ಡಾರ್ಜೀಲಿಂಗ್ ನ ಟೈಗರ್ ಹಿಲ್- ಸೂರ್ಯೋದಯದ ಚೆಲುವು
ಪಶ್ಚಿಮ ಬಂಗಾಳದ ಡಾರ್ಜೀಲಿಂಗ್, ಚಹಾ ಎಸ್ಟೇಟ್ ಗಳ ಮತ್ತು ಅದ್ಭುತ ಪ್ರಾಕೃತಿಕ ಸೌಂದರ್ಯದ ನೆಲೆವೀಡು. ಅದಕ್ಕೂ ಮಿಗಿಲಾಗಿ ನೂತನ ವಿವಾಹಿತ ಜೋಡಿಗಳ ಮಧುಚಂದ್ರದ ತಾಣ. ಅಲ್ಲಿ ಮೂರುದಿನಗಳ ಕಾಲ ತಂಗುವ ಅವಕಾಶ ಒದಗಿ ಬಂದಿತ್ತು.
.
ನಾವು ಬಾಗ್ ದೋಗ್ರಾ ಏರ್ ಪೋರ್ಟ್ ತಲಪಿದಾಗ ಸಂಜೆ. ಕಡಿದಾದ ಏರುವ ರಸ್ತೆ. ಮೇಲೆ ನೋಡಿದರೆ ಬಾನು ಮುಟ್ಟುವ ಬೆಟ್ಟ, ಕೆಳಗೆ ಕಂಡಾಗ ಪ್ರಪಾತದ ರೀತಿಯ ಆಳ ಕಣಿವೆ. ಬಿದ್ದರೆ ಎಲುಬಿನ ಚೂರು ಕೂಡಾ ಸಿಕ್ಕದ ದುರ್ಗಮ ಕಣಿವೆ. ಆ ಎಡೆಯಲ್ಲಿ ಕಂಡದ್ದೆಲ್ಲ ಕಣ್ತುಂಬಿಕೊಳ್ಳುವಾಸೆ. ನಮ್ಮ ಆಗುಂಬೆ ಘಾಟಿಯ ರಸ್ತೆ ಈ ರಸ್ತೆಯ ಮಿನಿಯೇಚರ್. ನಮ್ಮ ವಾಹನದ ಚಾಲಕ ಬಲು ಜಾಗರೂಕತೆಯಿಂದ ಕರೆದೊಯ್ಯುತ್ತಿದ್ದರು. ಸುಮಾರು ಮೂರು ಘಂಟೆಗಳ ಕಾಲ ಪ್ರಯಾಣಿಸಿ “ಕೃಷ್ಣಾ ರೆಸಿಡೆನ್ಸಿ”ಗೆ ತಲಪಿಸಿದ್ದರು. ಮೊದಲೇ ವಸತಿ ವ್ಯವಸ್ಥೆ ಆಗಿದ್ದರಿಂದ ರಾತ್ರೆಯ ಡಾರ್ಜೀಲಿಂಗ್ ಆಹಾರದ ಊಟ ಮುಗಿಸಿ ಕ್ವಿಲ್ಟ್ ಎಳೆದು ನಿದ್ದ್ರೆಗೆ ಜಾರಿದ್ದೆವು.
.
ಟೈಗರ್ ಹಿಲ್–ಅದ್ಭುತ ಸೌಂದರ್ಯದ ಸೂರ್ಯೋದಯವಾಗುವ ಜಾಗ.ಅಲ್ಲಿ ಆ ಚೆಲುವನ್ನು ನೋಡಿದ್ದು ಮರೆಯಲಾಗದ ಅನುಭವ. ಬೆಳಗಿನ ಜಾವ ಮೂರು ಘಂಟೆಗೆ ಎದ್ದು ಖಾಲಿ ಕಾಫಿ ಹೀರಿ ವಾಹನ ಹತ್ತಿದ್ದೆವು. ಅದಾಗಲೇ ರಸ್ತೆಯುದ್ದಕ್ಕೆ ಟೈಗರ್ ಹಿಲ್ ಗೆ ಹೊರಟ ವಾಹನಗಳ ಸಾಲು್. ಸಮುದ್ರ ಮಟ್ಟದಿಂದ 8000 ಅಡಿ ಎತ್ತರದಲ್ಲಿದ್ದೆವು . ಥರಗುಟ್ಟುವ ಛಳಿಯಲ್ಲಿ ನಮ್ಮ ಸ್ವೆಟರ್, ಗ್ಲೌಸ್, ಕಾಲ್ಚೀಲ, ಕ್ಯಾಪ್ ಇದ್ದರೂ ನಡುಗುತ್ತಿದ್ದೆವು. ಸುಮಾರು ಹನ್ನೆರಡು ಕಿ. ಮಿ. ಪ್ರಯಾಣಿಸಿದಾಗ ವಾಹನ ನಿಲ್ಲಿಸಿ ಸ್ವಲ್ಪ ದೂರ ಕಾಲು ಹಾದಿಯ ನಡಿಗೆ. ಹತ್ತುವ ದಾರಿಯಲ್ಲಿ ನಡೆದು ಮೇಲೇರಿದಾಗ ವಿಸ್ತಾರದ ಬಯಲು ಪ್ರದೇಶ. ಸೂರ್ಯೋದಯ ವೀಕ್ಷಣೆಗಾಗೇ ಏರ್ಪಡಿಸಿದ ಮೈದಾನ. ತುಂಬಾ ಎತ್ತರದಲ್ಲಿದ್ದ ನಾವು ಉಸಿರಾಟಕ್ಕೆ ಬಾಯಿತುಂಬ ಗಾಳಿ ಎಳೆದುಕೊಳ್ಳಬೇಕಿತ್ತು. ರೇಲಿಂಗ್ ಬದಿಯ ಜಾಗ ನಿಲ್ಲಲು ಸಿಕ್ಕಿತ್ತು. ಕಣ್ಣೆದುರು ಆಕಾಶಕ್ಕೆ ತಗಲುವ ಹಿಮಾಲಯನ್ ಶ್ರೇಣಿ. ಎಲ್ಲೆಲ್ಲೂ ಅಪಾರವಾದ ಹಿಮದ ರಾಶಿ ರಾಶಿ. ಅದರದೇ ಹೊದಿಕೆ ಬೆಟ್ಟಗಳಿಗೆ. ಒಂದು ಬದಿಗೆ “ಎವರೆಸ್ಟ್” ಎಂದು ಅಲ್ಲಿನ ಗೈಡ್ ಕೈ ತೋರಿದ್ದ. ಕಾಂಚನ್ ಜುಂಗಾ ಪರ್ವತ ” ನಾನೊಮ್ಮೆ ಮೈ ಕೊಡವಿದರೆ ನೀನೆಲ್ಲಿರ್ತೀಯ?” ಎಂಬ ಧೋರಣೆಯಲ್ಲಿ ಅಗಾಧವಾಗಿ ನಿಂತಿತ್ತು. ಅಪಾರವಾದ ಶೈತ್ಯ ತಡೆಯಲಾಗದೆ ನಮ್ಮ ಕೈಕಾಲು , ಮುಖ , ಮೂಗು, ತುಟಿ ಮರಗಟ್ಟುವ ಅನುಭವ! ಅಷ್ಟರಲ್ಲಿ ದೇವತೆಯೇ ಪ್ರತ್ಯಕ್ಷವಾದ ಹಾಗೆ ಸುಡು ಸು್ಡು ಕಾಫಿಯ ಜಗ್ ಹಿಡಿದು ಕಾಫಿವಾಲೆಯ ಆಗಮನವಾಗಿತ್ತು. ಹತ್ತು ರೂಪಾಯಿಗೆ ಕೊ್ಟ್ಟ ಕಾಫಿ ಪುಟ್ಟ ಕಪ್ ನಲ್ಲಿ ಎಣಿಸಿ ಅರ್ಧ ಗುಟುಕು! ಅಲ್ಲಿನ ಮನೆ ಮನೆಯ ಯುವತಿಯರಿಗೆ ಇಲ್ಲಿ ಕಾಫಿ, ಚಹಾ, ಒದಗಿಸುವ ಉದ್ಯೋಗವೇ ಕೈತುಂಬ ಕಾಂಚಾಣ ತರುತ್ತದೆ.
ಪ್ರವಾಸಿಗಳ ಸಂಖ್ಯೆ ಏರುತ್ತಿತ್ತು. ಹಿಂದೆ ಮುಂದೆ ಅವರದೇ ಸಾಮ್ರಾಜ್ಯ. ದಪ್ಪಗಿನ ಸ್ವೆಟರ್, ಟೋಪಿ, ಕೈಕಾಲಿನ ಗ್ಲೌಸ್ ಮಾತ್ರಾ ಕಾಣುತ್ತಿತ್ತು ಎಲ್ಲೆಡೆ. ಆಗ ಘಂಟೆ ನಾಲ್ಕೂವರೆ . ಎದುರಿನ ಕಾಂಚನ್ ಜುಂಗಾದ ತುತ್ತ ತುದಿಯಲ್ಲಿನ ಹೊಳೆಹೊಳೆಯುವ ಮಂಜು ಕ್ರಮೇಣ ನಸು ಪಿಂಕ್ ಬಣ್ಣಕ್ಕೆ ವಾಲುತ್ತಿತ್ತು. ರೇಲಿಂಗ್ ಹಿಡಿದು ಪ್ರವಾಸಿಗರು ಮುನ್ನುಗ್ಗಿದ ಭಾರಕ್ಕೆ ಅದೆಲ್ಲಾದರೂ ಮುರಿದು ಬಿದ್ದರೆ ಏನೂ ಆಗ ಬಹುದು. ಪ್ರಪಾತದ ಬುಡಕ್ಕೇ ಅರೆಕ್ಷಣದಲ್ಲಿ ಸೇರುವ ದೌರ್ಭಾಗ್ಯ. ಕಾಫಿದಾತೆಯರು ಸರಾಗವಾಗಿ ನುಸುಳಿ ಕಾಫಿ, ಚಹಾ ಪೂರೈಸುತ್ತಿದ್ದರು. ಕಾಂಚನ್ ಜುಂಗಾ ಇದೀಗ ಕೇಸರಿಮಯವಾಗಿತ್ತು. ಎಲ್ಲೆಡೆ ಈ ಅಪೂರ್ವ ಸೊಬಗಿಗೆ ಹರ್ಷೋದ್ಗಾರ! ಬೆಳ್ಳಿ ಬೆಟ್ಟದ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿವ ಆತುರ! ಅಷ್ಟರಲ್ಲಿ ಸೂರ್ಯ ಉದಯಿಸುವ ಮೊದಲ ಹಂತ. ಕೇಸರಿ ಬಣ್ಣದ ಚೆಂಡಿನಾಕಾರದಲ್ಲಿ ಭಾನುದೇವ ದರ್ಶನ ಕೊಟ್ಟಿದ್ದ. ಆ ಸುವರ್ಣ ಘಳಿಗೆಯ ಚೆಲುವು ವರ್ಣಿಸಲು ಪದಗಳು ಸಾಲದು. ನೋಡನೋಡುತ್ತಿದ್ದ ಹಾಗೆ ಸೂರ್ಯ ಮೇಲೆ ಮೇಲೆ ಏರುತ್ತಿದ್ದ. ಇಡಿಯ ಕಾಂಚನ್ ಜುಂಗಾ ಶೋಭಾಯಮಾನ. ಬೆಳ್ಳಿ ಬೆಳಕು ಡಾರ್ಜೀಲಿಂಗ್ ನ ಹಿಮಾಚ್ಚಾದಿತ ಪ್ರಕೃತಿಯ ಮೇಲೆ ಫಳ ಫಳಿಸುತ್ತಿತ್ತು. ಹತ್ತೇ ನಿಮಿಷದಲ್ಲಿ ಟೈಗರ್ ಹಿಲ್ ಖಾಲಿ.! ಸ್ವಲ್ಪ ಹೊತ್ತಿಗೆ ಸೇರಿದ್ದ ಸಾವಿರಾರು ಪ್ರವಾಸಿಗರು ಬೆಟ್ಟ ಇಳಿಯುತ್ತ ತಮ್ಮ ತಮ್ಮ ವಾಹನ ಅರಸುತ್ತಿದ್ದರು. ಹಿಮದ ಹಾಸು ಹೊದ್ದ ರಸ್ತೆಯ ತುಂಬ ಗಿಜಿಗುಡುವ ಸಾಲು ಸಾಲು ವಾಹನಗಳು.
ನಾವು ನಮ್ಮ ವಾಹನದ ಬಳಿ ತಲಪಬೇಕಾದರೆ ಛಳಿಯಿಂದ ಮರಗಟ್ಟುತ್ತಿತ್ತು. ನೇರವಾಗಿ ವಸತಿಗೆ ಬಂದು ಹಾಸಿಗೆ ಸೇರಿ ಬೆಚ್ಚಗೆ ಮಲಗಿದ್ದೆವು. ಮುಚ್ಚಿದ ಕಣ್ಣು ತುಂಬಾ ತುಂಬಿದ್ದು ಅಪೂರ್ವ ಸೊಬಗಿನ ಸೂರ್ಯೋದಯದ ಅದ್ಭುತ ದೃಶ್ಯ. ಸಹಿಸಲೇ ಆಗದ ಶೈತ್ಯದ ವಾತಾವರಣ. ಹಾಗಿದ್ದರೂ ನಾವು ಆ ಚೆಲುವಿನ ಚಿತ್ತಾರದ ಸೊಬಗು ಎಲ್ಲವನ್ನು ಮರೆಸಿ ಉಳಿಸಿದ್ದು ಅಗಾಧ ಎತ್ತರಕ್ಕೆ ಮೈಚಾಚಿ ಹಿಮವನ್ನು ಹಾಸಿ ಹೊದ್ದ; ಬಾನು ಮುಟ್ಟುವ ಕಾಂಚನ್ ಜುಂಗಾ ;
” ನಿನಗಿಂತಲೂ ಮೇಲೆ ನಾನಿದ್ದೇನೆ; ತಲೆಯೆತ್ತಿ ನೋಡು ” ಎಂದು ಬಾನಿಗಿಡೀ ಕೇಸರಿ ರಂಗು ತುಂಬಿದ ಸೂರ್ಯದೇವ.
.
– ಕೃಷ್ಣವೇಣಿ ಕಿದೂರು
.
ಸೂಪರ್!
AMAZING