‘ಮೇಲಾರಕ್ಕೆ ಕೊರವದು’ , ತರಕಾರಿ ಹೆಚ್ಚುವ ಕಾರ್ಯಕ್ರಮ
ಎಪ್ರಿಲ್-ಮೇ ಆರಂಭವಾಯಿತೆಂದರೆ ಶುಭಕಾರ್ಯಕ್ರಮಗಳ ಸೀಸನ್ ಆರಂಭವಾಗುತ್ತದೆ. ನಾನು ಹೇಳುತ್ತಿರುವುದು ನನ್ನ ಅನುಭವದ ವ್ಯಾಪ್ತಿಯಲ್ಲಿ ಬಂದ, ಸಾಂಪ್ರದಾಯಿಕವಾಗಿ ಮನೆಯಲ್ಲಿಯೇ ನಡೆಯುವ ಸಮಾರಂಭಗಳು ಮತ್ತು ಅವಕ್ಕೆ ಪೂರ್ವತಯಾರಿಯ ಅಂಗವಾದ ‘ಮೇಲಾರಕ್ಕೆ ಕೊರವದು ಅಂದರೆ ತರಕಾರಿ ಹೆಚ್ಚುವ ಕಾರ್ಯಕ್ರಮದ’ ಬಗ್ಗೆ.
‘ಮೇಲಾರಕ್ಕೆ ಕೊರವದು ‘ ಕಾರ್ಯಕ್ರಮಕ್ಕೆ ವಿಶಿಷ್ಟ ಸೊಗಸಿದೆ. ಸಮಾರಂಭದ ಹಿಂದಿನ ದಿನ ರಾತ್ರಿ ಗಣಪತಿ ಪೂಜೆ ಮಾಡಿ ಶುಭಾರಂಭವಾಗುತ್ತದೆ. ರಾತ್ರಿಯ ಸಿಹಿಯೂಟದ ನಂತರ ಮನೆಯ ಸದಸ್ಯರು ಮತ್ತು ಅಕ್ಕಪಕ್ಕದ ಮನೆಯವರು ಒಟ್ಟು ಸೇರಿ, ಮನೆ ಮುಂದೆ ಹಾಕಿರುವ ಚಪ್ಪರದ ಆಡಿಯಲ್ಲಿ, ಅಡುಗೆ ಭಟ್ಟರ ಮೇಲ್ವಿಚಾರಣೆಯಲ್ಲಿ, ಮರುದಿನದ ಅಡುಗೆಗೆ ಬೇಕಾಗುವ ತರಕಾರಿಗಳನ್ನು ಹೆಚ್ಚಲು ಆರಂಭಿಸುತ್ತಾರೆ. ಈ ಕಾರ್ಯಕ್ರಮಕ್ಕೆ ನಮ್ಮ ಸಮುದಾಯದ ಆಡುಭಾಷೆಯಲ್ಲಿ ‘ಮೇಲಾರಕ್ಕೆ ಕೊರವದು’ ಅನ್ನುತ್ತಾರೆ. ಮೇಲಾರ ಎಂದರೆ ಮಜ್ಜಿಗೆಹುಳಿ, ಕೊರವದು ಎಂದರೆ ಹೆಚ್ಚುವುದು. ಅಸಲಿಗೆ ಮಜ್ಜಿಗೆಹುಳಿಗೆ ಬೇಕಾಗುವ ತರಕಾರಿಗಳಿಗಿಂತ ಇತರ ಅಡುಗೆಗಳಿಗೆ ಹೆಚ್ಚು ತರಕಾರಿ ಬೇಕಾಗುವುದಾದರೂ ‘ಮೇಲಾರಕ್ಕೆ ಕೊರವದು’ ಎಂಬ ಮಾತು ಯಾಕೆ ಬಳಕೆಗೆ ಬಂತೋ ಗೊತ್ತಿಲ್ಲ.
ರಾತ್ರಿ ಊಟವಾದ ಮೇಲೆ ಶುರುವಾಗುವ ಈ ತರಕಾರಿ ಹೆಚ್ಚುವ ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಮನೆಯವರು ಮತ್ತು ಬಂದಿದ್ದ ನೆಂಟರು ಉತ್ಸಾಹದಿಂದ ಭಾಗವಹಿಸುತ್ತಾರೆ. ತರಕಾರಿ ಹೆಚ್ಚುವವರ ಮಾತಿನ ಲಹರಿ ಬಲು ವಿಸ್ತಾರವಾದದ್ದು. ಅಲ್ಲಿ ಚರ್ಚಿತವಾಗದ ವಿಷಯಗಳೇ ಇಲ್ಲ. ಪ್ರಸ್ತುತ ಅಧಿಕಾರದಲ್ಲಿರುವ/ಇಲ್ಲದಿರುವ ರಾಜಕಾರಣಿಗಳು, ಚಲಾವಣೆಯಲ್ಲಿ ಇರುವ/ಇಲ್ಲದಿರುವ ಸಿನೆಮಾ ನಟಿಯರು ಇಲ್ಲಿ ವಿಮರ್ಶೆಗೆ ಗುರಿಯಾಗುತ್ತಾರೆ. ಊರಿನ ಭಜನಾ ಮಂಡಳಿಯಿಂದ ತೊಡಗಿದ ಮಾತು ಅಮೇರಿಕಾದ ಶ್ವೇತಭವನಕ್ಕೆ ತಲಪಿ ಒಬಾಮಾ, ಮಿಶಲ್ ವಿಷಯ ಬರುತ್ತದೆ. ಇನ್ನು ನಮ್ಮ ದೇಶದವರೇ ಅದ್ದ ಅಜ್ಜ-ಮಗಳು-ಮೊಮ್ಮಗ-ಮರಿಮೊಮ್ಮಗರನ್ನು (ನೆಹರೂ – ಇಂದಿರಾ ಗಾಂಧಿ… ಕುಟುಂಬ) ನೆನಪಿಸದಿದ್ದರಾಗುತ್ತದೆಯೇ ? ಆಡಳಿತ ಪಕ್ಷಕ್ಕೂ ವಿರೋಧ ಪಕ್ಷಕ್ಕೂ ಸಮಾನ ಮನ್ನಣೆಯ ಗೌರವ/ನಿಂದನೆ ಸಿಗುವುದು ‘ಮೇಲಾರಕ್ಕೆ ಕೊರೆವಗ’ ಮಾತ್ರ ಎಂದು ನಮ್ಮ ಅಂಬೋಣ!
ಮಕ್ಕಳು-ಮೊಮ್ಮಕ್ಕಳು, ಉದ್ಯೋಗದ ವಿಚಾರಣೆ ಇದ್ದೇ ಇರುತ್ತದೆ. ಪಕ್ಕದ ತೋಡಿಗೆ ಅಡಿಕೆ ಮರದ ಸಂಕ ಹಾಕುವ ಕೆಲಸದಿಂದ ಹಿಡಿದು ಇಸ್ರೋದ ಉಪಗ್ರಹ ಉಡಾವಣೆಯ ವರೆಗೆ ಸಂವಾದವಿರುತ್ತದೆ . ಇನ್ನು ಆಡಿಕೆ ಧಾರಣೆಯ ಏರಿಳಿತ, ಕಾರ್ಮಿಕರ ಅಲಭ್ಯತೆ, ಹೊಸದಾಗಿ ಖರೀದಿಸಿದ ಕೃಷಿ ಉಪಕರಣದ ಪಾಸಿಟಿವ್ ಮತ್ತು ನೆಗಟಿವ್ ಅಂಶಗಳು, ಯಾವುದೋ ಅಪರಾಧದ ಸುದ್ದಿಯ ಪೋಸ್ಟ್ ಮಾರ್ಟಂ ವರದಿ, ಹವಾಮಾನ ಮುನ್ಸೂಚನೆ….. ಹೀಗೆ ಮಾತು ಮತ್ತು ತರಕಾರಿ ಹೆಚ್ಚುವ ಕೆಲಸ ಸಾಂಘಿಕವಾಗಿ ನಡೆಯುತ್ತಿರುವಾಗ ಯಾರಾದರೂ ಒಬ್ಬರು “ಒಂದು ಸ್ಟ್ರಾಂಗ್ ಚಾ ಬರ್ಲಿ ನೋಡೋಣಾ “ ಎಂದು ಅವಾಜ್ ಹಾಕುತ್ತಾರೆ. ಈ ಬೇಡಿಕೆಯನ್ನು ಮೊದಲೇ ತಿಳಿದಿರುತ್ತಿದ್ದ ಮನೆಯೊಡತಿ, ದೊಡ್ಡ ತಪ್ಪಲೆ ಚಹಾವನ್ನು ಮತ್ತು ಕೆಲವು ಸ್ಟೀಲ್ ಲೋಟಗಳನ್ನು ತಂದಿಟ್ಟು ತಾನೂ ಮಾತಿಗೆ ಜತೆಯಾಗುತ್ತಾಳೆ. ಕೆಲವರು 3-4 ಲೋಟ ಚಾ ಕುಡಿದರೆ, ಇನ್ನು ಕೆಲವರು ಒಂದು ಲೋಟ ಸಾಕು ಎನ್ನುತ್ತಾರೆ. ಇನ್ನು ಕೆಲವು ನಾಜೂಕಿನವರು, ರಾತ್ರಿ ಚಾ ಕುಡುದರೆ ನಿದ್ರೆ ಬರುವುದಿಲ್ಲ ಎನ್ನುವರು. ಒಂದಿಬ್ಬರು ಬಾಯಲ್ಲಿ ‘ಎಲೆ-ಅಡಿಕೆ’ ಜಗಿಯುತ್ತಿರುವುದರಿಂದ ಬೇಡ ಎನ್ನುವರು.
ಚಂದ್ರಣ್ಣ ರಾಜಕೀಯ ಮಾತನಾಡಲು ಆರಂಭಿಸಿದರೆ, ಕೇಶವಣ್ಣ ಅಡಕೆ ಧಾರಣೆ ಬಗ್ಗೆ ಚರ್ಚೆ ಮಂಡಿಸುತ್ತಾರೆ. ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಐಟಿ ಉದ್ಯೋಗಿ ವರ್ಕ್ ಲೋಡ್, ಸ್ಟ್ರೆಸ್, ಟ್ರಾಫಿಕ್ ಜಾಮ್ , ಫಾರಿನ್ ಟ್ರಾವೆಲ್ ಅಂತ ತನ್ನ ಕೆಲಸದ ಕಷ್ಟ-ಸುಖ ಹೇಳಿಕೊಂಡರೆ, ಆಚೆಮನೆಯ ಉಪಾಧ್ಯಾಯರು “ಇನ್ನು ಮುಂದೆ ಮೇಷ್ಟ್ರು ಕೆಲಸ ಮಾಡಲೆ ಎಡಿಯಪ್ಪ..ಶಾಲೆ ಕೆಲಸಂದ ಹೆಚ್ಚು ಬೇರೆ ಕೆಲಸವೇ ಜಾಸ್ತಿ ಆತು. ಜಾನುವಾರು ಗಣತಿಯನ್ನೂ ಎಂಗ ಮಾಡೆಕ್ಕು ..ಎಂಗೊ ಮಕ್ಕೊಗೆ ಪಾಠ ಮಾಡೆಕ್ಕೋ, ಅವರ ಮನೆಲಿ ದನ, ನಾಯಿ ಎಷ್ಟಿದ್ದು ಹೇಳಿ ಲೆಕ್ಕ ಹಾಕೆಕ್ಕಾ..” ಎಂದು ಉದಾಹರಣೆ ಸಮೇತ ವಿಮರ್ಶಿಸುವರು.
ಆಗಾಗ ಅಡುಗೆ ಭಟ್ಟರು ” .. ಕ್ಯಾಬೇಜ್ ಇಷ್ಟು ಸಾಕು….ಬೀನ್ಸ್ ಇನ್ನೂ ಇರಲಿ….” ಎಂಬ ಸಲಹೆ ಕೊಡುವರು.
ಜಲಜಕ್ಕ ಮೊನ್ನೆ ತಾನೇ ಕೊಂಡ ಹೊಸ ಸೀರೆಯನ್ನುಟ್ಟರೆ ದಪ್ಪ ಕಾಣಿಸುತ್ತೇನೆಂದರೆ, ಉಪ್ಪಿನಕಾಯಿಗೆ ಈ ಬಾರಿ ಮಾವಿನಮಿಡಿ ಇನ್ನೂ ಕೊಯಿದಾಗಿಲ್ಲ ಎಂದು ಸರೋಜತ್ತೆ ಹೇಳುತ್ತಾರೆ. ಒಬ್ಬರ ಮನೆಯ ಹಲಸಿನಮರದಲ್ಲಿ ಈಗಲೇ ಹಲಸಿನ ಕಾಯಿ ಹಣ್ಣಾಗಿ ಅದನ್ನು ಪಾಯಸ ಮಾಡಿ ತಿಂದಾಗಿದ್ದರೆ, ಇನ್ನೊಬ್ಬರ ಮನೆಯ ಹಲಸಿನ ಮರದಲ್ಲಿ ಇನ್ನೂ ಎಳೆಗುಜ್ಜೆ ಬಿಟ್ಟಿರುತ್ತದೆ. ಸಾವಿತ್ರಿಯ ದೊಡ್ಡ ಮಗಳಿಗೆ ಗಂಡು ಮಗುವಾಗಿ ಆಕೆ ಅಮೇರಿಕಾಕ್ಕೆ ಬಾಣಂತನಕ್ಕೆ ಹೋಗಿದ್ದ ಕಾರಣ ಈವತ್ತು ಬಂದಿಲ್ಲ. ಗೀತಕ್ಕನಿಗೆ ತೋಟದಲ್ಲಿ ಮೆಟ್ಟಲಿಳಿಯುವಾಗ ಕಾಲು ಉಳುಕಿತ್ತಂತೆ. ಹೀಗೆ ಇಲ್ಲಿ ಸರ್ವರಿಗೂ ವಾಕ್ ಸ್ವಾತಂತ್ರ್ಯ! ಎಲ್ಲಿವರೆಗೆ ಕೊನೆಯ ತರಕಾರಿ ಹೆಚ್ಚಲಿದೆಯೋ ಅಲ್ಲಿವರೆಗೆ ಮಾತು ಮುಂದುವರಿಯುತ್ತದೆ. ಮಾತಿನ ಲಹರಿ ಅಷ್ಟದಿಕ್ಕುಗಳಲ್ಲಿಯೂ ಹರಿಯುತ್ತದೆ, ಖಂಡಾಂತರಗಳನ್ನು ಕ್ಷಣಾರ್ಧದಲ್ಲಿ ಕ್ರಮಿಸಿ ಬರುತ್ತದೆ. ಆದರೆ, ಕೈಗಳು ಚಾಕು ಹಿಡಿದು ನಿಗದಿತವಾದ ತರಕಾರಿಗಳನ್ನು ಅಚ್ಚುಕಟ್ಟಾಗಿ ಹೆಚ್ಚುತ್ತಿರುತ್ತವೆ.
ಈ ಸಂದರ್ಭದಲ್ಲಿ, ಮನೆ ಮಟ್ಟಿಗೆ ಗಾಯಕ/ಗಾಯಕಿ ಹೆಸರಾಂತರು ಯಾರಾದರೂ ಅಲ್ಲಿದ್ದರೆ ಅವರನ್ನು ಒಂದೆರಡು ಹಾಡು ಹೇಳಲು ವಿನಂತಿಸಲಾಗುತ್ತದೆ. ಅವರು ಚಿಕ್ಕ ಮಕ್ಕಳಾದರೆ ಅವಕಾಶಕ್ಕೆ ಕಾಯುತ್ತಿದ್ದವರಂತೆ ಪುಂಖಾನುಪುಂಖವಾಗಿ ಹಾಡುತ್ತಾರೆ. ಇನ್ನು ಹದಿವಯಸ್ಸಿನವರಾದರೆ, ‘ಇನ್ನೂ ಸ್ವಲ್ಪ ಒತ್ತಾಯಿಸಲಿ’ ಎಂಬಂತೆ ನಾಚಿಕೆ ವ್ಯಕ್ತಪಡಿಸುವಾಗ, ಅವರ ಅಮ್ಮನೋ, ಅತ್ತೆಯೋ ಅವಳಿಗೆ ಇತ್ತೀಚೆಗೆ ಹಾಡುಗಾರಿಕೆಗೆ ಸಿಕ್ಕಿದ ಬಹುಮಾನದ ಬಗ್ಗೆ ಪ್ರಸ್ತಾಪಿಸಿ, ಅತ್ಮವಿಶ್ವಾಸ ಹೆಚ್ಚಿಸುತ್ತಾರೆ. ಕೊನೆಗೂ ಆಕೆ ಒಂದೆರಡು ಕೀರ್ತನೆಗಳನ್ನು ಹಾಡಿ ಸಭೆಗೆ ಸಂಗೀತದ ರಂಗು ತುಂಬುತ್ತಾಳೆ. ಇಷ್ಟಾದ ಮೇಲೆ ಸ್ಥಳೀಯ ಪ್ರಸಿದ್ಧ ಕಲೆಯಾದ ಯಕ್ಷಗಾನದ ಭಾಗವತಿಕೆಯ ಶೈಲಿಯಲ್ಲಿ ಒಂದೆರಡು ಸಾಲುಗಳನ್ನು ಕೇಳಬೇಡವೇ? ಸರಿ, ತರಕಾರಿ ಹೆಚ್ಚುತ್ತಿದ್ದ ಶಂಭಣ್ಣ ” ಬಂದಳು ಬಂದಳು…ಭಾನುಮತಿ…..” ಎಂದು ಎಂದು ಯಕ್ಷಗಾನ ಶೈಲಿಯಲ್ಲಿ ಹಾಡಿ ಸಭೆಗೆ ಇನ್ನಷ್ಟು ಮೆರುಗು ಕೊಡುತ್ತಾರೆ.
ಹೀಗೆ ಉತ್ತಮ ಮಾತುಗಾರಿಕೆ, ಹಾಸ್ಯ ಮೇಳೈಸಿದ, ಬಾಂಧವ್ಯ ಬೆಸೆವ ‘ಮೇಲಾರಕ್ಕೆ ಕೊರವ’ ಕಾರ್ಯಕ್ರಮ ಮುಗಿಯುವಾಗ ರಾತ್ರಿ 11-12 ಗಂಟೆ ಆಗುತ್ತದೆ. ಹೆಚ್ಚಿದ ತರಕಾರಿಗಳನ್ನು ಮುಚ್ಚಿಟ್ಟು, ಅಕ್ಕಪಕ್ಕದ ಮನೆಯವರು “ನಾಳೆ ಕಾಂಬ” ಎಂದು ತಮ್ಮ ಮನೆಗೆ ಹೊರಟರೆ, ನೆಂಟರು, ಮನೆಯವರು ಸಣ್ಣ ನಿದ್ದೆ ತೆಗೆಯುತ್ತಾರೆ. ಮರುದಿನ ಬೇಗನೇ ಎದ್ದು ಸಮಾರಂಭದ ಸಿದ್ಧತೆಗೆ ಅಣಿಯಾಗುತ್ತಾರೆ.
ಈಗ ಹೆಚ್ಚಿನ ಸಮಾರಂಭಗಳು ಹಾಲ್ ಗಳಲ್ಲಿ ಜರಗುತ್ತವೆ. ಹಿಂದಿನ ದಿನವೇ ಬಂದು ಮನೆಮಂದಿಯೊಡನೆ ಮಾತನಾಡುತ್ತಾ, ಕೆಲಸ-ಜವಾಬ್ದಾರಿಗಳಿಗೂ ಹೆಗಲು ಕೊಡಲು ಯಾರಿಗೂ ಸಮಯ, ವ್ಯವಧಾನವಿಲ್ಲ. ಕೆಲಸ-ಜವಾಬ್ದಾರಿಗಳನ್ನು ಏಜಂಟ್ ಗಳಿಗೆ ವಹಿಸಿ, ಅವರ ಸೇವೆಗೆ ದುಡ್ಡು ಕೊಟ್ಟರಾಯಿತು. ಹೆಚ್ಚಿನವರ ಬಳಿಯೂ ಸ್ವಂತ ಕಾರು/ಬೈಕು ಗಳಿರುತ್ತವೆ. ಜುಮ್ಮೆಂದು ಬಂದು ಒಮ್ಮೆ ಮುಖ ತೋರಿಸಿ, ಬಫೆಯಲ್ಲಿ ಉಂಡು , ಕೈತೊಳೆದ ತತ್ಕ್ಷಣವೇ ಹೊರಡುವುದು ಸಾಮಾನ್ಯ ಆಗಿಬಿಟ್ಟಿದೆ.
ನನಗಂತೂ ಮರುದಿನದ ಅದ್ದೂರಿ ಸಮಾರಂಭಕ್ಕಿಂತ, ಹಿಂದಿನ ದಿನದ ಈ ಕಾರ್ಯಕ್ರಮವೇ ಹೆಚ್ಚು ಆಪ್ತವೆನಿಸುತ್ತದೆ . ‘ಮೇಲಾರಕ್ಕೆ ಕೊರವದು’ ಕಾರ್ಯಕ್ರಮ ಈಗಲೂ ಪ್ರಚಲಿತವಿದೆ ಎಂಬುದು ಖುಷಿಯ ಸಂಗತಿ.
– ಹೇಮಮಾಲಾ.ಬಿ
ಇದೊಂದು ಕಮ್ಯೂನಿಟಿ awareness ಮತ್ತು ಸವಿಯೂಟ ಪ್ರೋಗ್ರಾಂ ಇದ್ದ ಹಾಗಿದೆ. ಸ್ನೇಹ ಬಾಂಧವ್ಯ ಇನ್ನೂ ಹೆಚ್ಚುಗೊಳಿಸುವುದರಲ್ಲಿ ಸಂದೇಹವಿಲ್ಲ .ಒಟ್ಟಾರೆ ಭೋಜನ ಪಾಠಶಾಲೆ.
Melaara endare melogara- palya, gojju, tombali ithyaadi
ತುಂಬ ಚೆನ್ನಾಗಿದೆ