ಬಣಿವೆಯಲ್ಲಿ ಬೆಲ್ಲದ ಪೆಂಟಿ
ಹೊಟ್ಟಿನ ಬಣಿವ್ಯಾಗ ಬಾಳಕಕ್ಕ ಇಟ್ಟ ಬೆಲ್ಲದ ಹೋಳಗಿ ತುಪ್ಪ ಉಂಡಾವರಿಗೆ ಗೊತ್ತ ಅದರ ರುಚಿ ಮಹಾನವಮಿ ಹಬ್ಬದಾಗ ದೀಪಾವಳಿ ಪಾಡ್ಯದಾಗ ರೈತರ ಮನಿಯಾಗಿನ ಹುಗ್ಗಿ ತುಪ್ಪದ್ದ.
ನಮ್ಮ ಉತ್ತರ ಕರ್ನಾಟಕದಲ್ಲಿನ ಹಳ್ಳಿಗಳ ರೈತರ ಮನಿಯೋಳಗ ಪ್ರೀಜ್ ಇರೋದಿಲ್ಲಂದರು ಬ್ಯಾಸಿಗಿ ದಿನದಾಗ ತಣ್ಣನ ಮಜ್ಜಿಗೆ ನೀರಿಗೇನು ಕಡಿಮಿ ಇರೊದಿಲ್ಲರಿ ಮತ್ತ.ಹೀಂಗ ನಮ್ಮ ರೈತರಿಗೆ ಒಂದ ಆರ್ ಸಿ ಸಿ ಮೋಲ್ಡನಿ ಮನಿ ಕಟ್ಟಿಸಿ ಏರ್ ಕಂಡಿಶನ್ ಮಾಡಸಾಕಾಗದ ಹೋದರು ಹವಾನಿಂಯತ್ರಿತ ಗೋಡೌನ ಅನಸಗೋಳೊದ ನಮ್ಮ “ಹೊಟ್ಟಿನ ಬಣಿವಿ”ರಿ.
ಎಷ್ಷೇ ಸುಧಾರಿತ ಯಂತ್ರೋಪಕರಣ ಬಂದಿದ್ದರು ರೈತರಿಗೆ ಮಳಿಗಾಲಕ್ಕ ಎತ್ತಗೋಳ ಬೇಕ ಇಲ್ಲಂದರ ಹೊಲ ಹುಲ್ಲಗೂಡಿ ಅಡವಿ ಆಗೊದಂತು ಕಟ್ಟಿಟ್ಟ ಬುತ್ತಿ. ಮತ್ತ ಹೈನಿಲ್ಲದ ರೈತನ ಮನಿಯಿರಲಿಲ್ಲ ಅವಾಗ ಮೋಬೈಲ್ ಬೈಕ ಇಲ್ಲದ ಮನಿಯಿಲ್ಲ ಇವಾಗ.ಹೈನಕ್ಕ ಎಮ್ಮಿ ಆಕಳ ಸಾಕಷ್ಟ ಸಾಕಾವರ ಇವಕ್ಕೆಲ್ಲ ಮಳಿಗಾಲದಾಗ ಮೇಯಿಸೊದಕ್ಕ ರೈತರ ಅವರ ಹೊಲದಾಗಿನ ಗೆಜ್ಜಿಶೇಂಗಾ, ಬಳ್ಳಿಶೇಂಗಾ, ಗೋಧಿ,ಜ್ವಾಳಾ ಹಿಂಗ ಹಲವಾರ ಬೆಳೆನ ಹೊಟ್ಟ ಮಾಡಿ ಒಟ್ಟತಾರ ಅದರ ಹೆಸರ “ಬಣಿವಿ”.
ಒಂದ ವರ್ಷಕ್ಕಾಗುವಷ್ಟ ಹೊಟ್ಟಸೊಪ್ಪಿ ಸಂಗ್ರಹಿಸಿ ಬಣವಿ ಒಟ್ಟೊದ ಏನ ಸುಲಭದ ಮಾತಲ್ಲರಿ ಹೆಚ್ಚಿಗೆ ಇದ್ದಾವರ ಗುತ್ತಗೆ ಮ್ಯಾಳಕ್ಕ ಕೊಟ್ಟ ಒಟ್ಟಸತಾರ.ಇನ್ನ ಮದ್ಯಮ ವರ್ಗದ ರೈತರ ಅವರ ಮನಿಬಾಳೆ ಅವರ ಮಾಡಕೊಳಾವರ ಬಣಿವಿ ಒಟ್ಟೊದರಾಗ ಇರೂದ ಮಜಾ ನೋಡರಿ.ಕಣದಿಂದ ಮನಿ ಹಿತ್ತಲಕ ಚಕ್ಕಡಿಲೆ ಮಟ್ಟಿ ಕಟ್ಟಿ ಕಟ್ಟಿ ಹೊಟ್ಟ ಹೇರೂದರ ಮಜಾನ ಬ್ಯಾರೆ.ಎತ್ತಿನ ಕೊಂಬಿಗೆ ಗೊಂಡೆ ರಿಬ್ಬನ ಕಟ್ಟಿ ಹುರಗೆಜ್ಜಿಸರಾ ಹಾಕಿ ತೈ ತೈ ತೈ ಅಂತ ಎತ್ತಗೋಳ ಕುಣಸಗೋತ ಕೆಲಸಾ ಮಾಡಿ ಮಜಾ ತೊಗಂಡಾವರದಾಗ ನಾನು ಒಬ್ಬಾವ. ಎಸ್.ಎಸ್.ಎಲ್.ಸಿ.ಪರಿಕ್ಷೇ ಬರಿಯಾಕ ನಾ ಬ್ಯಾರೆ ಊರಾಗ ಇದ್ದಾಗ ನೀವೆಂಗ ಬಣಿವಿ ಒಟ್ಟಿದರಿ ಅಂತ ಒಂದ ವರ್ಷ ನಮ್ಮ ಚಿಕ್ಕಪ್ಪನ ಕೂಡ ಜಗಳಾ ಮಾಡಿದ ಮಗ ನಾನು ‘ರೈತನ ಮಗ’.
ಬಾರಿ ಸೀಸ್ತ ಬಣಿವಿ ಒಟ್ಟಾರವ ನಮ್ಮ ಬಾಬಾರ ಕ್ವಿಂಟಲ್ ಗಂಟಲೆ ಜ್ವಾಳಾ,ಗೋದಿ, ಸಿರಿದಾನ್ಯಗಳ ಬೀಜಗಳನ ಬಿತ್ತು ಸಮಯಕ್ಕ ಬರುವಂಗ ನುಸಿ ಇತರೆ ಕೀಟ ಬಧೆಗಳಿಂದ ಕಾಪಾಡಾಕ ಬಣಿವ್ಯಾಗ ಹಾಕಿ,ಬಣಿವಿ ಎತ್ತಾಗು ಬಾಗದಂಗ ಒಟ್ಟೊದೆನ ಸಾಮಾನ್ಯದ ಮಾತಲ್ಲರಿ.ಮಳಿಯ ನೀರ ಜಾರಿ ಹೋಗುವಂಗ ನೆಟ್ಟಗ ಬಣವಿ ಒಟ್ಟಗೊಂತ ಬತ್ತಹುಲ್ಲ ಹೊಚ್ಚಬೇಕು.ಹಿಂಗ ಒಟ್ಟುದರಾಗ ಹಾಕುವ ಸಾಮಗ್ರಿ ಒಂದ ಎರಡ ಅವು ವಾರಕ್ಕೆರಡು ಸಿಗುವ ಹಂಗ ಕೊಟ್ಟಿಗೆ ಸ್ವಚ್ಚಮಾಡೊ ತೊಗರಿ ಕಟಗಿ ಶೆಳ್ಳ ಕಟಿಗಿ(ಪೊರಕೆ). ಅಕ್ಕಡಿ ಕಾಳು ಪಲ್ಲೆಕ,ಒಣಗಿದ ಉಳ್ಳಾಗಡ್ಡಿ ಸಹಿತ ಬಣಿವ್ಯಾಗ ಹಾಕಿದರ ಆರತಿಂಗಳ ಮನಿಗೆ ಉಳ್ಳಾಗಡ್ಡಿ ಕೊಳ್ಳಂಗಿಲ್ಲ ಅಷ್ಟರೊಳಗ ಹೊಸಾ ಬೆಳೆ ತಯಾರ ಇರತದ.
ಮುಖ್ಯವಾದ ಪದಾರ್ಥವೆನೆಂದರೆ ಇಲ್ಲಿ ಬೆಲ್ಲ.ಹಬ್ಬಗಳಲ್ಲಿ ಬೆಲ್ಲದ ರೇಟುಗಳು ಏರುತ್ತವೆ.ನಾಕ ಕಾಸಿಗೆ ಕಾಸ ಕೂಡಿಸಿ ಇಟ್ಟ ರೊಕ್ಕ ಉಳಿತಾಯ ಮಾಡುದ ರೈತನ ಬಾಳೆವ.ಮೊದಲೆಲ್ಲ ಬೇಸಿಗೆಯಲ್ಲಿ ಮದುವೇ ಸಿಜನ್ನಗಳಲ್ಲಿ ರೈತರ ವಾಹನಗಳು ಸಂತೆಗೆ ಹೋದಾಗ ಮತ್ತ ಏನಾದರು ಉತ್ಪನ್ನಗಳನ್ನ ಮಾರಾಕ ಹೋದಾಗ ಹೆಚ್ಚಿಗೆ ಬೆಲ್ಲವನ್ನು ತಂದ ಅದನ್ನು ಸರಿಯಾಗಿ ಬಟ್ಟೆಗಳಲ್ಲಿ ಕಟ್ಟಿ ಬಣಿವೆಗಳಲ್ಲಿ ಹಾಕಿ ಹಬ್ಬಗಳಿಗೆ ಸರಿಯಾಗಿ ಒಂದೊಂದು ಐದು,ಹತ್ತು ಕೆಜಿ ಪೆಂಟಿಗಳು ಬರುವ ಹಾಗೆ ಹಾಕುತ್ತಿದ್ದರು.ಮತ್ತು ಹಂಗ ಹಾಕಿದ ಬೆಲ್ಲದ ರುಚಿಯು ಹೆಚ್ಚಾಗುತ್ತಿತ್ತು ಎನ್ನುವದು ಹಿರಿಯ ರೈತರ ಅನುಭವದ ನುಡಿಗಳು.
ಹೀಗೆ ಬರದ ಲೇಖನ ಓದಿ ಯಾರದರೂ ಬಣಿವಿಯನ್ನು ಕೆಡವಿ ಬೆಲ್ಲ ಕದಿಯಾಕ ಹ್ವಾದ ಗೀದಿರಿ ಮತ್ತ ಹಾಕಿದ ರೈತರ ಬಾರಕೋಲ ತೊಗಂಡು ನನ್ನ ಹುಡಕ್ಕೊಂಡ ಬಂದರ ನಾ ಏನ ಮಾಡಲಿ.ಇಗೆಲ್ಲ ಪ್ರಮುಖ ವಾಣಿಜ್ಯ ಬೆಳೆಯಾಗಿ ಬಿಟಿ ಹತ್ತಿ ಬಂದಿರೊದರಿಂದ ಯಾರು ದಾನ್ಯಗಳನ್ನ ಬೆಳಿತಾ ಇಲ್ಲ ಬೀಜಕ್ಕೂ ನವಣೆ,ಆಲಸಂದಿ,ಉದ್ದು, ಜವಾರಿ ಹೆಸರುಕಾಳು,ಅವರೆ ಹಿಂತಾ ಹಲವಾರು ಅಲ್ಪಾವಧಿ ಮತ್ತು ದಿರ್ಘಾವ಼ಧಿಯ ಬೆಳೆಗಳು ನಾಶವಾಗುತ್ತಿರುವದು ನಮ್ಮ ದೌರ್ಬಾಗ್ಯ.ರೈತರೆ ಜೋಳ ಗೋಧಿ ಅಕ್ಕಡಿಕಾಳುಗಳನ್ನ ಮಾರುಕಟ್ಟೆಯಿಂದ ಖರೀದಿಸುವ ಪರಿಸ್ಥಿತಿ ಬಂದೊದಗಿದೆ.ಇನ್ನ ಹೊಟ್ಟು ಮೇವುಗಳನ್ನ ಮಲೆನಾಡಿನಿಂದ ತಂದು ಚಾಪಕಟರ ಯಂತ್ರದಿಂದ ಪುಡಿ ಮಾಡಿ ಶೆಡ್ಡುಗಳಲ್ಲಿ ತುಂಬಿಸುತ್ತರುವದರಿಂದ ನಮ್ಮ “ಬಣಿವೆಗಳು” ಮಾಯವಾಗುತ್ತಿವೆ.
– ಬಸವರಾಜ ಜೋತಿಬಾ ಜಗತಾಪ (ಗೌಡಗಟ್ಟಿ ಬಸವಣ್ಣ)
ತುಂಬಾ ಚೆನ್ನಾಗಿದೆ. ಮಣ್ಣಿನ ಭಾಷೆಯ ಸೊಗಡು.
ದನ್ಯವಾದಗಳು
WONDERFUL
ಅದ್ಬುತವಾಗಿದೆ