟರ್ ಜಮಾನದಲ್ಲಿ ನಮ್ಮ ಜಾನಪದ, ಕಲೆ, ಮೌಖಿಕ ಪುರಾಣಗಳ ಮರು ಓದು, ಹೊಸದಾಗಿ ಅರ್ಥೈಸಿಕೊಳ್ಳುವಿಕೆ ಕಾಲದ ಅಗತ್ಯವೂ ಸಾಮೂಹಿಕ ಪ್ರಜ್ನೆಯನ್ನು ರೂಪಿಸುವಲ್ಲಿ ಮಹತ್ವವುಳ್ಳದ್ದೂ ಆಗಿದೆ. ವಿಶಿಷ್ಟವಾದ ‘ಮ್ಯಾಜಿಕ್ ರಿಯಲಿಸಮ್ ನಿರೂಪಣಾ ತಂತ್ರವನ್ನು ಲೇಖಕರು ಅತ್ಯಂತ ಯಶಸ್ವಿಯಾಗಿ ಇಲ್ಲಿಬಳಸಿಕೊಂಡಿದ್ದಾರೆ.
.
– ಜಯಶ್ರೀ ಬಿ ಕದ್ರಿ
ಚಂದದ ಲೇಖನ
Nice to know…good review .
Good review.. Well written.. 🙂
ಓಹ್
ಸುಂದರ ಓದು
ನಿಜ ನಾನೂ ಎಳಮೆಯಲ್ಲಿ ಚಂದಮಾಮದ ಕಥೆಯ ಜತೆಗೇ ಬೇಳೆದವನು
ತಂದೆ ಚಿಕ್ಕಪ್ಪ ಸಂಭಂಧಿಕರೆಲ್ಲರಲ್ಲೂ ಅಧ್ಯಾಪಕ ವೃತ್ತಿಯವರು
ಕತೆಗಳ ಕಿನ್ನರ ಲೋಕ ಅಚ್ಚು ಮೆಚ್ಚು
ಉತ್ತಮ ಲೇಖನ ಇಷ್ಟವಾಯಿತು…:)