ಆಲ್ ದಿ ಬೆಸ್ಟ್
ಮೊದಲ ಸುತ್ತಿನ ಸಂದರ್ಶನವನ್ನು ಆತ ಯಶಸ್ವಿಯಾಗಿ ಪೂರೈಸಿದ್ದ! ಅಚ್ಚರಿಯೇನಿಲ್ಲ…ಓದಿನಲ್ಲಿ ಆತ ರ್‍ಯಾ ಂಕ್ ಗಳಿಸಿದವನು.
ಎರಡನೆಯ ಸುತ್ತಿನ ಸಂದರ್ಶನ ನೇರವಾಗಿ ಆ ಕಂಪೆನಿಯ ಮ್ಯಾನೆಜಿಂಗ್ ಡೈರೆಕ್ಟರ್ ನೊಂದಿಗೆ. ಅವರ ಸಂದರ್ಶನದಲ್ಲಿ ಆಯ್ಕೆಗೊಳ್ಳುವುದೆಂದರೆ ಅದೊಂದು ಅಗ್ನಿ ಪರೀಕ್ಷೆ!
ಆತ ಡೈರೆಕ್ಟರ್ ಚೆಂಬರ್‌ನ ಬಾಗಿಲನ್ನು ಮೆಲ್ಲನೆ ತಳ್ಳಿ ಮೆಲುದನಿಯಲ್ಲಿ ಮೆ ಐ ಕಮಿನ್ ಸರ್…ಎಂದ
ಯಸ್ ಪ್ಲೀಸ್….
ಆತ ಡೈರೆಕ್ಟರ್ ಮುಂದೆ ನಿಂತ.
ಪ್ಲಿಸ್ ಸಿಡೌನ್.. ಡೈರೆಕ್ಟರ್ ಟೇಬಲ್ ಮೇಲೆ ಅದಾಗಲೆ ಅವನ ಕುರಿತಾದ ಮಾಹಿತಿಯ ಫೈಲ್ ಇತ್ತು. ಡೈರೆಕ್ಟರ್ ಫೈಲನ್ನೆತ್ತಿ ಅವನ ಶೈಕ್ಷಣಿಕ ದಾಖಲೆಗಳ ಮೇಲೆ ಕಣ್ಣಾಡಿಸಿದ.
ಸೊ ಯು ಆರ್ ಜೀನಿಯಸ್.. ಡೈರೆಕ್ಟರ್ ಅವನನ್ನು ಮಾತಿಗೆಳೆದ.
ಥ್ಯಾಂಕ್ಯೂ ಸರ್,
ದಟ್ಸ್ ಆಲ್ರೈಟ್…
ಮಿಸ್ಟ್ಟರ್…ನಿನ್ನ ಶಿಕ್ಷಣಕ್ಕೆ ನೀನೇನಾದರೂ ಸ್ಕಾಲರ್ ಶಿಪ್ ಪಡೆದಿದ್ದಿಯೇನು? ಡೈರೆಕ್ಟರ್ ಪ್ರಶ್ನಿಸಿದ.
ಯುವಕ ಹೆಮ್ಮೆಯಿಂದ ಬೀಗುತ್ತ ಹೇಳಿದ ನೋ ಸರ್…
ಮತ್ತೆ ನೀನು ಹೇಗೆ ನಿನ್ನ ಶಿಕ್ಷಣದ ಖರ್ಚು ವೆಚ್ಚಗಳನ್ನು ನಿಭಾಯಿಸಿದೆ..?
ನನ್ನ ತಂದೆ ತಾಯಿಗಳೇ ನನ್ನ ಶಿಕ್ಷಣದ ಖರ್ಚುವೆಚ್ಚಗಳನ್ನು ನಿಭಾಯಿಸಿದರು.
ಅವರೇನು ಮಾಡುತ್ತಿದ್ದಾರೆ…?
ನನ್ನ ತಾಯೊಂದಿಷ್ಟು ಮನೆಗಳಲ್ಲಿ ಮುಸುರೆ ತೊಳೆಯುವ, ಮನೆಯನ್ನು ಗುಡಿಸಿ, ಸಾರಿಸಿ ಒಪ್ಪವಾಗಿಡುವ ಕೆಲಸಗಳನ್ನು ಮಾಡುತ್ತಿದ್ದಾಳೆ.
ಮತ್ತೆ ನಿನ್ನ ತಂದೆ…?
ಸರ್, ಅವರು ಒಂದಿಷ್ಟು ಮನೆಗಳ ಬಟ್ಟೆಗಳನ್ನು ತೊಳೆದು ಇಸ್ತ್ರಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.
ಎಲ್ಲಿ ನಿನ್ನ ಎರಡು ಅಂಗೈಗಳನ್ನು ತೋರಿಸು…!
ಈ ಬೇಡಿಕೆ ಯುವಕನಿಗೆ ವಿಚಿತ್ರವೆನಿಸಿದರೂ ಆತ ತನ್ನ ಮೃದುಲವಾದ, ನಸುಕೆಂಪಾದ ತನ್ನೆರಡೂ ಅಂಗೈಗಳನ್ನು ಮುಂದೆ ಚಾಚಿದ.
ದಟ್ಸ್ ಗುಡ್… ಥ್ಯಾಂಕ್ಯೂ..
ಒಂದು ಪ್ರಶ್ನೆ. ಡೈರೆಕ್ಟರ್ ಮುಂದುವರಿಸಿದ..ನಿನ್ನ ಶಿಕ್ಷಣದ ಸಮಯದಲ್ಲಿ ನೀನು ನಿನ್ನ ತಂದೆ ತಾಯಿಗೇನಾದರೂ ಅವರ ಕೆಲಸದಲ್ಲಿ ನೆರವಾಗಿದ್ದೀಯ..?
ನೋ ಸರ್, ಅಂತಹ ಅವಕಾಶವನ್ನೇ ಅವರು ನನಗೆ ನೀಡಲಿಲ್ಲ. ನನ್ನ ಓದಿಗೆ ತೊಂದರೆಯಾಗಬಾರದು, ನಾನು ನನ್ನ ಪರೀಕೆಗಳಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದು ತೇರ್ಗಡೆಯಾಗಬೇಕೆಂಬುದು ಅವರ ಇಚ್ಛೆಯಾಗಿತ್ತು..!
ದಟ್ಸ್ ಆಲ್ ಫೈನ್. ನಿನ್ನ ಸಂದರ್ಶನ ಪೂರ್ತಿಯಾಗಿಲ್ಲ. ನಾಳೆ ಇದನ್ನು ಮುಂದುವರಿಸೋಣ. ಥ್ಯಾಂಕ್ಯೂ ಸರ್, ಯುವಕ ಚೆಂಬರ್‌ನಿಂದ ನಿರ್ಗಮಿಸುವುದಕ್ಕೆ ಬಾಗಿಲ ಬಳಿ ತೆರಳಿದ..
ಮಿಸ್ಟರ್ .. ಪ್ಲೀಸ್ ಎಸ್‌ಕ್ಯೂಸ್‌ಮಿ. ಇಫ್ ಯು ಡೋಂಟ್ ಮೈಂಡ್…ನೀನು ನನಗಾಗಿ ಒಂದು ಕೆಲಸ ಮಾಡಬೇಕು.
ಪ್ಲೀಸ್ ಟೆಲ್‌ಮಿ ಸರ್…ಇಟ್ಸ್ ಮೈ ಪ್ಲೆಶರ್.
ನೀನು ಇಂದು ಸಂಜೆ ನಿನ್ನ ಮನೆಗೆ ಹೋದವನು ನಿನ್ನ ತಂದೆತಾಯಿಯ ಎರಡು ಕೈಗಳನ್ನು ಚೆನ್ನಾಗಿ ತೊಳೆಯಬೇಕು, ಡೈರೆಕ್ಟರ್ ಯುವಕನಿಗೆ ಹೇಳಿದ.
ಆಲ್ ರೈಟ್ ಸರ್ ॒ಐ ವಿಲ್ ಡೂ ಇಟ್.. ಯುವಕನೆಂದ.
ಸಂಜೆ ಯುವಕ ಮನೆಯನ್ನು ತಲುಪಿದ. ತನ್ನ ತಂದೆ ತಾಯಿಗಳ ಮುಂದೆ ಇಂದು ತಾನವರ ಕೈಗಳನ್ನು ತೊಳೆಯಬೇಕೆಂಬ ಬೇಡಿಕೆಯಿಟ್ಟ. ಅವರಿಬ್ಬರಿಗೂ ಅಚ್ಚರಿಯೆನಿಸಿತು, ಮುಜುಗುರವೆನಿಸಿತು. ಅವರು ಅದೇನು ಬೇಡವೆಂದರು. ಆದರೂ ಮಗ ಬಿಡಲಿಲ್ಲ, ಅವರಿಬ್ಬರ ಕೈಗಳನ್ನು ತೊಳೆಯಲು ಪ್ರಾರಂಭಿಸಿದ. ಅವರಿವರ ಮನೆಯ ಪಾತ್ರೆಗಳನ್ನು, ಬಟ್ಟೆಗಳನ್ನು ತೊಳೆ, ತೊಳೆದು ಸುಕ್ಕುಗಟ್ಟಿದ ಹುಣ್ಣುಗಳುಳ್ಳ ಕೈಗಳವು. ತನ್ನ ತಂದೆ ತಾಯಿಗಳ ಕೈತೊಳೆಯುತ್ತಿದ್ದಂತೆ ಯುವಕನ ಕಣ್ಣುಗಳಿಂದ ಕಂಬನಿಗಳು ಅವರ ಕೈಗಳ ಮೇಲೆ ಬಿದ್ದವು. ಆದಿನ ಆತ ತನ್ನ ತಂದೆ ಒಗೆಯಲು ತಂದ ಬಟ್ಟೆಗಳನ್ನು ತಾನೇ ಸ್ವಚ್ಛಗೊಳಿಸಿದ, ತಾಯಿ ಅಡಿಗೆ ಮಾಡಿಟ್ಟ ಪಾತ್ರೆಗಳನ್ನು ತಾನೇ ತೊಳೆದ. ಅವರಿಗೆ ಅಡುಗೆಯನ್ನು ಮಾಡಿ ತಾನೇ ಬಡಿಸಿದ. ನೆಮ್ಮದಿಯಿಂದ ನಿದ್ದೆ ಹೋದ.
ಮರುದಿನ ಯುವಕ ಮತ್ತೆ ಸಂದರ್ಶನಕ್ಕೆ ಹಾಜರಾದ.
ಸಂದರ್ಶನವನ್ನು ಪ್ರಾರಂಭಿಸೋಣವೇ…ಡೈರೆಕ್ಟರ್ ಯುವಕನಿಗಂದ.
ಯಸ್ ಸರ್…
ನಿನ್ನೆ, ನೀನು ನಿನ್ನ ಮನೆಯಲ್ಲಿ ನಾನು ಹೇಳಿದಂತೆ ಮಾಡಿರಬೇಕಲ್ಲ.
ಹೌದು ಸರ್.
ಏನೆನಿಸಿತು ನಿನಗೆ…? ಡೈರೆಕ್ಟರ್ ಪ್ರಶ್ನಿಸಿದ
ಯುವಕನ ಕಣ್ಣಗಳಲ್ಲಿ ಕಂಬನಿ ಜಿನುಗಿತು. ಯುವಕ ನಾಚಿ ಹೇಳಿದ, ಸರ್… ನಾನು ಈ ಕೆಲಸವನ್ನು ನನ್ನ ಶಿಕ್ಷಣದ ಸಮಯದಲ್ಲೂ ಮಾಡಬಹುದಾಗಿತು. ನಾನು ತಪ್ಪು ಮಾಡಿಬಿಟ್ಟೆ.
ದಟ್ಸ್ ಆಲ್ ರೈಟ್.
ಮಿಸ್ಟರ್, ಬದುಕೆಂದರೆ ಮನುಷ್ಯರೊಡನೆ ಮನುಷ್ಯರಂತೆ ವರ್ತಿಸಬೇಕಾದ ಒಂದು ಕಲೆ. ಎಲ್ಲರನ್ನು, ಎಲ್ಲವನ್ನು ನಮ್ಮ ಬದುಕಿನ ಜತೆಯಲ್ಲಿ ಸ್ವೀಕರಿಸಬೇಕಾದ ಪ್ರಯತ್ನ. ನೀನು ಕಲಿತ ವಿದ್ಯೆ ನಿನ್ನ ಉದ್ಯೋಗಕ್ಕೆ ಪೂರಕ. ಆದರೆ ನಿನ್ನ ಸುತ್ತಲ ಪ್ರಪಂಚವನ್ನು ಕಂಡು ಅದರೊಳಗೊಂದಾಗಿ ಬದುಕುವುದನ್ನು ನಾವು ಕಲಿಯಬೇಕು. ಇಂತಹ ಸಣ್ಣ ಸಣ್ಣ ತಪ್ಪುಗಳಿಂದಲೇ ನಮ್ಮನ್ನು ನಾವು ತಿದ್ದಿಕೊಳ್ಳುವುದು. ನಿನ್ನ ಕಣ್ಣ ಕಂಬನಿಯಿಂದ ನಾನು ನಿನ್ನನ್ನು ಅರ್ಥೈಸಿಕೊಂಡಿದ್ದೇನೆ. ಮುಂದೆ ಇಂತಹ ತಪ್ಪುಗಳು ನಿನ್ನಿಂದಾಗಬಾರದು. ಮುಂದೆ ನೀನು ಇಂತಹ ತಪ್ಪುಗಳನ್ನು ಮಾಡುವುದಿಲ್ಲ. ನನಗೆ ನಿನ್ನಂತಹವರು ಬೇಕು. ನಿನ್ನನ್ನು ನನ್ನ ಕಂಪೆನಿಯ ಮ್ಯಾನೆಜರ್ ಹುದ್ದೆಗೆ ಆಯ್ಕೆ ಮಾಡಿದ್ದೇನೆ.
ಆಲ್ ದಿ ಬೆಸ್ಟ್.
(ಆಂಗ್ಲಭಾಷೆಯಲ್ಲಿ ಪ್ರಕಟವಾದ ಪತ್ರವೊಂದರ ಕನ್ನಡ ಅನುವಾದ)
– ದಿವಾಕರ ಡೋಂಗ್ರೆ ಎಂ.
ದಿವಾಕರ ಡೊಂಗ್ರೆಯವರ ಆಲ್ ದಿ ಬೆಸ್ಟ್ ಓದಿದೆ .ಚೆನ್ನಾಗಿದೆ .ಇನ್ನು ಓದನ್ನು ಮುಂದುವರಿಸುತ್ತೇನೆ .
best